ಜಾತ್ಯತೀತರನ್ನು ಚರ್ಚೆಯಲ್ಲಿ ಎದುರಿಸಲು ತಂಡ ರೂಪಿಸುತ್ತಿರುವ ಆರೆಸ್ಸೆಸ್ !

Update: 2016-07-30 13:08 GMT

ನವದೆಹಲಿ,ಜು.30 : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಎರಡು ವರ್ಷಗಳ ಹಿಂದೆ ಅಧಿಕಾರ ವಹಿಸಿದಾಗಿನಿಂದಆರೆಸ್ಸೆಸ್ ತನ್ನ ಸಿದ್ಧಾಂತಗಳ ವಿಚಾರಗಳಲ್ಲಿ ಹಲವಾರು ಸವಾಲುಗಳನ್ನೆದುರಿಸುತ್ತಿದ್ದು ಇದೀಗ  ಜಾತ್ಯತೀತರ ನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಸಂಘ ಪರಿವಾರದ ಬಗ್ಗೆ ಮೃಧು ಧೋರಣೆ ಹೊಂದಿರುವಂತಹ ಸುಮಾರು 200 ಕ್ಕೂ ಹೆಚ್ಚು ಬ್ಲಾಗರುಗಳು ಹಾಗೂ ಚಿಂತಕರನ್ನು ತರಬೇತುಗೊಳಿಸಲು ಅದು ನಿರ್ಧರಿಸಿದ್ದು ಅದಕ್ಕಾಗಿ ರಾಜಧಾನಿಯಲ್ಲಿ ಎರಡು ದಿನಗಳ ಸಮಾವೇಶವೊಂದನ್ನೂ ಇಂದಿನಿಂದ ಆಯೋಜಿಸಲಾಗಿದೆ.

ಆರೆಸ್ಸೆಸ್ ಜತೆ ನಿಕಟ ಸಂಬಂಧ ಹೊಂದಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಫೌಂಡೇಶನ್ ಆಯೋಜಿಸಿರುವ ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಮುಖ ಭಾಷಣ ನೀಡಲಿದ್ದಾರೆ. ಕೇವಲ ಆಹ್ವಾನಿತರಿಗೆ ಮಾತ್ರ ಈ ಸಮಾವೇಶಕ್ಕೆ ಪ್ರವೇಶವಿದೆ.

ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ತನಗೆ ಸಾಕಷ್ಟು ಸ್ಥಳಾವಕಾಶ ಸಿಗುವಂತೆ ನೋಡಿಕೊಳ್ಳಲು ಸಂಘ ಹಲವು ಸಮಯದಿಂದ ಪ್ರಯತ್ನಿಸುತ್ತಿದ್ದು, ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ನಂತರ ಹುಟ್ಟಿದ ಆಕ್ರೋಶದ ಹಿನ್ನೆಲೆಯಲ್ಲಿ ಸಂಘ ಇಂತಹ ಒಂದು ಪ್ರಯತ್ನಕ್ಕೆ ಕೈಹಾಕಿದೆ. ಬಲಪಂಥೀಯ ಬುದ್ಧಿಜೀವಿಗಳು ಈಗಲೂ ಸಾರ್ವಜನಿಕ ಸಂವಾದದಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿದ್ದಾರೆಂದು ಆರೆಸ್ಸೆಸ್ ಕಳೆದ ವರ್ಷದ ಅವಾರ್ಡ್ ವಾಪ್ಸಿಯಿಂದ ತಿಳಿದುಕೊಂಡಿತ್ತು.

ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಆರೆಸ್ಸೆಸ್ಸಿನ ಬುದ್ಧಿಜೀವಿ ಹೋರಾಟಗಾರರು ಸೂಕ್ತ ತರಬೇತಿ ಹೊಂದಲಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸಂಸದರಾದ ವಿನಯ್ ಸಹಸ್ತ್ರಬೂಶೆ, ಸ್ವಪನ್ ದಾಸಗುಪ್ತ ಹಾಗೂ ನೀತಿ ಆಯೋಗದ ಸದಸ್ಯರು ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News