ಸ್ವಾತಂತ್ರ್ಯದ ಕನಸುಗಳು

Update: 2016-08-10 18:16 GMT

1972ರ ಸ್ವಾತಂತ್ರ್ಯೋತ್ಸವದಂದು ಪ್ರಕಟವಾದ ನನ್ನ ಕವನದ ಕೊನೆಯ ಸಾಲುಗಳು ಹೀಗಿದ್ದವು: ‘‘ಸ್ವಾತಂತ್ರ್ಯ ಕೃಷ್ಣನಿಗೆ ಬರಲಿಲ್ಲ ರಾಧೆ

ಮ್ಯಾಟಿನಿಗೆ ಹೋಗೋಣ ಮಾಡೋಣ ನಿದ್ದೆ!’’

1975-77ರ ನಡುವೆ ತುರ್ತುಸ್ಥಿತಿಯಲ್ಲಿ ನಾನು ಬರೆದ ಸ್ವಾತಂತ್ರ್ಯ ಘೋಷಣೆಯ ಕೆಲವು ಸಾಲುಗಳು ಹೀಗಿದ್ದವು:

‘‘ಎಲ್ಲಿ

ಕೈ ಚಪ್ಪಾಳೆ ಮಾಡಿ;

ಸದ್ದಾಗಬಾರದು, ಎಚ್ಚರಿಕೆ.’’

ಈಗ ದೇಶದ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ, ಕವನ ಬರೆಯ ಬೇಕೆಂದೇ ಅನ್ನಿಸುವುದಿಲ್ಲ. ಸಿನಿಕತನವಲ್ಲ; ವಾಸ್ತವದ ಕಪ್ಪುನೆರಳು ಅಕ್ಷರದ ಮಸಿಯನ್ನೂ ಬಿಡದೆ ಇನ್ನಷ್ಟು ಕಪ್ಪಾಗುತ್ತಿದೆ.

ಇಂದು ಬದುಕಿರುವ ಬಹಳ ಮಂದಿ ಭಾರತೀಯರು ಸ್ವತಂತ್ರರಾಗಿಯೇ ಹುಟ್ಟಿದವರು. ಸ್ವಾತಂತ್ರ್ಯ ಹೋರಾಟದ ಸಾವಿರಾರು ತೊರೆಗಳ ಸದ್ದನ್ನು ನೇರವಾಗಿ ಕೇಳಿದವರಲ್ಲ. ಆದರೆ ಹಿರಿಯರ ಬತ್ತಿಹೋಗುವ ಬದುಕಿನ ನಡುವೆಯೂ ಉರಿಯುವ ಹೋರಾಟದ ಬತ್ತಿಯನ್ನು ನೋಡಿ ಗತಕಾಲದ ವೈಭವವನ್ನು ಊಹಿಸಬಲ್ಲವರು. ಅವರ ಅದೃಷ್ಟವನ್ನು ಅವರು ಮೆಲುಕು ಹಾಕುವಾಗ ನಾವೂ ಆಗ ಬದುಕಿರಬಾರದಿತ್ತೇ ಅನ್ನಿಸುವುದು. ನವೋದಯದ ಕನ್ನಡ ಪದ್ಯಗಳನ್ನು, ಕಥೆ-ಕಾದಂಬರಿಗಳನ್ನು ಓದಿದರೆ ಸ್ವಾತಂತ್ರ್ಯಗಾಥೆಯ ಪ್ರಭಾವ ನೆನಪಾಗಬೇಕು. ನೆನಪುಗಳಲ್ಲೇ ಬದುಕು; ನೆನಪೇ ಸವಿ.ಏಳು ದಶಕಗಳಲ್ಲಿ ಎಲ್ಲ ನದಿಗಳಲ್ಲೂ ಬಹಳಷ್ಟು ನೀರು ಹರಿದು ಹೋಗಿದೆ. ಕಾಲ ಬದಲಾದಂತೆ ದೇಶವೂ ಬದಲಾಗುತ್ತಿದೆ. ತಲೆಮಾರುಗಳು ಸಂದಂತೆಲ್ಲ ದೇಶ ಚಿಕ್ಕದಾಗಿ, ಜಗತ್ತೂ ಚಿಕ್ಕದಾಗಿ ಎಲ್ಲವನ್ನೂ ಕುಳಿತಲ್ಲಿಂದಲೇ ಗ್ರಹಿಸುವ ಸಂದರ್ಭ, ಅವಕಾಶವಿದೆ. ಹಳ್ಳಿಗಳು ಕಡಿಮೆಯಾಗಿ ಪಟ್ಟಣಗಳು, ನಗರಗಳು ಹೆಚ್ಚಾಗುತ್ತಿವೆ. ಜನಜಂಗುಳಿಯಲ್ಲಿ ಪರಸ್ಪರ ಗುರುತು ಸಿಕ್ಕದಷ್ಟರ ಮಟ್ಟಿಗೆ ಒಂದು ರೀತಿಯ ಅಪರಿಚಿತತೆ ಮತ್ತು ಏಕಾಂತತೆ ಮನೆ ಮಾಡಿದೆ. ಹಿಂದಿನ ಹೆಜ್ಜೆಗಳನ್ನು ನೋಡದೆ ಮುಂದೆ ಸರಿಯುವ ಈ ಕಾಲಮಾನದಲ್ಲಿ ಸ್ವಂತಕ್ಕೆ ಹೆಚ್ಚು ಕಾಲ ವ್ಯಯವಾಗುತ್ತಿದೆ; ಸಮಷ್ಟಿ ಪ್ರಜ್ಞೆ ಸೆಮಿನಾರುಗಳಲ್ಲಷ್ಟೇ ಕಾಣುತ್ತಿದೆ. ಇನ್ನೊಂದು ಅಪಾಯಕಾರಿ ಮತ್ತು ಆತಂಕಕಾರಿ ಬೆಳವಣಿಗೆ ಪ್ರಾಯಶಃ ಎಲ್ಲರ ಗಮನಕ್ಕೆ ಬಂದಿರಬಹುದು: ಅದೆಂದರೆ- ಹಳೆಯ ಸಂಪ್ರದಾಯಗಳನ್ನು- ಅವು ಉಳಿಯಬೇಕೇ ಅಳಿಯಬೇಕೇ ಎಂಬ ಜಿಜ್ಞಾಸೆಯಿಲ್ಲದೆ ಮುರಿಯುವ ಹೊಸ ಪದ್ಧ್ದತಿ ಬಂದಿದೆ. ಇದರಿಂದಾಗಿ ಅನಾಥಾಶ್ರಮಗಳೊಂದಿಗೆ ವೃದ್ಧಾಶ್ರಮಗಳೂ ಅಸ್ತಿತ್ವಕ್ಕೆ ಬಂದದ್ದು ಮಾತ್ರವಲ್ಲ, ಹುಲುಸಾಗಿ ಬೆಳೆಯುತ್ತಿವೆ. ವಯಸ್ಕ ಗಂಡು-ಹೆಣ್ಣು ಮದುವೆಯೆಂಬ ಬಂಧನಕ್ಕೊಳಗಾಗದೆ ಜೊತೆಯಾಗಿ ವಾಸ ಮಾಡುವುದಕ್ಕೆ ಸರ್ವೋಚ್ಚ ನ್ಯಾಯಾಲಯವೇ ಅಸ್ತು ನೀಡಿದೆ. ಇದರಿಂದಾಗಿ ಹುಟ್ಟಿದ ಮಕ್ಕಳ ಸ್ಥಾನವೇನೆಂಬುದು ಸ್ಪಷ್ಟವಾಗದೆ ಕೊನೆಗೆ ಸರ್ವೋಚ್ಚ ನ್ಯಾಯಾಲಯವೇ ಅವರಿಗೂ ಒಂದು ತ್ರಿಶಂಕು ಸ್ವರ್ಗವನ್ನು ಸದ್ಯಕ್ಕೆ ಸೃಷ್ಟಿಸಿ ಕಾಪಾಡಿದೆ. ಆದರೆ ಈ ಬಗ್ಗೆ ಸೂಕ್ತ ಶಾಸನವೇ ಇಲ್ಲ. ತಂತ್ರಜ್ಞಾನವು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡು ಇದೀಗ ಕಬಂಧವೂ ಆಗಿದೆ; ಒಕ್ಟೋಪಸ್ಸೂ ಆಗಿದೆ. ನಾಯಿ-ಬೆಕ್ಕುಗಳ ಕಡಿಮೆ ಆಯುಷ್ಯವನ್ನು ಮನುಷ್ಯನ ದೀರ್ಘಾಯುಷ್ಯದೊಂದಿಗೆ ಹೋಲಿಸುವ ಕಾಲವೊಂದಿತ್ತು. ಆದರೆ ಈಗ ಮನುಷ್ಯನ ಆಯುಷ್ಯವನ್ನು ಮನುಷ್ಯನ ಆಯುಷ್ಯದೊಂದಿಗೇ ಅಳೆಯಬೇಕಾದ ಕಾಲ ಬಂದಿದೆ. ಸಹಜವಾಗಿಯೇ ಹೆತ್ತವರು ತಮ್ಮ ಮಕ್ಕಳನ್ನು ಹೆಚ್ಚು ಸಂಬಳ ಬರುವ ಸಾಫ್ಟ್‌ವೇರ್ ಉದ್ಯಮಕ್ಕೆ ತಳ್ಳುತ್ತಿದ್ದಾರೆ. ಪರಿಣಾಮವಾಗಿ ಈ ಮೊದಲೇ ಹೆಚ್ಚುತ್ತಿದ್ದ ತಲೆಮಾರಿನ ಅಂತರ ಇನ್ನಷ್ಟು ಹೆಚ್ಚಾಗುತ್ತಿದೆ. ಜೊತೆಗೇ ಮಕ್ಕಳು ನಲ್ವತ್ತು-ನಲ್ವತ್ತೈದು ವರ್ಷಕ್ಕೇ ಮುದುಕರಾಗುತ್ತಿದ್ದಾರೆ. ಹಣ ಬೇಕು; ಆದರೆ ಹಣವೇ ಎಲ್ಲ ಅಲ್ಲ ಎಂಬುದು ನಿಧಾನವಾಗಿ ಅರ್ಥವಾದವರು ತಮ್ಮ ಬೇರುಗಳನ್ನು ಶೋಧಿಸುವ ಅನಿವಾರ್ಯತೆಯನ್ನು ಕಾಣುತ್ತಿದ್ದರೆ, ಉಳಿದವರು ವಾರಾಂತ್ಯಕ್ಕೆ ದೂರದ ಬೆಟ್ಟಗಳಿಗೆ ತೆರಳಿ ತಲೆಗಳನ್ನು ನುಣ್ಣಗೆ ಬೋಳಿಸಿಕೊಂಡು ಮೋಜು-ಮಸ್ತಿಯನ್ನು ಕಾಣುತ್ತಿದ್ದಾರೆ. ಯಾವುದು ಸರಿ, ಯಾವುದು ತಪ್ಪುಎಂಬುದು ಪರಿಣಾಮದಿಂದಷ್ಟೇ ಕಾಣುವ ಮೌಲ್ಯವಾಗಿ ಪರಿಣಮಿಸಿರುವುದರಿಂದ ಮತ್ತು ಅನೇಕರು ತೀರಾ ಯಶಸ್ಸನ್ನು ಕಾಣುತ್ತಿರುವುದರಿಂದ ಈ ಬಗೆಯ ವರ್ತಮಾನದ ಬದುಕು ಇಂದಿಗೆ ಸರಿಯೇನೋ ಎಂಬ ಭಾವನೆಯೂ ಮೂಡುತ್ತಿದೆ. ಭಾರತ ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದೆಯೆಂಬ ವದಂತಿಯಿದೆ. ಇಂತಹ ವದಂತಿಗಳು ಕಳೆದ ಏಳು ದಶಕಗಳ ಎಲ್ಲ ಕಾಲಗಳಲ್ಲೂ ಇದ್ದವು. ನೆಹರೂ ಕೈಗಾರಿಕೆಗಳನ್ನು ನಮ್ಮ ದೇವಾಲಯಗಳೆಂಬಂತೆ ಪ್ರತಿಷ್ಠಾಪಿಸಿದರೆ, ನಂತರದ ಸ್ವಲ್ಪಕಾಲದ ಶಾಸ್ತ್ರಿ ನಾಯಕತ್ವದಲ್ಲಿ ಜೈ ಜವಾನ್ ಜೈ ಕಿಸಾನ್‌ನ ಬೆಳೆ ಬಿತ್ತಲಾಯಿತು. ಇಂದಿರಾಯುಗದಲ್ಲಿ ರಾಷ್ಟ್ರೀಕರಣವೇ ಮುಂತಾದ ಅನೇಕ ಕ್ರಾಂತಿಕಾರಕ ಹೆಜ್ಜೆಗಳು ಮೂಡಿದರೂ ಮತ್ತದೇ ಬಡತನದ ನಿರ್ಮೂಲನವೇ ಅಧಿಕಾರದ ವಿಜಯಮಂತ್ರವಾಯಿತು. ತುರ್ತುಪರಿಸ್ಥಿತಿಯಂತಹ ಕರಾಳ ದಿನಗಳನ್ನು ಕಂಡ ದೇಶಕ್ಕೆ ಮತ್ತೆ ಸೂರ್ಯೋದಯವಾದಾಗ ಪ್ರಜಾಪ್ರಭುತ್ವ ಹೊಸದಿಸೆಯಲ್ಲಿ ನಡೆಯುತ್ತದೆಂಬ ನಿರೀಕ್ಷೆ ಹುಸಿಯಾಗಿ ಆ ಬೆಳಕಿನಲ್ಲೇ ಮತ್ತೆ ಇಂದಿರಾ ಅಧಿಕಾರವನ್ನು ಹಿಡಿದರು. ನಂತರದ ಅನೇಕ ನಾಯಕರು ಒಂದಲ್ಲ ಒಂದು ವಿಧಾನದಿಂದ ಅಧಿಕಾರವನ್ನು ಹಿಡಿಯುವಲ್ಲೇ ಮಗ್ನರಾದರೂ ದೇಶ ಅಗತ್ಯ ಅಭಿವೃದ್ಧಿಯನ್ನು ಕಾಣಲೇಬೇಕಾದ ತಾಂತ್ರಿಕ ಆವಿಷ್ಕಾರಗಳನ್ನೂ ಕಂಡಿತು. ಹೊಸ ಶತಮಾನದ ಬೆಳಗಿನಲ್ಲಿ, ಉದಾರೀಕರಣದ ಹೆಸರಿನಲ್ಲಿ, ಮತ್ತು ಜಾಗತೀಕರಣದ ಕೊಡೆಯಡಿಯಲ್ಲಿ, ಖಾಸಗೀಕರಣವು ಸ್ವೀಕೃತವಾಗಿ ತಂತ್ರಜ್ಞಾನವು ಹೆಚ್ಚು ಹೆಚ್ಚು ವಿಕಾಸಗೊಂಡು ದೇಶವಿದೇಶಗಳಿಂದ ಭಾರತೀಯರು ಉದ್ಯಮಗಳನ್ನು, ಆ ಮೂಲಕ ಹಣವನ್ನು ಆಮದುಮಾಡಿದರು. ಕೆಲವು ವರ್ಷಗಳ ಹಿಂದೆ ಭಾರತ ಹೀಗೆ ಬದಲಾಗುತ್ತದೆಯೇ ಎಂಬ ಸಂಶಯವನ್ನು ವ್ಯಕ್ತಪಡಿಸಿದವರೂ ಬೆರಗಾಗುವಂತೆ ಭಾರತ ಬೆಳೆದಿದೆ. ಈ ಬೆಳವಣಿಗೆ ಭಾರತಕ್ಕಷ್ಟೇ ಸೀಮಿತವಾಗಿರಲಿಲ್ಲ; ಅನ್ಯ ದೇಶಗಳಲ್ಲೂ ಇದೇ ಪ್ರಕಾರದ ಬದಲಾವಣೆ, ಬೆಳವಣಿಗೆ ನಡೆದಿದೆಯೆಂಬುದು ಇಲ್ಲಿ ಅಪ್ರಸ್ತುತ. ಆದರೆ ಈ ಬೆಳವಣಿಗೆ, ಬದಲಾವಣೆ ಒಂದೇ ಅನುಪಾತದಲ್ಲಾಗಲೀ ಸಮರೂಪಿಯಾಗಿಯಾಗಲೀ ನಡೆದಿಲ್ಲವೆಂಬ ಕಹಿಸತ್ಯವನ್ನು ರಾಜಕಾರಣಿಗಳಾಗಲೀ, ಅರ್ಥಶಾಸ್ತ್ರಜ್ಞರಾಗಲೀ ಹೇಳದಿರುವುದು ವಿಷಾದಕರ. ನಮ್ಮ ಸರಕಾರಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಎಲ್ಲವು ಸರಿಯಿದೆಯೆಂಬಂತೆ ಪ್ರತಿಪಾದನೆ ಮತ್ತು ಪ್ರತಿಬಿಂಬಿತವಾಗುತ್ತ್ತಿದೆ. ಇದರಿಂದಾಗಿ ಸತ್ಯವಿನ್ನೆಲ್ಲೋ ಉಳಿದು ಭವಿಷ್ಯದಲ್ಲಿ ಬಿಚ್ಚಿಕೊಳ್ಳುವ ಭೀತಿ ಎದುರಾಗುತ್ತಿದೆ. ಉದಾಹರಣೆಗೆ ಮನುಷ್ಯನ ನೈತಿಕತೆ ಎಂದೂ ಕಾಣದಷ್ಟು ಆಳಕ್ಕೆ ಇಳಿಯುತ್ತಿದೆ. ಎಲ್ಲೆಡೆ ಮನುಷ್ಯರು ರಾಜಕೀಯದ ನೆರಳಿನಲ್ಲಿ, ಇಲ್ಲವೆ ಅಧಿಕಾರದ ಆಶ್ರಯದಲ್ಲಿ, ಇನ್ನೊಬ್ಬರನ್ನು ದಹಿಸಿ, ಹಿಂಸಿಸಿ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯಕ್ಕೆ ಅಪಾರ ಕೊಡುಗೆಯೆಂದು ಅಬ್ದುಲ್ ಕಲಾಂರ ಸಹಿತ ಅನೇಕ ಪ್ರಾಜ್ಞರಿಂದ ಗುರುತಿಸಲ್ಪಟ್ಟ ವಿದ್ಯಾರ್ಥಿ ಸಮುದಾಯ ಮತ್ತಿತರ ಯುವಜನತೆ ತಪ್ಪುಹಾದಿಗಿಳಿದಿದೆ; ಹಾಗಲ್ಲದೆ ಸಾಮಾಜಿಕ ಸುಧಾರಣೆಗೆ ಟೊಂಕಕಟ್ಟಿದವರು ಆಡಳಿತ ರಾಜಕಾರಣದ ಅಗ್ನಿಪರೀಕ್ಷೆಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರನ್ನು, ಮಕ್ಕಳನ್ನು ಗೌರವಿಸಿ, ರಕ್ಷಿಸಬೇಕಾದ ಮಂದಿ ಎಲ್ಲ ಬಗೆಯ ದಾರುಣ ಅಮಾನುಷ ಕೃತ್ಯದಲ್ಲಿ ಸಾಫಲ್ಯ ಕಾಣುತ್ತಿದ್ದಾರೆ. ಎಲ್ಲ ಸುದ್ದಿಗಳಿಗಿಂತ ಹೆಚ್ಚಾಗಿ ಅಪರಾಧಗಳ ಸುದ್ದಿ ಬರುತ್ತಿರುವುದು ಯಾವ ಸಮಾಜಕ್ಕೂ ಶೋಭೆ ತರಲಾರದು. ಇವೆಲ್ಲವುಗಳಲ್ಲಿ ತರುಣರು ಮಾತ್ರವಲ್ಲ, ಹದಿಹರೆಯದವರೂ ಭಾಗಿಗಳಾಗುತ್ತಿರುವುದು ನಮ್ಮ ಅಭಿವೃದ್ಧಿ ಎಲ್ಲಿ ಸೋತಿದೆಯೆಂಬ ಅಧ್ಯಯನಕ್ಕೆ ಒಳ್ಳೆಯ ವಸ್ತುವಾಗಬಲ್ಲುದು.

ಇವು ಸಾಮಾಜಿಕ ಕೆಡುಕುಗಳ ಪ್ರೇರಣೆಯಿಂದ ಅಥವಾ ಸಹವಾಸದೋಷಗಳಿಂದ ಎನ್ನಬಲ್ಲ ವೈಯಕ್ತಿಕ ಕ್ರಮಗಳಾದರೆ, ಸಾಂಘಿಕವಾಗಿ, ಸಾಂಸ್ಥಿಕವಾಗಿ ನಡೆಯುವ ಜನಾಂಗೀಯ, ಜಾತೀಯ, ಮತೀಯ ಹಲ್ಲೆಗಳು, ಹಿಂಸಾ ದುಷ್ಕೃತ್ಯಗಳು ಒಟ್ಟು ಸಮಾಜದ ಅನಾರೋಗ್ಯದ ಲಕ್ಷಣಗಳಾಗಿವೆ. ಇವಕ್ಕೆ ರಾಜಾಶ್ರಯ ಸಿಕ್ಕಿದಾಗ ಎಲ್ಲೆಯಿಲ್ಲದೆ ವಿಜೃಂಭಿಸುತ್ತವೆ. ಕಳೆದ ಒಂದೆರಡು ವರ್ಷಗಳಿಂದ ನಡೆದುಕೊಂಡು ಬಂದ ಸ್ವಯಂಘೋಷಿತ ಗೋರಕ್ಷಕರ ದುರ್ವರ್ತನೆಗೆ ಕೊನೆಗೂ ಪ್ರಧಾನಿಯೇ ಗಾಬರಿಯಾಗಿ ಕ್ರಮಕ್ಕೆ ಕರೆ ಕೊಟ್ಟದ್ದು ಒಂದು ವಿಪರ್ಯಾಸವೇ ಸರಿ. ಪ್ರಧಾನಿಯ ಬೆನ್ನಿಗೇ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಗೋರಕ್ಷಕರ ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂದು ಸಾರಿತು. ವಿಶೇಷವೆಂದರೆ ಕಣ್ಣಿಗೆ ರಾಚುವಂತೆ ತಪ್ಪುನಡೆದಾಗಲೂ ಸುಮ್ಮನಿದ್ದ ಕಾನೂನು ಪಾಲಕರು ಪ್ರಧಾನಿ ಬಾಯಿಬಿಟ್ಟ ತಕ್ಷಣ ಕ್ರಮಕೈಗೊಳ್ಳುತ್ತಿರುವುದು! ಪುಣ್ಯಕೋಟಿಯೆಂಬ ಜಾನಪದ ಗೋವು ತನ್ನ ಹೆಸರಿನಲ್ಲಿ ಇಷ್ಟೊಂದು ಅನಾಚಾರವುಂಟಾಗುತ್ತದೆಂದು ಕನಸನ್ನೂ ಕಂಡಿರಲಿಕ್ಕಿಲ್ಲ. ಈಗ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದುರಾಚಾರ ನಿಂತರೆ ಅಥವಾ ಕಡಿಮೆಯಾದರೆ ಈ ವರೆಗಿನ ದುಷ್ಕೃತ್ಯಕ್ಕೆ ಪ್ರಧಾನಿ ಮತ್ತವರ ತಂಡ ಅಥವಾ ಗೋರಕ್ಷಕರಿಗೆ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದ ಇತರ ಸಂಘಟನೆಗಳೇ ಹೊಣೆಯೆಂದು ಅರ್ಥವಾದರೆ ತಪ್ಪಿಲ್ಲ. ಇದೇ ಸಂದರ್ಭದಲ್ಲಿ ಕೇಳಬೇಕಾದ ಇನ್ನೊಂದು ಪ್ರಶ್ನೆಯೆಂದರೆ- ಉತ್ತರ ಪ್ರದೇಶ ಮುಂತಾದೆಡೆಗಳಲ್ಲಿ ನಡೆಯಬೇಕಾದ ಚುನಾವಣೆಯೇ ಈ ಅರಿವಿಗೆ, ಜ್ಞಾನೋದಯಕ್ಕೆ ಕಾರಣವೇ? ಹೇಗಿದ್ದರೂ ಈ ಗೋರಕ್ಷಣೆಯ ನೆಪದಲ್ಲಿ ದಲಿತರ ಮೇಲೆ ಹಲ್ಲೆಯಾಗದಿರುತ್ತಿದ್ದರೆ ಮತ್ತು ಎಂದಿನಂತೆ ಅಲ್ಪಸಂಖ್ಯಾತರ ಮೇಲೆ ಮಾತ್ರ ಹಲ್ಲೆಗಳಾಗುತ್ತಿದ್ದರೆ ಪ್ರಧಾನಿಯಾಗಲೀ ಇತರರಾಗಲೀ ಈ ಹಲ್ಲೆಗಳನ್ನು ಆಕ್ಷೇಪಿಸುತ್ತಿದ್ದರೇ? ಆದ್ದರಿಂದ ಈ ದೇಶದ ಅಲ್ಪಸಂಖ್ಯಾತರು ನಿಜಕ್ಕೂ ಹಲ್ಲೆಯಿಂದ ಸ್ವಾತಂತ್ರ್ಯ ಪಡೆದಿದ್ದರೆ ಅದಕ್ಕೆ ಅವರು ದಲಿತರಿಗೆ ಋಣಿಯಾಗಬೇಕು.

ಈ ಬಾರಿಯ ಸ್ವಾತಂತ್ರ್ಯೋತ್ಸವ ಅನೇಕ ಕಾರಣಗಳಿಗಾಗಿ ಮತ್ತು ಮುಖ್ಯವಾಗಿ ಅಮಾಯಕರನ್ನು ಗೋರಕ್ಷಕರ ಭಕ್ಷಣೆಯಿಂದ ಮುಕ್ತಗೊಳಿಸಿದ ಸಾಮಾಜಿಕ, ರಾಜಕೀಯ ಅನಿವಾರ್ಯತೆಗಾಗಿ ಮಹತ್ವದ್ದಾಗಿದೆ. ಪ್ರಾಯಶಃ ಈ ಬೆಳವಣಿಗೆಯಲ್ಲದಿದ್ದರೆ ಇಂತಹ ಗೊಂದಲವನ್ನು ಭವಿಷ್ಯದಲ್ಲಿ ಜನಗಣಮನ ಮತ್ತು ವಂದೇ ಮಾತರಂ ಸೃಷ್ಟಿಸುತ್ತಿದ್ದವು. ಟಾಗೋರ್ ಆಗಲೀ ಬಂಕಿಮ ಚಂದ್ರರಾಗಲೀ ಎಂದೂ ತಮ್ಮ ದೇಶಭಕ್ತಿ ಗೀತೆಗಳು ದೇಶವನ್ನು ಒಡೆಯುವ ಸಂದರ್ಭವನ್ನು ಸೃಷ್ಟಿಸುತ್ತಾವೆಂದು ಊಹಿಸಿರಲಿಲ್ಲ; ಬಯಸಿರಲಿಲ್ಲ. ಸಮಾಜವು ತನ್ನ ತಲ್ಲಣಗಳಿಂದ, ಪಲ್ಲಟಗಳಿಂದ ಮುಕ್ತವಾಗದಿದ್ದರೆ ಅದೆಂತಹ ಸ್ವಾತಂತ್ರ್ಯ?

ಆಗಸ್ಟ್ ಹದಿನೈದು ಬಂತೆಂದರೆ ದೊಡ್ಡವರ ಉತ್ಸವದೊಂದಿಗೆ ಪುಟ್ಟ ಮಕ್ಕಳೂ ಸುಂದರವಾಗಿ ಸಮವಸ್ತ್ರ ತೊಟ್ಟು ಉತ್ಸಾಹ ಮತ್ತು ಶಿಸ್ತಿನಿಂದ ಶಾಲಾ ಮೈದಾನಗಳಲ್ಲಿ ಕವಾಯತು ಮಾಡುತ್ತಾರೆ, ಜನಗಣಮನ ಹಾಡುತ್ತಾರೆ, ಕುಣಿಯುತ್ತಾರೆ, ಧ್ವಜವಂದನೆ ಮಾಡುತ್ತಾರೆ, ವ್ಯವಸ್ಥಾಪಕರು ನೀಡುವ ಪಾನೀಯವೋ ತಿಂಡಿಯೋ ತಿನ್ನುತ್ತಾರೆ. ಎಲ್ಲ ಮುಗಿದ ಮೇಲೆ ಐಸ್‌ಕ್ಯಾಂಡಿಯೋ ಚಾಕಲೇಟೋ ತಿಂದುಕೊಂಡು ಮನೆಗೆ ಮರಳುತ್ತಾರೆ. ಮರುದಿನ ಎಂದಿನಂತೆ ಏಳುವಾಗ ಇಡೀ ದೇಶವೇ ಹಿಂದಿನ ದಿನ ಅನುಭವಿಸಿದ್ದು ಕನಸೋ ಎಂಬ ಹಾಗೆ ಯಥಾ ಪ್ರಕಾರ ದಿನಚರಿಯಲ್ಲಿ ತೊಡಗುತ್ತದೆ. ಅಲ್ಲಿಗೆ ಸ್ವಾತಂತ್ರ್ಯೋತ್ಸವದ ಮುಹೂರ್ತ ಮುಗಿಯುತ್ತದೆ. ಸ್ವಾತಂತ್ರ್ಯದ ಸಂಕಲ್ಪದ ಮೂಲಕ ಸಮಾಜ ಜಾಗೃತವಾಗಬೇಕು; ಸ್ವಾತಂತ್ರ್ಯದ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ, ನಡೆಯ ಬಹುದಾದ ಸ್ವೇಚ್ಛಾಚಾರವನ್ನು ನಿಯಂತ್ರಿಸಬೇಕು. ಆದ್ದರಿಂದ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸುವಲ್ಲಿ ಆನಂತರದ ಸ್ವತಂತ್ರ ದಿನಗಳು ಮಹತ್ವದ್ದಾಗುತ್ತವೆ. ಅಂತಹ ದಿನಗಳು ಬರಲಿ. ಸ್ವಾತಂತ್ರ್ಯೋತ್ಸವ ನಿತ್ಯ ನಡೆಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News