ಆತ್ಮಗೌರವವನ್ನು ಎಚ್ಚರಿಸುವ ಬರಹಗಳು....

Update: 2016-07-09 17:24 GMT

12ನೆ ಶತಮಾನದ ಕ್ರಾಂತಿಕಾರನೊಬ್ಬನ ಚಿಂತನೆ ಹೇಗೆ 20ನೆ ಶತಮಾನದಲ್ಲಿ ಮತ್ತೆ ಮರು ಹುಟ್ಟು ಪಡೆದು ದೇಶದಲ್ಲಿ ತಳಸ್ತರದ ಜನರಲ್ಲಿ ಆತ್ಮಗೌರವವನ್ನು ಎಚ್ಚರಿಸುತ್ತದೆ ಎನ್ನುವುದನ್ನು ರಂಜಾನ್ ದರ್ಗಾ ಅವರ ‘ಬಸವಣ್ಣ ಮತ್ತು ಅಂಬೇಡ್ಕರ್’ ಕೃತಿ ವಿವರಿಸುತ್ತದೆ. ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯ ಮೂಲದ್ರವ್ಯದಲ್ಲಿರುವ ಸಾಮ್ಯತೆಯ ಕುರಿತಂತೆ ಗಮನ ಸೆಳೆಯುವುದಷ್ಟೇ ಅಲ್ಲದೆ, ವಚನ ಚಳವಳಿಯ ಕುರಿತಂತೆ ವಿಸ್ತೃತ ವಿವರಣೆ ಗಳನ್ನು ಈ ಕೃತಿ ನೀಡುತ್ತದೆ. ಪ್ರಾಚೀನ ಕಾಲದಿಂದ ಒಳಗೊಂಡು ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ದರ್ಗಾ ಅವರು ಅಂಬೇಡ್ಕರ್ ಮತ್ತು ಬಸವಣ್ಣ ಅವರ ಚಿಂತನೆಗಳ ಬೆಳಕಿನಲ್ಲಿ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸುಮಾರು 20 ಲೇಖನಗಳನ್ನು ಕೃತಿ ಒಳಗೊಂಡಿದೆ.

ವರ್ತಮಾನಕ್ಕೆ ಬಸವಣ್ಣ ಹೇಗೆ ಪ್ರಸ್ತುತವಾಗುತ್ತಾರೆ, ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯಲ್ಲಿರುವ ಸಾಮ್ಯತೆಗಳು, ಹೇಗೆ ಬಸವಧರ್ಮಕ್ಕೆ ವಿರುದ್ಧವಾದ ಮೂಢನಂಬಿಕೆಗಳು ಇದೀಗ ನಮ್ಮ ಸಮಾಜವನ್ನು ಕಾಡುತ್ತಿದೆ, ಜಾತೀಯತೆಯನ್ನು ಬಸವ ಮತ್ತು ಅಂಬೇಡ್ಕರ್ ಮೂಲಕ ಹೇಗೆ ಎದುರಿಸಬಹುದು ಎನ್ನುವುದನ್ನು ಚರ್ಚಿಸುವ ಬೇರೆ ಬೇರೆ ಲೇಖನಗಳಿವೆ. ಬಸವಣ್ಣ ಏಕೆ ಬೇಕು ಎನ್ನುವ ಲೇಖನದಲ್ಲಿ ಕಾಯಕ ಧರ್ಮದ ಸಂಕ್ಷಿಪ್ತ ಪರಿಚಯವೊಂದನ್ನು ನೀಡುತ್ತಾರೆ. ಬಸವಣ್ಣನವರು ಆಂತರಿಕ ಶಕ್ತಿ ಮತ್ತು ಶುಚಿತ್ವಕ್ಕಾಗಿ ಇಷ್ಟಲಿಂಗದ ಅರಿವು ಕೊಟ್ಟರೆ, ಲೋಕದಲ್ಲಿ ಸರ್ವ ರೀತಿಯ ಸಮಾನತೆ ಸಾಧಿಸುವುದಕ್ಕಾಗಿ ಸಮಾಜವೆಂಬ ಜಂಗಮ ಲಿಂಗದ ಪ್ರಜ್ಞೆಕೊಟ್ಟರು ಎಂದು ದರ್ಗಾ ಕೃತಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಭಾರತದ ಇತಿಹಾಸದಲ್ಲಿ ವೈದಿಕರ ಸಮಾಜೋ ಧಾರ್ಮಿಕ ವ್ಯವಸ್ಥೆಯನ್ನು ನೇರವಾಗಿ ಎದುರಿಸಿದ ಇಬ್ಬರು ಬಸವಣ್ಣ ಮತ್ತು ಅಂಬೇಡ್ಕರ್ ಎನ್ನುವುದನ್ನು ಕೃತಿಯಲ್ಲಿ ದರ್ಗಾ ಅವರು ಹೇಳುತ್ತಾರೆ. ಮತ್ತು ಅದನ್ನು ಬೇರೆ ಬೇರೆ ಲೇಖನಗಳಲ್ಲಿ ಅವರು ನಿರೂಪಿಸುತ್ತಾ ಹೋಗುತ್ತಾರೆ. ಕೃತಿಯಲ್ಲಿ ಸಮಕಾಲೀನ ವಿಷಯಗಳನ್ನು ಚರ್ಚಿಸುವ ಲೇಖನಗಳೂ ಇವೆ. ವಚನ ಚಳವಳಿ ಮತ್ತು ಅಂಬೇಡ್ಕರ್ ಚಳವಳಿ ಇವೆರಡರ ಬಗೆಗಿನ ವಿವರಗಳ ಜೊತೆಗೆ, ಆಧುನಿಕ ಸಮಸ್ಯೆಗಳನ್ನು ಈ ಚಿಂತನೆಗಳ ಮೂಲಕ ಹೇಗೆ ನಾವು ಎದುರಿಸಬಹುದು ಎನ್ನುವ ಕಡೆಗೂ ನಮ್ಮ ಗಮನವನ್ನು ಲೇಖಕರು ಸೆಳೆಯುತ್ತಾರೆ.
ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 130 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News