ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಉತ್ತೇಜಿಸುವ ವೇದಿಕೆಯಿಂದ ಲಾಭ ಗಳಿಸುತ್ತಿರುವ ಯೂಟ್ಯೂಬ್; ವರದಿ

Update: 2024-11-12 11:44 GMT

ಹೊಸದಿಲ್ಲಿ: ಯೂಟ್ಯೂಬ್ ತನ್ನ ಸೂಪರ್ ಚಾಟ್ ವೈಶಿಷ್ಯದೊಂದಿಗೆ ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಕೋಮು ದ್ವೇಷವನ್ನು ಪ್ರಚೋದಿಸುವ ಮತ್ತು ಹರಡುವ ವೇದಿಕೆಯನ್ನು ಒದಗಿಸುವ ಮೂಲಕ ಲಾಭ ಗಳಿಸುತ್ತಿದೆ ಎಂದು ವರದಿಯಾಗಿದೆ.

ಸೂಪರ್ ಚಾಟ್ ವೈಶಿಷ್ಟ್ಯವು ಲೈವ್ ಸ್ಟ್ರೀಮ್‌ಗಳ ಸಮಯದಲ್ಲಿ ಹೈಲೈಟ್ ಮಾಡಿದ ಸಂದೇಶಗಳಿಗಾಗಿ ಪಾವತಿಸಲು ಬಳಕೆದಾರರಿಗೆ ಅವಕಾಶವನ್ನು ಒದಗಿಸುತ್ತದೆ, ಅಲ್ಲಿ ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡುವ ವ್ಯಕ್ತಿಗಳು ಹೆಚ್ಚಾಗಿ ವಿಭಜಕ ಮತ್ತು ಪ್ರಚೋದನಾಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದು, ಇದು ಇಂತಹ ಸಂವಹನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಯೂಟ್ಯೂಬ್‌ನ ಸಾಮರ್ಥ್ಯ ಮತ್ತು ಹಾನಿಕಾರಕ ಭಾಷಣದಿಂದ ಹಣ ಮಾಡುವಲ್ಲಿ ಅದರ ಪಾತ್ರದ ಕುರಿತು ಪ್ರಶ್ನೆಗಳನ್ನೆತ್ತಿದೆ.

ಹಿಂದುತ್ವ ವಲಯಗಳಲ್ಲಿ ಗಣನೀಯ ಪ್ರಭಾವವನ್ನು ಹೊಂದಿರುವ ಜನಪ್ರಿಯ ಕ್ರಿಯೇಟರ್ ಅಜಿತ್ ಭಾರ್ತಿಯವರ ಲೈವ್ ವೀಡಿಯೊದೊಂದಿಗೆ ಈ ವಿಷಯವು ಬೆಳಕಿಗೆ ಬಂದಿದೆ. ಅವರು ‘ಲವ್ ಜಿಹಾದ್’ ಅನ್ನು ಒಳಗೊಂಡ ಮುಸ್ಲಿಮ್ ಪಿತೂರಿಯನ್ನು ಆರೋಪಿಸಿದ್ದರು.

ಪ್ರಸಾರದ ಸಮಯದಲ್ಲಿ ವೀಕ್ಷಕನೋರ್ವ ಲವ್ ಜಿಹಾದ್ ಬೆದರಿಕೆಯನ್ನು ಎದುರಿಸಲು ಹಿಂಸಾತ್ಮಕ ಗುಂಪೊಂದನ್ನು ರಚಿಸುವ ಕುರಿತು ವಿಚಾರಿಸಲು ಸೂಪರ್ ಚಾಟ್‌ಗೆ ಪಾವತಿಸಿದ್ದ. ಈ ಕಮೆಂಟ್ ಹಿಂಸಾತ್ಮಕ ಮತ್ತು ಅಪಾಯಕಾರಿ ಕಂಟೆಂಟ್ ಕುರಿತು ಯೂಟ್ಯೂಬ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು, ಆದರೂ ಪದೇ ಪದೇ ವರದಿ ಮಾಡಿದ್ದರೂ ಈ ಕಂಟೆಂಟ್ ವೇದಿಕೆಯಲ್ಲಿ ಉಳಿದುಕೊಂಡಿದೆ.

ಉದಾಹರಣೆಗೆ ಇಂತಹ ಕಂಟೆಂಟ್‌ಗಳ ಮೂಲಕ ಭಾರ್ತಿ ಒಂದು ಸ್ಟ್ರೀಮ್‌ನಲ್ಲಿ 2,100 ರೂ. ಮತ್ತು ಇನ್ನೊಂದರಲ್ಲಿ 14,000 ರೂ.ಗಳಿಸಿದ್ದಾರೆ ಎನ್ನಲಾಗಿದೆ. ಯೂಟ್ಯೂಬ್‌ನ ಆದಾಯ ಹಂಚಿಕೆ ಮಾದರಿಯು ಸೂಪರ್ ಚಾಟ್ ಗಳಿಕೆಗಳ ಶೇ.70ರಷ್ಟನ್ನು ಕ್ರಿಯೇಟರ್‌ಗಳು ಇಟ್ಟುಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಉಳಿದ ಶೇ.30 ಯೂಟ್ಯೂಬ್‌ಗೆ ಹೋಗುತ್ತದೆ,ಇದು ದ್ವೇಷ ಭಾಷಣಗಳು ಮತ್ತು ಕಂಟೆಂಟ್‌ಗಳು ಕ್ರಿಯೇಟರ್‌ಗಳಿಗೆ ಮತ್ತು ಯೂ ಟ್ಯೂಬ್‌ಗೆ ಲಾಭವನ್ನು ಸೃಷ್ಟಿಸುತ್ತವೆ ಎಂಬ ಕಳವಳಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಭಾರತದ ಸುಮಾರು ಅರ್ಧದಷ್ಟು ಜನಸಂಖ್ಯೆ ಸುದ್ದಿಗಳಿಗಾಗಿ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಿದ್ದು,ಶೇ.54ರಷ್ಟು ಬಳಕೆದಾರರು ಯೂಟ್ಯೂಬ್‌ನ್ನು ತಮ್ಮ ಪ್ರಾಥಮಿಕ ಮೂಲವಾಗಿ ಬಳಸುತ್ತಿದ್ದಾರೆ ಎಂದು ರಾಯ್ಟರ್ಸ್ ಇನ್‌ಸ್ಟಿಟ್ಯೂಟ್‌ನ ಸಂಶೋಧನೆಯು ಎತ್ತಿ ತೋರಿಸಿದೆ. ಈ ವ್ಯಾಪಕ ವ್ಯಾಪ್ತಿಯೊಂದಿಗೆ ಯೂಟ್ಯೂಬ್‌ನಲ್ಲಿ ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿಗಳ ಹರಡುವಿಕೆಯು ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ಸಂವಾದಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ.

ಯೂಟ್ಯೂಬ್‌ನ ನೀತಿಗಳು ಪ್ರಚೋದನಕಾರಿ ಸೂಪರ್ ಚಾಟ್‌ಗಳು ಸೇರಿದಂತೆ ದ್ವೇಷಪೂರ್ಣ ಅಥವಾ ಹಿಂಸಾತ್ಮಕ ಕಂಟೆಂಟ್‌ನ್ನು ಸೈದ್ಧಾಂತಿಕವಾಗಿ ನಿಷೇಧಿಸುತ್ತವೆ ಮತ್ತು ಅಂತಹ ಸಂದೇಶಗಳಿಂದ ಲಭಿಸುವ ಹಣವನ್ನು ದಾನಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ನಿರ್ದಿಷ್ಟಪಡಿಸಿವೆ. ಆದರೂ ಈ ದೇಣಿಗೆಗಳನ್ನು ಹೇಗೆ ನೀಡಲಾಗುತ್ತದೆ ಅಥವಾ ಯಾವುದು ಅನುಚಿತವಾದ ಕಂಟೆಂಟ್ ಆಗುತ್ತದೆ ಎಂಬ ಬಗ್ಗೆ ಯೂಟ್ಯೂಬ್ ಯಾವುದೇ ಪಾರದರ್ಶಕತೆಯನ್ನು ಒದಗಿಸಿಲ್ಲ.

ದ್ವೇಷ ತುಂಬಿದ ಕಂಟೆಂಟ್‌ಗಳಿಗೆ ಯಾವುದೇ ಕಡಿವಾಣ ಹಾಕದಿರುವುದು ಭಾರ್ತಿಯವರ ಪ್ರಸಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ಪದೇ ಪದೇ ವರದಿ ಮಾಡಲಾಗಿದ್ದರೂ,ಬಳಕೆದಾರರು ದೂರಿಕೊಂಡಿದ್ದರೂ ಯೂಟ್ಯೂಬ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ವಿಭಜಕ ಕಂಟೆಂಟ್‌ಗಳನ್ನು ಪ್ರಸಾರ ಮಾಡಲು ಸುದರ್ಶನ ಟಿವಿಯಂತಹ ಇತರ ಚಾನೆಲ್‌ಗಳಿಗೂ ಅವಕಾಶ ಕಲ್ಪಿಸಿದೆ. ಈ ಕಂಟೆಂಟ್ ಪ್ರಮುಖ ಬ್ರ್ಯಾಂಡ್‌ಗಳಿಂದ ಜಾಹೀರಾತುಗಳನ್ನು ಆಕರ್ಷಿಸಿದೆ,ತನ್ಮೂಲಕ ವಿವಾದಾತ್ಮಕ ಮತ್ತು ದ್ವೇಷಪೂರ್ಣ ನಿರೂಪಣೆಗಳಿಂದ ಹಣ ಗಳಿಸಲು ಯೂಟ್ಯೂಬ್‌ಗೆ ಪರೋಕ್ಷ ಅವಕಾಶವನ್ನು ನೀಡಿದೆ ಎಂದು ಆರೋಪಿಸಲಾಗಿದೆ.

ಕೃಪೆ: madhyamamonline.com

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News