ಕಳಸಾ-ಬಂಡೂರಿ ಹೋರಾಟದ ಹಿನ್ನೆಲೆ-ಮುನ್ನೆಲೆ

Update: 2016-07-18 17:35 GMT

ನೇಕ ಸಂದರ್ಭಗಳಲ್ಲಿ ನಮ್ಮ ನಡುವೆ ನಡೆಯುವ ಹಲವು ಹೋರಾಟಗಳ ಬಗ್ಗೆ ನಮಗೆ ಸಾಕಷ್ಟು ಅರಿವೇ ಇರುವುದಿಲ್ಲ. ರೈತರಿಗೆ ಸಂಬಂಧಿಸಿದ, ನೀರಿಗೆ ಸಂಬಂಧಿಸಿದ ಹೋರಾಟಗಳ ಸಾಮಾಜಿಕ, ರಾಜಕೀಯ ಆಯಾಮಗಳು ಜನರಿಗೆ ಗೊತ್ತಿರುವುದೇ ಇಲ್ಲ. ಉತ್ತರ ಕರ್ನಾಟಕದ ಜನರ ಹೋರಾಟಗಳು ದಕ್ಷಿಣ ಕರ್ನಾಟಕದವರಿಗೆ ಅರ್ಥವಾಗುವುದಿಲ್ಲ. ‘ಕಳಸಾ ಬಂಡೂರಿ ಹೋರಾಟ’ ಪ್ರತಿದಿನ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತವೆಯೇ ಹೊರತು, ನಗರ ಪ್ರದೇಶದ ಜನರಿಗೆ ಈ ಹೋರಾಟದ ಆಳ-ಅಗಲ ಈಗಲೂ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿಯ ಜನರ ನೀರಿನ ಹಾಹಾಕಾರ ಮತ್ತು ಅದರ ಹಿಂದಿರುವ ನೀಚ ರಾಜಕಾರಣವನ್ನು ಪರಿಚಯಿಸುವ ಪುಟ್ಟ ಕೃತಿಯನ್ನು ಸಿರಿಮನೆ ನಾಗರಾಜ್ ಸಂಯೋಜಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳಸಾ ಬಂಡೂರಿ ರೈತರ ಹೋರಾಟಕ್ಕೆ ಸಿನೆಮಾ ನಟರೂ ಕೈ ಜೋಡಿಸಿದ್ದಾರೆ. ಈ ಮೂಲಕ ಹೋರಾಟವನ್ನು ಹೆಚ್ಚು ಜನಪ್ರಿಯಗೊಳಿಸಿದ್ದಾರೆ. ನಗರವೂ ಅವರ ಹೋರಾಟದಲ್ಲಿ ಕೈ ಜೋಡಿಸಿತು. ಈ ಹಿನ್ನೆಲೆಯಲ್ಲಿ ಹೋರಾಟ ಅತ್ಯಂತ ಕುತೂಹಲವನ್ನು ಕೆರಳಿಸಿದೆ. ಇಲ್ಲಿ ಸಮಾನತೆಗಾಗಿ ಜನಾಂದೋಲನವು ಕಳಸಾ ಬಂಡೂರಿ ಹೋರಾಟದ ಕುರಿತಂತೆ ನಡೆಸಿದ ಅಧ್ಯಯನ ಇಲ್ಲಿದೆ. ಮೂವತ್ತೈದು ವರ್ಷಗಳ ಹಿಂದೆ ನಡೆದ ನರಗುಂದ ಚಳವಳಿ ಮತ್ತು ಅದರ ಮುಂದುವರಿದ ಭಾಗವೆಂಬಂತೆ ಕಂಡು ಬರುತ್ತಿರುವ ಕಳಸಾ ಬಂಡೂರಿ ಚಳವಳಿಯನ್ನು ಜೊತೆಗಿಟ್ಟು ನೋಡುವ ಕೆಲಸವನ್ನೂ ಇಲ್ಲಿ ಅಧ್ಯಯನಕಾರರು ಮಾಡಿದ್ದಾರೆ. ಕಳಸಾ ಬಂಡೂರಿ ನಾಲಾ ಯೋಜನೆಯ ಪರಿಚಯ, ಅದರ ನೀಲ ನಕ್ಷೆಗಳು, ಮಹಾದಾಯಿ ತಿರುವು ಯೋಜನೆಯ ವಿವರ, ಉತ್ತರಕರ್ನಾಟಕದ ನೀರಿನ ಅಗತ್ಯ ಇವೆಲ್ಲವನ್ನೂ ವಿವರವಾಗಿ ಈ ಪುಟ್ಟ ಅಧ್ಯಯನ ಕೃತಿ ಚರ್ಚಿಸುತ್ತದೆ. ಕೃತಿಯ ಕೊನೆಯಲ್ಲಿ ಅಧ್ಯಯನ ತಂಡ ತನ್ನ ನಿಲುವುಗಳನ್ನೂ ಪ್ರತಿಪಾದಿಸಿದೆ.

ಈ ಕೃತಿಯ ಮೂಲಕ ನಾವು ಉತ್ತರ ಕರ್ನಾಟಕದ ರೈತರು ಎದುರಿಸುತ್ತಿರುವ ಇತರ ಸಮಸ್ಯೆಗಳನ್ನೂ ಇನ್ನಷ್ಟು ಆಳವಾಗಿ ನೋಡುವ ದೃಷ್ಟಿಯನ್ನು ಪಡೆದುಕೊಳ್ಳುತ್ತೇವೆ. ಲಡಾಯಿ ಪ್ರಕಾಶನ ಈ ಕೃತಿಯನ್ನು ಸುಂದರವಾಗಿ ಮುದ್ರಿಸಿದೆ. ಕೃತಿಯ ಮುಖಬೆಲೆ 25 ರೂ. ಕೃತಿಗಾಗಿ 94802 86844 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.
 

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News