ಮಾನವ್ಯದ ತಳಹದಿಯಲ್ಲಿ -ಚಿಂತನ ಕಿರಣ

Update: 2016-07-11 17:16 GMT

ಮನುಷ್ಯ ಜಾತಿ ತಾನೊಂದೆ ವಲಂ ಎಂಬ ತಳಹದಿಯ ಮೇಲೆ ಯುವ ಲೇಖಕ ಎಚ್. ಎನ್. ಕಿರಣ್ ಕುಮಾರ್ ಬರೆದಿರುವ ಲೇಖನಗಳ ಸಂಗ್ರಹವೇ ‘ಚಿಂತನ ಕಿರಣ’. ಹೆಸರೇ ಕೃತಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ವೈಚಾರಿಕತೆ, ವ್ಯಕ್ತಿ ಪರಿಚಯ, ಸಂದರ್ಶನಗಳ ಸಂಗ್ರಹಗಳನ್ನು ಈ ಕೃತಿ ಒಳಗೊಂಡಿವೆಯಾ ದರೂ ಎಲ್ಲವುಗಳ ಉದ್ದೇಶ ಮಾನವ್ಯ ವಾದುದು. ಕೃತಿಯೊ ಳಗೆ ವೈಚಾರಿಕ ಲೇಖನ, ವ್ಯಕ್ತಿ ಪರಿಚಯ, ಸಂದರ್ಶನ ಎನ್ನುವ ಮೂರು ವಿಭಾಗಗಳಿವೆ. ಸಾಹಿತ್ಯ, ಜಾಗತೀಕರಣ, ರೈತರ ಆತ್ಮಹತ್ಯೆ, ಶಿಕ್ಷಣದ ಕುರಿತ ಕಾಳಜಿ, ಸಹಬಾಳ್ವೆ, ಸಾಮಾಜಿಕ ಪ್ರಜ್ಞೆ, ಕಲೆ, ನೈತಿಕತೆ, ಯುವಜನತೆ, ನಾಯಕತ್ವ ಮೊದಲಾದ ವಿಷಯವನ್ನು ವೈಚಾರಿಕ ವಿಭಾಗ ಒಳಗೊಂಡಿದೆ. ವಿಷಯದ ಆಳಕ್ಕೆ ಲೇಖನಗಳು ಇಳಿಯದೇ ಇದ್ದರೂ, ಧನಾತ್ಮಕವಾದ ಉದ್ದೇಶಗಳೊಂದಿಗೆ ಎಲ್ಲ ಲೇಖನಗಳು ಮುಗಿಯುತ್ತವೆ.

 ವ್ಯಕ್ತಿ ಪರಿಚಯದಲ್ಲಿ ಎಚ್. ಎಸ್. ನರಸಿಂಹಮೂರ್ತಿ, ಪಟೇಲ್ ಆರ್ ಮುನಿಶ್ಯಾಮಿಗೌಡ, ಎಂ. ಆರ್. ನಾಗರಾಜರಾವ್, ಅಂಗಡಿ ಚಿಕ್ಕಣ ಇವರ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಮೂರು ವಿಭಿನ್ನ ಮನಸ್ಸುಗಳು ಎನ್ನುವ ಹೆಸರಲ್ಲಿ ಲಕ್ಷ್ಮಣರಾವ್, ಡಾ. ರಂಗಾರೆಡ್ಡಿ ಕೋಡಿರಾಂಪುರ, ಸಾ. ನಾ. ಲಕ್ಷಣ ಗೌಡರ ಜೊತೆಗಿನ ಮಾತುಕತೆಗಳಿವೆ. ಭಾಷೆ ಜೀವನದ ಉಸಿರಿದ್ದಂತೆ ತಲೆಬರಹದಲ್ಲಿ ಡಾ. ಎಲ್. ಜಿ. ಮೀರಾ ಅವರ ಸಂದರ್ಶನ ಇದೆ. ಸಾಹಿತ್ಯ ಕ್ರಾಂತಿ ಅನಿವಾರ್ಯವೆ? ಎನ್ನುವ ಪ್ರಶ್ನೆಯನ್ನಿಟ್ಟು ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರ ಸಂದರ್ಶನವಿದೆ. ಕಿರಿದಾದ ಬರಹಗಳ ಮೂಲಕ ಹಿರಿದಾದುದನ್ನು ಹೇಳುವ ಪ್ರಯತ್ನವನ್ನು ಕಿರಣ್ ಮಾಡಿದ್ದಾರೆ. ವಿಷಯದ ಆಳಕ್ಕೆ ಇನ್ನಷ್ಟು ನುಗ್ಗುವ, ಶೋಧಿಸುವ, ಓದುವ ಅಭ್ಯಾಸವನ್ನು ಹೆಚ್ಚಿಸಿಕೊಂಡರೆ, ಅವರಿಂದ ಇನ್ನಷ್ಟು ವಿಸ್ತಾರವಾದ ಬರಹಗಳು ಹೊರ ಬರಬಹುದು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಬಳ್ಳಾಪುರ ಇವರು ಹೊರತಂದಿರುವ ಈ ಕೃತಿಯ ಮುಖಬೆಲೆ 60ರೂ. ಆಸಕ್ತರು98453 94184 ದೂರವಾಣಿಯನ್ನು ಸಂಪರ್ಕಿಸಬಹುದು.
 

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News