ಭೋಪಾಲ್: ಭಾರೀ ಮಳೆಗೆ 11 ಸಾವು

Update: 2016-07-09 18:26 GMT

ಭೋಪಾಲ್, ಜು.9 : ರಾಜ್ಯದ ಬಹುತೇಕ ಕಡೆ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುಮಾರು 11 ಜನರು ಮೃತಪಟ್ಟಿದ್ದು.ಸಾತ್ನಾ ಜಿಲ್ಲೆಯ 400ಕ್ಕಿಂತ ಅಧಿಕ ಮಂದಿ ನೆರೆ ಸಂತ್ರಸ್ತರನ್ನು ಸೇನಾ ಪಡೆಯು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಿದೆ.

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು , ನೆರೆಯಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಭೋಪಾಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

21 ವರ್ಷದ ಸೌರಭ್ ಕಟಿಯಾರ್ ಎಂಬಾತ ಮೋಟರ್ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಶಹಪುರ್ ಸರೋವರದ ಸಮೀಪ ನೆರೆ ತುಂಬಿದ ನಾಲೆಯಲ್ಲಿ ನೀರುಪಾಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದ್ದು, ಶವವನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮಂಡ್ಲಾ ಮತ್ತು ಸಿಂಗ್ರೌಲಿ ಜಿಲ್ಲೆಯಲ್ಲಿ ಶುಕ್ರವಾರ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಹೊಶಂಗಾ ಹಾಬಾದ್‌ನಲ್ಲಿರುವ ನರ್ಮದಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು,ಕಾಣೆಯಾಗಿರುವ ಯುವಕರನ್ನು ಇನ್ನಷ್ಟೇ ಪತ್ತೆಹಚ್ಚ ಬೇಕಾಗಿದೆ.ಸಂತ್ರಸ್ತರ ರಕ್ಷಣೆಗಾಗಿ ಹೆಲಿಕಾಪ್ಟರ್ ನೆರವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಯಾರಾದರೂ ಗಂಡಾಂತರಕ್ಕೆ ಸಿಲುಕಿದರೆ ಸಹಾಯಕ್ಕಾಗಿ 1079 ಸಹಾಯವಾಣಿ ಸಂಖ್ಯೆಗೆ ಕರೆಮಾಡಬಹುದಾಗಿದೆ.ಪ್ರವಾಹವನ್ನು ಸುಸೂತ್ರವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News