ಗುಜರಾತ್ ದಲಿತ ದೌರ್ಜನ್ಯ ಸಂತ್ರಸ್ತರ ನಿವಾಸಕ್ಕೆ ರಾಹುಲ್ ಭೇಟಿ

Update: 2016-07-21 12:56 GMT

ಉನಾ, ಜು.21: ಸತ್ತ ದನದ ಚರ್ಮ ಸುಲಿದುದಕ್ಕಾಗಿ ಬರ್ಬರವಾಗಿ ಥಳಿಸಲ್ಪಟ್ಟಿದ್ದ ನಾಲ್ವರು ದಲಿತ ಸಹೋದರರ ಮನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿ ನೀಡಿದ್ದಾರೆ. ಕುಟುಂಬಕ್ಕೆ ರೂ. 5 ಲಕ್ಷ ಸಹಾಯವನ್ನು ಅವರು ಘೋಷಿಸಿದ್ದಾರೆ.
ಇಂದು ಮುಂಜಾನೆ ಗುಜರಾತ್‌ಗೆ ವಿಮಾನದಲ್ಲಿ ಪ್ರಯಾಣಿಸಿದ ರಾಹುಲ್, ನೇರವಾಗಿ ಉನಾದ ಸಮಾಧಿಯಾಲ ಗ್ರಾಮದಲ್ಲಿರುವ ದಲಿತ ಸೋದರರ ತಂದೆ ಬಾಬುಭಾಯಿ ಸರ್ವೈಯ ಎಂಬವರ ಮನೆಗೆ ತೆರಳಿ, ಕುಟುಂಬದೊಂದಿಗೆ 40 ನಿಮಿಷ ಕಳೆದರು.
ಕಾಂಗ್ರೆಸ್‌ನ ಗುಜರಾತ್ ಪ್ರಭಾರಿ ಗುರುದಾಸ್ ಕಾಮತ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್‌ಸಿಂಹ ಸೋಳಂಕಿ, ಕಾಂಗ್ರೆಸ್ ಹಾಗೂ ದಲಿತ ನಾಯಕಿ ಕುಮಾರಿ ಸೆಲ್ಜಾ ಹಾಗೂ ಪಕ್ಷದ ಇತರ ನಾಯಕರು ಅವರ ಜೊತೆಗಿದ್ದರು.
ರಾಹುಲ್ ಗ್ರಾಮಕ್ಕೆ ಬಂದುದು ತಿಳಿಯುತ್ತಿದ್ದಂತೆ ಹಲವು ಮಂದಿ ಸಮಾಧಿಯಾಲಕ್ಕೆ ಧಾವಿಸಿದ್ದರು.
ಕುಟುಂಬದೊಂದಿಗೆ ಮುಕ್ತ ಮಾತುಕತೆ ಮುಂದುವರಿಯುತ್ತಿದ್ದಂತೆಯೇ ರಾಹುಲ್, ಇಂತಹ ಘಟನೆ ಮೊದಲ ಬಾರಿ ನಡೆದುದೇ ಅಥವಾ ದೀರ್ಘ ಕಾಲದಿಂದ ಅಲ್ಲಿ ಅಂತಹ ಜಾತಿ ತಾರತಮ್ಯವಿದೆಯೇ? ಎಂದು ಬಾಬುಭಾಯಿಯ ಸೋದರ ಸಂಬಂಧಿ ಜಿತು ಸರ್ವೈಯ ಎಂಬವರಲ್ಲಿ ಪ್ರಶ್ನಿಸಿದರು.
ಇದರಲ್ಲಿ ಹೊಸದೇನೂ ಇಲ್ಲ. ಇಲ್ಲಿ ಇದು ಮಾಮೂಲು ಎಂದು ಸರ್ವೈಯ ಉತ್ತರಿಸಿದರು.
20ರ ಹರೆಯದ ಜಿತು, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಕುಟುಂಬದ ಏಕಮಾತ್ರ ವಿದ್ಯಾವಂತ ಸದಸ್ಯನಾಗಿದ್ದಾರೆ. ಬೇರೆ ಕೆಲಸದ ಅವಕಾಶವಿಲ್ಲದ ಕಾರಣ ತಾವು ಚರ್ಮೋದ್ಯಮಕ್ಕಾಗಿ ಸತ್ತ ಪ್ರಾಣಿಗಳ ಚರ್ಮ ಸುಲಿಯುವ ಉದ್ಯೋಗದಲ್ಲಿ ತೊಡಗಿದ್ದೇವೆಂದು ಅವರು ತಿಳಿಸಿದರು.
ತಮಗೆ ಹಣ ಬೇಡ. ಆದರೆ, ಬದುಕಿರಲು, ಜೀವನ ಸಾಗಿಸಲು ಬೆಂಬಲ ಬೇಕು. ತಾವು ಸಮಾಜದ ಕೊಳೆಯನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಸಮಾಜ ಅದಕ್ಕೆ ಪ್ರತಿಯಾಗಿ ಹಿಂಸೆಯನ್ನು ನೀಡಿದೆಯೆಂದು ಜಿತು ಹೇಳಿದರು.
ರಾಹುಲ್, ಕುಟುಂಬದವರೊಂದಿಗೆ ಕುಳಿತು ಬಾಬುಭಾಯಿಯ ಕೈಗಳನ್ನು ಹಿಡಿದುಕೊಂಡಾಗ ಎಲ್ಲರೂ ಭಾವುಕರಾದರು. ಅವರು ದಲಿತ ಕುಟುಂಬದೊಂದಿಗೆ ಚಹಾ ಸೇವಿಸಿದರು. (ಸಾಮಾನ್ಯವಾಗಿ ದಲಿತರಲ್ಲಿ ಮೇಲ್ಜಾತಿಯವರು ಅನ್ನ-ಪಾನ ಸೇವಿಸುವುದಿಲ್ಲ).
ಗ್ರಾಮದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆಯ ವೀಡಿಯೊವನ್ನು ರಾಹುಲ್ ವೀಕ್ಷಿಸಿದರು. ಬಳಿಕ ಅವರು ರಾಜಕೋಟ ನಗರಕ್ಕೆ ತೆರಳಿ, ಘಟನೆಯನ್ನು ಪ್ರತಿಭಟಿಸಿ ವಿಷ ಸೇವಿಸಿದ್ದ ದಲಿತ ಯುವಕರನ್ನು ಅಲ್ಲಿನ ನಾಗರಿಕ ಆಸ್ಪತ್ರೆಯಲ್ಲಿ ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News