‘ಮುನಿರತ್ನಗೆ ನೋಟಿಸ್ ನೀಡುವುದಕ್ಕೂ ಸಾಮ್ರಾಟರಿಂದ ಸಾಧ್ಯವಾಗಿಲ್ಲ’ : ಆರ್.ಅಶೋಕ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2024-12-03 13:54 GMT

ಪ್ರಿಯಾಂಕ್‌ ಖರ್ಗೆ/ಆರ್‌.ಅಶೋಕ್

ಬೆಂಗಳೂರು : ಒಕ್ಕಲಿಗರು, ದಲಿತರ ಬಗ್ಗೆ ಅವಹೇಳನ ಮಾಡಿದ ಹಾಗೂ ನಿಮಗೆ ಎಚ್‍ಐವಿ ಇಂಜೆಕ್ಷನ್ ಚುಚ್ಚಲು ಸಂಚು ರೂಪಿಸಿದ ಮುನಿರತ್ನಗೆ ಕನಿಷ್ಠ ಒಂದು ಶೋಕಾಸ್ ನೋಟಿಸ್ ನೀಡುವುದಕ್ಕೂ ಸಾಮ್ರಾಟರಿಂದ ಸಾಧ್ಯವಾಗಿಲ್ಲ ಎಂದು ಜನಸಾಮಾನ್ಯರು ಮಾತಾಡಿಕೊಂಡು ನಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಸಮರ್ಥನೆ ಮಾಡುವ ಬಾಯಿಂದ ‘ಜೈ ಶ್ರೀರಾಮ್' ನಾಮ ಜಪ ಬಂತಲ್ಲ, ಅದೇ ದೊಡ್ಡ ಸಮಾಧಾನ ಎಂದು ಆರ್.ಅಶೋಕ್ ಎಕ್ಸ್ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ವಿಷಯಾಂತರ ಮಾಡುವುದರಲ್ಲಿ ಬಿಜೆಪಿಯವರೇ ನಿಸ್ಸಿಮರು ಎನ್ನುವುದು ಜಗತ್ತಿಗೆ ತಿಳಿದ ಸಂಗತಿ. ಅಶೋಕ್ ಅವರೇ, ನನ್ನ ಹೇಳಿಕೆ ಸ್ಪಷ್ಟವಾಗಿದೆ, ನೀವು ಜೈ ಶ್ರೀ ರಾಮ್ ಎಂದು ಹೇಳುವುದರಿಂದ ನಿಮ್ಮ ಪಾಪಗಳು ತೊಳೆದುಹೋಗುವುದಿಲ್ಲ. ನಮ್ಮದು ಬದುಕು ಕಟ್ಟುವ ರಾಜಕೀಯ, ಬಿಜೆಪಿಯದ್ದು ಭಾವನೆ ಪ್ರಚೋದಿಸುವ ರಾಜಕೀಯ. ನಮ್ಮದು ಮನೆಗಳಲ್ಲಿ ದೀಪ ಹಚ್ಚುವ ಯೋಜನೆಗಳು, ಬಿಜೆಪಿಯವರದ್ದು ಸಮಾಜದಲ್ಲಿ ಬೆಂಕಿ ಹಚ್ಚುವ ಸಂಚುಗಳು ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಸರ್, ತಾವು ಕಾಂಗ್ರೆಸ್ ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಚಿಂತಿಸುವ ಬದಲು ನಿಮ್ಮ ಪಕ್ಷದ ಸಮಸ್ಯೆಗಳನ್ನು ಗಮನಿಸಿದರೆ ಕ್ಷೇಮ. ಒಕ್ಕಲಿಗರು, ದಲಿತರ ಬಗ್ಗೆ ಅವಹೇಳನ ಮಾಡಿದ ಹಾಗೂ ನಿಮಗೇ ಎಚ್‍ಐವಿ ಇಂಜೆಕ್ಷನ್ ಚುಚ್ಚಲು ಸಂಚು ರೂಪಿಸಿದ ಮುನಿರತ್ನಗೆ ಕನಿಷ್ಠ ಒಂದು ಶೋಕಾಸ್ ನೋಟಿಸ್ ನೀಡುವುದಕ್ಕೂ ಸಾಮ್ರಾಟರಿಂದ ಸಾಧ್ಯವಾಗಿಲ್ಲ ಎಂದು ಜನಸಾಮಾನ್ಯರು ಮಾತಾಡಿಕೊಂಡು ನಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ನಿಮ್ಮಿಂದ, ಕುದಿಯುತ್ತಿರುವ ತಮ್ಮ ಪಕ್ಷದ ಜ್ವಾಲಾಮುಖಿಯನ್ನು ತಣಿಸಲು ಸಾಧ್ಯವೇ? ಮುಳುಗುತ್ತಿರುವ ಕರ್ನಾಟಕದ ಬಿಜೆಪಿಯನ್ನು ಪ್ರಭು ಶ್ರೀರಾಮ ಬಂದರೂ ಉಳಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಪಕ್ಷ ನಾಯಕರೇ, ಚನ್ನಗಿರಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂದು ನಿಮ್ಮದೇ ಪಕ್ಷದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಕೇಳುವುದು ಸೂಕ್ತ. ಅವರ ಅವಧಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅವರಿಗೇ ಹೆಚ್ಚು ತಿಳಿದಿರುತ್ತದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಹಿತಕ್ಕಾಗಿ ನನ್ನದೊಂದು ಸಲಹೆ, ಕಳಪೆ ಮತ್ತು ವಿಷಯ ರಹಿತ ಪೋಸ್ಟ್ ಗಳಿಂದ ನಿಮ್ಮ ಸಾಮಾಜಿಕ ಜಾಲತಾಣದ ನಿರ್ವಾಹಕರು ನಿಮ್ಮ ಇಮೇಜ್ ಡ್ಯಾಮೇಜ್ ಮಾಡುತ್ತಿದ್ದಾರೆ. ಬಹುಶಃ ವೇತನ ಕಡಿಮೆಯಾಗಿದ್ದಕ್ಕೆ ಅವರು ನಿಮ್ಮ ಮೇಲೆ ಕೋಪಗೊಂಡಿರಬಹುದು, ಅವರ ವೇತನ ಏರಿಕೆ ಮಾಡಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News