ಭಾರತೀಯ ಇತಿಹಾಸಕ್ಕೆ ಹೊಸ ಪ್ರಜ್ಞೆ ನೀಡಿದ ವ್ಯಾಖ್ಯಾನ ನಿವೇದನೆ

Update: 2016-07-10 17:43 GMT

ಮರಾಠಿ ಮೂಲವನ್ನು ಇಂಗ್ಲಿಷ್‌ಗೆ ಅನುವಾದ ಮತ್ತು ಸಂಪಾದಿಸಿದವರು ಅವರ ಮೊಮ್ಮಗಳಾದ ಡಾ.ಮೀರಾ ಕೋಸಾಂಬಿಯವರು. ಇದನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದವರು ಡಾ. ಗೀತಾ ಶೆಣೈ.
ಕೃತಿಯೊಂದು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರ ಆಗುವಾಗ ಆ ಭಾಷೆಯಲ್ಲಿ ಅಂತರ್ಗತವಾಗಿರುವ ಅನುರೂಪತೆ, ಸಂಸ್ಕೃತಿಗಳ ಪರಿಕಲ್ಪನೆಗಳು ಸಹ ಒಂದು ಅರ್ಥಪೂರ್ಣ ರೂಪ ಕೊಡಲು ಶ್ರಮಿಸಬೇಕಾಗುತ್ತದೆ. ಇಂಗ್ಲಿಷ್ ಅನುವಾದದ ಮೂಲಕ ಮತ್ತೊಂದು ಭಾಷೆಗೆ ಅಂದರೆ ಕನ್ನಡದಲ್ಲಿ ಅನುವಾದಿಸುವಾಗ ಭಾಷೆಗೆ ಸಂಬಂಧಿಸಿದ ತೊಡಕುಗಳು ಸಹಜ ಎಂಬ ಕಾರ್ಯಕ್ಕಾಗಿ ಮೂಲ ಮರಾಠಿ ಪದ್ಯವನ್ನು ಕೂಡ ನಾನು ವಿವರವಾಗಿ ಪರಿಶೀಲಿಸಿದ್ದೇನೆ ಎಂದು ಖ್ಯಾತ ಲೇಖಕಿ ಡಾ. ಗೀತಾ ಶೆಣೈ ಹೇಳಿದ್ದಾರೆ.
ಬೌದ್ಧ ಧರ್ಮ ಭಾರತ ದೇಶದಿಂದ ಅಳಿಸಿ ಹೋದ ಎಷ್ಟೋ ಸಮಯದ ನಂತರ ಅದನ್ನು ಒಂದು ಜೀವಂತ ಧರ್ಮವಾಗಿ ಪುನಃಶ್ಚೇತನಗೊಳಿಸಿದ ಕೀರ್ತಿ ಧರ್ಮಾನಂದ ಕೋಸಾಂಬಿಯವರಿಗೆ ಸಲ್ಲುತ್ತದೆ. 19ನೆ ಶತಮಾನದ ಪ್ರಮುಖ ಭಾರತೀಯ ಸಂಸ್ಕೃತಿ ಚಿಂತಕರಲ್ಲಿ ಪಂಡಿತ್ ಧರ್ಮಾನಂದ ಕೋಸಾಂಬಿಯವರು ಬೌದ್ಧ ವಿದ್ವಾಂಸರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು. ಸಂಸ್ಕೃತ ಮತ್ತು ಪಾಲಿ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಅಧ್ಯಯನ ಮಾಡಿ ಉತ್ಕೃಷ್ಟ ಗ್ರಂಥಗಳ ರಚನೆ ಮಾಡಿದ್ದಾರೆ. ಮುಖ್ಯವಾಗಿ ‘‘ಭಗವಾನ್ ಬುದ್ಧ’’, ‘‘ಬೌದ್ಧ ಸಂಘಾಚಾ ಪರಿಚಯ‘‘, ‘‘ಹಿಂದಿ ಸಂಸ್ಕೃತಿ ಆಣಿ ಅಹಿಂಸಾ’’, ‘‘ಬುದ್ಧಲೀಲಾಸಾರ ಸಂಗ್ರಹ’’, ಬುದ್ಧ ಧರ್ಮ ಆಣಿ ಸಂಘ ಮುಂತಾದವುಗಳು. ಹಾಗೇನೇ ಜೈನ ಧರ್ಮದ ತೀರ್ಥಂಕರರಾದ ಪಾರ್ಶ್ವನಾಥರ ಚಾತುರ್ಯಾಮ ಧರ್ಮದಿಂದ ಆಕರ್ಷಿತರಾಗಿ ಅದರಲ್ಲಿನ ಸಮಾಜವನ್ನು ಗುರುತಿಸಿದವರು ಧರ್ಮಾನಂದ ಕೋಸಾಂಬಿಯವರು. ಅವರು ಅರಸಿಕೊಂಡ ವಿಷಯಗಳ ಹರವು ಕೂಡಾ ವಿಸ್ತಾರವಾದುದು.

1910ರಲ್ಲಿ ಬೌದ್ಧ ಧರ್ಮದ ಕುರಿತಾದ ಅವರ ಮರಾಠಿ ಭಾಷೆಯ ಪ್ರಥಮ ಹಾಗೂ ನಿಖರ ಗ್ರಂಥ - ‘‘ದಿ ಬುದ್ಧ ದಿ ದಮ್ಮಾ-ಆ್ಯಂಡ್ ದಿ ಸಂಘ’’ ಬೌದ್ಧ ಧರ್ಮದ ಸತ್ವವನ್ನು ಹಿಡಿದಿಟ್ಟುಕೊಳ್ಳುವ ಹುಡುಕಾಟವನ್ನು ನಡೆಸುತ್ತದೆ. ಅವರ ಬರವಣಿಗೆಯಲ್ಲಿ ಬೌದ್ಧ ಧರ್ಮವನ್ನು ಸಮಾಜವಾದದ ದೃಷ್ಟಿಯಿಂದ ವಿಶ್ಲೇಷಿಸಿದುದನ್ನು ಗುರುತಿಸಬಹುದು. ಅವರ ಮಟ್ಟಿಗೆ ಸಮಾಜವಾದವು ನವೀನ ಮತ್ತು ವಿದೇಶಿ ಸಿದ್ಧಾಂತವಾಗಿರಲಿಲ್ಲ. ಬೌದ್ಧ ಸಂಘವನ್ನು ಸಾಮೂಹಿಕ ಒಡೆತನದ ಮತ್ತು ಸಾಮಾನ್ಯ ಜನರು ನಿರ್ಧಾರ ಕೈಗೊಳ್ಳುವ ಸಮಾಜವಾದಿ ತತ್ವವನ್ನು ಆಧರಿಸಿದ ಸಂಸ್ಥೆಯಾಗಿ ಅವರು ಕಂಡರು.
ಭಾರತೀಯ ಸಮಾಜದಲ್ಲಿ ಕಂಡು ಬರುವ ಜಾತಿ ಪದ್ಧತಿ ಮತ್ತು ಶೋಷಣೆಯ ಮೂಲ ಕಾರಣವನ್ನು ಪ್ರಾಚೀನ ಭಾರತದ ಚಿಂತನಾ ವಿಧಾನದಲ್ಲಿ ಅವರು ಹುಡುಕಲು ಪ್ರಯತ್ನಿಸುತ್ತಾರೆ. ಅವರ ಈ ‘ನಿವೇದನೆ’ ಆತ್ಮ ಕಥನವು ಪ್ರಾಚೀನ ಭಾರತೀಯ ಸಮಾಜದ ಜ್ಞಾನ ಸಂಪಾದನೆಗಾಗಿ ನಡೆಸಿದ ಅಭ್ಯಾಸ ಹಾಗೂ ಒಂದು ದೃಢ ಹೋರಾಟವೂ ಹೌದು. ಪಿ.ಎಮ್.ಲಾಡ ಅವರು ಆ ಕಾಲದಲ್ಲೇ ಧರ್ಮಾನಂದರು ಬೌದ್ಧ ಧರ್ಮವನ್ನು ಅರಿಯಲು ಆಳವಾಗಿ ನಡೆಸಿದ ಶೋಧನೆಯು, ತಾಳಿದ ಕಷ್ಟಗಳು ಚೀನೀ ಯಾತ್ರಿಕ ಹ್ಯುಯಾನ್ ತ್ಸಾಂಗ್ ಅನುಭವಿಸಿದ ಪ್ರಯಾಸಗಳ ಮುಂದೆ ತೆಳುವಾಗಿ ಗೋಚರಿಸುತ್ತದೆ ಅಂದಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮದತ್ತ ಆಕರ್ಷಿತರಾಗಲು ಧರ್ಮಾನಂದ ಕೋಸಾಂಬಿಯವರ ಚಿಂತನೆ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಚರಿತ್ರೆಕಾರರು ಹೇಳುತ್ತಾರೆ.

ಬೌದ್ಧ ಧರ್ಮದ ಪ್ರಸ್ತುತತೆಯನ್ನು ಸತ್ವವನ್ನು ಇಂದಿನ ಸಮಕಾಲೀನ ಸಾಮಾಜಿಕ ರಾಜಕೀಯ ಸಿದ್ಧಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ. ಅವರ ಆತ್ಮ ಕಥನ ‘‘ನಿವೇದನೆ’’ಯನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತದೆ ಎಂದು ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದ ಡಾ. ಮೀರಾ ಕೋಸಾಂಬಿ ಅಭಿಪ್ರಾಯ ಪಡುತ್ತಾರೆ.
ಅಕ್ಟೋಬರ್ 9,1876 ರಂದು ಗೊವಾ ಪ್ರಾಂತದ ಸಾಂಖವಾಳದ ಸಣ್ಣ ಗ್ರಾಮದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಏಳು ಮಂದಿ ಒಡ ಹುಟ್ಟಿದವರಲ್ಲಿ ಇವರೇ ಕೊನೆಯವರು. ಅವರ ದುರ್ಬಲ ಆರೋಗ್ಯ ಮತ್ತು ಬೆಳವಣಿಗೆಗೆ ಕಾರಣ ಅವರ ತಂದೆ ದಾಮೋದರ ರಾಮಚಂದ್ರ ಕೋಸಾಂಬಿಯವರು ಚಿಂತಿತರಾಗಿದ್ದರು. ಈ ಕುಟುಂಬದ ಮೂಲ ಹೆಸರು ಶೆಣೈ ಲೋಟ್ಲಿಕರ್ ಆಗಿದ್ದರೂ ಪೋರ್ತುಗೀಸರ ಆಡಳಿತದ ಬಲಾತ್ಕಾರದ ಮತಾಂತರ ಕಾರಣದಿಂದ ಈ ಕುಟುಂಬವು ತಮ್ಮ ಹೆಸರನ್ನು ಕೋಸಾಂಬಿಯಾಗಿ ಪರಿವರ್ತಿಸಿದರು.

ಗೋವೆ ಮತ್ತು ಗಡಿನಾಡು ಪ್ರದೇಶಗಳಲ್ಲಿ ಶಾಲಾಭ್ಯಾಸ ಪಡೆದ ಬಳಿಕ ನಿರಂತರ ಆರೋಗ್ಯ ಸಮಸ್ಯೆಯ ಕಾರಣದಿಂದ ಧರ್ಮಾನಂದರು ಶಾಲಾಭ್ಯಾಸವನ್ನೇ ನಿಲ್ಲಿಸಿಬಿಟ್ಟರು. ಹೀಗಾಗಿ ಅವರ ಬದುಕು ನಿಂತ ನೀರಾಯಿತು. ಜೊತೆಗೆ ಆ ಕಾಲದ ರೂಢಿಯಂತೆ ಕುಟುಂಬವು ಬಾಲ್ಯ ವಿವಾಹ ಮಾಡಿದರು. ಇದೂ ಅವರನ್ನು ಒಂದಿಷ್ಟು ಕಂಗೆಡಿಸಿತು. ತಮ್ಮ ನಿರಾಸೆಯನ್ನು ತಳ್ಳಲು ಅವರ ಮನಸ್ಸು ವ್ಯಾಪಕವಾಗಿ ತುಕಾರಾಮರ ಭಕ್ತಿ ಕಾವ್ಯದ ಕಡೆಗೆ ಹರಿಯಿತು. ಅವರ ಮಾತೃ ಭಾಷೆ ಕೊಂಕಣಿ. ಆದರೆ ಕೊಂಕಣಿ ಭಾಷೆ ಸಾಹಿತ್ಯಿಕವಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಹೀಗಾಗಿ ಅವರು ಮರಾಠಿಯ ಮೊರೆ ಹೋದರು. ಸಂತ ತುಕಾರಾಮ ಮತ್ತು ಗೌತಮ ಬುದ್ಧನ ಬದುಕಿನಿಂದ ಆಧ್ಯಾತ್ಮಿಕ ಪುಷ್ಟಿಯನ್ನು ಪಡೆದ ಅವರು ತಮ್ಮ ಉಳಿದ ಬದುಕನ್ನು ಬೌದ್ಧ ಧರ್ಮದ ಅಧ್ಯಯನಕ್ಕೆ ಮುಡಿಪಾಗಿಡಲು ತೀರ್ಮಾನಿಸಿದರು. ಬಹಳ ಅನ್ಯೋನ್ಯ ರೀತಿಯಿಂದ ಹೆಣೆದು ಕೊಂಡಿರುವ ಗ್ರಾಮ ವ್ಯಾಪ್ತಿಯನ್ನು ದಾಟಿ ಗೌತಮ ಬುದ್ಧನಂತೆ ತನ್ನ ಬದುಕಿನ ಗುರಿ ಸಾಧಿಸಲು ಕಷ್ಟ ಕಾರ್ಪಣ್ಯದ ದಾರಿ ಹಿಡಿದರು. ತನಗಾಗಿ ಹಾಗೂ ಮಾನವೀಯ ವೌಲ್ಯದ ಪಥವನ್ನು ಹುಡುಕಲು ಗೋವಾ ಬಿಟ್ಟು 1900 ರಲ್ಲಿ ಪುಣೆ ತಲುಪಿದರು. ಅಲ್ಲಿ ಅವರು ಸುಶಿಕ್ಷಿತ ಮತ್ತು ಸಾಂಸ್ಕೃತಿಕ ವರ್ತುಲಗಳಲ್ಲಿ ಬೆರೆಯುವ ಆತ್ಮವಿಶ್ವಾಸ ಬೆಳೆಸಿಕೊಂಡರು ನಂತರ ಅವರ ಪ್ರಯಾಣ ಉತ್ತರ ಭಾರತದ ಕಾಶಿಯಲ್ಲಿ ಸಂಸ್ಕೃತ ಅಧ್ಯಯನವನ್ನು ವರ್ಷಕ್ಕೂ ಅಧಿಕ ಅವಧಿಯಲ್ಲಿ ನಡೆಸಿದರು. ನಂತರ ಬೌದ್ಧ ಧರ್ಮದ ಅಧ್ಯಯನ ಕೇಂದ್ರವಾದ ನೇಪಾಳದ ಕಾಟ್ಮಂಡುವಿಗೆ ಹಂತ ಹಂತವಾಗಿ ಕಾಲ್ನಡಿಗೆಯಲ್ಲಿ ತೆರಳಿದರು. ಆದರೆ ಅಲ್ಲಿ ಬೌದ್ಧ ಧರ್ಮ ಸಂಪೂರ್ಣ ಅವನತಿ ಹೊಂದಿದ್ದ ಕಾರಣ ಅಲ್ಲಿಂದ ಬೋಧಿಗಯಾಗೆ ಹೋದರು. ಅಲ್ಲಿಯೂ ಕೇವಲ ಹೆಸರಿಗೆ ಮಾತ್ರ ಬೌದ್ಧ ಧರ್ಮವಿತ್ತು. ಯಾರೋ ಒಬ್ಬರು ಶ್ರೀಲಂಕಾಗೆ ಹೋಗುವಂತೆ ಅವರಿಗೆ ಸಲಹೆ ನೀಡಿದರು. ಬೌದ್ಧ ಧರ್ಮದ ಸತ್ವ ಅರಿಯಲು ಅವರು ಭಿಕ್ಷು ಕೂಡಾ ಆದರು. ಹೀಗೆ ‘‘ನಿವೇದನೆ’’ ಅವರ ಪ್ರವಾಸ ಕಥನವೂ ಹೌದು, ಆಪ್ತವಾದ ಅನುಭವ ಕಥನವೂ ಹೌದು. ಗೌಡ ಸಾರಸ್ವತ ಬ್ರಾಹ್ಮಣರಾಗಿದ್ದ ಅವರು ಶುದ್ಧ ಶಾಖಾಹಾರಿಗಳಾಗಿದ್ದ ಕಾರಣ ಆಹಾರದ ವಿಚಾರದಲ್ಲಿ ಬಹಳಷ್ಟು ಸಂಕಷ್ಟ ಸಹಿಸ ಬೇಕಾಯಿತು. ಈ ಬಗ್ಗೆ ಅವರು ಒಂದೆಡೆ ಹೀಗೆ ಹೇಳಿದ್ದಾರೆ’’. ನಾನು ಶಾಖಾಹಾರಿ ಎಂದು ಹೇಳಿದಾಗ ಸಿಕ್ಕಿಂ ಮಠದಲ್ಲಿ ಲಾಮಾ ತಮಗೋಸ್ಕರ ಕಷ್ಟಪಟ್ಟು ವಿಶೇಷ ಖಾದ್ಯ ತಯಾರಿಸಿದ್ದೇನೆ ಎಂದು ಹೇಳಿದಾಗ, ತಟ್ಟೆಯಲ್ಲಿರುವ ಆ ವಿಶೇಷ ಖಾದ್ಯ ಯಾವುದರಿಂದ ತಯಾರಿಸಿದ್ದೀರಿ ಎಂದು ಕೇಳಿದಾಗ, ಕಾಡಿನಿಂದ ತಂದ ಕಪ್ಪೆಗಳಿಂದ ಮಾಡಿದ ಪಲ್ಯ ಎಂದು ಹೇಳಿದಾಗ ಕಂಗೆಟ್ಟು ಹೋದೆ. ನಂತರ ಊಟಕ್ಕೆ ಆಮಂತ್ರಣ ಬಂದರೆ ನಾನು ಮೀನು, ಹಾವು, ಕಪ್ಪೆ ಅಥವಾ ಯಾವುದೇ ಜೀವಿಯ ಮಾಂಸ ತಿನ್ನುವುದಿಲ್ಲ ಎಂದು ಖಚಿತ ಪಡಿಸುತ್ತಿದ್ದೆ’’.

ಒಂದು ರೀತಿಯಲ್ಲಿ ಈ ‘‘ನಿವೇದನೆ’’ ಆತ್ಮ ಕಥನವು 19ನೆ ಶತಮಾನದ ಪ್ರಾರಂಭದ ಹಂತದ ನಿಂತ ನೀರಿನಂತೆ ಇದ್ದ ಪರಂಪರಾಗತವಾದ ನಂಬಿಕೆಗಳ ಮೇಲೆ ನಡೆಸುವ ಜನ ಜೀವನದ ಜತೆಯಲ್ಲೇ ವಸ್ತು ಸ್ಥಿತಿಯನ್ನೂ ಸರಿಸಮನಾಗಿ ಅನ್ವೇಷಿಸಿ ಶೋಧಿಸುತ್ತದೆ.ಹಾಗೇನೇ ಸಮಾಜಶಾಸ್ತ್ರದ ದೃಷ್ಟಿಯಿಂದಲೂ ಅನೇಕ ಅರ್ಥಪೂರ್ಣವಾದ ಇಣುಕು ನೋಟಗಳನ್ನು ಘಟನೆಗಳ ಮೂಲಕವೂ ಎಳೆ ಎಳೆಯಾಗಿ ಬಿಡಿಸಿ ಬಯಲಿಗಿಡುತ್ತದೆ. ಬೌದ್ಧಿಕ ಚಿಂತನೆಗಳು ತೆಳುವಾಗಿರುವ ಇಂದಿನ ಕಾಲದಲ್ಲಿ ಅವರ ನಿಲುವುಗಳು ಗಮನಿಸುವಂತಹವುಗಳು ಚರ್ಚೆಗೆ ಅಪಾರ ತರ್ಕಗಳನ್ನು ನೀಡುತ್ತದೆ.

Writer - ಕೆ.ತಾರಾಭಟ್

contributor

Editor - ಕೆ.ತಾರಾಭಟ್

contributor

Similar News