ಆಪ್ ತೆಕ್ಕೆಗೆ ಸಿಕ್ಸರ್ ಸಿಧು: ಪಂಜಾಬ್ ಸಿಎಂ ಅಭ್ಯರ್ಥಿ?

Update: 2016-07-19 04:41 GMT

ಚಂಡೀಗಢ/ ಹೊಸದಿಲ್ಲಿ, ಜು.19: ದಿಢೀರ್ ರಾಜಕೀಯ ಬೆಳವಣಿಗೆಯೊಂದು ಬಿಜೆಪಿಗೆ ಆಘಾತ ತಂದಿದ್ದು, ಪಕ್ಷದ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಆಮ್ ಆದ್ಮಿ ಪಕ್ಷ ಸೇರಲು ವೇದಿಕೆ ಸಜ್ಜಾಗಿದೆ. ಮುಂದಿನ ವರ್ಷಾರಂಭದಲ್ಲಿ ನಡೆಯುವ ಚುನಾವಣೆಯಲ್ಲಿ ಅವರನ್ನು ಪಕ್ಷ ಮುಖ್ಯಮಂತ್ರಿ ಅ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆ ದಟ್ಟವಾಗಿದೆ.

ಮೂರು ತಿಂಗಳ ಹಿಂದಷ್ಟೇ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಸಿಧು ಅವರನ್ನು ಇತ್ತೀಚೆಗೆ ಪಕ್ಷದ ಕೋರ್ ಕಮಿಟಿಗೂ ಸೇರಿಸಿಕೊಳ್ಳಲಾಗಿತ್ತು. ಇದೀಗ ಸಿಧು ಬಂಡಾಯ, ಸಂಸತ್ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಪಕ್ಷಕ್ಕೆ ಇರಿಸು ಮುರಿಸಿಗೆ ಕಾರಣವಾಗಿದೆ. ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಸಭೆಯ ಸಭಾಧ್ಯಕ್ಷ ಹಮೀದ್ ಅನ್ಸಾರಿಯವರಿಗೆ ಹಸ್ತಾಂತರಿಸಿದ ಸಿಧು, ತಕ್ಷಣ ಆಂಗೀಕರಿಸುವಂತೆ ಕೋರಿದರು.

ಪಂಜಾಬ್‌ನಲ್ಲಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಜನ ತಮ್ಮ ಬಲಗೈಬಂಟರಿಗೆ ರಾಜ್ಯಸಭಾ ಸ್ಥಾನ ನೀಡಬಹುದು. ಆದರೆ ರಾಜ್ಯ ಸಂರಕ್ಷಣೆಗಾಗಿ ರಾಜ್ಯಸಭಾ ಸದಸ್ಯತ್ವಕ್ಕೇ ರಾಜೀನಾಮೆ ನೀಡುವುದನ್ನು ನೋಡಿದ್ದೀರಾ? ಸಿಧುಜೀ ಅವರ ಧೈರ್ಯಕ್ಕೆ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

ಸಿಧು ಸದ್ಯವೇ ಆಪ್ ಸೇರಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಉಸ್ತುವಾರಿ ಹೊತ್ತಿರುವ ಸಂಜಯ್ ಸಿಂಗ್ ಹೇಳಿದ್ದಾರೆ. ಸರಿಯಾದ ಸಮಯದಲ್ಲಿ ಅಧಿಕೃತವಾಗಿ ಇದನ್ನು ಘೋಷಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಅಮರೀಂದರ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವಂಥ ಜಾಟ್ ಸಿಕ್ಖ್ ಮುಖಕ್ಕಾಗಿ ಆಪ್ ಹುಡುಕಾಟ ನಡೆಸುತ್ತಿತ್ತು. ಇದೀಗ ಆ ಕೊರತೆಯನ್ನು ಪಕ್ಷ ನೀಗಿಸಿಕೊಂಡಿದ್ದು, ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News