ರಾಜ್ಯಸಭಾ ಸ್ಥಾನಕ್ಕೆ ಸಿಧು ರಾಜೀನಾಮೆ

Update: 2016-07-18 11:43 GMT

ಹೊಸದಿಲ್ಲಿ, ಜು.18: ಹಿರಿಯ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ. ಇದು ಅವರು ಪಕ್ಷ ತ್ಯಜಿಸುವ ಪೂರ್ವ ಸೂಚನೆಯೆಂದು ಅಭಿಪ್ರಾಯಿಸಲಾಗಿದೆ.

ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಿಧುವನ್ನು ಎಪ್ರಿಲ್‌ನಲ್ಲಿ ರಾಜ್ಯಸಭೆಗೆ ನಾಮಕರಣ ಮಾಡಲಾಗಿತ್ತು.

52ರ ಹರೆಯದ ಸಿದ್ದು, ಅರವಿಂದ್ ಕೇಜ್ರಿವಾಲರ ಎಎಪಿಯತ್ತ ಒಲವು ಹೊಂದಿದ್ದಾರೆಂಬ ಗುಸುಗುಸು ಕೇಳಿಬರುತ್ತಿದ್ದರೂ, ಅದಿನ್ನೂ ಖಚಿತವಾಗಿಲ್ಲ. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಎಎಪಿ ಭರದ ಸಿದ್ಧತೆ ನಡೆಸುತ್ತಿದೆ.

ಸಿಧು, ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಂಭವಯಿದೆಯೆಂದು ಕೆಲವು ವರದಿಗಳು ಹೇಳಿವೆ. 2014ರ ಲೋಕಸಭಾ ಚುನಾವಣೆಗೆ ಅವರ ಕ್ಷೇತ್ರವಾಗಿದ್ದ ಅಮೃತಸರದಿಂದ ಸ್ಪರ್ಧಿಸಲು ಅರುಣ್ ಜೇಟ್ಲಿಯವರಿಗೆ ಅವಕಾಶ ನೀಡುವಂತೆ ಬಿಜೆಪಿ ಕೇಳಿದ್ದರಿಂದ ಸಿಧು ಅಸಮಾಧಾನಗೊಂಡಿದ್ದರು.

ಅವರು ಅಮೃತಸರ ಕ್ಷೇತ್ರವನ್ನು 10 ವರ್ಷ ಪ್ರತಿನಿಧಿಸಿದ್ದರು. ಸಿದ್ದು ಅವರ ಪತ್ನಿ, ಪಂಜಾಬ್‌ನ ಶಾಸಕಿ ಹಾಗೂ ಅಕಾಲಿದಳ -ಬಿಜೆಪಿ ಸರಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿರುವ ನವಜ್ಯೋತ್ ಕೌರ್ ಸಹ ರಾಜೀನಾಮೆ ನೀಡುವ ಸಾಧ್ಯತೆಯಿದೆಯೆಂದು ವರದಿಗಳು ಹೇಳಿವೆ.

ಈ ವರ್ಷಾರಂಭದಲ್ಲಿ ಅವರು ಫೇಸ್‌ಬುಕ್‌ನಲ್ಲಿ ತನ್ನ ರಾಜೀನಾಮೆ ಘೋಷಿಸಿದ್ದರಾದರೂ ಬಳಿಕ ಮನಸ್ಸು ಬದಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News