ರೈಲ್ವೆಯಿಂದ ಸುರಕ್ಷತಾ ಕಾಮಗಾರಿಗಳಿಗಾಗಿ 1.19 ಲ.ಕೋ.ರೂ.ಗಳ ನಿಧಿಯ ಪ್ರಸ್ತಾವನೆ

Update: 2016-08-03 14:09 GMT

ಹೊಸದಿಲ್ಲಿ,ಆ.3: ಮುಂದಿನ ಐದು ವರ್ಷಗಲ್ಲಿ ನಡೆಸಬೇಕಿರುವ ಸುರಕ್ಷತಾ ಕಾಮಗಾರಿಗಳಿಗಾಗಿ 1.19 ಲಕ್ಷ ಕೋಟಿ ರೂ.ಗಳ ನಿಧಿಯೊಂದನ್ನು ರೂಪಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯವು ಸಲ್ಲಿಸಿದೆ ಎಂದು ಸರಕಾರವು ಬುಧವಾರ ಲೋಕಸಭೆಯಲ್ಲಿ ತಿಳಿಸಿತು. ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ಹಳಿ ನವೀಕರಣ ಕಾಮಗಾರಿಗಳಿಗೆ ಆದ್ಯತೆ ನೀಡುವುದಾಗಿ ಸದನಕ್ಕೆ ಭರವಸೆ ನೀಡಿದ ರೈಲ್ವೆ ಸಚಿವ ಸುರೇಶ ಪ್ರಭು ಅವರು, 2015,ಮಾರ್ಚ್ 31ಕ್ಕೆ ಇದ್ದಂತೆ ದೇಶದಲ್ಲಿ 1,17,996 ಕಿ.ಮೀ.ಉದ್ದದ ರೈಲ್ವೆ ಹಳಿಗಳಿವೆ ಮತ್ತು ಹಳಿಗಳ ನವೀಕರಣ ನಿರಂತರ ಚಟುವಟಿಕೆಯಾಗಿದೆ ಎಂದು ತಿಳಿಸಿದರು.

ಮುಂದಿನ ಐದು ವರ್ಷಗಳಿಗಾಗಿ ಸುರಕ್ಷತಾ ಸಂಬಂಧಿ ಕಾಮಗಾರಿಗಳಿಗಾಗಿ ಒಟ್ಟು 1,19,183 ಲ.ಕೋ.ರೂ.ಗಳ ರಾಷ್ಟ್ರೀಯ ರೇಲ್ ಸಂರಕ್ಷಾ ಕೋಶ್‌ನ ಸೃಷ್ಟಿಗಾಗಿ ಪ್ರಸ್ತಾವನೆಯೊಂದನ್ನು ಮರುಪರಿಶೀಲನೆಗಾಗಿ ವಿತ್ತ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಈ ನಿಧಿಯಡಿ ಹಳಿ ನವೀಕರಣ,ಸೇತುವೆಗಳ ಪುನರ್‌ನಿರ್ಮಾಣ ಮತ್ತು ಹಳಿಗಳ ನ್ನು ಪ್ರತ್ಯೇಕಗೊಳಿಸುವಿಕೆ ಸೇರಿದಂತೆ ಸಿವಿಲ್ ಇಂಜಿನಿಯರಿಂಗ್ ಕಾಮಗಾರಿಗಳಿಗಾಗಿ 44,979 ಕೋ.ರೂ.ಗಳನ್ನು ವ್ಯಯಿಸುವ ನಿರೀಕ್ಷೆಯಿದೆ.
2015-16ನೇ ಸಾಲಿನಲ್ಲಿ 2,950 ಕಿ.ಮೀ.ಉದ್ದದ ಹಳಿಗಳ ನವೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. 2014-15ರಲ್ಲಿ ಈ ಪ್ರಮಾಣ 1,028 ಕಿ.ಮೀ.ಇತ್ತು ಎಂದು ಪ್ರಭು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News