ತನ್ನದೇ ಸಿದ್ಧಾಂತ, ಚೌಕಟ್ಟಿನ ಕವಿತೆಗಳು...

Update: 2016-08-06 17:09 GMT

‘‘ಒಂದು ಮುಷ್ಟಿ ನೀರು’’ ಇದು ಸಿದ್ಧಾರೂಡ ಕಟ್ಟೀಮನಿಯವರ ಹೊಸ ಕವಿತಾ ಸಂಕಲನ. ಅವರ ಮನಸ್ಸು ಸತ್ಯದ ಹೆಸರಿನಲ್ಲಿ ಸ್ವಾರ್ಥಪರರಿಂದಾಗುವ ಪರಿಸ್ಥಿತಿಗೆ ಕೊರಗುತ್ತದೆ. ‘‘ಬುದ್ಧ ಎಂದರೆ ಮುಳ್ಳ ತುದಿಯಲಿ ಅರಳದ ಬಾಡದ ಹೂ ಆಸೆಗುದುರೆಯ ಮೂಗುದಾಣಿಯ ಹಿಡಿದು ಕಾರ್ಗತ್ತಲ ಕಾಂತಾರದಲ್ಲಿ ಓಡುವ ಧೂಮಕೇತು’’ ಎಂಬ ವಾಸ್ತವದ ಕಡೆಗೆ ಅವರು ಓದುಗರನ್ನು ಸೆಳೆಯುತ್ತಾರೆ. ಇತ್ತೀಚೆಗೆ ಬರೆಯುತ್ತಿರುವ ಹೆಚ್ಚಿನ ಕವಿಗಳು ಪ್ರಾಚೀನ, ನವೋದಯ, ನವ್ಯ, ಬಂಡಾಯ, ಇಲ್ಲವೆ ಇಂಗ್ಲಿಷ್ ಕಾವ್ಯ ಪರಂಪರೆಯ ಎರವಲು ತಂದ ಎರಕದಲ್ಲೇ ಇನ್ನೂ ಒದ್ದಾಡುತ್ತಿದ್ದಾರೆ. ಆದರೆ ಇಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರು ಅವರದೇ ಆದ ಸಿದ್ಧಾಂತ, ಚೌಕಟ್ಟು ಹಾಕಿಕೊಂಡಂತಿದೆ. ಅವರ ಕಾವ್ಯದ ಮಾದರಿಗಳನ್ನು ಓದಿದಾಗ ಅವರದೆ ಪಡಿಯಚ್ಚು ಇದೆ ಎಂದೆನಿಸುತ್ತದೆ. ಇವತ್ತಿನ ಹೊಸ ಕವಿಗಳು ಎರವಲು ತಂದ ಚೌಕಟ್ಟು ಎಲ್ಲ ಕವನಗಳಲ್ಲಿ ಎರವಲು ತಂದ ಚೌಕಟ್ಟುಗಳಲ್ಲಿ ಬರೆಯುತ್ತಿರುವುದರಿಂದಲೇ ಕನ್ನಡ ಕಾವ್ಯ ಮೊದಲಿನ ಶಕ್ತಿ, ಓಟ, ಆರ್ಭಟ ಕಳೆದುಕೊಂಡಿದೆ ಎಂದು ಹೇಳಬಹುದು. ಇಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರು ಇದಕ್ಕೆ ಹೊರತಾಗಿರುವುದೇ ಸಂತಸದ ಸಂಗತಿ.

 ‘ಪೂಜೆ ಮಾಡದ ಊದಿನ ಕಡ್ಡಿ’, ‘ನೀರಿನ ಬಲೂನುಗಳು’, ‘ಚಿಟ್ಟೆ ಬೈಯ್ಯಲಿಲ್ಲ’, ‘ಮಂಜುಗಡ್ಡೆಗೆ ಬಿಸಿ ನೀರಿನ ಸ್ನಾನ’, ‘ಸುಮ್ಮನೆ ಸೂಟಿ ಮಾಡಿದ ಸೂರ್ಯ’, ‘ಮೀನಿಗೆ ಸ್ನಾನ ಮಾಡಿಸುವಾತ’ ‘ಹುಡುಕಬೇಕಾಗಿದೆ, ರಾಮನನ್ನು’ ಎಂಬಂತಹ ತಲೆಬರಹದ ಕವನಗಳಲ್ಲಿ ಸಿದ್ಧಾರೂಢ ಕಟ್ಟಿಮನಿ ಅವರ ಕಾವ್ಯದ ಶಕ್ತಿ ಅಡಕವಾಗಿದೆ. ಕಾವ್ಯಕನ್ನಿಕೆ ಅವರಿಗೆ ಒಲಿದಿದ್ದಾಳೆ ಎಂಬುದು ರುಜುವಾತಾಗುತ್ತದೆ. ಒಟ್ಟಿನಲ್ಲಿ ಅವರ ಕಾವ್ಯದಲ್ಲಿ ಹಾಸ್ಯವಿದೆ. ಸರಸವಿದೆ. ಸೊಬಗಿದೆ. ಸಲ್ಲಾಪವಿದೆ. ಕಳಕಳಿ ಇದೆ. ಚಳವಳಿ ಇದೆ. ಭಾವವಿದೆ. ಭಾವದ ಕಾವು ಇದೆ. ಹೊಸ ಧೋರಣೆ, ಹೊಸ ಚೌಕಟ್ಟು ಇಲ್ಲದಿದ್ದರೆ ಅದು ಆತ್ಮಹತ್ಯೆಯ ಹಾದಿ ಹಿಡಿಯುತ್ತದೆ ಎಂದು ಹೇಳುವ ಕೆಲ ವಿಮರ್ಶಕರಿಗೆ ಸಿದ್ಧಾರೂಢ ಕಟ್ಟಿಮನಿ ಅವರ ಕವಿತೆಗಳು ಉತ್ತರ ಹೇಳಬಲ್ಲವು ಎಂದು ನನಗನಿಸುತ್ತದೆ. ‘ಬೊಟ್ಟು ಬೆಟ್ಟವಾಗಿ ಬೆಳೆಯಲಿ’ ಎಂಬ ಜನಪದರ ಮಾತಿನಂತೆ ಅವರ ಕಾವ್ಯದ ಮಾದರಿ ಬೆಟ್ಟದಂತಾಗಲಿ ಎಂಬ ಹಾರೈಕೆ.
ಗುರು ಪುಸ್ತಕ, ವಿಜಯಪುರ ಇವರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 9611758705ನ್ನು ಸಂಪರ್ಕಿಸಬಹುದು

Writer - ಶಂಕರ ಬೈಚಬಾಳ

contributor

Editor - ಶಂಕರ ಬೈಚಬಾಳ

contributor

Similar News