ಗೋಧ್ರೋತ್ತರ ದಂಗೆ ಪ್ರಕರಣ: ಏಳು ಜನರಿಗೆ ಜೀವಾವಧಿ ಶಿಕ್ಷೆ
ಅಹ್ಮದಾಬಾದ್, ಜು.25: 2002ರ ಗೋಧ್ರೋತ್ತರ ದಂಗೆ ಸಂದರ್ಭ ಅಹ್ಮದಾಬಾದ್ ಜಿಲ್ಲೆಯ ವಿರಾಮಗಾಮ್ ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಮೂವರ ಹತ್ಯೆ ಪ್ರಕರಣದಲ್ಲಿ 2011ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಮೂವರು ಸೇರಿದಂತೆ ಏಳು ಜನರಿಗೆ ಗುಜರಾತ್ ಉಚ್ಚ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಈ ಏಳೂ ಜನರ ವಿರುದ್ಧದ ಕೊಲೆ ಮತ್ತು ಇತರ ಆರೋಪಗಳನ್ನು ನ್ಯಾಯಾಲಯವು ಎತ್ತಿ ಹಿಡಿಯಿತು. ಈ ಪೈಕಿ ಮೂವರನ್ನು ಖುಲಾಸೆಗೊಳಿದ್ದ ವಿಚಾರಣಾ ನ್ಯಾಯಾಲಯವು ಉಳಿದ ನಾಲ್ವರಿಗೆ ಲಘು ಅಪರಾಧಗಳಿಗಾಗಿ ಕಡಿಮೆ ಪ್ರಮಾಣದ ಶಿಕ್ಷೆಯನ್ನು ವಿಧಿಸಿತ್ತು. ಕೊಲೆ ಆರೋಪವನ್ನು ಅದು ಕೈಬಿಟ್ಟಿತ್ತು.
ಆದರೆ ಎಲ್ಲ ಏಳೂ ಆರೋಪಿಗಳ ವಿರುದ್ಧದ ಕೊಲೆ ಆರೋಪವನ್ನು ಎತ್ತಿ ಹಿಡಿದ ನ್ಯಾಯಾಧೀಶರಾದ ಹರ್ಷ ದೇವಾನಿ ಮತ್ತು ಬೀರಸೇನ್ ವೈಷ್ಣವ ಅವರನ್ನೊಳಗೊಂಡ ವಿಭಾಗೀಯ ಪೀಠವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಜೊತೆಗೆ ಇತರ ಇಬ್ಬರು ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ದೃಢಪಡಿಸಿತು. ಒಟ್ಟು 10 ಆರೋಪಿಗಳ ಪೈಕಿ ಒಂಬತ್ತು ಜನರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
2002,ಫೆ.28ರಂದು ಈ ಘಟನೆ ನಡೆದಿತ್ತು. ಗುಂಪೊಂದು ಸ್ಥಳೀಯ ಮಸೀದಿಯನ್ನು ಧ್ವಂಸಗೊಳಿಸುತ್ತಿದ್ದಾಗ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಅದನ್ನು ತಡೆಯಲು ಮುಂದಾಗಿದ್ದರು. ಅವರ ಮೇಲೆ ದಾಳಿ ನಡೆಸಿದ್ದ ಗುಂಪು ಸ್ಥಳದಲ್ಲೇ ಇಬ್ಬರನ್ನು ಹತ್ಯೆಗೈದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇನ್ನೋರ್ವ ಅಹ್ಮದಾಬಾದ್‌ನ ವಿಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಗೋಧ್ರೋತ್ತರ ದಂಗೆಗಳಿಗೆ ಸಂಬಂಧಿಸದಂತೆ ಇದು ಉಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ತೀರ್ಪಿಗೆ ವಿರುದ್ಧದ ತೀರ್ಪನ್ನು ನೀಡಿರುವ ಪ್ರಕರಣವಾಗಿದೆ.ಕಳೆದ ವಾರ ಉಚ್ಚ ನ್ಯಾಯಾಲಯವು ಮೆಹ್ಸಾನಾ ಜಿಲ್ಲೆಯ ಮೇಟಾ ಅದ್ರಜ್ ಗ್ರಾಮದಲ್ಲಿ ಇಬ್ಬರು ಮುಸ್ಲಿಮರ ಹತ್ಯೆ ಪ್ರಕರಣದ 27 ಆರೋಪಿಗಳ ಪೈಕಿ 10 ಜನರನ್ನು ಅಪರಾಧಿಗಳೆಂದು ಘೋಷಿಸಿತ್ತು.