ಕಾಶ್ಮೀರ: ಪೊಲೀಸ್‌ನ್ನು ನೀರಲ್ಲಿ ಮುಳುಗಿಸಿ ಕೊಂದ ಉದ್ರಿಕ್ತರು

Update: 2016-07-11 04:29 GMT

ಶ್ರೀನಗರ, ಜು.11: ಕಾಶ್ಮೀರದಲ್ಲಿ ಎರಡು ದಿನಗಳಿಂದ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಮತ್ತೆ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 23ಕ್ಕೆ ಏರಿದೆ. ಶನಿವಾರದ ಗಲಭೆಯಲ್ಲಿ ಗಾಯಗೊಂಡಿದ್ದ ಹದಿಹರೆಯದ ಬಾಲಕಿಯೊಬ್ಬಳು ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ.

ಹಿಜ್ಬುಲ್  ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ವ್ಯಾಪಕವಾಗಿದೆ. ಪ್ರತಿಭಟನೆ ಹತ್ತಿಕ್ಕಲು ಅತಿಯಾದ ಬಲಪ್ರಯೋಗ ಮಾಡಿದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯ ಕಾವು ತೀವ್ರವಾಗಿರುವ ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಿಂದ ಉತ್ತರ ಕಾಶ್ಮೀರಕ್ಕೂ ಹಿಂಸಾಚಾರ ವ್ಯಾಪಿಸಿದ್ದು, ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಅವರ ಗ್ರಾಮವಾದ ಸಿಯೊಬಾಗ್‌ನಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸ್ ಠಾಣೆಯನ್ನು ಸುಟ್ಟುಹಾಕಿದ್ದಾರೆ.

ಮತ್ತೊಂದು ಘಟನೆಯಲ್ಲಿ ಪ್ರತಿಭಟನಾಕಾರರು, ಝೀಲಂ ನದಿಯಲ್ಲಿ ಪೊಲೀಸ್ ಜೀಪಿನ ಚಾಲಕ ಅಪ್ರೋಝ್ ಅಹ್ಮದ್ ಎಂಬುವವರನ್ನು ಮುಳುಗಿಸಿ ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಪೊಲೀಸ್ ಪೇದೆ ಅಬ್ದುಲ್ ಗನಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪುಲ್ವಾಮಾನದಲ್ಲಿ ಡಿವೈಎಸ್ಪಿ ವಾಹನವನ್ನು ಸುಟ್ಟುಹಾಕಿದ್ದಾರೆ.

ಗ್ರೆನೇಡ್ ದಾಳಿಯಲ್ಲಿ ನಾಲ್ವರು ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದಾರೆ. ಧ್ವನಿವರ್ಧಕಗಳ ಮೂಲಕ ಭಾರತ ವಿರೋಧಿ ಹಾಗೂ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News