ಅಬ್ದುಲ್ ಸತ್ತಾರ್ ಈದಿ 1928-2016

Update: 2016-07-17 17:33 GMT

1950ರಲ್ಲಿ ಕೇವಲ ಒಂದು ಸಣ್ಣ ಕೋಣೆಯಲ್ಲಿ ಆರಂಭಗೊಂಡ ಈದಿ ಪ್ರತಿಷ್ಠಾನ ಇಂದು ಪಾಕಿಸ್ತಾನಾದ್ಯಂತ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು, 1,800 ಸ್ವಸಹಾಯ ಆ್ಯಂಬುಲೆನ್ಸ್ ಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ. ಸಂಸ್ಥೆಯು ಎರಡು ಖಾಸಗಿ ಜೆಟ್‌ಗಳು, ಒಂದು ಹೆಲಿಕಾಪ್ಟರ್ ಮತ್ತು 28 ರಕ್ಷಣಾ ಬೋಟುಗಳನ್ನು ಹೊಂದಿದೆ. ಸಂಸ್ಥೆಯು ಎಂಟು ಉಚಿತ ಆಸ್ಪತ್ರೆಗಳನ್ನು ನಡೆಸುತ್ತದೆ ಮತ್ತು ಅನೇಕ ಔಷಧ ಕೇಂದ್ರಗಳನ್ನು ಹಾಗೂ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಮುಗ್ದ ಕೈದಿಗಳಿಗೆ ಕಾನೂನು ನೆರವನ್ನೂ ಒದಗಿಸುತ್ತದೆ.

ಹಾರೂನ್ ಖಾಲಿದ್

1,800ಕ್ಕೂ ಅಧಿಕ ವಾಹನಗಳೊಂದಿಗೆ ಈದಿ ಪ್ರತಿಷ್ಠಾನ ಅತ್ಯಂತ ಹೆಚ್ಚು ಆ್ಯಂಬುಲೆನ್ಸ್‌ಗಳನ್ನು ಹೊಂದಿರುವ ಜಗತ್ತಿನ ಅತ್ಯಂತ ದೊಡ್ಡ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಕಳೆದ ವರ್ಷ, ಕೋಕ್ ಸ್ಟುಡಿಯೋದಲ್ಲಿ ಹಾಡುವ ಮೂಲಕ ಪ್ರಸಿದ್ಧಿಗೆ ಬಂದ ನಟಿ, ಗಾಯಕಿ ಕೋಮಲ್ ರಿಝ್ವಿಯ ಸೆಲ್ಫಿಯೊಂದು ಭಾರೀ ಸದ್ದು ಮಾಡಿತ್ತು ಮುಖ್ಯವಾಗಿ ಅದು ಅಗೌರವಯುತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಡಿಸಲ್ಪಟ್ಟ ಕಾರಣಕ್ಕಾಗಿ. ಯುವ ಕೋಮಲ್ ರಿಝ್ವಿಯು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಪಾಕಿಸ್ತಾನದ ಸಮಾಜ ಸೇವಕ ಅಬ್ದುಲ್ ಸತ್ತಾರ್ ರಿಝ್ವಿಯವರ ಜೊತೆ ತೆಗೆದ ಸೆಲ್ಫಿಯಾಗಿತ್ತದು. ಆ ಸೆಲ್ಫಿಯಲ್ಲಿ ರಿಝ್ವಿ ಇಷ್ಟಗಳ ನಗು ಬೀರಿದ್ದರೆ ಈದಿ ಕ್ಯಾಮರವನ್ನೂ ನೋಡುತ್ತಿರಲಿಲ್ಲ. ಇಡೀ ಅಂತರ್ಜಾಲ ಹುಚ್ಚೆಬ್ಬಿತ್ತು. ಈ ಫೋಟೊ ಕ್ಲಿಕ್ಕಿಸಿದ್ದಕ್ಕಾಗಿ ಕೋಮಲ್ ಮೇಲೆ ಬೈಗುಳದ ಮಳೆಗರೆಯಲಾಯಿತು, ಅವಮಾನಿಸಲಾಯಿತು ಮತ್ತು ಬೆದರಿಸಲಾಯಿತು. ತಮ್ಮ ಅತಿರೇಕದ ಮತ್ತು ಸೆಲ್ಫಿಯ ಬಗ್ಗೆ ಇಲ್ಲದ ವಿರೋಧದ ಬಗ್ಗೆ ಸ್ಪಷ್ಟಪಡಿಸಿದ ಪಾಕಿಸ್ತಾನಿಗಳು ದೇಶದ ಪ್ರಮುಖ ಮಾನವತಾವಾದಿ ಈದಿಯವರ ವಿಷಯದಲ್ಲಿ ಯಾವುದೇ ಕಾರಣಕ್ಕೂ ತಮಾಷೆ ಸಹಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಹಲವು ವಾರಗಳ ಕಾಲ ಅನಾರೋಗ್ಯ ಪೀಡಿತರಾಗಿದ್ದ ಈದಿ ಕಳೆದ ಶುಕ್ರವಾರ ರಾತ್ರಿ 88ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಈದಿ ಮತ್ತವರ ಪತ್ನಿ ಬಲ್ಕೀಸ್ ಸಾಮಾಜಿಕ ಸೇವಾ ಸಂಸ್ಥೆ ಈದಿ ಪ್ರತಿಷ್ಠಾನದ ಸಹ-ಸಂಸ್ಥಾಪಕರಾಗಿದ್ದರು. 1950ರಲ್ಲಿ ಕೇವಲ ಒಂದು ಸಣ್ಣ ಕೋಣೆಯಲ್ಲಿ ಆರಂಭಿಸಿದ ಈ ಸಂಸ್ಥೆ ಇಂದು ಪಾಕಿಸ್ತಾನಾದ್ಯಂತ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು, 1,800 ಸ್ವಸಹಾಯ ಆ್ಯಂಬುಲೆನ್ಸ್‌ಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ. ಸಂಸ್ಥೆಯು ಎರಡು ಖಾಸಗಿ ಜೆಟ್‌ಗಳು, ಒಂದು ಹೆಲಿಕಾಪ್ಟರ್ ಮತ್ತು 28 ರಕ್ಷಣಾ ಬೋಟುಗಳನ್ನು ಹೊಂದಿದೆ. ಸಂಸ್ಥೆಯು ಎಂಟು ಉಚಿತ ಆಸ್ಪತ್ರೆಗಳನ್ನು ನಡೆಸುತ್ತದೆ ಮತ್ತು ಅನೇಕ ಔಷಧ ಕೇಂದ್ರಗಳನ್ನು ಹಾಗೂ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಮುಗ್ಧ ಕೈದಿಗಳಿಗೆ ಕಾನೂನು ನೆರವನ್ನೂ ಒದಗಿಸುತ್ತಾರೆ. ಯಾವಾಗಲೂ ಸರಳ ಬೂದು ಬಣ್ಣದ ಶಲ್ವಾರ್ ಕಮೀಝ್ ಬಟ್ಟ್ಟೆ ಧರಿಸುವ ಈದಿಯರು ಗಿಡ್ಡ ದೇಹದ ಕೃಶಕಾಯದ ವ್ಯಕ್ತಿಯಾಗಿದ್ದು ಉದ್ದನೆಯ ಬಿಳಿ ಗಡ್ಡ ಮತ್ತು ಸಣ್ಣ ಮೀಸೆಯನ್ನು ಹೊಂದಿದ್ದರು. ಅವರು ಯಾವಾಗಲೂ ಪಾಕಿಸ್ತಾನದ ಹಳೆಯ ತಲೆಮಾರು ಧರಿಸುತ್ತಿದ್ದ ಜಿನ್ನಾ ಟೊಪ್ಪಿಯನ್ನು ಧರಿಸುತ್ತಿದ್ದರು. ಈದಿಯವರಿಗೆ ಇಡೀ ದೇಶವೇ ತನ್ನನ್ನು ಹಿಂಬಾಲಿಸುವಂತೆ ಮಾಡುವ ಸಾಮರ್ಥ್ಯವಿತ್ತು. ಎಲ್ಲಾ ವಿಷಯಗಳಲ್ಲೂ ಪಿತೂರಿಯನ್ನೇ ನೋಡುವ ದೇಶದಲ್ಲಿ ಇದು ಅತ್ಯಂತ ಅಪರೂಪದ ವಿಷಯವಾಗಿತ್ತು. ಫೆಬ್ರವರಿಯಲ್ಲಿ ಪಾಕಿಸ್ತಾನಿ ಸಿನೆಮಾ ನಿರ್ದೇಶಕಿ ಶರ್ಮೀನ್ ಒಬೈದ್ ಚಿನಾಯ್ ತಮ್ಮ ‘ಎ ಗರ್ಲ್ ಇನ್ ದ ರಿವರ್’ ಸಿನೆಮಾಕ್ಕೆ ಎರಡನೆ ಬಾರಿ ಆಸ್ಕರ್ ಪ್ರಶಸ್ತಿ ಪಡೆದಾಗ ಕೆಲವು ಪಾಕಿಸ್ತಾನಿಯರು ಹರ್ಷಾಚರಣೆ ಮಾಡಿದರು, ಆದರೆ ಇನ್ನು ಕೆಲವರು ಈ ಗೆಲುವಿನ ಹಿಂದೆ ಪಾಶ್ಚಾತ್ಯ ಸಿದ್ಧಾಂತವಿದೆ ಎಂದು ಸಂಶಯಿಸಿದರು. ಈ ಸಿನೆಮಾವು ಪಾಕಿಸ್ತಾನದಲ್ಲಿ ನಡೆಯುವ ಮರ್ಯಾದಾ ಹತ್ಯೆಯ ಬಗ್ಗೆಯಾಗಿತ್ತು. ಕೆಲವರು ಒಬೈದ್ ಚಿನಾಯ್ ದೇಶದ ಬಗ್ಗೆ ಪಾಶ್ಚಾತ್ಯ ಚಿಂತನೆಯನ್ನು ಬಿತ್ತುತ್ತಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಪಾಕಿಸ್ತಾನದ ಋಣಾತ್ಮಕ ಚಿತ್ರಣವನ್ನು ಬಳಸಿ ಆಕೆಯ ಯಶಸ್ಸನ್ನು ಪಡೆಯಲು ಬಯಸುತ್ತಿದ್ದಾರೆ ಎಂದು ಆರೋಪಿಸಿ ದರು. ಈಕೆಯ ಮೊದಲ ಸಿನೆಮಾ ‘ಸೇವಿಂಗ್ ಫೇಸ್’ ಮುಖಕ್ಕೆ ಆ್ಯಸಿಡ್ ಎರಚಲ್ಪಟ್ಟ ಮಹಿಳೆಯರ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತ್ತು. ಆದರೆ ತಾಲಿಬಾನಿಗಳಿಂದ ತನ್ನ ತಲೆಗೆ ಗುಂಡು ಹಾರಿಸಿಕೊಂಡ ಪಾಕಿಸ್ತಾನಿ ಹುಡುಗಿ ಮಲಾಲ ಯೂಸುಫ್ ಝಾಯಿ ಜಗತ್ತಿನಾದ್ಯಂತ ತನ್ನ ಸಾಹಸಕ್ಕಾಗಿ ಪ್ರಶಂಸಿಸಲ್ಪಟ್ಟರೂ ದೇಶದೊಳಗೆ ಒಬೈದ್ ಚಿನಾಯ್‌ಗಿಂತಲೂ ಹೆಚ್ಚು ತೀವ್ರವಾಗಿ ಟೀಕೆಗೊಳಗಾದಳು. ಸದ್ಯ ಜಗತ್ತಿನಲ್ಲಿ ಅತೀಹೆಚ್ಚು ಗುರುತಿಸಲ್ಪಡುವ ಪಾಕಿಸ್ತಾನಿಯಾಗಿರುವ ಯೂಸುಫ್ ಝಾಯಿಯನ್ನು ಒಂದೊಮ್ಮೆ ಪಾಶ್ಚಾತ್ಯ ಏಜೆಂಟ್ ಎಂದು ಕರೆಯಲಾಗಿತ್ತು ಮತ್ತು ಆಕೆಯ ಪಾಕಿಸ್ತಾನ ವಿರೋಧಿ ಮತ್ತು ಇಸ್ಲಾಂ ವಿರೋಧಿ ಹೇಳಿಕೆಗಳಿಂದ ಪಾಕಿಸ್ತಾನದ ಹೆಸರನ್ನು ಕೆಡಿಸುತ್ತಿದ್ದಾಳೆ ಎಂದು ಆರೋಪಿಸಲಾಗಿತ್ತು. ಎಲ್ಲಿಯವರೆಗೆ ಎಂದರೆ ಬಹಳಷ್ಟು ಮಂದಿ ಆಕೆಯ ಮೇಲೆ ತಾಲಿಬಾನ್ ಗುಂಡು ಹಾರಿಸಿಲ್ಲ ಇದೆಲ್ಲಾ ಆಕೆಯನ್ನು ದೇಶದಿಂದ ಹೊರಗೆ ಕಳುಹಿಸುವ ಸಲುವಾಗಿ ಮಾಡಿದ ಪಿತೂರಿ ಎಂದು ಆರೋಪಿಸಿದ್ದರು. ಪಾಕಿಸ್ತಾನ ಖಾಸಗಿ ಶಾಲಾ ನಿರ್ವಹಣಾ ಸಂಸ್ಥೆಯು ಮಲಾಲಾಳ ಪುಸ್ತಕ ‘ಐ ಆಮ್ ಮಲಾಲಾ’ವನ್ನು ತನ್ನ ಶಾಲೆಗಳಲ್ಲಿ ನಿಷೇಧಿಸಿತು. ಇದಾದ ನಂತರ ಇನ್ನೊಂದು ಖಾಸಗಿ ಶಾಲಾ ಸಂಸ್ಥೆ ಆಲ್ ಪಾಕಿಸ್ತಾನ್ ಸ್ಕೂಲ್ಸ್ ಫೆಡರೇಶನ್ ಯೂಸುಫ್ ಝಾಯಿಯದ್ದು ಎನ್ನಲಾದ ಇಸ್ಲಾಂ ಮತ್ತು ಪಾಕಿಸ್ತಾನ ವಿರೋಧಿ ಧೋರಣೆಗೆ ಪ್ರತಿಯಾಗಿ ‘ಐ ಆಮ್ ನಾಟ್ ಮಲಾಲ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿತು. ಗಮನಿಸಬೇಕಾದ ಅಂಶವೆಂದರೆ ಒಬೈದ್ ಚಿನಾಯ್ ಮತ್ತು ಯೂಸುಫ್ ಝಾಯಿಯನ್ನು ಟೀಕಿಸುವಾಗ ಈದಿಯವರ ಹೆಸರು ಪ್ರಸ್ತಾಪವಾಗುತ್ತಿತ್ತು. ಈ ಇಬ್ಬರು ಮಹಿಳೆಯರಿಗೆ ಪ್ರತಿಯಾಗಿ ಈದಿಯವರು ಒಬ್ಬ ದೇಶಭಕ್ತ ಪಾಕಿಸ್ತಾನಿ ಮತ್ತು ಪ್ರಾಮಾಣಿಕ ಮುಸ್ಲಿಮ್ ಎಂದು ಹೇಳಲಾಗುತ್ತದೆ. 2014ರಲ್ಲಿ ಮಲಾಲಾಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದಾಗ ಅನೇಕ ಮಂದಿ ಈದಿಯನ್ನು ನಿರ್ಲಕ್ಷಿಸಿ ಮುಸ್ಲಿಂ ಜಗತ್ತಿನ ಘನತೆಗೆ ಕುಂದುಂಟು ಮಾಡಿದ ವ್ಯಕ್ತಿಗೆ ಪ್ರಶಸ್ತಿ ನೀಡಿದ ಕಾರಣಕ್ಕೆ ನೊಬೆಲ್ ಸಮಿತಿಯನ್ನು ಟೀಕಿಸಿದ್ದರು. ಹಾಗೆಯೇ, ಒಬೈದ್ ಚಿನಾಯ್‌ಗೆ ಆಸ್ಕರ್ ಪ್ರಶಸ್ತಿ ಬಂದಾಗಲೂ ಆಕೆ ದೇಶದ ಗುಣಾತ್ಮಕ ವಿಷಯಗಳ ಬಗ್ಗೆ ಸಿನೆಮಾ ತಯಾರಿಸಬೇಕು ಮತ್ತು ಮುಖ್ಯವಾಗಿ ಈದಿಯವರ ಬಗ್ಗೆ ಸಿನೆಮಾ ಮಾಡಬೇಕು ಎಂದು ಹಲವು ಮಂದಿ ಸಲಹೆ ನೀಡಿದ್ದರು.

ಪಾಕಿಸ್ತಾನಿಯರ ಅತ್ಯಂತ ಆದರಣೀಯ ರಾಷ್ಟ್ರೀಯ ವ್ಯಕ್ತಿತ್ವ

ಈದಿ ಪ್ರತಿಷ್ಠಾನ

ಪಾಕಿಸ್ತಾನದಲ್ಲಿ ಕಾರ್ಯಾಚರಿಸುವ ಜೊತೆಗೆ ಈದಿ ಪ್ರತಿಷ್ಠಾನ ಅಂತಾರಾಷ್ಟ್ರೀಯ ತುರ್ತು ಪರಿಹಾರ ಕಾರ್ಯಗಳನ್ನು ಒದಗಿಸುವಲ್ಲಿ ಸಕ್ರಿಯವಾಗಿದೆ. ಅದು ಯುಎಸ್‌ನಲ್ಲಿ 2005ರಲ್ಲಿ ಕತ್ರೀನಾ ಸುಂಟರಗಾಳಿಯಿಂದ ಪೀಡಿತರಾದವರಿಗೆ ದೇಣಿಗೆಯನ್ನು ಸಂಗ್ರಹಿಸಿದ್ದರೆ 1991ರಲ್ಲಿ ಕೊಲ್ಲಿ ಯುದ್ಧದ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಿತ್ತು. ಮೇ 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ ಸಮಯದಲ್ಲಿ ಅಲ್ಲಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ತನ್ನ ಪರಿಣತ ತಂಡವೊಂದನ್ನು ಕಳುಹಿಸಿತ್ತು. ಈದಿಯವರು ನೀಡಿದ ಅತ್ಯಂತ ಸ್ಮರಣೀಯ ಹೇಳಿಕೆಯೆಂದರೆ, ನೀವು ನಿಮ್ಮ ಆ್ಯಂಬುಲೆನ್ಸ್‌ಗಳಲ್ಲಿ ಕ್ರೈಸ್ತ ಮತ್ತು ಹಿಂದೂಗಳನ್ನು ಯಾಕೆ ಸಾಗಿಸಿದ್ದೀರಿ ಎಂಬ ಪ್ರಶ್ನೆಗೆ ನೀಡಿದ ಉತ್ತರ. ಪಾಕಿಸ್ತಾನದಲ್ಲಿ ಹಲವು ಮುಸ್ಲಿಮರು ಆಚರಿಸುವ ಪರಿಶುದ್ಧತೆ ಎಂಬ ನಕಲಿ ಕಲ್ಪನೆಗೆ ಸಂಬಂಧಿಸಿಯಾಗಿತ್ತು. ಈ ಕೆಲವು ಮುಸ್ಲಿಮರು ಮುಸ್ಲಿಮರೇತರರನ್ನು ಸ್ಪರ್ಶಿಸುವುದರಿಂದ ನಾವು ಅಶುದ್ಧರಾಗುತ್ತೇವೆ ಎಂಬ ನಂಬಿಕೆಯನ್ನು ಇಟ್ಟುಕೊಂಡವರಾಗಿದ್ದಾರೆ. ಆದರೆ ಈದಿ ಪ್ರತಿಷ್ಠಾನ ತಾನು ನೆರವಾಗುವ ಜನರ ಮಧ್ಯೆ ಭೇದಭಾವ ಮಾಡುವುದಿಲ್ಲ. ಒಂದೊಮ್ಮೆ ಹಿಂದೂ ಅಸ್ಪಶ್ಯರಾಗಿದ್ದು ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ಪರ್ಯಾಯಗಳೆಂದೇ ಭಾವಿಸಲ್ಪಡುವ ಚರಂಡಿ ಸ್ವಚ್ಛಗೊಳಿಸುವವರಿಗೂ ನಾವು ಸೇವೆಯನ್ನು ಒದಗಿಸುತ್ತೇವೆ. ಆ್ಯಂಬುಲೆನ್ಸ್‌ಗೆ ಸಂಬಂಧಿಸಿದ ಪ್ರಶ್ನೆಗೆ ಈದಿಯವರು ನೀಡಿದ ಉತ್ತರ, ‘ಯಾಕೆಂದರೆ ಆ್ಯಂಬುಲೆನ್ಸ್ ನಿಮಗಿಂತ ಹೆಚ್ಚು ಮುಸ್ಲಿಮ್ ಆಗಿದೆ.’’ ಅವರು ಒಬ್ಬ ಅತ್ಯಂತ ಧಾರ್ಮಿಕ ವ್ಯಕ್ತಿ ಒಬ್ಬ ಧರ್ಮಾಚರಣೆ ಮಾಡುವ ಮುಸ್ಲಿಮ್ ಆದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕಿಗಾಗಿ ಎದ್ದುನಿಂತ ವ್ಯಕ್ತಿಯಾಗಿದ್ದರು. ಅವರು ಎಲ್ಲಾ ಸಂಸ್ಕೃತಿ, ಸಿದ್ಧಾಂತ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಂದ ಆಚೆಗೆ ನಿಂತ ಮತ್ತು ಎಲ್ಲರಿಗೂ ಆಪ್ತವಾಗುವಂತಹ ಒಬ್ಬ ಪಾಕಿಸ್ತಾನಿಯಾಗಿದ್ದರು.

ದೇಣಿಗೆ ಮಾದರಿ

ಈ ಪ್ರತಿಷ್ಠಾನದ ಒಂದು ಅದ್ಭುತ ವಿಷಯವೆಂದರೆ ವಿವಾದದಿಂದ ಸದಾ ದೂರವಿರುವುದು. ಈದಿ ಪ್ರತಿಷ್ಠಾನ ಎಂದು ರಾಜಕೀಯ ಮುಖಂಡರಿಂದ, ಧಾರ್ಮಿಕ ಸಂಸ್ಥೆಗಳಿಂದ ಮತ್ತು ಸರಕಾರದಿಂದ ಹಣವನ್ನು ಪಡೆಯುವುದಿಲ್ಲ, ಅದು ಕೇವಲ ವೈಯಕ್ತಿಕ ದೇಣಿಗೆಯನ್ನು ಮಾತ್ರ ಸ್ವೀಕರಿಸುತ್ತದೆ. 2015ರ ಅಕ್ಟೋಬರ್‌ನಲ್ಲಿ ಈದಿಯವರು ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ರೂ. ಒಂದು ಮಿಲಿಯನ್‌ನನ್ನು ತಿರಸ್ಕರಿಸಿದ್ದರು. ಈ ಮೊತ್ತವನ್ನು ಹಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಡಿಯನ್ನು ದಾಟಿ ಪಾಕಿಸ್ತಾನ ಸೇರಿದ ಮೂಗಿ ಭಾರತೀಯ ಪ್ರಜೆ ಗೀತಾಳನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸಿದ ಕೃತಜ್ಞತೆಗಾಗಿ ಮೋದಿ ನೀಡಲು ಬಯಸಿದ್ದರು. ಪಾಕಿಸ್ತಾನಿ ಸೈನಿಕರು ಗೀತಾಳನ್ನು ಪತ್ತೆ ಮಾಡಿದಾಗ ಆಕೆಯ ವಯಸ್ಸು ಏಳು-ಎಂಟು ಆಗಿತ್ತು. ಆಕೆಯನ್ನು ಈದಿ ಕುಟುಂಬ ದತ್ತುಪಡೆಯಿತು. ಪ್ರತಿಷ್ಠಾನ ಆಕೆಯನ್ನು ಹದಿಮೂರು ವರ್ಷಗಳ ಕಾಲ ಅಂದರೆ ಆಕೆ ಭಾರತಕ್ಕೆ ಮರಳುವವರೆಗೆ ಸಲಹಿತು. ಜೂನ್‌ನಲ್ಲಿ ಕಿಡ್ನಿ ಸಮಸ್ಯೆಯ ಕಾರಣಕ್ಕಾಗಿ ಈದಿಯವರನ್ನು ಕರಾಚಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ಧಾರಿ ಈದಿಯವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸುವಂತೆ ಸೂಚಿಸಿದ್ದರು. ಆದರೆ ಈದಿಯವರು ಅದಕ್ಕೆ ನಿರಾಕರಿಸಿದರು. ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್ ಲಂಡನ್‌ನಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಇತ್ತ ಈದಿಯವರ ನಿರಾಕರಣೆ ಬಹಳ ಸೂಚ್ಯವಾಗಿತ್ತು. ಇದು ಈದಿಯವರ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತ್ತು. ಬಹುಶಃ ಈದಿಯವರು ದೇಶದಲ್ಲಿ ಎಲ್ಲಾ ಗುಂಪುಗಳಿಂದ ಗೌರವಿಸಲ್ಪಡುತ್ತಿದ್ದ ಮತ್ತು ಪ್ರೀತಿಸಲ್ಪಡುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು. ಅವರೊಬ್ಬ ಲಾಂಛನವಾಗಿದ್ದರು, ವ್ಯಕ್ತಿಯ ದೇಶಪ್ರೇಮವನ್ನು ಅಳೆಯುವ ಮಾನದಂಡವಾಗಿದ್ದರು. ಅವರೊಬ್ಬ ಅತ್ಯಂತ ದೊಡ್ಡ ಮಾನವತಾವಾದಿಯಾಗಿದ್ದರು ಆದರೆ ಅದಕ್ಕಿಂತಲೂ ಹೆಚ್ಚಾಗಿ ಪಾಕಿಸ್ತಾನದಲ್ಲಿ ಅವರೊಬ್ಬ ರಾಷ್ಟ್ರೀಯ ಆದರ್ಶವಾಗಿದ್ದರು.

ತೊಟ್ಟಿಲು ಯೋಜನೆ

ಈದಿ ಪ್ರತಿಷ್ಠಾನದ ಹಲವು ಯೋಜನೆಗಳಲ್ಲಿ ತೊಟ್ಟಿಲು ಯೋಜನೆ ಕೂಡಾ ಒಂದು. ಬಲ್ಕೀಸ್ ಈದಿ ಇದರ ನೇತೃತ್ವ ವಹಿಸಿದ್ದಾರೆ. ಪಾಕಿಸ್ತಾನದ ಬಹುತೇಕ ಈದಿ ಕೇಂದ್ರಗಳಲ್ಲಿ ಕಟ್ಟಡದ ಹೊರಗಡೆ ತೊಟ್ಟಿಲುಗಳನ್ನು ಇಡಲಾಗಿದ್ದ ಇದರಲ್ಲಿ ತಮಗೆ ಬೇಡದ ಮಗುವನ್ನು ಹೆತ್ತವರು ಬಿಟ್ಟು ಹೋಗಬಹುದು. ಯಾವುದೇ ಪ್ರಶ್ನೆಯನ್ನೂ ಕೇಳಲಾಗುವುದಿಲ್ಲ ಮತ್ತು ಯಾರೂ ಗುರುತನ್ನೂ ತಿಳಿಯಲಾಗುವುದಿಲ್ಲ.

ಈ ಯೋಜನೆಯು ಶಿಶು ಹತ್ಯೆಯನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರ ನಿಭಾಯಿಸಿದೆ. ಪ್ರತೀ ತೊಟ್ಟಿಲಿನ ಮೇಲೆಯೂ ಹತ್ಯೆ ಮಾಡಬೇಡಿ ಎಂಬ ಬರವಣಿಗೆಯನ್ನು ಬರೆಯಲಾಗಿದೆ. ಪ್ರತಿಷ್ಠಾನವು ಸಣ್ಣ ಮತ್ತು ಆರೋಗ್ಯವಂತ ಮಕ್ಕಳನ್ನು ಬಯಸುವ ಹೆತ್ತವರನ್ನು ಹುಡುಕುತ್ತದೆ. ಪ್ರತಿಷ್ಠಾನವು ಅತ್ಯಂತ ಕಠಿಣ ದತ್ತುಸ್ವೀಕಾರ ನಿಯಮಾವಳಿಯನ್ನು ಹೊಂದಿದ್ದು ಇದರ ಸ್ಥಾಪಕರು ದತ್ತು ಸ್ವೀಕಾರದ ನಂತರವೂ ಕುಟುಂಬಗಳ ಮೇಲೆ ನಿಗಾಯಿಟ್ಟು ಮಗುವಿಗೆ ಸರಿಯಾದ ಆರೈಕೆ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ದತ್ತು ಪಡೆಯಲಾಗದ ಮಕ್ಕಳನ್ನು ಈದಿ ಮತ್ತು ಬಲ್ಕೀಸ್ ತಾವೇ ದತ್ತುಪಡೆದ ಹೆತ್ತವರಾಗಿ ಸಹಿ ಹಾಕುತ್ತಾರೆ. ಒಂದು ಅಂದಾಜಿನ ಪ್ರಕಾರ 1,600ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕೆ ಮತ್ತು ಇತರ ತರಬೇತಿಗಳ ವೆಚ್ಚವನ್ನು ಈದಿ ದಂಪತಿ ತಮ್ಮ ಪ್ರತಿಷ್ಠಾನದ ಮೂಲಕ ಭರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News