ಪರ್ಯಾಯ ಶಾಲೆಗಳು

Update: 2016-07-17 09:10 GMT


ಹಳ್ಳಿಗಳಲ್ಲಿ ಶಾಲೆಗಳಿಲ್ಲದೇ ಅಥವಾ ಬಡ ಮಕ್ಕಳಿಗೆ ಸರಿಯಾದ ವ್ಯವಸ್ಥೆಗಳಿಲ್ಲದೇ ಶಾಲೆಗೆ ಹೋಗುವುದರಿಂದ ಹೊರಗುಳಿಯುವಂತಹ ಮಕ್ಕಳಿಗೆ ಮಠಗಳು ಮತ್ತು ಇತರ ಶಿಕ್ಷಣ ಪ್ರೇಮಿಗಳು ಶಾಲೆಗಳನ್ನು ನಿರ್ಮಿಸಿದ್ದಾರೆ. ಆದರೆ ಅವು ಪರ್ಯಾಯ ಶಾಲೆಗಳೆಂದು ಎನಿಸುವುದಿಲ್ಲ. ಪರ್ಯಾಯ ಶಾಲೆಗಳೆಂದರೆ ಅವು ಯಾವ ವಿಶೇಷ ಮಕ್ಕಳಿಗೆ ಅಥವಾ ಲಿಂಗದವರಿಗೆಂದಿರದೇ ಎಲ್ಲಾ ಸಾಮಾನ್ಯ ಮಕ್ಕಳಿಗೆ ಸಾಮಾನ್ಯ ಶಾಲೆಯೇ ಆಗಿರುತ್ತದೆ. ಅದರಲ್ಲಿ ಸಮಾಜದ ಯಾವುದೇ ವರ್ಗ ಅಥವಾ ವರ್ಣ ಭೇದವಿಲ್ಲದೇ ಎಲ್ಲರೂ ಸೇರಿರುತ್ತಾರೆ.

ರ್ಯಾಯ ಶಾಲೆಗಳೆಂದರೇನು? ಆಲ್ಟರ್ನೇಟಿವ್ ಸ್ಕೂಲ್‌ಗಳೆಂದು ಪದೇ ಪದೇ ಕೇಳುತ್ತಿರುತ್ತೇವೆ. ಆದರೆ ಅವುಗಳ ಬಗ್ಗೆ ಬಹಳಷ್ಟು ಪೋಷಕರು ಗಮನ ಹರಿಸುವುದೇ ಇಲ್ಲ. ಇವುಗಳ ವೌಲ್ಯವನ್ನೂ ಅವರು ತಿಳಿದಿರುವುದಿಲ್ಲ. ಸಾಧಾರಣ ಸ್ಟೇಟ್ ಸಿಲೆಬಸ್, ಸೆಂಟರ್ ಸಿಲೆಬಸ್ ಹೀಗೆ ಸಿಲೆಬಸ್‌ಗಳ ಬಗ್ಗೆ ಪ್ರತಿಷ್ಠಿತ ಶಾಲೆಗಳಲ್ಲಿ ಮಾತಾಡುವರೇ ಹೊರತು ಪರ್ಯಾಯ ಶಾಲೆಗಳ ಬಗ್ಗೆ ಮಾತಾಡುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಪರ್ಯಾಯ ಶಾಲೆಗಳನ್ನು ನಿರ್ಮಿಸಿದವರು ಹೆಸರು ಮತ್ತು ಹಣಕ್ಕಾಗಿ ಮಾಡಿರುವುದಿಲ್ಲ. ಅವರ ಶಾಲೆಗಳು ಹೆಚ್ಚಿನ ಶಾಖೆಗಳನ್ನು ಹೊಂದಿರುವುದಿಲ್ಲ. ಜೊತೆಗೆ ಲೋಕದ ಅಥವಾ ಲೌಕಿಕ ದೃಷ್ಟಿಯಲ್ಲಿ ಆಕರ್ಷಕವಾಗಿಯೂ ಕಾಣುವುದಿಲ್ಲ. ಅವರು ಮಕ್ಕಳಿಗೆ ರ್ಯಾಂಕ್ ಕೊಡಿಸುವ ವಾಗ್ದಾನ ಮಾಡುವುದಿಲ್ಲ. ಕಟ್ಟುನಿಟ್ಟಾಗಿ ಶಾಲೆಯ ದಾಖಲಾತಿಯ ಮುನ್ನ ಪರೀಕ್ಷೆ ಬರೆಯಿಸುವುದೋ ಅಥವಾ ಕಠಿಣ ಸಂದರ್ಶನ ಮಾಡುವುದೋ ಇಲ್ಲ. ಹಾಗಾಗಿ ಬಹಳಷ್ಟು ಪೋಷಕರಿಗೆ ಈ ಶಾಲೆಯ ಬಗ್ಗೆ ವಿಶ್ವಾಸ ಮೂಡುವುದಿರಲಿ, ಇರುವುದೇ ತಿಳಿಯುವುದಿಲ್ಲ.

ಒಂದು ಸಂದರ್ಶನ

ಒಂದು ಪರ್ಯಾಯ ಶಾಲೆಗೆ ನಾಲ್ಕನೆಯ ತರಗತಿಗೆಂದು ತಮ್ಮ ಮಗುವನ್ನು ಸೇರಿಸಲು ಪೋಷಕರು ಬಂದಾಗ ನಡೆದ ಸಂಭಾಷಣೆ ಹೀಗಿತ್ತು.

ತಂದೆ: ನಮ್ಮ ಹುಡುಗ ಲೆಕ್ಕದಲ್ಲಿ ಸ್ವಲ್ಪ ವೀಕು. ಆಟ ಜಾಸ್ತಿ.

ಪರ್ಯಾಯ ಶಾಲೆಯ ಉಪಾಧ್ಯಾಯಿನಿ: ಆಡಲಿ ಬಿಡಿ. ಲೆಕ್ಕ ಕಲಿಯುವ ಹೊತ್ತಿಗೆ ಕಲಿಯುತ್ತಾನೆ ಬಿಡಿ.

ತಾಯಿ: ಇಲ್ಲ, ಅವನು ಕಲಿಯಲೇ ಇಲ್ಲ. ಈಗಲೂ ಅವನಿಗೆ ಮಗ್ಗಿ ಸರಿಯಾಗಿ ಬರಲ್ಲ. ಕಂಠಪಾಠವೇ ಮಾಡಿಲ್ಲ.

ಉಪಾಧ್ಯಾಯಿನಿ: ಹೋಗ್ಲಿ ಬಿಡಿ. ಕಂಠಪಾಠ ಮಾಡದೇ ಇದ್ದರೂ ಬೇರೆ ರೀತಿ ಮಗ್ಗಿ ಗುಣಿಸಬಹುದು.

ತಂದೆ: ಗಣಿತ ಬೇಡವೇ ಬೇಡ ಎಂದು ಹೇಳುತ್ತಾನೆ.

ಉಪಾಧ್ಯಾಯಿನಿ: ಬೇಡ ಬಿಡಿ.

ತಂದೆ: ಹಾಂಗಂದ್ರೆ ಹೇಗೆ? ಲೆಕ್ಕ ಕಲಿಯಲೇ ಬೇಕು ಅಲ್ವಾ?

ಉಪಾಧ್ಯಾಯಿನಿ: ಹಾಗೇನೂ ಇಲ್ಲ. ಎಷ್ಟು ಬೇಕೋ ಅಷ್ಟು ಅವನು ಕಲಿತಿರುತ್ತಾನೆ. ಬೇರೆಯದರಲ್ಲಿ ಅವನಿಗೆ ಆಸಕ್ತಿ ಇರುತ್ತೆ. ಅದನ್ನು ಗಮನಿಸೋಣ.

ತಂದೆ: ನಮ್ಮದು ಅಂಗಡಿ ಇದೆ. ಅವನು ಲೆಕ್ಕ ಚೆನ್ನಾಗಿ ಕಲಿಯಲೇ ಬೇಕು.

ಉಪಾಧ್ಯಾಯಿನಿ: ನಿಮ್ಮ ಅಂಗಡಿಯಲ್ಲಿ ನೀವು ವ್ಯಾಪಾರ ಮಾಡುವುದು. ನೀವು ಲೆಕ್ಕ ಚೆನ್ನಾಗಿ ಕಲಿಯಬೇಕು. ಅವನೇಕೆ ಕಲಿಯಬೇಕು? ಅವನಿಗೆ ಏನು ಆಸಕ್ತಿ ಇದೆಯೋ, ಅವನಿಗೆ ಯಾವುದರಲ್ಲಿ ಸಾಮರ್ಥ್ಯ ಇದೆಯೋ ಅದನ್ನು ಚೆನ್ನಾಗಿ ಕಲಿಯುತ್ತಾನೆ. ನಿಮ್ಮ ಲೆಕ್ಕ ಅವನಿಗೆ ಬೇಡ. ಅಷ್ಟೇ, ಆ ಪೋಷಕರು ನಿಮ್ಮ ಶಾಲೆ ನಮಗೆ ಬೇಡ ಎಂದು ಬಂದುಬಿಟ್ಟರು. ಅವರ ಪ್ರಕಾರ ಆ ಉಪಾಧ್ಯಾಯರು ಏನು ಹೇಳಬೇಕಾಗಿತ್ತೆಂದರೆ, ‘‘ನೀವೇನೂ ಯೋಚನೆ ಮಾಡಬೇಡಿ. ಅವನು ಚೆನ್ನಾಗಿ ಲೆಕ್ಕ ಕಲಿಯುವಂತೆ ಮಾಡುವ ಜವಾಬ್ದಾರಿ ನಮ್ಮದು.’’ ಈ ರೀತಿಯ ಪೋಷಕರಿಗೆ ಪ್ರೀತಿಯಾಗುವಂತಹ ಮಾತುಗಳನ್ನು ನಾವು ಪರ್ಯಾಯ ಶಾಲೆಗಳಲ್ಲಿ ನಿರೀಕ್ಷಿಸಲಾಗುವುದಿಲ್ಲ. ಮಕ್ಕಳ ಮನಸ್ಥಿತಿಗಳ ಬಗ್ಗೆ, ಅವರ ಸಾಮರ್ಥ್ಯಗಳ ಸ್ಥಿತಿಗತಿಗಳ ಬಗ್ಗೆ ಅರಿವು ಇರುವಂತಹ ಹಾಗೂ ರ್ಯಾಂಕ್ ರೋಗ ಪೀಡಿತರಲ್ಲದ ಪೋಷಕರು ಮಾತ್ರವೇ ಪರ್ಯಾಯ ಶಾಲೆಗಳ ಬಗ್ಗೆ ಒಲವು ತೋರಿಸುವುದು.

ಶತಮಾನಗಳ ಹಿನ್ನೆಲೆ

ಲಿಯೋ ಟಾಲ್‌ಸ್ಟಾಯ್, ಮರಿಯಾ ಮಾಂಟೆಸ್ಸೋರಿ, ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್, ಜಿಡ್ಡು ಕೃಷ್ಣಮೂರ್ತಿ, ಓಶೋರಂತಹ ಚಿಂತಕರನ್ನು ಒಳಗೊಂಡಂತೆ ವಿಶ್ವಾದ್ಯಂತ ಮಕ್ಕಳ ಮನಸ್ಥಿತಿ ಮತ್ತು ಪೋಷಕರ ಮನೋಭಾವ ಅರಿತಿರುವಂತಹ ಅನೇಕಾನೇಕರು ಪರ್ಯಾಯ ಶಾಲೆಗಳ ಬಗ್ಗೆ ಚಿಂತಿಸಿದರು ಮತ್ತು ಪ್ರಾರಂಭಿಸಿದರು. ಅವರ ಸೀಮಿತ ವಲಯದಲ್ಲಿ ಅದು ಯಶಸ್ವಿಯೂ ಆಯಿತು. ಹೆಸರು ತಿಳಿಯದ ಅನೇಕಾನೇಕರು ಈಗಲೂ ಸತತವಾಗಿ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಆದರೆ ಅದು ಸಮಾಜದಲ್ಲಿ ವ್ಯಾಪಕವಾದ ಪ್ರಚಾರವನ್ನಾಗಲಿ ಪಡೆಯಲಿಲ್ಲ ಅಥವಾ ಮೇಲ್ಮೈಯನ್ನು ಸಾಧಿಸುವ ದಿಕ್ಕಿನಲ್ಲಿ ಯಶಸ್ಸು ಕಾಣಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಶಿಕ್ಷಣ ಕ್ಷೇತ್ರವನ್ನು ತನ್ನ ಅಧೀನದಲ್ಲಿರಿಸಿಕೊಂಡಿರುವ ಸರಕಾರಗಳಿಗೆ ಇವುಗಳ ಬಗ್ಗೆ ಒಲವು ಇಲ್ಲ. ಅರಿವೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಲ್ಲದೇ ವ್ಯವಸ್ಥೆ ಮತ್ತು ಪೋಷಕರ ಮನೋಧೋರಣೆಗಳೆರಡೂ ಸ್ಪರ್ಧಾತ್ಮಕ ಯುಗವೆಂಬ ಕಲ್ಪನೆಯನ್ನು ಇರಿಸಿಕೊಂಡಿರುವುದರಿಂದ ಸ್ಪರ್ಧೆೆಗೆ ಒತ್ತು ಕೊಡುತ್ತಾ ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆಯೇ ಹೊರತು. ಅವರಿಗೆ ಅಗತ್ಯವಿರುವ ಮತ್ತು ಆಸಕ್ತಿಯಿರುವ ಅರಿವನ್ನು ನೀಡುವುದರಲ್ಲಿ ಯಾವ ಕಾಳಜಿಯೂ ಇಲ್ಲ. ಪರ್ಯಾಯ ಶಾಲೆಗಳಿಗೆ ಶತಶತಮಾನಗಳ ಹಿನ್ನೆಲೆಯಿದ್ದರೂ ಅದು ಇಂದು ವ್ಯಾಪಕವಾಗಿಲ್ಲ. ಎಲ್ಲರನ್ನು ತಲುಪಿಲ್ಲ. ಆದರೆ ಜೀವಂತವಾಗಿದೆ. ಕುದ್ಮುಲ್ ರಂಗರಾವ್, ಜ್ಯೋತಿ ಬಾ ಮತ್ತು ಸಾವಿತ್ರಿ ಬಾಫುಲೆ, ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್‌ರವರಂತವರು ಅಕ್ಷರ ವಂಚಿತರಿಗೆ ಶಾಲೆಗಳನ್ನು ತೆರೆದರು. ಕೆಳಸ್ತರದ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ, ವಿಧವೆಯರಿಗೆ; ಹೀಗೆ ವ್ಯವಸ್ಥೆಯಲ್ಲಿ ಯಾರಿಗೆ ವಿದ್ಯಾಭ್ಯಾಸವನ್ನು ನೀಡುವುದು ಒಂದು ಅಗತ್ಯವೆಂದು ಅನಿಸಿರಲಿಲ್ಲವೋ ಅಂತಹವರಿಗೆಂದು ತೆರೆದಂತಹ ಶಾಲೆಗಳು ಅವಾಗಿದ್ದವು. ಇನ್ನು ಹಳ್ಳಿಗಳಲ್ಲಿ ಶಾಲೆಗಳಿಲ್ಲದೇ ಅಥವಾ ಬಡ ಮಕ್ಕಳಿಗೆ ಸರಿಯಾದ ವ್ಯವಸ್ಥೆಗಳಿಲ್ಲದೇ ಶಾಲೆಗೆ ಹೋಗುವುದರಿಂದ ಹೊರಗುಳಿಯುವಂತಹ ಮಕ್ಕಳಿಗೆ ಮಠಗಳು ಮತ್ತು ಇತರ ಶಿಕ್ಷಣ ಪ್ರೇಮಿಗಳು ಶಾಲೆಗಳನ್ನು ನಿರ್ಮಿಸಿದ್ದಾರೆ. ಆದರೆ ಅವು ಪರ್ಯಾಯ ಶಾಲೆಗಳೆಂದು ಎನಿಸುವುದಿಲ್ಲ. ಪರ್ಯಾಯ ಶಾಲೆಗಳೆಂದರೆ ಅವು ಯಾವ ವಿಶೇಷ ಮಕ್ಕಳಿಗೆ ಅಥವಾ ಲಿಂಗದವರಿಗೆಂದಿರದೇ ಎಲ್ಲಾ ಸಾಮಾನ್ಯ ಮಕ್ಕಳಿಗೆ ಸಾಮಾನ್ಯ ಶಾಲೆಯೇ ಆಗಿರುತ್ತದೆ. ಅದರಲ್ಲಿ ಸಮಾಜದ ಯಾವುದೇ ವರ್ಗ ಅಥವಾ ವರ್ಣ ಭೇದವಿಲ್ಲದೇ ಎಲ್ಲರೂ ಸೇರಿರುತ್ತಾರೆ.

ಮನೆಯೇ ಶಾಲೆ

ಪರ್ಯಾಯ ಶಿಕ್ಷಣ ವ್ಯವಸ್ಥೆಯಲ್ಲಿ ಪರ್ಯಾಯ ಶಾಲೆಗಳನ್ನೂ ಹೊರತುಪಡಿಸುವಂತಹ ಮತ್ತೊಂದು ಕಲಿಕೆಯ ವ್ಯವಸ್ಥೆಯಿದೆ. ಅದೆಂದರೆ, ಹೋಂ ಸ್ಕೂಲಿಂಗ್. ಇದರ ಪ್ರಕಾರ ಮಗುವು ಶಾಲೆಗೆ ಹೋಗುವ ಅಗತ್ಯವೇ ಇರುವುದಿಲ್ಲ. ಬದಲಾಗಿ ಮನೆಯಲ್ಲಿಯೇ ಪೋಷಕರ ಅಥವಾ ಕುಟುಂಬದ ಇತರ ಸದಸ್ಯರ ನೆರವಿನಿಂದ ಕಲಿಯುತ್ತಾರೆ. ಈ ಹಿಂದೆ ಎಷ್ಟೋ ಜನ ತಾಯಂದಿರು ತಮ್ಮ ಮಕ್ಕಳ ಮೇಲೆ ಮಾಡಿರುವ ಪ್ರಯೋಗವಿದು. ಹೋಂ ಸ್ಕೂಲಿಂಗ್‌ನಲ್ಲಿ ಅನುಕೂಲಗಳ ಜೊತೆಗೆ ಕೆಲವು ಅನಾನುಕೂಲಗಳೂ ಇವೆ. ಹಾಗೆಯೇ ಪರ್ಯಾಯ ಶಾಲೆಗಳಲ್ಲಿಯೂ ಕೆಲವು ಲೋಪದೋಷಗಳು ಕಂಡು ಬರುತ್ತವೆ. ಅವು ಏನೆಂದು ಮುಂದೆ ನೋಡೋಣ.

ಕೆಲವು ಅಡ್ಡ ಪ್ರಶ್ನೆಗಳು
    1.ಮಕ್ಕಳ ಸಾಮರ್ಥ್ಯ, ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಕಲಿಕೆಗೆ ತೊಡಗಿಸಿದರೆ, ಅವರು ಮುಂದೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವಾಗ ಅಥವಾ ವಯೋಮಾನಕ್ಕೆ ಅನುಗುಣವಾಗಿ ಹೆಚ್ಚಿನ ಶಿಕ್ಷಣ ಪಡೆಯುವಾಗ ತೊಡಕಾಗುವುದಿಲ್ಲವೇ?
    -ಇಲ್ಲ. ಏಕೆಂದರೆ ಇಲ್ಲಿ ಕಲಿಕೆಯ ಕ್ರಮವಷ್ಟೇ ವಿಭಿನ್ನವಾಗಿರುವುದು. ಜೊತೆಗೆ ವಯೋ ಸಹಜತೆಯಲ್ಲಿರುವಂತಹ ಪರೀಕ್ಷೆಗಳನ್ನು ಎದುರಿಸುವ ವ್ಯವಸ್ಥೆಯ ಪರೀಕ್ಷೆಗಳನ್ನು ಅವರು ಗಣನೆಗೆ ತೆಗೆದುಕೊಂಡಿರುತ್ತಾರೆ. ಆದರೆ, ಎಲ್ಲಾ ವಿಷಯಗಳಲ್ಲೂ ಏಕ ಪ್ರಕಾರದ ಅಂಕಗಳನ್ನಾಗಲಿ, ಪ್ರಾವೀಣ್ಯತೆಯನ್ನಾಗಲಿ ಪಡೆದಿರುತ್ತಾರೆಂದು ಹೇಳಲು ಆಗದು. ಆದರೆ ಪರಿಚಯಾತ್ಮಕವಾಗಿ ಎಲ್ಲವನ್ನೂ ತಿಳಿದಿರುತ್ತಾರೆ.
 
    2.ಸೀಮಿತ ಮತ್ತು ವಿಶಿಷ್ಟವಾದ ಪರಿಸರದಲ್ಲಿ ಬೆಳೆದ ಮಕ್ಕಳು ವ್ಯಾಪಕವಾಗಿ ಹೊರ ಜಗತ್ತಿನಲ್ಲಿ ಬೇರೆಯೇ ರೀತಿಯಲ್ಲಿರುವ ವ್ಯವಸ್ಥೆಯಲ್ಲಿ ಹೊಂದಿಕೊಳ್ಳುವರೇ?
    -ಖಂಡಿತ ಹೊಂದಿಕೊಳ್ಳುತ್ತಾರೆ. ಏಕೆಂದರೆ, ಪರ್ಯಾಯ ಶಾಲೆಯಲ್ಲಿ ಓದುವ ಮಕ್ಕಳು ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿಲ್ಲದೇ ಇರುವುದರಿಂದ ತಾವು ಪೈಪೋಟಿ ನಡೆಸುವಂತಹ ಧೋರಣೆಯಿಂದ ವ್ಯವಹರಿಸುವುದಿಲ್ಲ. ಮುಕ್ತವಾಗಿ ಇತರರನ್ನು ಪರಿಗಣಿಸುವಂತಹ ಅಥವಾ ಸ್ವೀಕರಿಸುವಂತಹ ಮನಸ್ಥಿತಿಯು ನಿರ್ಮಾಣವಾಗಿರುತ್ತದೆ.
 
    3
.ಪರ್ಯಾಯ ಶಾಲೆಗಳಲ್ಲಿ ಕಲಿತಿರುವಂತಹ ಕೌಶಲ್ಯಗಳು ಮುಂದುವರಿದಂತೆ ಕಾಣುವ ಹೊರ ಜಗತ್ತಿನಲ್ಲಿ ಪ್ರಸ್ತುತವಾಗುತ್ತದೆಯೇ?
    -ಪರ್ಯಾಯ ಶಾಲೆಗಳಲ್ಲಿ ಕಲಿಯುವಂತಹ ಕೌಶಲ್ಯಗಳು ವ್ಯವಸ್ಥೆಯಲ್ಲಿ ಕೆಲಸ ಕೊಡಿಸಲೆಂದೋ ಅಥವಾ ವೃತ್ತಿಪರ ಶಿಕ್ಷಣಗಳೋ ಎಂದಲ್ಲ. ಮಗುವಿನ ಸಮಗ್ರ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಅದರ ಕಾಳಜಿ ಇರುತ್ತದೆ. ಹಾಗಾಗಿ ಕೆಲಸಗಳ ಬಗ್ಗೆ ಅರಿವು ಮತ್ತು ಗೌರವ ಇರುವುದರಿಂದ ಅವರು ಬೇರೆ ಕೆಲಸಗಳಿಗೆ ತೊಡಗಿಕೊಳ್ಳಲು ಯಾವುದೇ ತೊಡಕಾಗದು.

ವಿವಿಧ ಮಾದರಿಯ ಪರ್ಯಾಯ ಶಾಲೆಗಳು
    
    1.ಪಠ್ಯದ ಜೊತೆಗೆ ಕರಕುಶಲ ಮತ್ತು ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಶಾಲೆಗಳು. 2.ಸೀಮೇಸುಣ್ಣ ಮತ್ತು ಕರಿಹಲಗೆ ಇವುಗಳ ಹೊರತಾಗಿ ಮತ್ತು ಮಕ್ಕಿಕಾಮಕ್ಕಿ ಪುಸ್ತಕಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಹೊರತಾಗಿ ತೆರೆದ ಬಯಲಿನಲ್ಲಿ, ಮರದಡಿಗಳಲ್ಲಿ, ನಿಸರ್ಗದ ಸಾಂಗತ್ಯಗಳಲ್ಲಿ ಸಹಜಾನುಭವಗಳಿಂದ ವಿಷಯಗಳನ್ನು ಅರಿಯುತ್ತಾ ಹೋಗುವಂತಹ ವ್ಯವಸ್ಥೆ.
    3.ಮರದಡಿ, ನದಿ ದಡ ಎಂದ ಕೂಡಲೇ ಗುರುಕುಲವೆಂದು ತಿಳಿಯಬಾರದು. ಗುರುಕುಲವು ವ್ಯವಸ್ಥಿತ ಶಿಕ್ಷಣ ಪದ್ಧತಿಯಾಗಿದ್ದು ಕಟ್ಟಡಗಳ ಒಳಗಿರುವ ಬದಲು ಹೊರಗೆ ಪಾಠ ಮಾಡುತ್ತಿದ್ದರು ಅಷ್ಟೇ. ಆದರೆ, ಇಲ್ಲಿ ಪ್ರಕೃತಿಯ ವಿಷಯಗಳ ಜೊತೆಗೆ ಮಕ್ಕಳು ತಮ್ಮನ್ನು ತಾವು ತೆರೆದುಕೊಳ್ಳುತ್ತಾ ತಿಳುವಳಿಕೆಯನ್ನು ಪಡೆಯುವುದು.
    4.ಕೆಲವು ಪರ್ಯಾಯ ಶಾಲೆಗಳಲ್ಲಿ ಕ್ರಮವಾದ ತರಗತಿಗಳೇನೂ ಇರುವುದಿಲ್ಲ. ಹಾಗೂ ಪಠ್ಯ ಕ್ರಮವೂ ಇರುವುದಿಲ್ಲ. ವಿದ್ಯಾರ್ಥಿಯು ತನ್ನ ಸಾಮರ್ಥ್ಯ ಮತ್ತು ಆಸಕ್ತಿಯ ಅನುಸಾರವಾಗಿ ಕಲಿಕೆಯ ಕ್ರಮವನ್ನು ರೂಢಿಸಿಕೊಳ್ಳುತ್ತಾನೆ. ಒಟ್ಟಾರೆ ಮಗುವಿಗೆ ಪಠ್ಯದ ಒತ್ತಡ ಮತ್ತು ಕಲಿಸುವವರ ಒತ್ತಾಯ ಇಲ್ಲದೇ ಇರುವಂತೆ ನೋಡಿಕೊಳ್ಳುವುದು ಅದರ ಉದ್ದೇಶ.
    5.ಕಲಿಯುವ ಪಠ್ಯದ ಜೊತೆಗೆ ಮಕ್ಕಳಿಗೆ ವಿವಿಧ ಕೌಶಲ್ಯಗಳನ್ನು ಬೆಳೆಸುವಂತಹ ಮತ್ತು ಜೀವನೋಪಾಯಕ್ಕೆ ನೆರವಾಗುವಂತಹ ಬಡಗಿ ಕೆಲಸ, ಕುಂಬಾರಿಕೆ, ತೋಟಗಾರಿಕೆ, ಕಬ್ಬಿಣದ ಕೆಲಸ, ನೇಯ್ಗೆ, ಹೊಲಿಗೆ, ಕಸೂತಿ ಇತ್ಯಾದಿಗಳನ್ನು ಪ್ರಧಾನವಾಗಿಯೇ ಕಲಿಸುವುದು.
    6.ಪುಸ್ತಕಗಳ ನೇರ ನೆರವಿಲ್ಲದೇ ಚಟುವಟಿಕೆಗಳ ಮೂಲಕ ವಿಷಯಗಳನ್ನು ಗ್ರಹಿಸಲು ಮಕ್ಕಳಿಗೆ ನೆರವಾಗುವುದು. ಇಲ್ಲಿ ಹೇಳಿಕೊಡುವ ಕ್ರಿಯೆಗಿಂತಲೂ ಅರಿತುಕೊಳ್ಳುವ ಪ್ರಕ್ರಿಯೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಅದರಲ್ಲಿಯೂ ಸ್ವ ಅನುಭವಕ್ಕೆ ಪ್ರಾಶಸ್ತ್ಯ ನೀಡಲಾಗುವುದು.
    7.ಇನ್ನೂ ಕೆಲವು ಶಾಲೆಗಳಲ್ಲಿ ಈಜು, ಪ್ರಾಣಿಗಳನ್ನು ಪಾಲಿಸುವುದು ಮತ್ತು ಪಳಗಿಸುವುದು, ವ್ಯವಸಾಯ ಮತ್ತು ಸಾಹಸ ಕ್ರೀಡೆಗಳನ್ನು ಒಳಗೊಂಡಿರುತ್ತವೆ.
    
    
    8.ಉಪಾಧ್ಯಾಯರು ಅಧಿಕಾರಯುತವಾದಂತಹ ಸ್ಥಾನವನ್ನು ಹೊಂದಿರದೇ ಬರಿಯ ಮಾರ್ಗದರ್ಶಕರಾಗಿ ಅಥವಾ ನೆರವು ನೀಡುವ ಸಹಾಯಕರಾಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. 9.ತರಗತಿಗಳೆಂದು ಕರೆಯಿಸಿಕೊಳ್ಳುವ ಕೊಠಡಿಗಳಿದ್ದರೂ ಅವು ಕಲಿಕೆಯ ಕೇಂದ್ರವಾಗಿರದೇ ವಿವಿಧ ವರ್ಗಗಳ ಮಕ್ಕಳು ಕೂಡುವಂತಹ ಕೋಣೆಗಳಾಗಿರುತ್ತವೆ. 10.ಇನ್ನು ಸಹಜವಾಗಿ ಕರಕುಶಲ ತರಬೇತಿಗಳು, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿಗಳು ಮಾನ್ಯತೆಯನ್ನು ಪಡೆದಿದ್ದು ಅವುಗಳು ಕೂಡಾ ಸೃಜನಾತ್ಮಕ ಬೆಳವಣಿಗೆಗೆ ಅನುವು ಮಾಡಿಕೊಂಡಿರುವಂತಿರುತ್ತದೆಯೇ ಹೊರತು ಶಾಸ್ತ್ರೀಯ ಕಲಿಕೆಗೇನೂ ಹೆಚ್ಚಿನ ಮಹತ್ವವಿರುವುದಿಲ್ಲ.
    
    11.ಹೋಂ ವರ್ಕ್ ಅಥವಾ ತಿಂಗಳ ಪರೀಕ್ಷೆಗಳ ಅನಿವಾರ್ಯತೆ ಇರುವುದಿಲ್ಲ. ಇನ್ನೂ ಕೆಲವು ಶಾಲೆಗಳಲ್ಲಿ ಸಮವಸ್ತ್ರದ ಗೊಡವೆಯೂ, ನಿರ್ದಿಷ್ಟ ವಸ್ತ್ರ ಸಂಹಿತೆಯೂ ಇರುವುದಿಲ್ಲ. 12.ಕ್ರೀಡೆಗಳಿದ್ದರೂ ಸ್ಪರ್ಧಾತ್ಮಕ ಮನೋಭಾವದ ಧೋರಣೆಗೆ ಪ್ರೋತ್ಸಾಹಿಸುವುದಿಲ್ಲ. ಕ್ರೀಡಾತ್ಮಕ ಮನೋಭಾವಕ್ಕಷ್ಟೇ ಮನ್ನಣೆಯಾಗಿರುತ್ತದೆ.
      
    
    13.ಮಾರ್ಗದರ್ಶಿಗಳ ನೇತೃತ್ವದ ಮಕ್ಕಳ ತಂಡಗಳು ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಅವುಗಳಲ್ಲಿ ವ್ಯವಸ್ಥಿತ ಶಿಕ್ಷಣ ಕ್ಷೇತ್ರದ ಅಥವಾ ಶಾಲಾ ಆಡಳಿತ ಮಂಡಳಿಗಳ ಹಸ್ತಕ್ಷೇಪವು ಇರುವುದಿಲ್ಲ. ಆದರೆ ಅವು ಕಲಿಕೆಯ ಪ್ರಗತಿಗೆ ಪೋಷಕವಾಗಿರುತ್ತದೆ. ಮಕ್ಕಳ ಕಲಿಕೆಯ ಸಮಗ್ರ ವಿಕಾಸಕ್ಕೆ ಪ್ರೇರಕವಾಗಿರುತ್ತದೆ. 14.ಎಲ್ಲರೂ ಏಕಪ್ರಕಾರವಾಗಿ, ಎಲ್ಲವನ್ನೂ ಕಲಿಯಲೇಬೇಕೆಂಬ ಸಿದ್ಧ ಬೇಡಿಕೆಯಾಗಲಿ. ಎಲ್ಲರನ್ನೂ ಏಕಪ್ರಕಾರವಾಗಿ ಅಳೆಯುವ ಮಾನದಂಡವಾಗಲಿ ಇರುವುದಿಲ್ಲ. 15.ಸಾಮಾನ್ಯವಾಗಿ ಪರ್ಯಾಯ ಶಾಲೆಗಳು ನಗರಗಳಿಂದ ದೂರವಿರುತ್ತವೆ. ಉತ್ತಮ ಗಾಳಿ, ಬೆಳಕು, ಮರಗಿಡಗಳಿರುವಂತಹ ಪ್ರಕೃತಿಯ ಮಧ್ಯೆ ಇರುವಂತೆ ನೋಡಿಕೊಳ್ಳುತ್ತಾರೆ. ಆದಷ್ಟು ವಾಹನಗಳ ಓಡಾಟಗಳ ದಟ್ಟಣೆ ಮತ್ತು ಜನ ಸಂದಣಿಗಳಿಗಿಂತ ದೂರಾಗಿಯೇ ಇರುವಂತೆ ನೋಡಿಕೊಳ್ಳುತ್ತಾರೆ.
    16.ಯಾವುದೇ ಒಂದು ನಿರ್ದಿಷ್ಟ ಧರ್ಮದ ಸಿದ್ಧಾಂತಗಳನ್ನಾಗಲಿ, ಸೈದ್ಧಾಂತಿಕ ವಿಷಯಗಳನ್ನಾಗಲಿ ಒಳಗೂ, ಹೊರಗೂ ಇಟ್ಟುಕೊಂಡಿರುವುದಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News