ಗೋಸಂರಕ್ಷಣೆ ಹೆಸರಲ್ಲಿ ಮುಸ್ಲಿಮರ ಮೇಲೆ ಆಕ್ರಮಣ ಮಾಡಬಹುದೆಂದು ಮೋದಿ ಇಂಗಿತವೇ?: ಯೆಚೂರಿ ಪ್ರಶ್ನೆ

Update: 2016-08-10 07:09 GMT

   ಹೊಸದಿಲ್ಲಿ,ಆ.10: ಗೋಸಂರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ದಾಳಿ ಮಾಡಬಾರದೆಂದು ಪ್ರಧಾನಿ ಹೇಳಿದ್ದರ ಅರ್ಥ ಮುಸ್ಲಿಮರನ್ನು ಆಕ್ರಮಿಸಬಹುದೆಂದು ಆಗಿದೆಯೇ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ. ಗೋಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳಕುರಿತು ಪ್ರಧಾನಿ ಪಾರ್ಲಿಮೆಂಟ್‌ನಲ್ಲಿ ಹೇಳಿಕೆ ನೀಡಬೇಕಾಗಿದೆ ಎಂದು ಯಚೂರಿ ಹೇಳಿದ್ದಾರೆ. ರಾಜ್ಯ ಸಭೆಯಲ್ಲಿ ಕಾಶ್ಮೀರ ವಿಷಯದಲ್ಲಿ ನಡೆದ ಚರ್ಚೆಯ ವೇಳೆ ಬಿಎಸ್ಪಿ ನಾಯಕಿ ಮಾಯಾವತಿ ಕೂಡಾ ವಿಷಯ ಪ್ರಸ್ತಾಪಿಸಿ ದಲಿತರ ಮೇಲಾದ ದಾಳಿಯ ಕುರಿತು ಪಾರ್ಲಿಮೆಂಟ್‌ನಲ್ಲಿ ಹೇಳಿಕೆ ನೀಡುವಂತೆ ಮೋದಿಯನ್ನು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

 ದಲಿತರ ಮೇಲಾದ ದಾಳಿಯನ್ನು ಖಂಡಿಸಿ ಗೋರಕ್ಷಕರನ್ನು ಟೀಕಿಸಿ ಪ್ರಧಾನಿ ಸಾರ್ವಜನಿಕ ವೇದಿಕೆಯಲ್ಲಿ ಮಾಡಿದ್ದ ಭಾಷಣದ ಕುರಿತು ಪ್ರಸ್ತಾಪಿಸಿದ ಸೀತಾರಾಂ ಯೆಚೂರಿ ಅದು ಹಿಂದಿ ಸಿನೆಮಾದ ಡಯಲಾಗ್‌ನಂತಿದೆ ಎಂದು ವ್ಯಂಗ್ಯವಾಡಿದ್ದಾರೆ.’ದಲಿತರಿಗೆ ಗುಂಡುಹಾರಿಸಬೇಡಿ, ಬದಲಾಗಿ ತನ್ನ ಎದೆಗೆ ಗುರಿಯಿಡಿ’ಎಂದು ಸಿನೆಮಾ ಧಾಟಿಯಲ್ಲಿ ಮೋದಿ ಹೇಳಿದ್ದಾರೆ. ಗೋಸಂರಕ್ಷಣೆಯ ಹೆಸರಲ್ಲಿ ದಲಿತರನ್ನು ಆಕ್ರಮಿಸಬಾರದೆಂದು ಮಾತ್ರ ಹೇಳುವಾಗ ಅದರ ಅರ್ಥ ಮುಸ್ಲಿಮರನ್ನು ಆಕ್ರಮಿಸಬಹುದು ಎಂದಾಗಿದೆಯೇ? ಇತರ ಅಲ್ಪಸಂಖ್ಯಾತ ವಿಭಾಗಗಳನ್ನು ಆಕ್ರಮಿಸಬಹುದು ಎಂದಾಗಿದೆಯೇ ಎಂದು ಯೆಚೂರಿ ರಾಜ್ಯಸಭೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

  ಗೋರಕ್ಷಣೆಯ ಹೆಸರಲ್ಲಿ ಗುಜರಾತ್‌ನಲ್ಲಿ ನಡೆದ ದಾಳಿ ದೇಶದಲ್ಲಿ ಮೊದಲನೆಯದ್ದಲ್ಲ. ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್‌ರನ್ನು ಗೋಸಂರಕ್ಷಣೆಯ ಹೆಸರಲ್ಲಿ ಪ್ರಥಮವಾಗಿ ಕೊಲ್ಲಲಾಯಿತು. ಇಂತಹ ವಿಷಯಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸರಕಾರ ಹೇಳಬೇಕಿದೆ. ಅಂತಹ ಒಂದು ಭರವಸೆ ಪ್ರಧಾನಿಯಿಂದ ಈವರೆಗೂ ಸಿಕ್ಕಿಲ್ಲ. ಅದು ಸಿಗಬೇಕಿದೆ. ಎಂದು ಯೆಚೂರಿ ಹೇಳಿದ್ದಾರೆ.

ಕಾಶ್ಮೀರದ ಸ್ಥಿತಿಗತಿಗಳ ಕುರಿತು ಮಾತಾಡುವುದರ ನಡುವೆ ಬಿಎಸ್ಪಿ ನಾಯಕಿ ಮಾಯಾವತಿ ಪಾರ್ಲಿಮೆಂಟ್ ನಡೆಯುತ್ತಿರುವಾಗಲೇ ಪ್ರಧಾನಿ ಹೊರಗೆ ದಲಿತರ ವಿಷಯದಲ್ಲಿ ಹೇಳಿಕೆ ನೀಡಿರುವುದನ್ನು ಟೀಕಿಸಿದರು. ಪ್ರಧಾನಮಂತ್ರಿ ಸಭೆಗೆ ಬರಬೇಕು. ಸಭೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ದಲಿತರ ವಿಷಯದಲ್ಲಿ ಪ್ರಧಾನಿ ರಾಜ್ಯಸಭೆಗೆ ಬಂದು ಹೇಳಿಕೆ ನೀಡಬೇಕೆಂದು ಮಾಯಾವತಿ ಆಗ್ರಹಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News