ದಲಿತರು-ಮುಸ್ಲಿಮರ ಮೇಲೆ ದಾಳಿ ಹೆಚ್ಚಳ: ಸರಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

Update: 2016-07-29 13:30 GMT

ಹೊಸದಿಲ್ಲಿ, ಜು.29: ಗೋಮಾಂಸ ವಿವಾದದಲ್ಲಿ ಮಧ್ಯಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಥಳಿಸಿದ ವಿಚಾರದಲ್ಲಿ ವಿಪಕ್ಷವಿಂದು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ದಲಿತರು ಹಾಗೂ ಮುಸ್ಲಿಮರ ವಿರುದ್ಧ ಹೆಚ್ಚು ಹೆಚ್ಚು ಹಿಂಸಾಚಾರಗಳು ನಡೆಯುತ್ತಿವೆಯೆಂದು ಅದು ಆರೋಪಿಸಿದೆ. ಪ್ರಕರಣದಲ್ಲಿ ನ್ಯಾಯ ಒದಗಿಸುವ ಆಶ್ವಾಸನೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೀಡಿದ್ದಾರೆ.
 ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ದಲಿತರ ಮೇಲಿನ ದಾಳಿ ಘಟನೆಗಳ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು. ಮಧ್ಯಪ್ರದೇಶದ ಮಂಡ್ಸೌರ್, ಗುಜರಾತ್‌ಗಳಲ್ಲಿ ಉತ್ತರಪ್ರದೇಶದಲ್ಲಿ ಇಬ್ಬರು ದಲಿತರ ಹತ್ಯೆ ಪ್ರಕರಣಗಳನ್ನು ಅವರು ತನ್ನ ಹೇಳಿಕೆಗೆ ಆಧಾರವಾಗಿ ನೀಡಿದರು.
ಗೌ ರಕ್ಷಾ ಸಂಘದಂತಹ ಗೋರಕ್ಷಣಾ ಗುಂಪುಗಳನ್ನು ನಿಷೇಧಿಸುವಂತೆ ಆಗ್ರಹಿಸಿದ ಖರ್ಗೆ, ಅವು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಅವುಗಳಿಗೆ ರಾಜ್ಯಗಳ ಬಿಜೆಪಿ ಸರಕಾರಗಳು ಪ್ರೋತ್ಸಾಹ ನೀಡುತ್ತಿವೆಯೆಂದು ಆರೋಪಿಸಿದರು.
ಅಂತಹ ಘಟನೆಗಳಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಸದಸ್ಯರು ಕೂಡ ಒಳಗೊಂಡಿರುತ್ತಾರೆ. ಸರಕಾರದ ಬೆಂಬಲವಿದ್ದಾಗಲಷ್ಟೇ ಅಂತಹ ಘಟನೆಗಳು ನಡೆಯಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ ಖರ್ಗೆ, ಉತ್ತರಪ್ರದೇಶದಲ್ಲಿ ದಲಿತ ದಂಪತಿಯನ್ನು ಥಳಿಸಿಕೊಂದ ವರದಿಯನ್ನು ಉಲ್ಲೇಖಿಸಿದರು.
ತಾವು ಎಮ್ಮೆಯ ಮಾಂಸ ಒಯ್ಯುತ್ತಿದ್ದೇವೆ. ಗೋ ಮಾಂಸವನ್ನಲ್ಲವೆಂದು ಆ ಮಹಿಳೆಯರಿಬ್ಬರೂ ಅಂಗಲಾಚುತ್ತಿದ್ದರೂ ಅದರ ರಸೀದಿಯನ್ನು ತೋರಿಸಿದ್ದರೂ, ಅವರನ್ನು ಪೊಲೀಸರ ಮುಂದೆಯೇ ಥಳಿಸಲಾಯಿತು. ಅವರು ಪುರುಷರಾಗಿರುತ್ತಿದ್ದರೆ, ಹತ್ಯೆ ಮಾಡುತ್ತಿದ್ದೇವೆಂದು ದುಷ್ಕರ್ಮಿಗಳು ಅವರಿಗೆ ಹೇಳಿದ್ದರು. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಅದು ಎಮ್ಮೆಯ ಮಾಂಸವೆಂದು ಸಾಬೀತಾಗಿದೆ ಎಂದವರು ವಾಗ್ದಾಳಿ ನಡೆಸಿದರು.
ಪ್ರತಿ 80 ನಿಮಿಷಗಳಿಗೊಂದು ದಲಿತರ ವಿರುದ್ಧ ಅಪರಾಧ ನಡೆಯುತ್ತಿದೆ. ಪ್ರತಿ ದಿನ ಮೂವರು ದಲಿತ ಮಹಿಳೆಯರ ಅತ್ಯಾಚಾರ ನಡೆಯುತ್ತಿದೆ.ಇಬ್ಬರು ದಲಿತರ ಹತ್ಯೆ ನಡೆಯುತ್ತಿದೆಯೆಂದು ಖರ್ಗೆ ರಾಷ್ಟ್ರೀಯ ಅಪರಾಧ ಅಂಕಿ-ಅಂಶವನ್ನು ಉಲ್ಲೇಖಿಸಿದರು.
ಅಂತಹದು ಈ ಹಿಂದೆಯೂ ನಡೆದಿದೆಯೆಂದು ಸರಕಾರ ಹೇಳುತ್ತದೆ. ಆದರೆ, ಈ ಸರಕಾರ ಬಂದ ಬಳಿಕ ಅಂತಹ ಘಟನೆಗಳು ಹೆಚ್ಚಾಗಿವೆ. ಅದಕ್ಕೆ ಸರಕಾರದ ಬೆಂಬಲವಿದೆ ಎಂದು ಅವರು ಆರೋಪಿಸಿದರು. ಅವರಿಗೆ ಟಿಎಂಸಿ ಸದಸ್ಯರು ಬೆಂಬಲ ನೀಡಿದರು.
ಮಧ್ಯಪ್ರದೇಶದ ಘಟನೆಯ ಕುರಿತು ಸಂಕ್ಷಿಪ್ತ ಉತ್ತರ ನೀಡಿದ ರಾಜನಾಥ್, ಅದೊಂದು ಕಾನೂನು ಸುವ್ಯವಸ್ಥೆಯ ವಿಚಾರವಾಗಿದೆ. ಅದು ರಾಜ್ಯಕ್ಕೆ ಸಂಬಂಧಿಸಿದುವೆಂದು ತಾವೆಲ್ಲರೂ ತಿಳಿದಿದ್ದೇವೆ. ಮಧ್ಯಪ್ರದೇಶ ಸರಕಾರ ತುರ್ತು ಹಾಗೂ ಪರಿಣಾಮಕಾರಿ ಕ್ರಮ ಕೈಗೊಂಡಿದೆ. ತನಿಖೆ ನಡೆಯುತ್ತಿದೆ. ನ್ಯಾಯ ಒದಗಿಸಲಾಗುವುದು ಹಾಗೂ ತಪ್ಪಿತಸ್ಥರನ್ನು ಬಿಡುವುದಿಲ್ಲವೆಂದು ತಾನು ಭರವಸೆ ನೀಡುತ್ತೇನೆ ಎಂದರು.
ಅವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್, ಟಿಎಂಸಿ ಹಾಗೂ ಎಡ ಪಕ್ಷಗಳು ಸೇರಿದಂತೆ ವಿಪಕ್ಷಗಳ ಸದಸ್ಯರು ಸದನ ಬಹಿಷ್ಕರಿಸಿ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News