ಬ್ಯಾಂಕ್‌ಗಳು ಸಿಬಿಐ, ಸಿವಿಸಿ ಕ್ರಮದಿಂದ ತಪ್ಪಿಸಿಕೊಳ್ಳಲಾರವು: ರಾಜನ್

Update: 2016-07-17 18:28 GMT

ಮುಂಬೈ, ಜು.17: ಸಿಬಿಐ ಹಾಗೂ ಸಿವಿಸಿ ಕ್ರಮದಿಂದ ರಕ್ಷಣೆ ಪಡೆಯುವ ಸಂಬಂಧ ಬ್ಯಾಂಕರ್‌ಗಳ ರಂಪ ಸಾಗಿರುವ ಮಧ್ಯೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್, ಬ್ಯಾಂಕರ್‌ಗಳು ಇಂಥ ಕ್ರಮದಿಂದ ಸಂಪೂರ್ಣ ಸುರಕ್ಷೆ ಪಡೆಯಲು ಸಾಧ್ಯವಿಲ್ಲ. ಆದರೆ ಸಾಲಗಳ ಬಗೆಗಿನ ಸಮರ್ಪಕ ಗಮನ ಹರಿಸಿ ನಿರ್ಧಾರಗಳನ್ನು ಕೈಗೊಂಡಿ ದ್ದಲ್ಲಿ ಅವರನ್ನು ರಕ್ಷಿಸಬೇಕು ಎಂದು ಆಶಿಸಿದ್ದಾರೆ.
ಅಗತ್ಯಕ್ಕೆ ಅನುಗುಣವಾಗಿ ತಾವು ಕೈಗೊಂಡ ನಿರ್ಧಾರಗಳ ಬಗ್ಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂಬ ಕಳಕಳಿಯನ್ನು ಹಲವು ಮಂದಿ ಬ್ಯಾಂಕರ್‌ಗಳು ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬರೂ ಅಗತ್ಯವನ್ನು ಗೌರವಿಸಿ, ಸಮರ್ಪಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಬುದ್ಧಿಯನ್ನು ಅನ್ವಯಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ವಾತಂತ್ರ ಇರಬೇಕು. ಇಲ್ಲದಿದ್ದರೆ, ಆರ್ಥಿಕತೆಗೆ ಅಗತ್ಯವಾಗಿರುವ ಸ್ವಚ್ಛಗೊಳಿಸುವಿಕೆ ಸಾಧ್ಯವಿಲ್ಲ ಎಂದು ಪತ್ರಕರ್ತರ ಜೊತೆ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಆಡಳಿತ ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಇತ್ತೀಚೆಗೆ ರಚಿಸಿದ ಬ್ಯಾಂಕ್ ಬೋರ್ಡ್ ಬ್ಯೂರೊ, ಇತ್ತೀಚಿನ ಸಭೆಯಲ್ಲಿ ಸರಕಾರಿ ಬ್ಯಾಂಕುಗಳು, ಸಾಲಗಳ ಬಗೆಗೆ ಸಂಘಟಿತ ನಿರ್ಧಾರ ಕೈಗೊಂಡ ಪ್ರಕರಣಗಳ ಸಂಬಂಧ ಸಿಬಿಐ ಹಾಗೂ ಕೇಂದ್ರೀಯ ವಿಚಕ್ಷಣಾ ಆಯೋಗದಿಂದ ರಕ್ಷಣೆ ನೀಡುವಂತೆ ಕೋರಿದ್ದವು.
ಬ್ಯಾಂಕರ್‌ಗಳ ಆಗ್ರಹದ ಬಗ್ಗ ಕೇಳಿದ ಪ್ರಶ್ನೆಗೆ ರಾಜನ್, ಸಾರಾಸಗಟಾಗಿ ಯಾವುದೇ ಬಗೆಯ ರಕ್ಷಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಎಲ್ಲರ ಮೇಲೆಯೂ ಒಂದಷ್ಟು ಜವಾಬ್ದಾರಿಗಳಿರಬೇಕು. ಆದರೆ ಇಂಥ ಜವಾಬ್ದಾರಿ ಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳುವಂಥದ್ದು ಎಂದರು.
ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಯತ್ನ ಹಾಕಿ ದರೂ ಕೂಡಾ ಅಚಾನಕ್ಕಾಗಿ ಅವರ ನಿರ್ಧಾರ ತಪ್ಪಾದಲ್ಲಿ ಅವರನ್ನು ಹೊಣೆಗಾರರಾಗಿ ಮಾಡುವಂತಿಲ್ಲ ಎಂದು ರಾಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News