ಪಂಜಾಬ್, ಗುಜರಾತ್, ಗೋವಾಗಳಲ್ಲಿ ಆಪ್‌ನಿಂದ ‘ದಲಿತ ಪ್ರಣಾಳಿಕೆಗಳು’

Update: 2016-07-26 18:16 GMT

ಹೊಸದಿಲ್ಲಿ,ಜು.26: ದಲಿತರ ಮೇಲಿನ ದಾಳಿಗಳು ರಾಜಕೀಯ ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತಿರುವಂತೆಯೇ ಇತ್ತ ಆಮ್ ಆದ್ಮಿ ಪಕ್ಷ(ಆಪ್)ವು ಬಿಜೆಪಿಯ ‘ದಲಿತ ವಿರೋಧಿ ಮತ್ತು ಮನುವಾದಿ’ ಮುಖವನ್ನು ಬಯಲಿಗೆಳೆಯಲು ಚುನಾವಣೆಗಳು ಸನ್ನಿಹಿತವಾಗಿರುವ ಪಂಜಾಬ್, ಗುಜರಾತ್ ಮತ್ತು ಗೋವಾಗಳಲ್ಲಿ ‘ದಲಿತ ಪ್ರಣಾಳಿಕೆ’ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ದಲಿತ ಸಮುದಾಯವನ್ನು ವಿಶೇಷ ಗುರಿಯಾಗಿರಿಸಿಕೊಂಡು ರೂಪಿಸಲಾಗುವ ಪ್ರಣಾಳಿಕೆಗಳು ರಾಜ್ಯಗಳಲ್ಲಿ ಅವರ ವ್ಯವಸ್ಥಿತ ದಮನದ ಕುರಿತು ಚಚಿಸುವ ಜೊತೆಗೆ ಸಾಮಾಜಿಕ ಅಭಿವೃದ್ಧಿಯಲ್ಲಿ ದಲಿತರ ಸೇರ್ಪಡೆಯ ಕೊರತೆಯನ್ನು ಪ್ರಮುಖವಾಗಿ ಬಿಂಬಿಸಲಿವೆ ಎಂದು ಪಕ್ಷದ ಮೂಲಗಳು ತಿಳಿಸಿದವು.
ಪಂಜಾಬ್‌ನಂತೆ ಗೋವಾದಲ್ಲಿಯೂ ‘ಯುವ ಪ್ರಣಾಳಿಕೆ ’ಯನ್ನು ಆಪ್ ಬಿಡುಗಡೆಗೊಳಿಸಲಿದೆ.
ದಲಿತರ ವಿರುದ್ಧ ಅಪರಾಧಗಳನ್ನೆಸಗುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಆಸಕ್ತಿಯಿಲ್ಲ,ಹೀಗಿರುವಾಗ ಪರ್ಯಾಯವಾದರೂ ಏನಿದೆ? ಗುಜರಾತ್‌ನಲ್ಲಿ ದಲಿತರನ್ನು ಅಷ್ಟೊಂದು ಅಮಾನುಷವಾಗಿ ಥಳಿಸಿದ್ದು ಇದೇ ಮೊದಲೇನಲ್ಲ. ಆದರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎನ್ನುವುದು ಎಷ್ಟು ಜನರಿಗೆ ಗೊತ್ತಿದೆ ಎಂದು ಪಕ್ಷದ ಹಿರಿಯ ಪದಾಧಿಕಾರಿಯೋರ್ವರು ಪ್ರಶ್ನಿಸಿದರು.
ಬಿಜೆಪಿಯ ದಲಿತ ವಿರೋಧಿ ಮತ್ತು ಮನುವಾದಿ ಮುಖವನ್ನು ಬಯಲಿಗೆಳೆಯಲು ಇದು ಸಕಾಲವಾಗಿದೆ ಎಂದ ಅವರು, ದಲಿತರು ಭಾಗವಾಗಿರುವ ಯಾವುದೇ ಅಭಿವೃದ್ಧಿ ಕಾರ್ಯಸೂಚಿಯನ್ನು ಬಿಜೆಪಿಯು ಹೊಂದಿಲ್ಲ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News