ಮುಂಬೈನಲ್ಲಿ ಭಾರೀ ವರ್ಷಧಾರೆ: ಜನಜೀವನ ಅಸ್ತವ್ಯಸ್ತ

Update: 2016-08-05 08:20 GMT

ಮುಂಬೈ, ಆ.5: ವಾಣಿಜ್ಯ ನಗರಿ ಮುಂಬೈ ಮಹಾನಗರದಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದ್ದು, ಪರಿಣಾಮವಾಗಿ ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕಗಳಿಗೆ ಧಕ್ಕೆ ಉಂಟಾಗಿದೆ.

 ಮುಂಬೈನ ಎಲ್ಲ ಭಾಗಗಳಲ್ಲೂ ಭಾರೀ ಮಳೆಯಾಗಿದೆ. ಈಸ್ಟರ್ನ್ ಎಕ್ಸ್‌ಪ್ರೆಸ್ ಹಾಗೂ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಪಶ್ಚಿಮ ರೈಲ್ವೇ, ಸೆಂಟ್ರಲ್ ರೈಲ್ವೆ ಹಾಗೂ ಹಾರ್ಬರ್ ಲೈನ್‌ನಲ್ಲಿ ಲೋಕಲ್ ರೈಲುಗಳು 15 ರಿಂದ 20 ನಿಮಿಷ ವಿಳಂಬವಾಗಿ ಸಂಚರಿಸುತ್ತಿವೆ.

ಸೆಂಟ್ರಲ್ ರೈಲ್ವೆಯ ಸಯನ್-ಕುರ್ಲಾ ಪ್ರದೇಶದಲ್ಲಿ ರೈಲು ಹಳಿಗಳು ನೀರಿನಿಂದ ಆವೃತವಾಗಿದೆ. ಭಾರೀ ಮಳೆಯ ಪರಿಣಾಮ ಮುಂಬೈಗೆ ಆಗಮಿಸುವ ಹಾಗೂ ನಿರ್ಗಮಿಸುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಸುಮಾರು ಅರ್ಧಗಂಟೆ ವಿಳಂಬವಾಗಿ ಹಾರಾಟ ನಡೆಸುತ್ತಿವೆ.

 ಮುಂದಿನ 48 ಗಂಟೆಗಳ ಕಾಲ ಮುಂಬೈ ಹಾಗೂ ಕೊಂಕಣ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಗೆ(ಎನ್‌ಡಿಆರ್‌ಎಫ್) ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News