ಜುಕಾಕು ಶಂಸುದ್ದೀನ್ ಬದುಕು-ಸಾಧನೆಯ ನೆನಪಿಸುವ ಒಂದು ಅಪೂರ್ವ ಕೃತಿ...

Update: 2016-07-23 18:42 GMT

ಭಟ್ಕಳದ ಹೆಮ್ಮೆಯ ಪುತ್ರರಲ್ಲೊಬ್ಬರಾದ ರಾಜ್ಯದ ಮಾಜಿ ಸಹಾಯಕ ಸಚಿವ ಜುಕಾಕು ಶಂಸುದ್ದೀನ್‌ರನ್ನು ಸ್ಮರಿಸುವ ಅಪೂರ್ವ ಪುಸ್ತಕವೊಂದನ್ನು ಹೊರತಂದಿದ್ದಕ್ಕಾಗಿ ತಂಝೀಮ್ ಸಂಸ್ಥೆ ಹಾಗೂ ಲೇಖಕ ಅಫ್ತಾಬ್ ಹುಸೈನ್ ಕೋಲಾ ಅಭಿನಂದ ನಾರ್ಹರಾಗಿದ್ದಾರೆ.
‘ಜೆಎಚ್ ಸಂಶುದ್ದೀನ್- ಸರ್ವೀಸ್ ಅಬೋವ್ ಸೆಲ್ಫ್ ’ ಎಂಬ ಶೀರ್ಷಿಕೆಯ ಈ ಪುಸ್ತಕಕೃತಿಯನ್ನು ಭಟ್ಕಳದ ಮಜ್ಲಿಸೆ ಇಸ್ಲಾಹ್ ವಾ ತಂಝೀಮ್ ಪ್ರಕಟಿಸಿದೆ. ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ ಹಾಗೂ ನಿಸ್ವಾರ್ಥ ಸೇವೆಯ ಭವ್ಯ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿರುವ ಈ ಮಹಾನ್ ವ್ಯಕ್ತಿಯ ಬದುಕು ಹಾಗೂ ಸಾಧನೆಗಳನ್ನು ಭಟ್ಕಳದ ಖ್ಯಾತ ಪತ್ರಕರ್ತ ಅಫ್ತಾಬ್ ಹುಸೈನ್ ಕೋಲಾ ಅವರು ಈ ಕೃತಿಯಲ್ಲಿ ಅಕ್ಷರರೂಪಕ್ಕಿಳಿಸಿದ್ದಾರೆ
ಸುಂದರವಾದ ಭಾಷಾಶೈಲಿಯ ಜೊತೆ ಉತ್ಕೃಷ್ಟ ಗುಣಮಟ್ಟದ ಮುದ್ರಣವು ಈ ಪುಸ್ತಕಕೃತಿಯನ್ನು ಕುತೂಹಲದಿಂದ ಓದುವಂತೆ ಮಾಡುತ್ತದೆ. 1912ರಲ್ಲಿ ಭಟ್ಕಳದಲ್ಲಿ ಜನಿಸಿದ ಜುಕಾಕು ಶಂಸುದ್ದೀನ್ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳಿದಿಲ್ಲ. ಆದರೆ ಈ ಕೃತಿಯು ಶಂಸುದ್ದೀನ್ ಅವರ ನಿಸ್ವಾರ್ಥ ಸೇವೆಗಳ ಬಗ್ಗೆ ಬೆಳಕುಚೆಲ್ಲುವಂತಹ ಮಹತ್ತರವಾದ ಪ್ರಯತ್ನವನ್ನು ಮಾಡಿದೆ.
 ಅಂಜುಮಾನ್ ವಿದ್ಯಾಸಂಸ್ಥೆಯಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದ ಶಂಸುದ್ದೀನ್ ಆನಂತರ ಕುಮಟಾದ ಗಿಬ್ಸ್‌ನಲ್ಲಿ ಓದು ಮುಂದುವರಿಸಿದರು. 1933ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ (ಹಾನರ್ಸ್) ಪದವಿ ಪಡೆದರು. ಆನಂತರ 1935ರಲ್ಲಿ ಬಾಂಬೆ ವಿವಿಗೆ ಸೇರಿದ ಕೊಲ್ಹಾಪುರದ ಸೈಕೆಸ್ ಕಾನೂನು ವಿದ್ಯಾನಿಲಯದಲ್ಲಿ (ಬಳಿಕ ಶಹಾಜಿ ಲಾ ಕಾಲೇಜ್ ಎಂದು ಪುನರ್‌ನಾಮಕರಣಗೊಂಡಿದೆ) ಎಲ್‌ಎಲ್‌ಬಿ ಪದವಿ ಪಡೆದರು. ಹಲವಾರು ಪ್ರಕರಣಗಳಲ್ಲಿ ಅವರು ಅತ್ಯಂತ ಕಡಿಮೆ ಶುಲ್ಕ ಪಡೆದು, ನ್ಯಾಯಾಲಯದಲ್ಲಿ ವಾದಿಸಿದ್ದರು. ವಕೀಲ ವೃತ್ತಿ ಆರಂಭಿಸಿದ ಅಲ್ಪಸಮಯದಲ್ಲೇ ಅವರು ಸಾರ್ವಜನಿಕ ಅಭಿಯೋಜಕ(ಪಬ್ಲಿಕ್ ಪ್ರಾಸಿಕ್ಯೂಟರ್)ರಾಗಿ ನೇಮಕಗೊಂಡರು.
ಈ ಕೃತಿಯ ಲೇಖಕ ಅಫ್ತಾಬ್ ಹುಸೇನ್ ಅವರು ಶಂಸುದ್ದೀನ್ ಅವರ ರಾಜಕೀಯ ಬದುಕಿನ ಬಗ್ಗೆ ಸೊಗಸಾದ ಚಿತ್ರಣವನ್ನು ನೀಡಿದ್ದಾರೆ. ಶಂಸುದ್ದೀನ್ ಅವರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಅಫ್ತಾಬ್ ಅವರು, ವಿಧಾನಸಭೆಯಲ್ಲಿ ನಡೆದ ಚರ್ಚೆಗಳ ಕುರಿತಾದ ದಾಖಲೆಗಳ ವಿವರಗಳನ್ನು ಕೆಲವು ದಿನಗಳ ಕಾಲ ಅಧ್ಯಯನ ಮಾಡಿದ್ದರು.

 ಶಂಸುದ್ದೀನ್ ಅವರ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ಬಗ್ಗೆ ವಿಸ್ತೃತವಾದ ವಿವರಣೆಯನ್ನು ಲೇಖಕರು ನೀಡಿದ್ದಾರೆ. ಶಂಸುದ್ದೀನ್ ಓರ್ವ ಸಕ್ರಿಯ ಸಾಮಾಜಿಕ ಕಾರ್ಯಕರ್ತ ರಾಗಿದ್ದರು. ತನ್ನ ರಾಜಕೀಯ ಜೀವನದ ಆರಂಭದಲ್ಲಿ ಮುಸ್ಲಿಂ ಲೀಗ್‌ಗೆ ಸೇರ್ಪಡೆಗೊಂಡಿದ್ದರು. ಸ್ಥಳೀಯಾಡಳಿತದ ಸಂಸ್ಥೆಗೆ ಚುನಾಯಿತರಾಗುವ ಮೂಲಕ ಅವರು ರಾಜಕೀಯರಂಗಕ್ಕೆ ಪದಾರ್ಪಣೆ ಮಾಡಿದರು.1954ರಿಂದ 1958ರವರೆಗೆ ಅವರು ಭಟ್ಕಳ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಭಟ್ಕಳ ನಗರದ ಹಲವಾರು ಕಚ್ಚಾರಸ್ತೆಗಳು ಡಾಮರೀಕರಣಗೊಂಡವು ಹಾಗೂ ನಗರವು ಒಳಚರಂಡಿ ವ್ಯವಸ್ಥೆಯನ್ನು ಪಡೆದುಕೊಂಡಿತು.
  1946ರಲ್ಲಿ ಶಂಸುದ್ದೀನ್, ಬಾಂಬೆ ಸಂಸ್ಥಾನದ ವಿಧಾನಸಭೆಗೆ ಚೊಚ್ಚಲ ಪ್ರವೇಶ ಮಾಡಿದರು ಹಾಗೂ ಶಾಸಕರಾಗಿ ಎರಡು ಬಾರಿ ಆಯ್ಕೆಯಾದರು (ಆಗ ಭಟ್ಕಳವು ಹೊನ್ನಾವರ ವಿಧಾನಸಭಾ ಕ್ಷೇತ್ರದ ಒಂದು ಭಾಗವಾಗಿತ್ತು). ಶಾಸಕರಾದ ಒಂದು ವರ್ಷದೊಳಗೆ ಅವರು 1958ರಲ್ಲಿ ಆಗಿನ ವಿತ್ತ ಸಚಿವ ಬಿ.ಡಿ.ಜತ್ತಿಯವರ ಸಹಾಯಕ ಸಚಿವರಾಗಿ ನೇಮಕಗೊಂಡರು. ರಾಜ್ಯದ ಸಂಪುಟದಲ್ಲಿ ಸಹಾಯಕ ವಿತ್ತ ಸಚಿವರಾಗಿ ಹಾಗೂ ವಿದ್ಯುತ್ ಸಚಿವರಾಗಿ ಅವರ ಸಾಧನೆಗಳನ್ನು ವಿವರಿಸಲು ಈ ಪುಸ್ತಕದಲ್ಲಿ ಎರಡು ಪ್ರತ್ಯೇಕ ಅಧ್ಯಾಯಗಳನ್ನೇ ಮೀಸಲಿಡಲಾಗಿದೆ.

  ಖ್ಯಾತ ವಿದ್ವಾಂಸ ವೌಲಾನಾ ಖ್ವಾರಿ ಮುಹಮ್ಮದ್ ತಯ್ಯಬ್ ಜೊತೆ ಶಂಸುದ್ದೀನ್ ಅವರ ನಂಟನ್ನು ಈ ಪುಸ್ತಕದಲ್ಲಿ ಸ್ಮರಿಸಿ ಕೊಳ್ಳಲಾಗಿದೆ. ‘‘ಈ ಒಡನಾಟವು ಶಂಸುದ್ದೀನ್ ಬದುಕಿನಲ್ಲಿ ಆಳವಾದ ಪ್ರಭಾವವನ್ನು ಬೀರಿತ್ತು. 1952ರಲ್ಲಿ ಅಂಜುಮಾನ್ ಹಾಮಿಯೆ ಮುಸ್ಲಿವಿೂನ್‌ನ ಐತಿಹಾಸಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ವೌಲಾನಾ ಖ್ವಾರಿ ತಯ್ಯಬ್ ಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಶಂಸುದ್ದೀನ್, ಭಟ್ಕಳ ನಗರದಲ್ಲಿ ಸುತ್ತಾಡಿಸಿದರು ಮತ್ತು ಅವರೊಂದಿಗೆ ಗಣನೀಯವಾದ ಸಮಯವನ್ನು ಕಳೆದರು. ನಗರದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದಾಗಲೂ ಶಂಸುದ್ದೀನ್ ಮುಂಚೂಣಿಯಲ್ಲಿರುತ್ತಿದ್ದರು’’ ಎಂದು ಪುಸ್ತಕದಲ್ಲಿ ಬಣ್ಣಿಸಲಾಗಿದೆ.
   1935ರಲ್ಲಿ ಶಂಸುದ್ದೀನ್ ಭಟ್ಕಳದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸುಶಿಕ್ಷಿತರಾದ ಅವರು ಸಮಾಜಸೇವಾ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಇದು ಅವರನ್ನು ಮಜ್ಲಿಸ್ ಇಸ್ಲಾ ವಾ ತಂಝೀಮ್ ಸಂಸ್ಥೆಗೆ ಪ್ರವೇಶವನ್ನು ಒದಗಿಸಿಕೊಟ್ಟಿತು. ತಂಝೀಮ್‌ನ ಪರಿಹಾರ ಕಾರ್ಯಗಲ್ಲಿ, ಸೀರತ್ ಸಮಾರಂಭಗಳನ್ನು ಸಂಘಟಿಸುವಲ್ಲಿ ಅಥವಾ ಇಸ್ಮಾಯೀಲ್ ಹಸ್ಸನ್ ಸಿದ್ದೀಕ್ ಸ್ಮಾರಕ ಉಚಿತ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸುವಲ್ಲಿ ಶಂಸುದ್ದೀನ್ ಮುಂಚೂಣಿಯ ಪಾತ್ರ ವಹಿಸಿದ್ದರು.

  ತಂಝೀಮ್‌ನ ಅಧ್ಯಕ್ಷರಾಗಿ ಅವರು ಮೂರು ಅವಧಿಗೆ ಆಯ್ಕೆಯಾಗಿದ್ದರು. ಅಂಜುಮಾನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು ಮತ್ತು ಮುಸ್ಲಿಮೀನ್‌ನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಂಸುದ್ದೀನ್ ಹಾಗೂ ಭಟ್ಕಳ ಪಟ್ಟಣದ ನಡುವಿನ ಬಾಂಧವ್ಯದ ಬಗ್ಗೆ ಪ್ರತ್ಯೇಕ ಅಧ್ಯಾಯವೊಂದನ್ನು ಸೇರ್ಪಡೆಗೊಳಿಸಲಾಗಿದೆ. ಶಂಸುದ್ದೀನ್ ಅವರು ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಹಲವು ಭಾಗಗಳಿಗೆ ವಿದ್ಯುತ್ ಸಂಪರ್ಕವನ್ನು ತಂದುಕೊಟ್ಟಿದ್ದರು. ಖಾನ್ ಬಹಾದೂರ್ ಎಸ್.ಎಂ. ಸಯ್ಯದ್ ಅಬೂಬಕರ್ ವೌಲಾನಾ ಅವರ ಆರ್ಥಿಕ ಪ್ರೋತ್ಸಾಹದೊಂದಿಗೆ ಕಾಟೇಜ್ ಆಸ್ಪತ್ರೆ (ಈಗ ಸರಕಾರಿ ಜನರಲ್ ಆಸ್ಪತ್ರೆ ಎಂದಾಗಿದೆ)ಯ ಸ್ಥಾಪನೆಯಲ್ಲಿ ಶಂಸುದ್ದೀನ್ ಅವರ ಶ್ರಮವಿತ್ತು. ಭಟ್ಕಳಕ್ಕೆ ದೂರವಾಣಿ ಸಂಪರ್ಕ ದೊರೆಯುವುದಕ್ಕೂ ಅವರು ಕಾರಣರಾಗಿದ್ದರು.

   ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ಅಯೋಗ್ಯವೆನಿಸಿದ್ದ ಭಟ್ಕಳದಿಂದ ಜೋಗ್‌ಫಾಲ್ಸ್ ಮಾರ್ಗವಾಗಿ ಸಾಗರಕ್ಕೆ ತೆರಳುವ ರಸ್ತೆಗೆ ಶಂಸುದ್ದೀನ್ ಅವರ ಸೂಚನೆಯ ಮೇರೆಗೆ ಡಾಮರೀಕರಣವಾಯಿತು. ನವಾಯತ್ ಕಾಲನಿ ಸೇರಿದಂತೆ ಭಟ್ಕಳ ಪುರಸಭೆಯ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆಗಳನ್ನು ಡಾಮರೀಕರಣಕ್ಕೆ ಒಳಪಡಿಸಲಾಯಿತು. ಭಟ್ಕಳ ಹಾಗೂ ಶಿರಾಲಿ ಪಟ್ಟಣಗಳನ್ನು ಸಂಪರ್ಕಿಸುವ ವೆಂಕಟಾಪುರ ಸೇತುವೆ ಹಾಗೂ ಕಡವಿನಕಟ್ಟಾ ಬ್ಯಾರೇಜ್‌ಗೆ ಕೂಡಾ ಶಂಸುದ್ದೀನ್ ಸಚಿವರಾಗಿದ್ದಾಗಲೇ ಮಂಜೂರಾತಿ ದೊರೆತಿತ್ತು. ಈ ಧೀಮಂತ ನಾಯಕನ ಸ್ಮರಣಾರ್ಥವಾಗಿ ನಿರ್ಮಿಸಲಾದ ವೃತ್ತವು ಭಟ್ಕಳದ ಹೃದಯಭಾಗದಲ್ಲಿದೆ. ಕೆಲವು ದಶಕಗಳ ಹಿಂದೆ, ಬೆಂಗಳೂರಿನ ಭಟ್ಕಳ ಮುಸ್ಲಿಮ್ ಜಮಾಅತ್, ಅವರ ನೆನಪಿಗಾಗಿ ಬೆಂಗಳೂರಿನಲ್ಲಿ ಕಟ್ಟಡವೊಂದನ್ನು ನಿರ್ಮಿಸಿದೆ. ಶ್ರದ್ಧಾವಂತ ಮುಸ್ಲಿಮರಾದ ಶಂಸುದ್ದೀನ್ ಸಚಿವರಾಗಿದ್ದಾಗಲೂ ಸಹ ಒಮ್ಮೆಯೂ ಪ್ರಾರ್ಥನೆಯನ್ನು ತಪ್ಪಿಸಿಕೊಂಡವರಲ್ಲ. ಪ್ರಾರ್ಥನೆ ಹಾಗೂ ರಂಝಾನ್ ಉಪವಾಸ ಆಚರಣೆಯಂತಹ ಧಾರ್ಮಿಕ ಬಾಧ್ಯತೆಗಳನ್ನು ನಿರ್ವಹಿಸಲು ಅವರಿಗೆ ಯಾವತೂ ಅಧಿಕೃತ ಕರ್ತವ್ಯಗಳು ಅಡ್ಡಿಯಾಗಲ್ಲ. ಈ ಪುಸ್ತಕದಲ್ಲಿ ಶಂಸುದ್ದೀನ್-ದಿ ಮ್ಯಾನ್ ಅಧ್ಯಾಯವನ್ನು, ಅಮೆರಿಕದಲ್ಲಿ ನೆಲೆಸಿರುವ ಅವರ ಮೊಮ್ಮಗಳು ಮಾರಿಯಮ್ ತಯ್ಯಬ್ ಜುಕಾಕು ಬರೆದಿದ್ದಾರೆ.

    200 ರೂ. ಬೆಲೆಯ ಈ ಪುಸ್ತಕದಲ್ಲಿ 20ಕ್ಕಿಂತಲೂ ಅಧಿಕ ಅಮೂಲ್ಯ ಛಾಯಾಚಿತ್ರಗಳಿವೆ. ಆಕರ್ಷಕವಾದ ಬರವಣಿಗೆ ಶೈಲಿಯ ಈ ಕೃತಿಯು ಇಂದಿನ ಯುವಪೀಳಿಗೆಗೆ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ. 1964ರ ಮಾರ್ಚ್ 27ರಂದು ನಿಧರಾದ ಶಂಸುದ್ದೀನ್ ಪತ್ನಿ. ಆರು ಪುತ್ರಿಯರು ಹಾಗೂ ನಾಲ್ವರು ಗಂಡುಮಕ್ಕಳನ್ನು ಅಗಲಿದ್ದಾರೆ. ಅವರಲ್ಲಿ ಕೆಲವರು ಭಾರತದಲ್ಲಿದ್ದರೆ, ಉಳಿದವರು ಮಧ್ಯಪ್ರಾಚ್ಯ, ಯುರೋಪ್ ಹಾಗೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ಹಿರಿಯ ಪುತ್ರ ಅಬ್ದುಲ್ ರಹೀಮ್ ಜುಕಾಕು ಅಂಜುಮಾನ್‌ನ ಹಾಲಿ ಅಧ್ಯಕ್ಷರಾಗಿದ್ದಾರೆ.
  ತಂಜೀಮ್‌ನ ಪ್ರಧಾನ ಕಾರ್ಯದರ್ಶಿ ಮೊಹಿಯುದ್ದೀನ್ ಅಲ್ತಾಫ್ ಖರೂರಿ ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಲ್ಲಿ ‘‘ಸಮಾಜವು ಜನಾಬ್ ಶಂಸುದ್ದೀನ್ ಸಾಹೇಬ್ ಅವರ ಜೀವನದಿಂದ ಪ್ರೇರಣೆ ಪಡೆಯಬೇಕು ಮತ್ತು ಅವರು ಪಾಲಿಸಿದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’’ ಎಂದು ಹೇಳಿರುವುದು ಅತ್ಯಂತ ಸಮಂಜಸವಾಗಿದೆ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News