ಮುಂದುವರಿದ ಬಿಎಸ್ಪಿ ಕಾರ್ಯಕರ್ತರ ಪ್ರತಿಭಟನೆ ದಯಾಶಂಕರ ಬಂಧನಕ್ಕಾಗಿ ಆಗ್ರಹ

Update: 2016-07-21 14:29 GMT

ಲಕ್ನೋ,ಜು.21: ಪಕ್ಷದ ಅಧಿನಾಯಕಿ ಮಾಯಾವತಿಯವರ ವಿರುದ್ಧ ಅವಮಾನಕಾರಿ ಹೇಳಿಕೆಗಾಗಿ ದಯಾಶಂಕರ ಸಿಂಗ್ ಅವರನ್ನು ತಕ್ಷಣವೇ ಬಂಧಿಸಬೇಕೆಂಬ ಆಗ್ರಹದೊಂದಿಗೆ ನೂರಾರು ಬಿಎಸ್‌ಪಿ ಕಾರ್ಯಕರ್ತರು ಗುರುವಾರ ಬೀದಿಗಳಿದು ತಮ್ಮ ಬಲ ಪ್ರದರ್ಶಿಸಿದರು. ಇದೇ ವೇಳೆ ಉಚ್ಚಾಟಿತ ಬಿಜೆಪಿ ನಾಯಕ ಸಿಂಗ್ ಅವರನ್ನು ಪತ್ತೆ ಹಚ್ಚಲು ಲಕ್ನೋ ಮತ್ತು ಬಲಿಯಾಗಳಲ್ಲಿ ದಾಳಿ ನಡೆಸಿದ ಪೊಲೀಸರು ಅವರ ಸಹೋದರ ಧಮೇಂದ್ರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಕ್ಷದ ಕರೆಯ ಮೇರೆಗೆ ಇಲ್ಲಿಯ ಹಝರತ್ ಗಂಜ್ ಕ್ರಾಸಿಂಗ್‌ನಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಬಳಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ನಸೀಮುದ್ದೀನ್ ಸಿದ್ದಿಕಿ ಅವರು, ಸಿಂಗ್ ಬಂಧನಕ್ಕಾಗಿ ಜಿಲ್ಲಾಡಳಿತಕ್ಕೆ 36 ಗಂಟೆಗಳ ಗಡುವು ನೀಡಿದರು.
ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭಗೊಂಡಿದ್ದ ಧರಣಿ ಪ್ರತಿಭಟನೆ ಸುಮಾರು ಐದು ಗಂಟೆಗಳ ಕಾಲ ನಡೆದಿದ್ದು, ಇದರಿಂದಾಗಿ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಪ್ರತಿಕೃತಿಯೊಂದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ ಬಿಎಸ್‌ಪಿ ಕಾರ್ಯಕರ್ತನೋರ್ವನಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ.
 ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಇದೊಂದು ಮುಗಿದ ಅಧ್ಯಾಯವಾಗಿದೆ,ಪಕ್ಷವು ಈಗಾಗಲೇ ಸಿಂಗ್ ವಿರುದ್ಧ ಕ್ರಮವನ್ನು ಕೈಗೊಂಡಿದೆ, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಸಿಂಗ್ ವಿರುದ್ಧ ಎಫ್‌ಐಆರ್‌ನ ಆಧಾರದಲ್ಲಿ ಕಾನೂನಿಗನುಗುಣವಾಗಿ ಕ್ರಮವನ್ನು ಕೈಗೊಳ್ಳಲಾಗುವದು ಎಂದು ರಾಜ್ಯದ ಎಸ್‌ಪಿ ಸರಕಾರವು ಸ್ಪಷ್ಟಪಡಿಸಿದೆ.
ಬಿಎಸ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಮೇವಾಲಾಲ್ ಗೌತಮ್ ಅವರು ಬುಧವಾರ ರಾತ್ರಿ ಹಝರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News