ಮನೆ ಎಂಬ ಶಿಕ್ಷಣ ಸಂಸ್ಥೆ

Update: 2016-08-08 07:23 GMT

ಮಗುವಿನ ಪ್ರತಿಭೆ, ಅದರ ಮನಸ್ಥಿತಿಯ, ಭಾವ ಸೂಕ್ಷ್ಮತೆಗಳನ್ನು ಘಾಸಿಗೊಳದಿರಲು, ಅನವಶ್ಯಕ ಅನ್ಯ ಪ್ರಭಾವಗಳಿಂದ ಮಗುವಿನ ಸ್ವಂತಿಕೆ ಹಾಳಾಗದಿರಲು, ಮಗುವಿನ ವ್ಯಕ್ತಿತ್ವವನ್ನು ಅಪೇಕ್ಷಿತ ರೀತಿಯಲ್ಲಿ ಅಥವಾ ಅದರದೇ ರೀತಿಯಲ್ಲಿ ರೂಪುಗೊಳಿಸಲು ಇರುವ ವಿಧಾನವೇ ಹೋಂ ಸ್ಕೂಲಿಂಗ್.

   ಮನೆಗಲಿಕೆಯ ಪೋಷಕರಿಗೆ ಇರಬೇಕಾದ ಅರ್ಹತೆಗಳು

1.ವಿದ್ಯಾವಂತರಾಗಿರಬೇಕು. ಸಮಕಾಲಿನ ಶಿಕ್ಷಣದ ವಿಸ್ತಾರ ಮತ್ತು ವ್ಯಾಪ್ತಿಗಳ ಬಗ್ಗೆ ಅರಿವಿರಬೇಕು. ಕಾಲ ಕಾಲಕ್ಕೆ ಅಪ್‌ಡೇಟ್ ಆಗುವಂತಹ ಸಲಿಲತೆಯನ್ನು ಹೊಂದಿರಬೇಕು. ನಮ್ಮ ಕಾಲದಲ್ಲಿ ಅಥವಾ ನಾವು ಚಿಕ್ಕವರಿದ್ದಾಗ, ನಮ್ಮ ಟೀಚರ್ ಇಂಥಾ ಟಾರ್ಚರ್ ಕೊಡ್ತಿದ್ದರು ಅಂತೆಲ್ಲಾ ಭೂತಬಾಧೆಗೆ ಒಳಗಾದರೆ, ಪಾಪದ ಮಕ್ಕಳು ಪ್ರೇತಬಾಧೆಗೆ ಒಳಗಾಗುತ್ತಾರಷ್ಟೇ.

2.ಮನೆಯಲ್ಲಿ ಒಂದು ಪರ್ಸನಲ್ ಲೈಬ್ರರಿ, ಕಲಿಕೆಗೆ ಸ್ಥಳ, ಕಲಿಕೆಯ ಸಾಮಗ್ರಿಗಳು, ಬೋಧನಾ ಸಾಮಗ್ರಿಗಳು; ಹೀಗೆ ಅಗತ್ಯವಿರುವುದನ್ನೆಲ್ಲಾ ಇರಿಸಿಕೊಂಡು ಅವುಗಳ ಬಳಕೆ ಮಾಡುವ ಚಾತುರ್ಯವನ್ನು ಹೊಂದಿರಬೇಕು.

3.ತಮ್ಮ ಆಸಕ್ತಿಯನ್ನು ಹೇರಲು ಹೋಗಬಾರದು. ತಮಗೆ ನಿರಾಸಕ್ತಿ ಎಂದು ಮಕ್ಕಳನ್ನು ಹಿಂದೆಳೆಯದಷ್ಟು ಪ್ರಜ್ಞಾವಂತರಾಗಿರಬೇಕು. 

4.ಪೋಷಕರು ತಮ್ಮ ತಮ್ಮಲ್ಲಿ ನೀನು ಹೇಳಿಕೊಡು, ನೀನು ಸಮಯ ಕೊಡು. ನನಗೆ ಇನ್ಯಾವುದೋ ಬೇರೆ ತುರ್ತಾದ ಕೆಲಸವಿದೆ ಎಂದೆಲ್ಲಾ ಜಗಳ ಕಾಯ್ದುಕೊಂಡು ಕುಳಿತುಕೊಳ್ಳುವಂತಹ ರೇಜಿಗೆಯವರಾಗಿರಬಾರದು. ಪ್ರಾರಂಭದಲ್ಲಿ ಉತ್ಸಾಹದಿಂದ ಪ್ರಾರಂಭಿಸಿ, ನಂತರ ಇನ್ನೊಬ್ಬರ ಹೆಗಲಿಗೆ ಜವಾಬ್ದಾರಿಯನ್ನು ಹೊರೆಸಿ ತಪ್ಪಿಸಿಕೊಳ್ಳುವಂತಹ ಆರಂಭಶೂರರಾಗಿರಬಾರದು.

5.ಸಮಯ ಮತ್ತು ಶ್ರಮ ಇವೆರಡನ್ನೂ ಶ್ರದ್ಧೆಯಿಂದ ನೀಡುವವರಾಗಿರಬೇಕು.

6.ಮಗುವಿನ ಶೈಕ್ಷಣಿಕ ಹಂತಕ್ಕೆ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ತಕ್ಕಂತಹ ಪರಿಕರಗಳನ್ನು ಮತ್ತು ಪಠ್ಯಗಳನ್ನು ಒದಗಿಸಿಕೊಳ್ಳಲು ಅಧ್ಯಯನಶೀಲರಾಗಿರಬೇಕು. ಅಂತರ್ಜಾಲ, ವಿವಿಧ ಆಕರಗಳನ್ನು ಮಗುವಿನೊಟ್ಟಿಗೆ ಶೋಧಿಸುತ್ತಿದ್ದರೆ ಮುಂದೆ ಅದೇ ಸ್ವಾವಲಂಭಿಯಾಗಿ ಅಧ್ಯಯನಶೀಲ ವಿದ್ಯಾರ್ಥಿಯಾಗುತ್ತದೆ.

7.ಒಂದು ವೇಳೆ ಪೋಷಕರ ಬೋಧನೆಯಲ್ಲಿ ಅಥವಾ ಮಗುವಿನ ಕಲಿಕೆಯಲ್ಲಿ ಹಿನ್ನಡೆ ಉಂಟಾದರೆ ಅಧೀರರಾಗಬಾರದು. ಮತ್ತೆ ಮತ್ತೆ ನೆನಪಿಸಿಕೊಳ್ಳಲೇ ಬೇಕಾದ ಅಂಶವೆಂದರೆ ಕಲಿಕೆ ಮತ್ತು ಶಿಕ್ಷಣವೆಂದರೆ ಇಲಾಖೆ ರೂಪಿಸಿರುವ ಪಠ್ಯಕ್ರಮ ಮಾತ್ರವೇ ಅಲ್ಲ ಎಂಬುದು. ನಮ್ಮ ರಾಜ್ಯದಲ್ಲಿ ಮನೆಗಲಿಕೆಯವರ ಸಂಖ್ಯೆ ಬಹಳ ಕ್ಷೀಣ ಸ್ಥಿತಿಯಲ್ಲಿರುವುದರಿಂದ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳಿಂದ ಹಿಡಿದು ನಿಮ್ಮ ಮನೆಯವರೇ ನಿಮ್ಮ ಮೇಲೆ ಇಲಿ ಮತ್ತು ಕಪ್ಪೆಗಳನ್ನಿರಲಿ, ಹಾವುಗಳನ್ನೇ ಎಸೆಯುತ್ತಾರೆ. ಖಂಡಿತ ಆಗಲಿ, ಮುಂದುವರಿ ಎನ್ನುವವರಿರುವುದಿಲ್ಲ. ಆದರೆ ಹೆದರುವ ಅಗತ್ಯವಿಲ್ಲ.

ಮನೆಗಲಿಕೆಯ ಪಾಠ ಯೋಜನೆಗಳ ಬಗ್ಗೆ, ಶಿಕ್ಷಣ ಕ್ಷೇತ್ರದಲ್ಲಿರುವ ನಮ್ಮ ಸ್ನೇಹಿತರು ಮನೆಗಲಿಕೆಯ ಬಗ್ಗೆ ಏನು ಹೇಳುತ್ತಾರೆಂದು ಮುಂದಿನ ವಾರ ನೋಡೋಣ.

ಮನೆಗಲಿಕೆಯಲ್ಲಿ ಕಲಿಕೆ ಎಂದರೇನು?

ಶಾಲೆಯಲ್ಲಿನ ಸಾಂಪ್ರದಾಯಕ ಶಿಕ್ಷಣ ಪದ್ಧತಿಯನ್ನು ನಿರಾಕರಿಸಿ ಮಗುವನ್ನು ಮನೆಯಲ್ಲಿ ಇರಿಸಿಕೊಂಡಾಕ್ಷಣವೇ ಪೋಷಕರ ಪಾಲಿಗೆ ಕಲಿಕೆಯ ವ್ಯಾಖ್ಯಾನ ಬಹಳಷ್ಟು ವಿಸ್ತರಿಸಿಬಿಡುತ್ತದೆ. ಮಗುವು ಓದುವುದು, ಬರೆಯುವುದು, ಲೆಕ್ಕ ಮಾಡುವುದು; ಹೀಗೆ ಮೂಲಭೂತ ಅಗತ್ಯಗಳನ್ನು ಕಲಿಸುತ್ತಾ ಪರಿಸರ, ಕೌಟುಂಬಿಕ ಶಿಸ್ತು, ಕಲೆ ಮತ್ತು ಕ್ರೀಡೆಗಳಲ್ಲಿ ಒಳಗೊಳ್ಳುವಿಕೆ; ಹೀಗೆ ಹತ್ತು ಹಲವು ವಿಷಯಗಳು ಮಗುವಿಗೆ ಪರಿಚಯಿಸುವುದು ಮತ್ತು ಆಸಕ್ತಿಯನ್ನು ಹೊಂದಿದರೆ ಕಲಿಯಲು ಕಳುಹಿಸುವುದು ಅಥವಾ ತಾವೇ ಕಲಿಸುವ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಮಗುವು ಬೆಳೆದಂತೆಲ್ಲಾ ಕಲಿಕೆಯ ವಿಷಯಗಳನ್ನು ವಿಸ್ತರಿಸುವುದು ಮತ್ತು ಗಾಢಗೊಳಿಸುವುದರ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಹೊಸ ಹೊಸ ರೀತಿಯ ಕಲಿಕೆಯ ವಿಧಾನಗಳು ಅಲ್ಲಿಂದಲ್ಲೇ ಹುಟ್ಟಬಹುದು. ಪೋಷಕರು ಹೆಚ್ಚು ಹೆಚ್ಚು ಕ್ರಿಯಾಶೀಲರೂ, ಸೃಜನಶೀಲರೂ ಆಗುತ್ತಿದ್ದಂತೆ ಕಲಿಕೆಯು ಪರಿಣಾಮಕಾರಿಯಾಗಿರುತ್ತದೆ. ನೆನಪಿರಲಿ, ಶಿಕ್ಷಕ ಮತ್ತು ಪೋಷಕ ನಾವೇ ಆಗಿರುವುದರಿಂದ ನಾವೇ ಅವರಿಗೆ ಸಂಪೂರ್ಣ ಮಾದರಿ ಮತ್ತು ಮಾರ್ಗದರ್ಶನವಾಗಿರುತ್ತೇವೆ. ಮಗುವಿನ ಯಾವುದೇ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ನೈತಿಕ ಪತನಕ್ಕೆ ಯಾರನ್ನೂ ಹೊಣೆ ಮಾಡಲಾಗುವುದಿಲ್ಲ. ಇನ್ನೊಬ್ಬರನ್ನು ದೂರಿ ಕೈ ತೊಳೆದುಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ಶಿಕ್ಷಕರೇ ಪೋಷಕರಾದಾಗ ಬಹಳ ಮುಖ್ಯವಾಗಿ ಅಳವಡಿಸಿಕೊಳ್ಳಬೇಕಾದ ಗುಣಗಳೆಂದರೆ ಆತ್ಮಾವಲೋಕನ, ಸಹನೆ ಮತ್ತು ಅಹಂಕಾರ ರಹಿತವಾಗಿ ಮುಕ್ತ ಚಿಂತನೆಗೆ ತೆರೆದುಕೊಂಡಿರುವ ಮನಸ್ಥಿತಿ. ನಮ್ಮ ಗುಣ, ದೋಷಗಳು, ನಮ್ಮ ನಡವಳಿಕೆಗಳು, ಇತಿ ಮಿತಿ ಗಳು ನಮಗೆ ಸಂಪೂರ್ಣ ಅರಿವಿದ್ದರೆ ಮಾತ್ರ ಮಗುವಿಗೆ ನಮ್ಮ ತೋರು ಬೆರಳನ್ನು ನೀಡಲು ಯೋಗ್ಯತೆಯನ್ನು ಹೊಂದಿರುತ್ತೇವೆ. ನಮ್ಮದೇ ನಮಗೆ ಸರಿ ಎಂಬ ಧೋರಣೆ ಇತ್ತೋ, ಅವರು ಹೋಂ ಸ್ಕೂಲ್ ಮಾಡುವ ಅರ್ಹತೆಯನ್ನು ಕಳೆದುಕೊಂಡುಬಿಡುತ್ತಾರೆ.

ಮನೆಗಲಿಕೆಯ ಕುಟುಂಬಗಳು

ಮನೆಗಲಿಕೆಯಲ್ಲಿ ತೊಡಗಿಕೊಳ್ಳಲು ನಾಲ್ಕೈದು ಕುಟುಂಬಗಳು ಮಾತಾಡಿ ಕೊಂಡು ನಂತರ ಹೋಂ ಸ್ಕೂಲ್ ಮಾಡುವುದು ಒಂದು ಉತ್ತಮ ಮಾದರಿ. ಒಬ್ಬರಿಗೊಬ್ಬರು ನೈತಿಕ ಸ್ಥೈರ್ಯ ಮಾತ್ರವಲ್ಲ. ಶೈಕ್ಷಣಿಕವಾಗಿ ಕಲಿಕೆಯ ವಿಷಯದಲ್ಲೂ ಒಬ್ಬರಿಗೊಬ್ಬರು ನೆರವಾಗಬಹುದು. ಯಾವುದೇ ಸಮಯದಲ್ಲಿ ಯಾವುದೇ ಕುಟುಂಬಕ್ಕೆ ಕಲಿಕೆಯ ವಿಷಯದಲ್ಲಿ ತೊಂದರೆಯಾದರೆ, ಒಬ್ಬರಿಗೊಬ್ಬರು ಮಗುವಿಗೆ ಶಿಕ್ಷಣ ವಂಚಿತವಾಗದಿರುವಂತೆ ನೋಡಿಕೊಳ್ಳಲು ಸಹಕಾರ ನೀಡಬಹುದು. ಈ ಕುಟುಂಬಗಳ ಐಕ್ಯತೆಯೇ ಒಂದು ಸಾಂಸ್ಥಿಕ ರೂಪವನ್ನು ತಾಳುತ್ತದೆ. ಅವರ ಗುಂಪಿಗೆ ಒಂದು ಹೆಸರನ್ನೂ ಕೂಡ ಇಟ್ಟುಕೊಳ್ಳಬಹುದು. ಇಂತಹ ಆತ್ಮೀಯ ಮತ್ತು ಆಪ್ತ ಕುಟುಂಬದ ಗುಂಪುಗಳು ಹೋಂ ಸ್ಕೂಲ್‌ಗೆ ನಿರ್ಧಾರ ಮಾಡಬಹುದು. ಕಲಿಕೆಯ ಕೆಲವು ವಿಷಯಗಳ ಜವಾಬ್ದಾರಿಗಳನ್ನೂ ಹಂಚಿಕೊಳ್ಳಬಹುದು. ರಾಜ್ಯದ ಶಿಕ್ಷಣ ಇಲಾಖೆಯು ರೂಪಿಸಿರುವ ಶಿಕ್ಷಣ ಕ್ರಮವು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಸೂಕ್ತ.

ಶಿಕ್ಷಣ ಇಲಾಖೆಯು ಕೆಲವು ದೃಢೀಕರಣಗಳನ್ನು ಬಯಸಬಹುದು. ಉದಾಹರಣೆಗೆ: ಮಗುವಿನ ಹಾಜರಾತಿ. ಪಠ್ಯಕ್ರಮದ ಅಳವಡಿಕೆ. ಯಾವ ಯಾವ ವಿಷಯಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು. ಮಗುವಿಗೆ ಹೇಳಿಕೊಡುವವರ ವಿದ್ಯಾರ್ಹತೆಯನ್ನು ಪ್ರಶ್ನಿಸುತ್ತಾರೆ. ಸಮೀಪದಲ್ಲಿರುವ ಯಾವುದಾದರೊಂದು ಶಾಲೆಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಬಹುದು. ಮಗುವಿನ ಕಲಿಕೆಯ ಮಾಪನ ಎಂತದ್ದು ಅಥವಾ ಕಲಿತಿರುವುದನ್ನು ಪರೀಕ್ಷಿಸುವುದಕ್ಕೆ ಸೂಚನೆ ಗಳನ್ನು ನೀಡಬಹುದು. ಹೀಗೆ ಯಾವುದೇ ಶಿಕ್ಷಣ ಇಲಾಖೆಯು ಅಳತೆಗೋಲು ಗಳನ್ನು ಮುಂದಿಟ್ಟರೂ ಅವರಿಗೆ ಮನೆಗಲಿಕೆಯನ್ನು ನಿರಾಕರಿಸುವ ಹಕ್ಕಿಲ್ಲ.

ಮನೆಗಲಿಕೆಗೆ ಪ್ರಮಾಣ ಪತ್ರವಿದೆಯೇ?

ಮನೆಗಲಿಕೆಯೇ ಮಗುವಿನ ಶಿಕ್ಷಣ ಪದ್ಧತಿ ಎಂದಕೂಡಲೇ ಮೊಟ್ಟ ಮೊದಲನೆಯದಾಗಿ ಹಲವರಿಗೆ ಎದುರಾಗುವ ಪ್ರಶ್ನೆಯೆಂದರೆ ಮಗುವಿಗೆ ಮುಂದೆ ಉನ್ನತ ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಕ್ಕಾಗಿ ನೋಡುವ ಸಂದರ್ಭದಲ್ಲಿ ಪ್ರಮಾಣಪತ್ರಗಳು ಬೇಕಲ್ಲಾ ಅದಕ್ಕೇನು ಮಾಡುವುದು? ಪ್ರಮಾಣ ಪತ್ರಗಳು ಬೇಕಾಗಿರುವುದು ಆರನೆಯ ತರಗತಿಯದಲ್ಲ. ಎಂಟು ಅಥವಾ ಒಂಭತ್ತನೆಯ ತರಗತಿಯದಲ್ಲ. ಹಾಗೂ ಪಬ್ಲಿಕ್ ಪರೀಕ್ಷೆ ಎದುರಿಸು ವಾಗಿನ ಮಕ್ಕಳ ಉತ್ತರ ಪತ್ರಿಕೆಗಳನ್ನು ವೌಲ್ಯ ಮಾಪನ ಮಾಡುವವರು ಮಗುವು ಯಾವ ಶಾಲೆಯದೆಂದು ನೋಡುವುದಿಲ್ಲ. ಹಾಗೆಯೇ, ಪಬ್ಲಿಕ್ ಪರೀಕ್ಷೆಗೆ ಕುಳಿತುಕೊಳ್ಳುವ ಮಕ್ಕಳು ಖಾಸಗಿಯಾಗಿಯೂ ಕೂಡ ದಾಖಲು ಮಾಡಿಕೊಳ್ಳುವ ಅವಕಾಶಗಳಿವೆ. ಅಲ್ಲದೇ ಶಾಲೆಗಳೂ ಕೂಡ ಪರೀಕ್ಷೆ ಬರೆಯಲು ದತ್ತು ಸ್ವೀಕರಿಸಬಹುದು ಅಂದರೆ ಅಫಿಲಿಯೇಟ್ ಆಗುವ ಸೌಲಭ್ಯಗಳಿವೆ. ಕಲಿತಿರುವ ಮಗುವು ಪರೀಕ್ಷೆಯನ್ನು ಎದುರಿಸಲು ಸರಿಯಾದ ಕಾಲಕ್ಕೆ ಅರ್ಜಿ ಸಲ್ಲಿಸಿದ್ದೇ ಆದರೇ, ಯಾವಾಗಲೂ ಸಮಸ್ಯೆ ಆಗುವುದಿಲ್ಲ. ಹೋಂ ಸ್ಕೂಲಿಂಗ್ ಎನ್ನುವುದು ಶಿಕ್ಷಣ ಪಡೆಯುವ ಒಂದು ವಿಧಾನವೇ ಹೊರತು. ಪರೀಕ್ಷೆ, ಪ್ರಮಾಣಪತ್ರಗಳೇ ಒಳಗೊಂಡಿರುವ ಶಿಕ್ಷಣ ವ್ಯವಸ್ಥೆಯಿಂದಲೇ ಹೊರಗಾಗುವುದೇನಲ್ಲ. ಅಕಾಡಮಿಕ್‌ವ್ಯಾಪ್ತಿಯಿಂದ ಹೊರಗೆ ಉಳಿಯುವವರಿಗೆ ಅದರಿಂದ ಹೊರಗಾದರೂ ನಷ್ಟವೇನಿಲ್ಲ. ಆದರೆ ಅದನ್ನೆಲ್ಲಾ ಬಯಸಿ ಅಕಾಡಮಿಕ್ ಮಾರ್ಗದಲ್ಲಿ ಮುಂದುವರಿಯುವವರೂ ಕೂಡ ಹೋಂ ಸ್ಕೂಲಿಂಗ್‌ನನ್ನು ಅನುಸರಿಸಬಹುದು. ಮುಂದೆಯೂ ಪದವಿ ಪಡೆಯಲು ಬಹುತೇಕ ಅಂಚೆ ತೆರೆಪಿನ ಶಿಕ್ಷಣಗಳಿವೆ. ಪ್ರಾಯೋಗಿಕ ಶಿಕ್ಷಣ ಪಡೆಯುವ ವಿಭಾಗಗಳಿಗೆ ಕಾಲೇಜಿಗೆ ಹೋಗಲೇ ಬೇಕಾಗುತ್ತದೆ. ಆಗ ಹೋಗಬಹುದು. ಅಲ್ಲಿ ಮಗುವು ತನ್ನ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿ ಕಲಿಯಿತೋ ಅಥವಾ ಶಾಲೆಯಲ್ಲಿ ಕಲಿಯಿತೋ ಎನ್ನುವುದು ವಿಷಯವೇನಲ್ಲ.

ಹೋಂ ಸ್ಕೂಲಿಂಗ್ ಏಕೆ?

ಹೋಂ ಸ್ಕೂಲಿಂಗ್ ಮಗುವಿನ ಪ್ರತಿಭೆೆ, ಅದರ ಮನಸ್ಥಿತಿಯ, ಭಾವ ಸೂಕ್ಷ್ಮತೆಗಳನ್ನು ಘಾಸಿಗೊಳ್ಳದಿರಲು, ಅನವಶ್ಯಕ ಅನ್ಯ ಪ್ರಭಾವಗಳಿಂದ ಮಗುವಿನ ಸ್ವಂತಿಕೆ ಹಾಳಾಗದಿರಲು, ಮಗುವಿನ ವ್ಯಕ್ತಿತ್ವವನ್ನು ಅಪೇಕ್ಷಿತ ರೀತಿಯಲ್ಲಿ ಅಥವಾ ಅದರದೇ ರೀತಿಯಲ್ಲಿ ರೂಪುಗೊಳಿಸಲು ಇರುವ ವಿಧಾನವೇ ಹೊರತು ಇನ್ನೇನೂ ಅಲ್ಲ. ಶಾಲೆ ಎಂಬ ಶಿಕ್ಷಣ ಸಂಸ್ಥೆಯನ್ನು ನಿರಾಕರಿಸುವ ಮನೆಯು ತಾನೇ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತದೆ. ಕುಟುಂಬವು ತನ್ನ ಮುಂದುವರಿಯುವ ಪೀಳಿಗೆಯ ಕುಡಿಗೆ ಆಸ್ತೆಯಿಂದ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ.

ಶಾಲೆ ವರ್ಸಸ್ ಮನೆ

ಹೋಂ ಸ್ಕೂಲಿಂಗ್ ಬಗ್ಗೆ ಮಾತಾಡುವಾಗ ಹಲವಾರು ಪೋಷಕರು ಹಲವು ಪ್ರಶ್ನೆಗಳನ್ನು ಎತ್ತಿದ್ದರು.

1.ಶಾಲೆಯು ಸಾಂಘಿಕ ಚಟುವಟಿಕೆಯ ಕೇಂದ್ರವಾಗಿರುತ್ತದೆ. ಅಲ್ಲಿ ಹಲವು ಶೈಕ್ಷಣಿಕ ಗುರಿಗಳೊಂದಿಗೆ, ಕ್ರೀಡೆ ಮತ್ತು ಇನ್ನಿತರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ನಡೆಯುತ್ತಿರುತ್ತವೆ. ಮಗುವು ಅದರಿಂದ ವಂಚಿತವಾಗುವುದಿಲ್ಲವೇ?

ಉತ್ತರ: ಮಗುವು ಅವುಗಳಿಂದ ವಂಚಿತವಾಗದಿರುವಂತೆ ನೋಡಿಕೊಳ್ಳಬೇಕು. ಮಗುವಿಗೆ ಯಾವ ಕ್ರೀಡೆ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೋ ಅವಕ್ಕೆ, ಅದಕ್ಕೆಂದೇ ಇರುವ ಕ್ಲಬ್‌ಗಳಿಗೆ, ಖಾಸಗಿ ತರಗತಿಗಳಿಗೆ ಅಥವಾ ತರಬೇತಿ ಶಿಬಿರಗಳಿಗೆ ಕಳುಹಿಸಬೇಕು. ವಾಸ್ತವವಾಗಿ ಮಗುವು ಇನ್ನೂ ಹೆಚ್ಚಿನ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿ ಅವುಗಳಲ್ಲಿ ತೊಡಗಿಕೊಳ್ಳಲು ನೆರವಾಗುತ್ತದೆ. ಏಕೆಂದರೆ ಎಷ್ಟೊಂದು ಕಡ್ಡಾಯದ ವಿಷಯಗಳಿಂದ ಅದು ಮುಕ್ತವಾಗಿರುತ್ತದೆ. ರಂಗಭೂಮಿ, ಈಜು, ನೃತ್ಯ, ಕ್ರಿಕೆಟ್, ಸಂಗೀತ, ಜಿಮ್ನಾಸ್ಟಿಕ್, ಚಿತ್ರಕಲೆ; ಹೀಗೆ ಯಾವುದೇ ಆದರೂ ಅವುಗಳಿಗೆಲ್ಲಾ ಪ್ರತ್ಯೇಕ ತರಗತಿಗಳು ಖಾಸಗಿಯಾಗಿ ಲಭ್ಯವಿರುತ್ತವೆ. ಅಲ್ಲದೇ ಮಗುವು ಸಂಜೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ರಜೆ ಇರುವ ದಿನಗಳಲ್ಲಿ ನೆರೆಹೊರೆಯ ಪರಿಸರದಲ್ಲಿ ಆಡುತ್ತದೆ.

2.ಮನೆಯಲ್ಲಿ ಮಗುವಿಗೆ ಕಲಿಸುವ ಸಂದರ್ಭದಲ್ಲಿ ನಮಗೇ ಗೊತ್ತಾಗದ ವಿಷಯಗಳಿದ್ದರೆ ಏನು ಮಾಡುವುದು? ಹೇಗೆ ಕಲಿಸುವುದು? ಗಣಿತ, ರಸಾಯನ ಶಾಸ್ತ್ರ ಅಥವಾ ಇನ್ನಾವುದಾದರೂ ವಿಷಯಗಳು ನಮಗೇ ತಿಳಿಯದೇ ಇದ್ದಾಗ ಏನು ಮಾಡುವುದು?

ಉತ್ತರ: ಶಾಲೆಗೆ ಹೋಗುವ ಮಗುವೂ ಕೂಡ ಎಲ್ಲಾ ವಿಷಯಗಳನ್ನೂ ಸಮವಾಗೇನೂ ಕಲಿತುಬಿಡುವುದಿಲ್ಲ. ಹಾಗೆಯೇ ಒಂದರ ಮೇಲೆ ಅತ್ಯಾಸಕ್ತಿ, ಮತ್ತೊಂದರ ಮೇಲೆ ಬರಿಯ ಆಸಕ್ತಿ, ಮಗದೊಂದರ ಮೇಲೆ ನಿರಾಸಕ್ತಿ; ಹೀಗೆ ಆಸಕ್ತಿಗಳ ಪ್ರಮಾಣ ವಿಷಯದಿಂದ ವಿಷಯಕ್ಕೆ ಏರಿಳಿಯುತ್ತಿರುತ್ತದೆ. ಆಗ ಅಂತಹ ನಿರ್ದಿಷ್ಟ ವಿಷಯಗಳಿಗೆ ಪ್ರೈವೇಟ್ ಟ್ಯೂಷನ್‌ಗೆ ಹೋಗುವುದೋ ಅಥವಾ ತಿಳಿದವರಿಂದ ತಿಳಿಯುವುದೋ, ಈಗ ಅಂತರ್ಜಾಲಗಳಲ್ಲಿ ವೀಡಿಯೊ ಪಾಠಗಳೇ ಲಭ್ಯವಿರುತ್ತವೆ. ಅಲ್ಲದೇ ಯಾವುದೇ ವಿಷಯಗಳನ್ನು ಕಲಿಯಲು ಸ್ಪಷ್ಟ ಮಾರ್ಗಸೂಚಿ ಮತ್ತು ಬೋಧನೆಗಳಿರುವ ವೀಡಿಯೊ ಮತ್ತು ಸರಳ ಪಠ್ಯಗಳು, ಬೋಧನಾ ಸಾಮಗ್ರಿಗಳು ಲಭ್ಯವಿವೆ. ಮಗುವೇ ಅವುಗಳನ್ನು ಹುಡುಕಿಕೊಳ್ಳುವುದನ್ನು ಕಲಿಸಬೇಕು. ಜೊತೆಗೆ ಮನೆಯ ದೊಡ್ಡವರೂ ನೆರವಾಗಬೇಕು. ಒಟ್ಟಾರೆ, ಯಾವುದೇ ವಿಷಯ ತಿಳಿದಿಲ್ಲವೆಂದರೆ ಅವರೊಂದಿಗೆ ನಾವೂ ಶಿಕ್ಷಣ ಪಡೆಯಬೇಕು. ಅದು ಕಲಿಕೆಯನ್ನು ಆಪ್ತವಾಗಿಸಿಕೊಳ್ಳುವ ರೀತಿ.

3.ಒಂದು ವೇಳೆ ಪೋಷಕರು ನಿರಕ್ಷರಕುಕ್ಷಿಗಳಾಗಿದ್ದರೆ, ಅವಿದ್ಯಾವಂತರಾಗಿದ್ದರೆ ಆಗೇನು ಮಾಡುವುದು? ವಿದ್ಯಾವಂತರಾಗಿದ್ದರೂ ಮನೆಯಲ್ಲಿ ಯಾರೂ ಇರುವುದಿಲ್ಲ, ಎಲ್ಲಾ ಕೆಲಸಕ್ಕೆ ಹೋಗುತ್ತಾರೆ ಎನ್ನುವಂತಿದ್ದರೆ ಏನು ಮಾಡುವುದು?

ಉತ್ತರ: ಹೀಗಾದರೆ ಕಷ್ಟವೇ. ಮನೆಯವರು ವಿದ್ಯಾವಂತರಾಗಿರಬೇಕು. ಹಾಗಿದ್ದರೆ ಮಾತ್ರವೇ ತಮ್ಮ ಕಲಿಕೆಯ ಫಲವನ್ನು ಮಕ್ಕಳಿಗೆ ಕಲಿಸುವ ಪ್ರತಿಫಲದ ರೂಪದಲ್ಲಿ ಕಾಣಬಹುದು. ಜೊತೆಗೆ ತಾವು ಕಲಿತಿರುವುದರ ಸ್ಪಷ್ಟತೆ ಈಗ ಮಕ್ಕಳಿಗೆ ಕಲಿಸುವ ಮೂಲಕ ಗಾಢವಾಗುತ್ತಾ ಹೋಗುತ್ತದೆ. ಶಿಕ್ಷಣವು ವಿಸ್ತಾರವಾಗುತ್ತಾ ಹೋಗುತ್ತದೆ. ಕಲಿಸುವ ಮೂಲಕ ಕಲಿಯುವ ಸುಂದರ ಅನುಭವ ಪೋಷಕರು ಅಥವಾ ಮನೆಯ ಯಾವುದೇ ಸದಸ್ಯರದ್ದಾಗಿರುತ್ತದೆ. ಹಾಗೆ ಹೊತ್ತುಕೊಳ್ಳುವುದು ನಿಜಕ್ಕೂ ಒಂದು ಸಾಮಾಜಿಕ ಮತ್ತು ಶೈಕ್ಷಣಿಕ ಜವಾಬ್ದಾರಿ. ಅದನ್ನು ಸರಿಯಾಗಿ ನಿಭಾಯಿಸಲೇಬೇಕು. ಕಲಿಕೆ ಎಂಬುದು ಪ್ರತಿದಿನದ ಪ್ರಕ್ರಿಯೆಯಾದ್ದರಿಂದ ಮಗುವಿನ ಜೊತೆಗೆ ಯಾರಾದರೊಬ್ಬರು ಇರಲೇಬೇಕು. ಅದರ ಕಲಿಕೆಯ ಹೊನಲನ್ನು ತುಂಡರಿಸಬಾರದು. ಎಂದಾದರೊಂದು ದಿನ ಅನಿವಾರ್ಯ ಕಾರಣಗಳಿಂದ ರಜೆ ತೆಗೆದುಕೊಳ್ಳಬಹುದು. ಆದರೆ ಕಲಿಕೆಯ ಪ್ರಕ್ರಿಯೆ ಸಕ್ರಿಯವಾಗಿರುವಂತೆ ಮತ್ತು ಕಲಿಯುವ ಆಸಕ್ತಿ ಜೀವಂತವಾಗಿರುವಂತೆ ನೋಡಿಕೊಂಡಿರಲೇಬೇಕು.

4.ಶಾಲೆಯಲ್ಲಿ ಉಪಾಧ್ಯಾಯರು ಆ ಕಲಿಸುವ ಕೆಲಸಕ್ಕೆಂದೇ ಇರುವವರು. ಮಕ್ಕಳು ಅವರ ಮಾತು ಕೇಳುತ್ತಾರೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಾವು ಏನು ಹೇಳಿದರೂ ಕೇಳುವುದಿಲ್ಲ. ನಾವು ಕಲಿಸಿಕೊಡುವುದಕ್ಕೆ ಬೆಲೆ ಕೊಡುವುದಿಲ್ಲ. ಆಗೇನು ಮಾಡುವುದು?

ಉತ್ತರ: ಅಂತಹದೊಂದು ಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದರೆ ಆ ಪರಿಸ್ಥಿತಿಯನ್ನು ಸರಿ ಮಾಡಿಕೊಳ್ಳುವುದರ ಬಗ್ಗೆ ಮೊದಲು ಯೋಚನೆ ಮಾಡಬೇಕು. ನಂತರ ಹೋಂ ಸ್ಕೂಲಿಂಗ್. ಇದು ಶೈಕ್ಷಣಿಕ ಸಮಸ್ಯೆಯಲ್ಲ. ವ್ಯಕ್ತಿಗತ ಒಡನಾಟದ ಸಮಸ್ಯೆ. ನಾವು ಮಕ್ಕಳೊಂದಿಗೆ ಹೇಗೆ ಸಂಬಂಧಗಳನ್ನು ಮತ್ತು ಒಡನಾಟಗಳನ್ನು ಬೆಳೆಸಿಕೊಂಡಿರುತ್ತೇವೆ ಎಂಬುದರ ಮೇಲೆ ನಾವು ಕಲಿಸಿಕೊಡುವುದೂ ಕೂಡ ಅವಲಂಬಿತವಾಗಿರುತ್ತದೆ. 

5.ಶಾಲೆಯ ವಾತಾವರಣ ಇಲ್ಲದೇ ಮಗುವಿಗೆ ಮನೆಯ ಪರಿಸರ ಸಲುಗೆಯನ್ನು ಉಂಟು ಮಾಡುವುದಿಲ್ಲವೇ? ಆಗ ಮಕ್ಕಳು ಕಲಿಯುವವೇ? ಉತ್ತರ: ಶಾಲೆಯ ವಾತಾವರಣ ಬೇಡವೆಂದೇ, ಮಗುವಿಗೆ ಮನೆಯ ಮುಕ್ತ ವಾತಾವರಣವು ಕಲಿಯುವುದಕ್ಕೆ ಬೇಕೆಂದೇ ಹೋಂ ಸ್ಕೂಲಿಂಗ್ ರೂಪುಗೊಂಡಿರುವುದು. ಶಾಲೆಯಂತಹ ಆಡಳಿತಾತ್ಮಕ ವಾತಾವರಣ ಮನೆಗೆ ತಟ್ಟಬಾರದು. ಮನೆ ಸ್ಕೂಲ್ ಆಗಬಾರದು. ಅಲ್ಲಿನ ಶಿಸ್ತು, ಕ್ಲಾಸ್ ರೂಂ ಚೌಕಟ್ಟಿನ ಪರಿಕಲ್ಪನೆ ಮನೆಗೆ ನುಸುಳಬಾರದು. ಶಿಸ್ತಿರಬೇಕು. ಆದರೆ ಅದು ಶಾಲೆಯಲ್ಲಿರುವಂತಹ ಸಾಮೂಹಿಕ ಶಿಸ್ತಿನ ರೀತಿಯದಲ್ಲ. ಕಲಿಕೆಯ ಬಗ್ಗೆ ಇರುವ ಬದ್ಧತೆ. ಅದೇ ಶಿಸ್ತು. ಮನೆಯಲ್ಲಿ ಕಲಿಸುವ ಯಾರೂ ಕೂಡ ಶಾಲೆಯ ಶಿಕ್ಷಕರಂತೆ ವರ್ತಿಸಬಾರದು. ಇನ್ನು ಶಿಕ್ಷಿಸುವುದಂತೂ ದೂರವೇ ದೂರ. ಹತ್ತು ಗಂಟೆಗೆ ಇಂಗ್ಲಿಷ್ ವ್ಯಾಕರಣ ಕಲಿಯುವ ಸಮಯ ಎಂದು ನಿಗದಿಪಡಿಸಿದ್ದರೂ, ತಾನು ಶಿಸ್ತಿನ ಸಿಪಾಯಿ ಎಂದು ತೋರಿಸಿಕೊಳ್ಳಲು ಕಟ್ಟುನಿಟ್ಟಾಗಿ ಗೆರೆ ಹಾಕಿದಂತೆ ಹತ್ತುಗಂಟೆಗೆ ಮಗುವು ಸಿದ್ಧವಾಗಿರಲಿಲ್ಲ, ತಿಂಡಿ ತಿಂದು, ಮೂತಿ ಒರೆಸಿಕೊಂಡು ಬರಲು ಕೊಂಚ ಹೆಚ್ಚು ಕಡಿಮೆ ಆಯಿತೆಂದರೆ ಕಠಿಣವಾಗಿ ವರ್ತಿಸಬಾರದು. ಕೆಲವು ಬಾರಿ ವಿಷಯ ತುಂಬಾ ಆಗಿದ್ದು ಬೇಸರವಾಯಿತೆಂದರೆ ಮೊಟಕುಗೊಳಿಸಿಕೊಳ್ಳಬಹುದು. ಆಸಕ್ತಿಯಿಂದ ಕೂಡಿದ್ದು ವಿಷಯವೇ ವಿಸ್ತರಿಸಿಕೊಂಡರೆ ಆಸ್ಪದವನ್ನೂ ಕೊಡಬೇಕು. ಪೋಷಕರು ಶಿಕ್ಷಕರಂತೆ ವರ್ತಿಸುವುದು ಮಗುವು ವಿದ್ಯಾರ್ಥಿಯಂತೆ ವರ್ತಿಸುವುದಕ್ಕಿಂತ ಇಬ್ಬರೂ ಸಹಪಾಠಿಗಳಂತೆ, ಗೆಳೆಯರಂತೆ ಅಥವಾ ಅವರ ಸಂಬಂಧವೇನಿರುತ್ತದೋ ಅದರಂತೆಯೇ ಪರಸ್ಪರ ಕಲಿಕೆಯಲ್ಲಿ ತೊಡಗಿಕೊಂಡಿರಬೇಕು. ಎಂದಿನ ರೂಢಿಯ ಸಂಬೋಧನೆಗಳೇ, ಸಂಭಾಷಣೆಗಳೇ ಇರಬೇಕು.

6.ಶಿಕ್ಷಣದಲ್ಲಿ ಅಕಾಡಮಿಕ್ ಆಗಿ ಏನಾರದರೂ ಹೆಚ್ಚೂ ಕಮ್ಮಿ ಆದರೆ ಜವಾಬ್ದಾರಿ ಹೊರಲು ಅಥವಾ ನೈತಿಕ ಹಾಗೂ ಸಾಂಸ್ಥಿಕ ಬಲ ನೀಡಲು ಶಾಲೆ ಇರುತ್ತದೆ. ಆದರೆ ಮನೆಗಲಿಕೆಯಲ್ಲಿ ಹೇಗೆ?

ಉತ್ತರ: ಮನೆಗಲಿಕೆ ಎಂದಕೂಡಲೇ ವ್ಯವಸ್ಥೆಯೊಡನೆ ಸಂಬಂಧವನ್ನೇ ಕಳೆದುಕೊಂಡುಬಿಡುವುದು ಅಂತಲ್ಲ. ತಮ್ಮ ಮಕ್ಕಳನ್ನು ಮನೆಗಲಿಕೆಯಲ್ಲಿ ಶಿಕ್ಷಣ ಕೊಡುತ್ತಿರುವ ಪೋಷಕರನ್ನು ಗುರುತಿಸಬೇಕು. ಅವರೊಂದಿಗೆ ಸಂಪರ್ಕವಿರಿಸಿಕೊಳ್ಳಬೇಕು. ಅಂತೆಯೇ ತಾವು ಹೋಂ ಸ್ಕೂಲಿಂಗ್ ಮಾಡುತ್ತಿರುವುದನ್ನು ಶಿಕ್ಷಣ ಇಲಾಖೆಗೆ ತಿಳಿಸಿ ಅದಕ್ಕೆ ಒಪ್ಪಿಗೆಯ ಪತ್ರವನ್ನೂ ಮತ್ತು ಮಾನ್ಯತಾ ಪತ್ರವನ್ನೂ ಪಡೆಯಬೇಕು. ಅಲ್ಲಿ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನೂ ಕೊಡುತ್ತಾರೆ. ಮಗುವಿಗೆ ಯಾವ ಪಠ್ಯಕ್ರಮವನ್ನು ಆಧರಿಸಿ ಶಿಕ್ಷಣ ಕೊಡುತ್ತೇವೆ ಎಂಬುದನ್ನು ಮೊದಲು ನಿರ್ಧರಿಸಿಕೊಂಡು ನಂತರ ಅದಕ್ಕೆ ಸಂಬಂಧಪಟ್ಟಂತಹ ಕಾರ್ಯಾಲಯದಿಂದ ಸಿಲೆಬಸ್ ಮತ್ತು ಇತರ ಬೋಧನಾ ಪರಿಕರಗಳನ್ನು ತರಬೇಕು. ವೇಳಾಪಟ್ಟಿಯನ್ನೂ ಮತ್ತು ಲೆಸನ್ ಪ್ಲಾನ್ ತಯಾರಿಸಬೇಕು. ಅದಕ್ಕೂ ಮಾರ್ಗದರ್ಶನವನ್ನು ಪಡೆಯ ಬೇಕು. ಕಾಲದಿಂದ ಕಾಲಕ್ಕೆ ನೀಡಿದ ಶಿಕ್ಷಣದ ವರದಿಯನ್ನು ನೀಡಬೇಕು. ಶಿಕ್ಷಣ ಇಲಾಖೆಗೆ ನಮ್ಮ ಮಗುವು ಕಲಿಕೆಯಲ್ಲಿ ತೊಡಗಿದೆ ಎಂದೂ, ನಾವು ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದೂ ಖಾತರಿ ಮಾಡಬೇಕು. ನಂತರ ಮಗುವು ಅಂತಿಮ ಪರೀಕ್ಷೆ ಎದುರಿಸುವಾಗ ಅನುಕೂಲವಾಗುತ್ತದೆ. 

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News