ಹಾಲುಕುಡಿದು ಪ್ರತಿಭಟಿಸಿದ ದಲಿತರು !

Update: 2016-07-26 06:14 GMT

ಅಹ್ಮದಾಬಾದ್, ಜು.26: ಭಾರತದ ಕ್ಷೀರ ರಾಜಧಾನಿಯೆಂದೇ ಖ್ಯಾತವಾದ ಗುಜರಾತ್ ರಾಜ್ಯದ ಆನಂದ್ ಪಟ್ಟಣದಲ್ಲಿ ಸೋಮವಾರ ದಲಿತರು ಉನಾ ದೌರ್ಜನ್ಯ ಪ್ರಕರಣವನ್ನು ವಿರೋಧಿಸಿ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.

ಈಗಾಗಲೇ ಇತರೆಡೆ ಪ್ರತಿಭಟಿಸುತ್ತಿದ್ದ ಕೆಲವು ಯುವಕರು ಆತ್ಮಹತ್ಯೆ ಯತ್ನಕ್ಕೂ ಕೈಹಾಕಿದ್ದರೆ, ‘ಅಮುಲ್’ ಕಾರ್ಯಾಚರಿಸುವ ಆನಂದ್ ಪಟ್ಟಣದಲ್ಲಿ ಹಾಲಿಗೆ ಯಾವುದೇ ಬರವಿಲ್ಲದೇ ಇರುವುದರಿಂದ ದಲಿತರು ಯಥೇಚ್ಛ ಹಾಲು ಸೇವಿಸಿ ಪ್ರತಿಭಟಿಸಿದರು.

ಅತ್ತ ಉತ್ತರ ಗುಜರಾತಿನ ಹಿಮ್ಮತ್ ನಗರದಲ್ಲಿ ಸುಮಾರು ಒಂದು ಸಾವಿರದಷ್ಟಿದ್ದ ದಲಿತರು ಮೆರವಣಿಗೆಯೊಂದರಲ್ಲಿ ಸಾಗಿ ಉನಾ ಘಟನೆ ಸಂಬಂಧ ನ್ಯಾಯಕ್ಕಾಗಿ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತರುವಾಯ ಪ್ರತಿಭಟನಾಕಾರರ ಒಂದು ಗುಂಪು ರಾಜ್ಯ ರಸ್ತೆ ಸಾರಿಗೆ ಡಿಪೋದತ್ತ ಧಾವಿಸಿ ಅಲ್ಲಿನ ಕ್ಯಾಂಟೀನ್‌ನಲ್ಲಿ ದಾಂಧಲೆ ನಡೆಸಿದರು.

ಮೆಹಸಾನಾದಲ್ಲಿ ಪ್ರತಿಭಟನಾಕಾರರು ಮಾಮ್ಲತ್ ದಾರ್ ಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿ ಮನವಿ ಪತ್ರ ಸಲ್ಲಿಸಿದ ನಂತರ ಕಚೇರಿಯ ಹೊರಗೆ ಧರಣಿ ಕೂತರಲ್ಲದೆ ಅಲ್ಲಿಂದ ಹೊರ ಹೋಗಲು ನಿರಾಕರಿಸಿದರು. ಅಧಿಕಾರಿಗಳು ಬಹಳ ಹೊತ್ತಿನ ತನಕ ಅವರ ಮನವೊಲಿಸಿದ ನಂತರವಷ್ಟೇ ಅವರು ಸ್ಥಳದಿಂದ ಕದಲಿದರು.

ಸೂರತ್ ಪಟ್ಟಣದಲ್ಲೂ ಪ್ರತಿಭಟನಾಕಾರರು ಜಿಲ್ಲಾ ಕಲೆಕ್ಟರೇಟ್ ಕಚೇರಿ ತನಕ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News