ಹಳ್ಳಿಗಳೀಗ ಅರ್ಹರ್ ಮೋದಿ ಎನ್ನುತ್ತಿವೆ: ರಾಹುಲ್

Update: 2016-07-28 12:43 GMT

ಹೊಸದಿಲ್ಲಿ, ಜು.28: ಬೇಳೆ, ಆಲೂಗಡ್ಡೆ ಹಾಗೂ ಟೊಮೆಟೊಗಳಂತಹ ಆಹಾರ ವಸ್ತುಗಳ ಸಹಿತ ಅಗತ್ಯ ವಸ್ತುಗಳ ಬೆಲೆಯೇರಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವಿಫಲವಾಗಿದೆಯೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಗ್ರಾಮಗಳಲ್ಲಿ ಅರ್ಹರ್ ಮೋದಿ, ಅರ್ಹರ್ ಮೋದಿ, ಅರ್ಹರ್ ಮೋದಿ ಎಂಬ ಹೊಸ ಘೋಷಣೆ ಕೇಳಿಸುತ್ತಿದೆಯೆಂದು ಅವರು ಸಂಸತ್ತಿನಲ್ಲಿ ಮಾಡಿದ 16 ನಿಮಿಷಗಳ ಭಾಷಣದಲ್ಲಿ ಹೇಳುವ ಮೂಲಕ ಬಿಜೆಪಿಯ ‘ಘರ್‌ಘರ್ ಮೋದಿ’ ಎಂಬ ಘೋಷಣೆಯನ್ನು ಲೇವಡಿ ಮಾಡಿದರು.
ಕೃಷಿ ಪ್ರಧಾನ ರಾಜ್ಯಗಳಲ್ಲಿ 2 ವರ್ಷ ಬೆನ್ನು ಬೆನ್ನಿಗೆ ಬರಗಾಲ ಬಂದುದರಿಂದ ಪೂರೈಕೆ ಕಡಿಮೆಯಾಗಿ ಬೇಳೆ ಕಾಳು, ತರಕಾರಿ ಹಾಗೂ ಡೈರಿ ಉತ್ಪನ್ನಗಳ ಬೆಲೆಗಳು ಏರುವ ಮೂಲಕ ಹಣದುಬ್ಬರ ಹೆಚ್ಚಾಗಿದೆ.
ತೊಗರಿ ಹಾಗೂ ಅರ್ಹರ್ ಭಾರತದಲ್ಲಿ ಪೌಷ್ಟಿಕಾಂಶದ ಪ್ರಧಾನ ಮೂಲಗಳಾಗಿವೆ. ಸ್ಥಳೀಯ ಬೇಡಿಕೆ ಈಡೇರಿಸಲು ಅವುಗಳ ಉತ್ಪಾದನೆ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ.
 ಲೋಕಸಭೆಯಲ್ಲಿ ಬೆಲೆಯೇರಿಕೆಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್, ಹಣದುಬ್ಬರ ನಿಯಂತ್ರಿಸುವ 2014ರ ಚುನಾವಣೆಯ ಭರವಸೆಯನ್ನು ಮೋದಿಯವರಿಗೆ ಜ್ಞಾಪಿಸಿದರು.
ಅಧಿಕಾರಕ್ಕೆ ಬಂದ ಬಳಿಕ ಬೆಲೆಯೇರಿಕೆಯನ್ನು ನಿಯಂತ್ರಿಸುವ ಬಿಜೆಪಿಯ ಚುನಾವಣಾ ಭರವಸೆಯನ್ನು ಪ್ರಧಾನಿ ಮರೆತಿದ್ದಾರೆಂದು ಅವರು ಟೀಕಿಸಿದರು.
 ಎನ್‌ಡಿಎ ಸರಕಾರದ ಎರಡು ವರ್ಷಗಳನ್ನು ಆಚರಿಸುತ್ತಿರುವ ವೇಳೆ, ಬೆಲೆಯೇರಿಕೆಯ ಕುರಿತು ಪ್ರಧಾನಿ ಏನೂ ಹೇಳುತ್ತಿಲ್ಲವೇಕೆಂದು ರಾಹುಲ್ ಪ್ರಶ್ನಿಸಿದರು.
‘‘ನೀವು ಸ್ಟಾರ್ಟಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ, ಮೇಕ್ ಇನ್ ಇಂಡಿಯಾಗಳ ಬಗ್ಗೆ ಮಾತನಾಡುತ್ತೀರಿ. ಆದರೆ, ಬೆಲೆಯೇರಿಕೆಯ ಬಗ್ಗೆ ಮಾತನಾಡುತ್ತಿಲ್ಲ. ನೀವು ಇಚ್ಛಿಸುವಷ್ಟು ಪೊಳ್ಳು ಭರವಸೆಗಳನ್ನು ನೀಡಿದಿರಿ. ಬೆಲೆಗಳು ಯಾವಾಗ ಇಳಿಯುತ್ತವೆಂಬ ದಿನಾಂಕವೊಂದನ್ನು ಸದನಕ್ಕೆ ತಿಳಿಸಿ’’ ಎಂದು ಅವರು ಛೇಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News