ಐಎಎಸ್ ಅಧಿಕಾರಿಗಳ ತನಿಖೆಗೆ ಅನುಮತಿ ಕೋರಲು ಖಾಸಗಿ ವ್ಯಕ್ತಿಗಳಿಗೂ ಅವಕಾಶ

Update: 2016-07-22 03:16 GMT

ಹೊಸದಿಲ್ಲಿ, ಜು.22: ಭ್ರಷ್ಟಾಚಾರ ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ವಿರುದ್ಧದ ತನಿಖೆಗೆ ಅನುಮತಿ ಕೋರಲು ಖಾಸಗಿ ವ್ಯಕ್ತಿಗಳಿಗೂ ಅವಕಾಶ ಮಾಡಿಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಇಂಥ ಮನವಿಗಳನ್ನು ನಿರ್ವಹಿಸಲು ಅಗತ್ಯ ವಿಧಿವಿಧಾನಗಳ ರೂಪುರೇಷೆಯನ್ನು ಸರಕಾರ ಸಿದ್ಧಪಡಿಸಿದೆ. ಇಂಥ ಮನವಿಗಳ ವಿಲೇವಾರಿಗೆ ಮೂರು ತಿಂಗಳ ಗಡುವು ನಿಗದಿಪಡಿಸಿದೆ.

ಈ ಪ್ರಸ್ತಾವಿತ ಮಾರ್ಗಸೂಚಿಯ ಅನ್ವಯ, ಇಂಥ ಮನವಿಯನ್ನು ರಾಜ್ಯ ಸರಕಾರ ಅಥವಾ ನಾಗರಿಕ ಸೇವಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ಸಚಿವಾಲಯದ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ನಿರ್ಧಾರ ಕೈಗೊಳ್ಳುವ ಮುನ್ನ ಆಯಾ ಇಲಾಖೆ ಪ್ರಾಥಮಿಕ ತನಿಖೆ ನಡೆಸಬೇಕಾಗುತ್ತದೆ.

ಈ ಮಾರ್ಗಸೂಚಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ , ಕೇಂದ್ರದ ಸಚಿವಾಲಯ ಹಾಗೂ ಇಲಾಖೆಗಳಿಗೆ ಕಳುಹಿಸಿ, ಆಗಸ್ಟ್ 12ರೊಳಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್ 2012ರಲ್ಲಿ ಸುಬ್ರಮಣಿಯನ್ ಸ್ವಾಮಿ ಹಾಗೂ ಮನಮೋಹನ್ ಸಿಂಗ್ ಪ್ರಕರಣದಲ್ಲಿ, ಸಾರ್ವಜನಿಕ ಸೇವಕರ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಅವಕಾಶ ಕೋರದಂತೆ ಜನಸಾಮಾನ್ಯರನ್ನು ನಿರ್ಬಂಧಿಸುವ ಯಾವುದೇ ಅವಕಾಶ ಪಿಸಿಎ ಅಥವಾ ಸಿಆರ್‌ಪಿಸಿಯಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟ ಬಳಿಕ ಮೊಟ್ಟಮೊದಲ ಬಾರಿಗೆ ಈ ಕ್ರಮಕ್ಕೆ ಸರಕಾರ ಮುಂದಾಗಿದೆ.

ನಾಗರಿಕರು ಮಾಡಿದ ದೂರಿನ ಬಗ್ಗೆ ಕೂಡಾ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಭವಿಷ್ಯದಲ್ಲಿ ನಿಯಮಾವಳಿ ರೂಪಿಸಬೇಕು ಎಂದು ಕೋರ್ಟ್ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News