ಚಿಕ್ಕ ಚುಕ್ಕಿಯಲ್ಲಿ ಬ್ರಹ್ಮಾಂಡ ಪ್ರದರ್ಶಿಸುವ ಕಲಾವಿದ ರಝಾ

Update: 2016-08-02 10:26 GMT

ವರ್ಷಗಳ ಬಳಿಕ, ರಝಾ ಅವರಿಗೆ ಕಪ್ಪು ಬಣ್ಣವೇ ಎಲ್ಲ ಬಣ್ಣಗಳ ತವರು ಬಣ್ಣ ಎನ್ನುವುದನ್ನು ನಾನು ತಿಳಿದುಕೊಂಡೆ. ಇಲ್ಲಿಂದಲೇ ಇಡೀ ಬ್ರಹ್ಮಾಂಡದ ಶಕ್ತಿ ಹೊರಸೂಸುವುದು ಮತ್ತು ಅದು ವಿಲೀನಗೊಳ್ಳುವುದೂ ಅಲ್ಲಿಯೇ.

ರಝಾ ಅವರ ಅಪೂರ್ವ ಕಲಾಕೃತಿಗಳು, ನಿಸರ್ಗಕ್ಕೆ ಹತ್ತಿರವಾದ ದಟ್ಟ ಅರಣ್ಯದ ನಡುವಿನ ಹಳೆಯ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತವೆ. ತಮ್ಮ ಈ ಸಾಧನೆಯ ಗೌರವವನ್ನು ಶಿಕ್ಷಕರಿಗೆ ಅವರು ಸಮರ್ಪಿಸುತ್ತಾರೆ.

ಸೈಯದ್ ಹೈದರ್ ರಝಾ ನನ್ನನ್ನು ಭೇಟಿ ಮಾಡುವುದಕ್ಕಿಂತ ತೀರಾ ಹಿಂದೆಯೇ ನಾನು ಅವರನ್ನು ಭೇಟಿ ಮಾಡಿದ್ದೆ. 1990ರ ದಶಕದ ಆರಂಭದಲ್ಲಿ ನನ್ನ ಸ್ನೇಹಿತರಾದ ರಶ್ನ ಹಾಗೂ ಬರ್ನಾರ್ಡ್ ಇಮ್ಹಾಸ್ಲಿಯವರ ದಿಲ್ಲಿ ನಿವಾಸದ ಊಟದ ಕೊಠಡಿಯಲ್ಲಿ ತೂಗುಹಾಕಿದ್ದ ಆ ಅಪೂರ್ವ ಕಪ್ಪು- ಬಿಳುಪು ಕಲಾಕೃತಿಯ ಚುಂಬಕ ಶಕ್ತಿಗೆ ಮಾರು ಹೋಗಿದ್ದೆ. ಅದು ಸರಳತೆಯಲ್ಲೇ ಪ್ರಭಾವಿಯಾಗಿ ಕಾಣುತ್ತಿದ್ದ ಆ ಕಲಾಕೃತಿ ಕಪ್ಪು ಹಿನ್ನೆಲೆಯಲ್ಲಿ ಬಿಳಿಯ ವೃತ್ತಗಳನ್ನು ಒಳಗೊಂಡಿತ್ತು. ಬಿಳಿಯ ಗೆರೆಗಳು ಅಲ್ಲಿಂದ ಹೊರ ಹೊಮ್ಮುತ್ತಿದ್ದವು. ಈ ಬಗ್ಗೆ ಕೇಳಿದಾಗ ಫ್ಯಾರಿಸ್ ಮೂಲದ ರಝಾ ಎಂಬ ಕಲಾಕಾರರ ಕನಿಷ್ಠ ಕಲಾಕೃತಿ ಎಂದು ತಿಳಿದುಬಂತು. ವರ್ಷಗಳ ಬಳಿಕ, ರಝಾ ಅವರಿಗೆ ಕಪ್ಪು ಬಣ್ಣವೇ ಎಲ್ಲ ಬಣ್ಣಗಳ ತವರು ಬಣ್ಣ ಎನ್ನುವುದನ್ನು ನಾನು ತಿಳಿದುಕೊಂಡೆ. ಇಲ್ಲಿಂದಲೇ ಇಡೀ ಬ್ರಹ್ಮಾಂಡದ ಶಕ್ತಿ ಹೊರಸೂಸುವುದು ಮತ್ತು ಅದು ವಿಲೀನಗೊಳ್ಳುವುದೂ ಅಲ್ಲಿಯೇ.

1922ರ ಫೆಬ್ರವರಿ 22ರಂದು ಮಧ್ಯಪ್ರದೇಶದ ಬಬಾರಿಯಾ ಎಂಬ ಕಾಡಿನ ಮಧ್ಯದ ಗ್ರಾಮದಲ್ಲಿ ಹುಟ್ಟಿದ ಈ ಅಪೂರ್ವ ಪ್ರತಿಭೆ ಮುಂದೊಂದು ದಿನ ಭಾರತದ ಸಮಕಾಲೀನ ಭಾರತೀಯ ಕಲೆಯನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುತ್ತಾರೆ ಎಂದು ಯಾರು ತಾನೆ ಕಲ್ಪಿಸಿಕೊಳ್ಳಲು ಸಾಧ್ಯವಿತ್ತು? ಮಕ್ಬೂಲ್ ಫಿದಾ ಹುಸೈನ್ ಹಾಗೂ ಫ್ರಾನ್ಸಿಸ್ ನ್ಯೂಟನ್ ಸೋಜಾ ಅವರೊಂದಿಗೆ ರಝಾ ಕೂಡಾ ಭಾರತದ ಆಧುನಿಕ ಕಲಾಕಾರರಲ್ಲಿ ಅಗ್ರಗಣ್ಯರು.

ಇವರ ತಂದೆ ನರಸಿಂಗಪುರ ಜಿಲ್ಲೆಯ ಅರಣ್ಯಪಾಲಕರಾಗಿದ್ದರು. ನರ್ಮದಾ ನದಿ ಸನಿಹದಲ್ಲಿ ಕಾಡಿನ ನಡುವೆಯೇ ಬೆಳೆದ ಇವರು, ಆ ನದಿಯನ್ನು ನರ್ಮದಾಜಿ ಎಂದು ಕರೆಯುತ್ತಾರೆ. ಇದೇ ನದಿದಂಡೆಯ ಒಂದು ಪ್ರದೇಶದಲ್ಲಿ ತಂದೆಯ ಸಮಾಧಿಯ ಬಳಿಯೇ ಅವರು ತಮ್ಮನ್ನು ಮಣ್ಣುಮಾಡಲು ಜಾಗ ಆಯ್ಕೆ ಮಾಡಿಕೊಂಡಿದ್ದರು. ರಝಾ ಅವರ ಅಪೂರ್ವ ಕಲಾಕೃತಿಗಳು, ನಿಸರ್ಗಕ್ಕೆ ಹತ್ತಿರವಾದ ದಟ್ಟ ಅರಣ್ಯದ ನಡುವಿನ ಹಳೆಯ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತವೆ. ತಮ್ಮ ಈ ಸಾಧನೆಯ ಗೌರವವನ್ನು ಶಿಕ್ಷಕರಿಗೆ ಅವರು ಸಮರ್ಪಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಅವರ ಸ್ಫೂರ್ತಿಯ ಚಿಲುಮೆಯನ್ನು ಗೋಡೆಯಲ್ಲಿ ಒಂದು ಚುಕ್ಕಿ ಸೃಷ್ಟಿಸಿ ಅದರತ್ತ ಕೇಂದ್ರೀಕರಿಸುವಂತೆ ಬೋಧಿಸಿದ ಮುಖ್ಯಶಿಕ್ಷಕರಿಗೆ ಸಮರ್ಪಿಸುತ್ತಾರೆ. ರಝಾ ಮುಂದೆ ತಮ್ಮ ಬಾಲ್ಯಜೀವನದ ನೆನಪಿನ ಕುರುಹಾದ ಈ ಬಿಂದುವನ್ನೇ ತಮ್ಮ ಚಿತ್ರಗಳ ರುಜುವಾಗಿ ಬಳಸಿಕೊಂಡರು. ಈ ಬಿಂದುವನ್ನು ವಿಭಿನ್ನವಾಗಿ ಶೂನ್ಯ ಅಥವಾ ಏನೂ ಇಲ್ಲದಿರುವಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಅದು ಅವರ ಕಲಾಕೃತಿಗಳಲ್ಲಿ ಎಲ್ಲ ಜೀವಗಳಿಗೆ ಜನ್ಮ ನೀಡುವ ಶಕ್ತಿ ಹೊಂದಿರುವ ಬೀಜಶಕ್ತಿಯ ಸಂಕೇತವೂ ಹೌದು.

ನಾಗಪುರ ಸ್ಕೂಲ್ ಆಫ್ ಆಟ್ಸ್‌ರ್  ನಲ್ಲಿ ಸೇರಿದ ಬಳಿಕ ರಝಾ ಅವರು, ಮುಂಬೈನ ಜೆಮ್‌ಶೆಡ್‌ಜೀ, ಜೀಜೇಭಾಯ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಅಧ್ಯಯನ ಮಾಡಲು ಸರಕಾರದಿಂದ ಶಿಷ್ಯವೇತನ ಪಡೆದರು. ಬಳಿಕ, 1947ರಲ್ಲಿ ಸೋಜಾ, ಕೃಷ್ಣಾಜಿ ಹೌಲಾಜಿ ಆರಾ, ಹರಿ ಅಂಬಾದಾಸ್ ಗಾಡೆ, ಸದಾನಂದ ಕೆ.ಬಾಕ್ರೆ ಹಾಗೂ ಹುಸೈನ್ ಜತೆ ಸೇರಿ ಪ್ರಗತಿಪರ ಕಲಾವಿದರ ಗುಂಪನ್ನು ರಚಿಸಿಕೊಂಡರು. ಇದು ಜಾತಿ- ಧರ್ಮದ ಎಲ್ಲೆ ಮೀರಿದ ಬಹುಸಂಸ್ಕೃತಿ ಗುಂಪಾಗಿತ್ತು. ನಮ್ಮ ಮುಖ್ಯ ಉದ್ದೇಶ ಕಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಾಗಿತ್ತು. ನಮ್ಮಲ್ಲಿ ಶೋಧನಾ ಗುಣ ಇತ್ತು ಹಾಗೂ ನಾವು ಭೌತಿಕ ವಿಶ್ವದ ವಿರುದ್ಧ ಹೋರಾಡಿದೆವು. ನಮ್ಮ ಎಲ್ಲ ಸಭೆ, ಚರ್ಚೆಗಳಲ್ಲಿ ಭ್ರಾತೃತ್ವದ ಭಾವನೆ ಇತ್ತು. ಹಲವು ಯೋಚನೆಗಳ ಬಗ್ಗೆ ಲವಲವಿಕೆಯ ಚರ್ಚೆ ನಡೆಯುತ್ತಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.

ಭಾರತ ಸ್ವಾತಂತ್ರ್ಯ ಗಳಿಸುವ ವೇಳೆಗೆ, ವಿವರಣಾತ್ಮಕ ಚಿತ್ರಣ ಶೈಲಿಯ ಚಿತ್ರಗಳು ಪ್ರಚಲಿತದಲ್ಲಿದ್ದವು. ಈ ಹಂತ ದಲ್ಲಿ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಸೇರಿದಂತೆ ಭಾರತದ ಬಹುತೇಕ ಎಲ್ಲ ಕಲಾಶಾಲೆಗಳು ಪಠ್ಯಕ್ರಮದಲ್ಲಿ ಲಂಡನ್‌ನ ರಾಯಲ್ ಅಕಾಡಮಿ ಮಾದರಿಯ ಪಠ್ಯಕ್ರಮ ಅಳವಡಿಸಿಕೊಂಡವು. ಇಷ್ಟಾಗಿಯೂ ರಝಾ ಅವರಂತಹ ಕಲಾವಿದರು, ಸಮನ್ವಯ ಸಂಸ್ಕೃತಿಯ ದೇಶೀಯ ಸಂಪ್ರದಾಯ ಹಾಗೂ ವಾಡಿಕೆಗಳನ್ನೇ ನೆಚ್ಚಿಕೊಂಡರು. ಇದು ಹಿಂದೂ, ಇಸ್ಲಾಂ, ಜೈನ, ಬೌದ್ಧ ಹೀಗೆ ವಿಭಿನ್ನ ಸಂಸ್ಕೃತಿಗಳ ಪ್ರಭಾವ ಹೊಂದಿದ್ದರಿಂದ, ಅರಿವಿಗೆ ಬಾರದಂತೆ ಎಲ್ಲ ಮೂಲತತ್ವಗಳನ್ನು ಒಳಗೊಂಡಿತ್ತು.

ಇದರ ಜತೆಗೆ ಸುಮಾರು ಎರಡು ದಶಕಗಳಷ್ಟು ತಡವಾಗಿ ಬೀಸಿದ ಪಾಶ್ಚಿಮಾತ್ಯ ಬದಲಾವಣೆಯ ಗಾಳಿಗೆ ಒಳಗಾಗದಿರಲಿಲ್ಲ. ರಝಾ ಕೂಡಾ ತಮ್ಮ ಸಮಕಾಲೀನರಂತೆ, ಸೆರಝಾನ್ನೆ, ಗುಗಲಿನ್, ಕ್ಲೀ ಹಾಗೂ ಕಂಡಿನ್‌ಸ್ಕಿಯವರಂತಹ ಕಲಾವಿದರ ಬಣ್ಣಗಳ ಪುನರುತ್ಪತ್ತಿಯ ಜಗತ್ತಿಗೆ ತೆರೆದುಕೊಂಡರು. ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದ ಭಾರತೀಯ ಮೇಲ್ವರ್ಗದ ಜತೆಗೆ ಯೂರೋಪಿಯನ್ ಹಾಗೂ ಬ್ರಿಟಿಷ್ ವಲಸಿಗರು ಸೇರಿದಂತೆ ಮುಂಬೈ ಸಮಾಜದ ಮೇಲ್ವರ್ಗದ ಉತ್ತೇಜನವೂ ಸಿಕ್ಕಿ ಈ ಪ್ರವೃತ್ತಿ ಬೆಳೆಯಿತು. ಇವರಲ್ಲಿ ಪ್ರಮುಖರೆಂದರೆ, ಯಹೂದಿ ತ್ರಿವಳಿಗಳಾದ ವಾಲ್ಟರ್ ಲಂಗ್‌ಹಮ್ಮರ್, ರೂಡಿ ವೋನ್ ಲೆಡೆನ್ ಹಾಗೂ ಇಮಾನ್ಯುಯೆಲ್ ಶ್ಚೆಲೆಸಿಂಗರ್ ಅವರು ಚಿತ್ರ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಮುಂಬೈ ಕಲಾವಿದರನ್ನು ಕೇಂದ್ರ ಯೂರೋಪಿಯನ್ ಕಲಾವಿದರಾದ ಆಸ್ಕರ್ ಕೊಕೊಶ್ಕಾ ಹಾಗೂ ಎಗಾನ್ ಶ್ಚೆಲೆಯಂತಹವರ ಸಂಪರ್ಕಕ್ಕೆ ಕಾರಣರಾದರು. ರಝಾ ಅವರ ಆರಂಭಿಕ ಕಲಾಕೃತಿಗಳು, ಅಭಿವ್ಯಕ್ತಾತ್ಮಕವಾದ ಕೊಕೊಶ್ಕಾ ಅವರ ಪ್ರಭಾವವನ್ನು ಒಳಗೊಂಡು ನೆಲ ಹಾಗೂ ನಗರದ ವಾತಾವರಣವನ್ನು ಬಿಂಬಿಸಿದ್ದವು.

ರಝಾ 1950ರಲ್ಲಿ ಮೂರು ವರ್ಷದ ಎಕೋಲ್ ಡೆಸ್ ಬಿಯಕ್ಸ್ ಕಲಾ ಶಿಷ್ಯವೇತನದಡಿ ಫ್ಯಾರಿಸ್‌ಗೆ ತೆರಳಿದರು. ಅಲ್ಲಿ ಅವರು ಅಲ್ಬರ್ಟ್ ಕ್ಯಾಮಸ್, ಜೀನ್ ಪಾಲ್ ಸಾತ್ರೆ ಅವರ ಬಗ್ಗೆ, ರೈನರ್ ಮಾರಿಯಾ ಬಿಲ್ಕೆಯವರ ಕವಿತೆಗಳ ಬಗ್ಗೆ ಅಧ್ಯಯನ ಮಾಡಿದರು, ಆ ಬಳಿಕ ಅವರು ಹೆನ್ರಿ ಕಾರ್ಟಿಯರ್ ಬ್ರೆಸ್ಸೊನ್ ಅವರ ಸಲಹೆಯಂತೆ, ಸೆರಝಾನ್ನೆಯವರ ಕಲಾಕೃತಿಗಳ ಬಗ್ಗೆ ಅಧ್ಯಯನಕ್ಕೆ ತೊಡಗಿದರು. ಹಲವು ಮಂದಿ ಸಹ ಕಲಾವಿದ್ಯಾರ್ಥಿಗಳ ಜತೆ ಬೆರೆತರು. ಭೂದೃಶ್ಯಾವಳಿಯ ಚಿತ್ರಣ ಶೈಲಿಯಿಂದ ಆಚೆಗೆ ಬಂದರು. ಆ ಬಳಿಕ ಅವರ ಕಲಾಕೃತಿಗಳಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶ, ಆಕರ್ಷಕ ಬಣ್ಣದ ಮೇಲಿನ ಭಾರತೀಯ ಪ್ರೀತಿ ಅಭಿವ್ಯಕ್ತಗೊಂಡಿತು.

ರಝಾ ಜತೆಗಿನ ನನ್ನ ಭೇಟಿಯ ಶಾಶ್ವತ ನೆನಪು ತರುವಂತಹದ್ದು ಫ್ರಾನ್ಸ್ ರಾಯಭಾರ ಕಚೇರಿಯ 92ನೆ ವರ್ಷಾಚರಣೆ ಸಮಾರಂಭದ ಸಂದರ್ಭದ್ದು. ಅದು ವಿಶೇಷ ಹಾಗೂ ಆತ್ಮೀಯ ಸಂಜೆ. ಅಲ್ಲಿ ಕಲೆ ಹಾಗೂ ಸಂಗೀತದ ಅವಳಿ ಪ್ರವಾಹಗಳ ಸಮಾಗಮ. ರಝಾ ಅವರ ಹೊಸ ಕಲಾಕೃತಿಗಳು ಕುಮಾರ ಗಂಧರ್ವ, ಅವರ ಪುತ್ರಿ ಕಲಾಪಿನಿ ಕೊಂಕಾಲಿ ಅವರ ಅದ್ಭುತ ಸಂಗೀತ ಸುಧೆಗೆ ಹಿನ್ನೆಲೆ ಒದಗಿಸಿದ್ದವು. ಇದಾದ ಬಳಿಕ ರಝಾದ ‘‘ಜರ್ನಿ ಆಫ್ ಮಾಸ್ಟರ್ ಆ್ಯಂಡ್ ಗೇಸರ್ಸ್‌’’ ಕೃತಿ ಬಿಡುಗಡೆ. ಇದು ಅವರು ಹಾಗೂ ಅವರ ಆಪ್ತ ವಲಯದ ಹುಸೈನ್, ತಯ್ಯಬ್ ಮೆಹ್ತಾ, ಬಲ ಛಾಬ್ಡಾ, ರಾಮ ಕುಮಾರ್, ಸೋಜಾ ಹಾಗೂ ಗಾಯತೊಂಡೆಯವರಂತಹ ದಿಗ್ಗಜರ ಸಂವಾದ. ನಾನು ಅವರ ಹಸ್ತಾಕ್ಷರದ ಕೃತಿ ಪಡೆಯಲು ಹೋದಾಗ, ನಾನು ಅವರ ಆತ್ಮೀಯ ಸ್ನೇಹಿತ ಗಾಯತೊಂಡೆ ಅವರ ಬಗ್ಗೆ ಕೃತಿ ಬರೆಯುತ್ತಿದ್ದೇನೆ ಎಂದು ತಿಳಿದು ಸಂಭ್ರಮಿಸಿದರು. ಈ ವರ್ಷ ಆ ಕೃತಿ ಗಾಯತೊಂಡೆ ಸೊನಾಟಾ ಆಫ್ ಸಾಲಿಟ್ಯೂಟ್ ರಝಾ ಫೌಂಡೇಶನ್‌ನ ಸಹಕಾರದೊಂದಿಗೆ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗಿದೆ.

Writer - ಮೀರಾ ಮಿನೆಜಸ್

contributor

Editor - ಮೀರಾ ಮಿನೆಜಸ್

contributor

Similar News