ಬೃಹತ್ ಕಟ್ಟಡ ಯೋಜನೆಗಳಿಗೆ ಇನ್ನು ಪರಿಸರ ಅನುಮತಿ ಅಗತ್ಯವಿಲ್ಲ

Update: 2016-07-15 06:31 GMT

ಹೊಸದಿಲ್ಲಿ, ಜು.15: ಬೃಹತ್ ಕಟ್ಟಡಗಳು ಹಾಗೂ ಇತರ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪರಿಸರ ಅನುಮತಿ ಪಡೆಯುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ಕೇಂದ್ರ ಪರಿಸರ ಸಚಿವಾಲಯ ನಿರ್ಧರಿಸಿದೆ.

ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪರಿಸರ ಅನುಮತಿ ಕಳೆದ ಒಂದು ದಶಕಗಳಿಂದಲೂ ಹೆಚ್ಚು ಕಾಲದಿಂದ ಕಡ್ಡಾಯವಾಗಿತ್ತು. ಆಶ್ಚರ್ಯವೆಂದರೆ, ಕೇಂದ್ರದ ಈ ನಿರ್ಧಾರ ಅದು ಆರು ತಿಂಗಳುಗಳ ಹಿಂದೆ ನೀಡಿದ್ದ ಆದೇಶಕ್ಕೇ ವಿರುದ್ಧವಾಗಿದೆ. ನವೆಂಬರ್ 10, 2015 ರಲ್ಲಿ ಅದು ನೀಡಿದ ಆದೇಶವೊಂದರಲ್ಲಿ ಕಟ್ಟಡ ನಿರ್ಮಾಣ ಯೋಜನೆಗಳ ಸಂಬಂಧ ರಾಜ್ಯಗಳು ಪರಿಸರ ಅನುಮತಿ ಪ್ರಕ್ರಿಯೆ ನಿಯಮವನ್ನು ಪಾಲಿಸಬೇಕು, ಎಂದು ಹೇಳಲಾಗಿತ್ತು.

ಕೇಂದ್ರದ ಈ ನಿರ್ಧಾರದಿಂದಾಗಿ ಕಟ್ಟಡ ನಿರ್ಮಾಣ ಉದ್ಯಮವು ಪರಿಸರ ಸಚಿವಾಲಯದ ಪರಿಧಿಯಿಂದ ಹೊರ ಬರುವುದಲ್ಲದೆ, ಯಾವುದೇ ಕಟ್ಟಡ ಯೋಜನೆಯ ವಿರುದ್ಧ ಪರಿಸರ ಹಾನಿಯ ಆರೋಪ ಹೊರಿಸಿ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡುವಂತಿಲ್ಲವಾಗಿದೆ.

ಈಗಿರುವ ಕಾನೂನಿನಂತೆ 20,000 ಚದರ ಮೀಟರುಗಳಿಗಿಂತ ಹೆಚ್ಚಿನ ಗಾತ್ರದ ಕಟ್ಟಡಗಳು ಹಾಗೂ ಟೌನ್‌ಶಿಪ್ ಪ್ರಾಜೆಕ್ಟ್‌ಗಳು ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಎಸ್ಸೆಸ್‌ಮೆಂಟ್ ಅಧ್ಯಯನ ನಡೆಸುವುದು ಕಡ್ಡಾಯವಾಗಿದೆಯಲ್ಲದೆ ಈ ವರದಿಯಾಧಾರದಲ್ಲಿ ಪರಿಸರ ಸಚಿವಾಲಯ ಯೋಜನೆಗಳಿಗೆ ಅನುಮತಿ ನೀಡುತ್ತಿತ್ತು. ಆದರೆ ಎ.29 ರಂದು ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯಂತೆ ರಾಜ್ಯಗಳು ಕಟ್ಟಡ ನಿರ್ಮಾಣ ಬೈಲಾಗಳನ್ವಯ ಪರವಾನಿಗೆಯಲ್ಲೇ ಪರಿಸರ ಸಂಬಂಧಿತ ಷರತ್ತುಗಳನ್ನೂ ಸೇರಿಸುವುದರಿಂದ ನಿರ್ಮಾಣ ಯೋಜನೆಗಳು ಪ್ರತ್ಯೇಕವಾಗಿ ಪರಿಸರ ಅನುಮತಿ ಪಡೆಯುವ ಅಗತ್ಯವಿಲ್ಲವಾಗಿದೆ.

ರಾಷ್ಟ್ರೀಯ ಹಸಿರು ಪೀಠವು ಈ ಹಿಂದೆ ಹಲವು ಕಟ್ಟಡ ನಿರ್ಮಾಣಕಾರರನ್ನು ಪರಿಸರಕ್ಕೆ ಹಾನಿಗೊಳಿಸಿದ್ದಕ್ಕಾಗಿ ದಂಡ ವಿಧಿಸಿದ ನಿದರ್ಶನಗಳಿವೆ. ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವೊಂದರಲ್ಲಿ ಪರಿಸರ ಅನುಮತಿ ಪಡೆಯದೇ ನಿರ್ಮಿಸಲ್ಪಡುವ ಗೃಹ ನಿರ್ಮಾಣ ಯೋಜನೆಗಳು ಅಕ್ರಮ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News