ರಾಜ್ಯಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ : ಅಧ್ಯಾದೇಶ ತಡೆಗೆ ಸುಪ್ರೀಂ ನಕಾರ

Update: 2016-07-14 15:27 GMT

ಹೊಸದಿಲ್ಲಿ,ಜು.14: 2016-17 ಶೈಕ್ಷಣಿಕ ವರ್ಷದಲ್ಲಿ ಪ್ರತ್ಯೇಕ ಎಂಬಿಬಿಎಸ್ ಮತ್ತು ಬಿಡಿಎಸ್ ಪ್ರವೇಶ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿರುವ ಕೇಂದ್ರ ಅಧ್ಯಾದೇಶದ ಸಿಂಧುತ್ವವು ‘ಶಂಕೆಯಲ್ಲಿದೆ ’ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ. ಆದರೆ ಈ ಅಧ್ಯಾದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಅದು, ಅರ್ಧದಷ್ಟು ರಾಜ್ಯಗಳು ಈಗಾಗಲೇ ತಮ್ಮ ಪರೀಕ್ಷೆಗಳನ್ನು ನಡೆಸಿವೆ ಎಂದು ಬೆಟ್ಟು ಮಾಡಿದೆ. ನ್ಯಾಯಾಲಯದ ಆದೇಶವಿದ್ದರೂ ಸರಕಾರವು ಅಧ್ಯಾದೇಶವನ್ನು ಹೊರಡಿಸಿದ್ದು ಸೂಕ್ತವಲ್ಲ. ಮೇಲ್ನೋಟಕ್ಕೆ ಈ ಅಧ್ಯಾದೇಶದ ಸಿಂಧುತ್ವದ ಬಗ್ಗೆಯೇ ನಮಗೆ ಶಂಕೆಯಿದೆ ಎಂದು ನ್ಯಾಯಮೂರ್ತಿಗಳಾದ ಎ.ಆರ್.ದವೆ,ಎ.ಕೆ.ಗೋಯೆಲ್ ಮತ್ತು ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠವು ಹೇಳಿತು.

ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವವರಿಗೆ ಕೇಂದ್ರೀಕೃತ ಕೌನ್ಸೆಲಿಂಗ್ ನಡೆಸಬೇಕೆಂಬ ಮನವಿಯನ್ನೂ ನ್ಯಾಯಾಲಯವು ವಜಾಗೊಳಿಸಿತು.

ಕೇಂದ್ರದ ಅಧ್ಯಾದೇಶವನ್ನು ಪ್ರಶ್ನಿಸಿ ಆನಂದ ರಾಯ್ ಮತ್ತು ಇತರರು ಸಲ್ಲಿಸಿರುವ ಆರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಅಧ್ಯಾದೇಶವನ್ನು ಹೊರಡಿಸುವ ಮೂಲಕ ನ್ಯಾಯಾಂಗ ಆದೇಶವನ್ನು ಪರಿಣಾಮಶೂನ್ಯಗೊಳಿಸುವ ಅಧಿಕಾರ ಕೇಂದ್ರಕ್ಕಿಲ್ಲ ಎಂದು ಅವರು ವಾದಿಸಿದ್ದಾರೆ.

 ಏಕೈಕ ಪ್ರವೇಶ ಪರೀಕ್ಷೆ ನಿಟ್‌ನ ವ್ಯಾಪ್ತಿಯಿಂದ ರಾಜ್ಯ ಪರೀಕ್ಷಾ ಮಂಡಳಿಗಳನ್ನು ಹೊರಗಿರಿಸಿರುವ ಅಧ್ಯಾದೇಶವು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಸರಕಾರವು ತನ್ನ ಅಧಿಕಾರ ಮಿತಿಯೊಳಗೇ ಈ ಅಧ್ಯಾದೇಶವನ್ನು ಹೊರಡಿಸಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News