ಸಿರಿಧಾನ್ಯದ ಮಹತ್ವವನ್ನು ಸಾರುವ ಕೃತಿ ಕೊರಲೆ

Update: 2016-08-07 17:31 GMT

ಭಾರತದ ಕೃಷಿ ರಂಗ ದೇಶಿ ಜ್ಞಾನಾಧಾರಿತವಾದದ್ದು.ಇದರಿಂದಾಗಿ ನಮ್ಮ ಪೂರ್ವಿಕರಿಗೆ ಪ್ರಾದೇಶಿಕತೆಗೆ ಅನುಗುಣವಾಗಿ ಆಯಾ ಪ್ರದೇಶದ ಮಣ್ಣು, ಹವಾಗುಣ ಮತ್ತು ಮಳೆಯ ಪ್ರಮಾಣವನ್ನು ಆಧರಿಸಿ ಕೃಷಿ ಮಾಡುವ ವಿಧಾನ ಗೊತ್ತಿತ್ತು. ಇಂತಹ ಜ್ಞಾನ ಶಿಸ್ತಿನ ಆಧಾರದ ಮೇಲೆ ಅವರು ಬೆಳೆಯುತ್ತಿದ್ದ ಬಹುಬಗೆಯ ಆಹಾರ ಧಾನ್ಯಗಳು ಆಧುನಿಕ ಕೃಷಿ ತಂತ್ರಜ್ಞಾನದಿಂದಾಗಿ ಅವನತಿಯ ಹಾದಿಯನ್ನು ಹಿಡಿದಿವೆ. ರೋಗ ನಿರೋಧಕ ಮತ್ತು ಬರ ನಿರೋಧಕ ದೇಶಿ ಬಿತ್ತನೆ ಬೀಜಗಳನ್ನು ಇಂದಿನ ಹೈಬ್ರಿಡ್ ಮತ್ತು ಕುಲಾಂತರಿ ತಳಿಗಳ ನಡುವೆ ಉಳಿಸಿಕೊಂಡು ಹೋಗುವುದು ರೈತರಿಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ.
 ಇಂತಹ ನೆಲಮೂಲ ಸಂಸ್ಕೃತಿಯ ಹುಡುಕಾಟದಲ್ಲಿ ನಮ್ಮ ಕರ್ನಾಟಕದಲ್ಲಿ ಅನೇಕ ಮನಸ್ಸುಗಳು ತೊಡಗಿಸಿಕೊಂಡು, ನೆಲ-ಜಲ-ದೇಶಿ ಬಿತ್ತನೆ ಬೀಜಗಳು, ಪರಿಸರ ಸಂರಕ್ಷಣೆ ಹೀಗೆ ಅನೇಕ ವಿಷಯಗಳನ್ನು ಭೂತಕಾಲದ ಗರ್ಭದಿಂದ ಹೊರತೆಗೆದು, ಅವುಗಳನ್ನು ಈ ನಾಡಿಗೆ ಹಂಚುವ ಕ್ರಿಯೆಯಲ್ಲಿ ಸಕ್ರಿಯವಾಗಿವೆ. ಶ್ರೀ ಪಡ್ರೆ ಮತ್ತು ನಾಗೇಶ್ ಹೆಗ್ಡೆಯಂತವರು ಇಂತಹ ಮಹತ್ವದ ವಿಷಯದಲ್ಲಿ ನಾಡಿನ ಅನೇಕ ಯುವಕರ ಎದೆಯೊಳಕ್ಕೆ ಬಿತ್ತಿದ ಬೀಜ ಈಗ ಫಲ ನೀಡುತ್ತಿದೆ. ಶಿವಾನಂದ ಕಳವೆ, ಜಿ.ಕೃಷ್ಣಪ್ರಸಾದ್,ಮಲ್ಲಿಕಾರ್ಜುನ ಹೊಸಪಾಳ್ಯ, ಗಾಣದಾಳು ಶ್ರೀಕಂಠ,ಆನಂದತೀರ್ಥ ಪ್ಯಾಟಿ, ಹರ್ಷವರ್ಧನ ಶೀಲವಂತ,ಗಣೇಶ ಹೆಗ್ಡೆ,ಪೂರ್ಣಪ್ರಜ್ಞ ಬೇಳೂರು,ಅನಿತಾ ಪೈಲೂರು,ವಿನೋದ್ ಕುಮಾರ್ ಬಿ.ನಾಯ್ಕ್ ಹೀಗೆ ಅನೇಕ ಪ್ರತಿಭಾವಂತರನ್ನು ಹೆಸರಿಸಬಹುದು. ಇವರೆಲ್ಲರೂ ಈ ನಾಡಿನ ದೇಶಿ ಪ್ರಜ್ಞೆಯ ಫಸಲುಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು. ಇಪ್ಪತ್ತೆಂಟು ಅಥವಾ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ನಾಗೇಶ್ ಹೆಗ್ಡೆಯವರು ಸುಧಾ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ಭಾರತದಲ್ಲಿದ್ದ ಅಸಂಖ್ಯಾತ ಭತ್ತದ ತಳಿಗಳ ಮಹತ್ವ ಮತ್ತು ಅವುಗಳ ನಾಶ ಕುರಿತು ಮುಖಪುಟ ಲೇಖನವೊಂದನ್ನು ಬರೆದಿದ್ದರು.

  ಇಂದಿನ ದಿನಗಳಲ್ಲಿ ಕೃಷಿಯನ್ನು ನಂಬಿದ ರೈತರು ದಿಕ್ಕಾಪಾಲಾಗಿದ್ದಾರೆ. ಕೃಷಿಗೆ ಬೆನ್ನೆಲುಬಾಗಿದ್ದ ಜಾನುವಾರುಗಳು ಮಾಂಸದ ಮಾರುಕಟ್ಟೆಯ ಸರಕುಗಳಾಗಿವೆ. ಭೂಮಿಯಿಂದ ಹಿಡಿದು ನೈಸರ್ಗಿಕವಾಗಿ ದೊರೆಯುವ ನೀರು ಮತ್ತು ಗಾಳಿಯನ್ನು ಮಾರುಕಟ್ಟೆಯ ಸರಕುಗಳನ್ನಾಗಿಸಿದ ಆಧುನಿಕ ಭಸ್ಮಾಸುರರಾಗಿ ನಾವು ಪರಿವರ್ತನೆಗೊಂಡಿದ್ದ್ದೇವೆ. ಇಂತಹ ಸಂಕಷ್ಟದ ದಿನಗಳಲ್ಲಿ ನಮ್ಮ ರೈತರು ಮರೆತು ಹೋಗಿರುವ ಜ್ಞಾನ ಶಿಸ್ತುಗಳನ್ನು ಮತ್ತೆ ಮುನ್ನೆಲೆಗೆ ತರುವುದು ನಮ್ಮ ಕರ್ತವ್ಯವಾಗಿದೆ.ಈ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ದೇಶಿ ಬಿತ್ತನೆ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರಿನ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಕೊರಲೆ ಎಂಬ ಸಿರಿಧಾನ್ಯದ ಬೆಳೆಯ ಮಹತ್ವವನ್ನು ಪರಿಚಯಿಸುವ ಈ ಕೃತಿ ಬರದ ನಾಡಿಗಾಗಿ ಬರೆದ ಸಂವಿಧಾನ ಕೃತಿಯಂತಿದೆ.
ಕೊರಲೆ ಎಂಬ ಕಿರುಧಾನ್ಯದ ಬೆಳೆಯನ್ನು ಬೆಳೆಯುವ ವಿಧಾನದಿಂದ ಹಿಡಿದು,ಇದನ್ನು ಸಂಸ್ಕರಿಸುವ ವಿಧಾನ,ಈ ಧಾನ್ಯದಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳು ಮತ್ತು ಅವುಗಳಲ್ಲಿರುವ ವಿಟಮಿನ್ ಮತ್ತು ಪ್ರೊಟೀನ್ ವಿವರಗಳನ್ನು ಸವಿವರವಾಗಿ ವಿವರಿಸಲಾಗಿದೆ.

 ಸಾಮಾನ್ಯವಾಗಿ ನವಣೆ, ರಾಗಿ, ಹಾರಕ, ಕೊರಲೆ ಹಾಗೂ ಕೆಲವು ಭತ್ತದ ತಳಿಗಳು ಮತ್ತು ದೇಸಿ ನೆಲಗಡಲೆ ಹೀಗೆ ಅನೇಕ ಕಿರುಧಾನ್ಯಗಳು ಹೆಚ್ಚು ಮಳೆಯಾಗದ ಬರಪೀಡಿತ ಪ್ರದೇಶಗಳಲ್ಲಿ ಬೆಳೆಯಬಹುದಾದ ಬೆಳೆಗಳಾಗಿದ್ದು 6 ರಿಂದ 9 ದಿನಗಳ ಅವಧಿಯಲ್ಲಿ ಫಸಲು ನೀಡುವ ಬೆಳೆಗಳಾಗಿವೆ.ಈ ಕಾರಣದಿಂದಾಗಿ ಮೂರು ದಶಕಗಳ ಹಿಂದೆ ಕಡಿಮೆ ಮಳೆ ಬೀಳುವ ಹಾಗೂ ಮಳೆಯಾಶ್ರಿತ ಬೆಳೆಗಳ ಜಿಲ್ಲೆಗಳಾದ ತುಮಕೂರು,ಕೋಲಾರ,ಚಿತ್ರದುರ್ಗ,ಗಡಿಭಾಗದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳ ರೈತರು ಈ ಬೆಳೆಗಳನ್ನು ಆಶ್ರಯಿಸಿದ್ದರು.ಹಾಗಾಗಿ ಲೇಖಕರು ಈ ಕೃತಿಯಲ್ಲಿ ರೈತರ ಅನುಭವವನ್ನು ದಾಖಲಿಸಿರುವುದು ವಿಶೇಷವಾಗಿದೆ.

ಅನಾವೃಷ್ಟಿಯ ಸಮಯದಲ್ಲಿ ರೈತರು ಮೇವಿನ ಕೊರತೆಯಿಂದ ತಮ್ಮ ಜಾನುವಾರುಗಳನ್ನು ಸಿಕ್ಕಿದ ಬೆಲೆಗೆ ಕಟುಕರಿಗೆ ಮಾರಾಟ ಮಾಡಿ ಕಣ್ಣೀರು ಹಾಕುವುದುಂಟು. ಆದರೆ,ಕೊರಲೆ ಎಂಬ ಕಿರುಧಾನ್ಯದ ಬೆಳೆಯು ಹುಲುಸಾಗಿ ಬೆಳೆಯುವುದರಿಂದ ಇದನ್ನು ದನಕರುಗಳಿಗೆ ಮೇವಾಗಿ ಬೆಳೆಯಬಹುದು ಎಂಬುದನ್ನು ವಿವರಿಸಿರುವ ಮಲ್ಲಿಕಾರ್ಜುನ ಹೊಸಪಾಳ್ಯ,ಈ ಬೆಳೆ ಹುಣಸೆ ಮರದಂತಹ ದಟ್ಟ ನೆರಳಿನ ಕೆಳಗೂ ಬೆಳೆಯಬಹುದೆಂಬುದಕ್ಕೆ ಚಿತ್ರಗಳ ಸಮೇತ ಸಾಕ್ಷಿ ಒದಗಿಸಿದ್ದಾರೆ.

ಕೊರಲೆ ಕಿರು ಧಾನ್ಯದ ಬೆಳೆಯ ಮತ್ತೊಂದು ವಿಶೇಷವೆಂದರೆ,ಇದನ್ನು ಕೇವಲ ಮಳೆಯಾಶ್ರಿತ ಭೂಮಿ ಮಾತ್ರವಲ್ಲದೆ, ಕರ್ನಾಟಕದ ಎಲ್ಲ ಪ್ರದೇಶಗಳಲ್ಲೂ ಬೆಳೆಯಬಹುದಾಗಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರ ಅತಿ ದೊಡ್ಡ ಸಮಸ್ಯೆಯೆಂದರೆ, ಅಳಿಲುಗಳ ಕಾಟ.ಆದರೆ, ತೊಟಗಳಲ್ಲಿ ಮರಗಳ ನಡುವೆ ಕೊರಲೆಯನ್ನು ಬೆಳೆಯುವುದರಿಂದ ಅಳಿಲುಗಳ ಆಹಾರ ಸಮಸ್ಯೆ ನೀಗುವುದರ ಜೊತೆಗೆ ಅಡಿಕೆ, ತೆಂಗು ಫಸಲುಗಳನ್ನು ಉಳಿಸಿಕೊಳ್ಳಬಹುದು ಎಂಬುದರ ಕುರಿತು ರೈತರ ಅನುಭವವನ್ನು ಸಹ ಲೇಖಕರು ದಾಖಲಿಸಿದ್ದಾರೆ. ಪ್ರತಿ ಅಧ್ಯಾಯದಲ್ಲೂ ಈ ಧಾನ್ಯವನ್ನು ಪರಿಚಯಿಸುವಾಗ ಆವಶ್ಯಕತೆಗೆ ತಕ್ಕಂತೆ ಸೂಕ್ತ ಚಿತ್ರಗಳನ್ನು ಬಳಸಿಕೊಂಡಿರುವುದು ಕೃತಿಯ ಘನತೆಯನ್ನು ಹೆಚ್ಚಿಸಿದೆ.

  ಇದೇ ಮಾದರಿಯಲ್ಲಿ ದೇಶಿ ಬೆಳೆಗಳು ಮತ್ತು ಅವುಗಳನ್ನು ಹೆಚ್ಚು ಖರ್ಚಿಲ್ಲದೆ ಬೆಳೆಯಬಹುದಾದ ವಿವರಗಳನ್ನು ಒಳಗೊಂಡ ಕೃತಿಗಳು ಕನ್ನಡದ ರೈತರಿಗೆ ಅಗತ್ಯವಾಗಿವೆ.ಈ ಪುಟ್ಟ ಕೃತಿಯ ಬೆಲೆಯು ಕೇವಲ 6 ರೂಪಾಯಿಗಳಾಗಿದ್ದು ಪ್ರತಿಯೊಬ್ಬ ರೈತರ ಬಳಿ ಇರಬೇಕಾದ ಮಹತ್ವದ ಕೃತಿ ಎಂದು ಹೇಳಬಹುದು. ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಜಿ.ಕೃಷ್ಣಪ್ರಸಾದ್ ನಿಜಕ್ಕೂ ಅಭಿನಂದಾರ್ಹರು.

Writer - ಜಗದೀಶ್ ಕೊಪ್ಪ

contributor

Editor - ಜಗದೀಶ್ ಕೊಪ್ಪ

contributor

Similar News