ರಂಗಭೂಮಿಯಿಂದ ಕುಲಚರಿತೆಯತ್ತ ಪೆದ್ದನಾಯಕ ತಿಪ್ಪೇಸ್ವಾಮಿ
ಪಿ. ತಿಪ್ಪೇಸ್ವಾಮಿ ಅವರ ಸಂಶೋಧನೆಯೂ ಈ ಬಗೆಯದು. ಅವರು ಯಾವ ವಿಶ್ವವಿದ್ಯಾಲಯದ ಪಿಎಚ್.ಡಿ.ಗಾಗಿ ಸಂಶೋಧನೆ ಮಾಡಲಿಲ್ಲ. ಮತ್ತಾವುದೋ ಪದವಿಗಾಗಿ ಕೃತಿಯನ್ನು ಸಿದ್ಧಪಡಿಸಲಿಲ್ಲ. ನಮ್ಮ ಸಮುದಾಯದ ಕಥೆಗಳ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕೆಂದು ತಿಪ್ಪೇಸ್ವಾಮಿಯವರು ಸಮುದಾಯದ ಹಿರಿಯರು ಹೇಳಿದ್ದನ್ನೆಲ್ಲಾ ಒಪ್ಪವಾಗಿ ಬರೆದಿಟ್ಟಿದ್ದರು. ಜಾನಪದ ವಿದ್ವಾಂಸ ಮೀರಸಾಬಿಹಳ್ಳಿ ಶಿವಣ್ಣ ಇದಕ್ಕೊಂದು ಪುಸ್ತಕ ರೂಪ ನೀಡಿ ಸಿ.ವಿ.ಜಿ. ಪ್ರಕಾಶನದಿಂದ ಪ್ರಕಟಿಸಿದ್ದಾರೆ.
ಅದೊಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ. ಪುಸ್ತಕವನ್ನು ಒಂದು ಬುಟ್ಟಿಯಲ್ಲಿಟ್ಟು ಮೆರವಣಿಗೆ ಮಾಡುತ್ತಾ ಬರಲಾಗಿತ್ತು. ಉರುಮೆ ವಾದ್ಯಗಳ ಪೋತರಾಜರ ಕುಣಿತಗಳ ಜತೆ ಮೆರವಣಿಗೆಯಲ್ಲಿ ಪುಸ್ತಕವನ್ನು ವೇದಿಕೆಗೆ ತರಲಾಯಿತು. ವೇದಿಕೆಯಲ್ಲಿ ಮ್ಯಾಸಬೇಡರ ಕಿಲಾರಿಗಳು, ಕಟ್ಟೆಮನೆಗಳ ಮುಖ್ಯಸ್ಥರು, ಪೂಜಾರಿಗಳು, ದಾಸಯ್ಯಗಳು, ದೊರೆಗಳು ಕಂಬಳಿ ಹೊದ್ದು ಮ್ಯಾಸ ಬುಡಕಟ್ಟಿನ ಮೂಲ ವೇಷದಲ್ಲಿ ವೇದಿಕೆಯ ಮೇಲಿದ್ದರು. ಈ ಕಾರ್ಯಕ್ರಮ ನಡೆದದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ. ಬಿಡುಗಡೆಯಾದ ಪುಸ್ತಕ ಪೆದ್ದನಾಯಕ ತಿಪ್ಪೇಸ್ವಾಮಿ ಅವರು ರಚಿಸಿದ ಸಂಶೋಧನಾ ಕೃತಿ ‘ಮ್ಯಾಸ ಬೇಡರ ಮೌಖಿಕ ಕಥನಗಳು’. ಈ ಕಾರ್ಯಕ್ರಮಕ್ಕೆ ಐದುನೂರಕ್ಕೂ ಹೆಚ್ಚು ಜನರು ಸೇರಿದ್ದರು. ಕಲ್ಯಾಣ ಮಂಟಪವಾದ ಕಾರಣ ಯಾರದ್ದೋ ಮದುವೆ ಇರಬೇಕು ಅಂದುಕೊಂಡವರೇ ಹೆಚ್ಚು. ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ಅವರು ಪುಸ್ತಕ ಬಿಡುಗಡೆ ಮಾಡಿದರು. ಡಾ. ಎಸ್.ಎಂ. ಮುತ್ತಯ್ಯ ಪುಸ್ತಕ ಕುರಿತು ಮಾತನಾಡಿದರು. ಮದುವೆ ಊಟದಂತೆ ಪುಸ್ತಕ ಬಿಡುಗಡೆಗೂ ಮದುವೆ ಊಟವೇ ಇತ್ತು. ಹೀಗೆ ಸಮುದಾಯದ ಜನಜಾತ್ರೆಯ ಮಧ್ಯೆ ಮ್ಯಾಸ ಬೇಡರ ಕುಲಕಥನವೊಂದು ಬಿಡುಗಡೆಯಾಯಿತು.
ಇದು ಒಂದು ಸಮುದಾಯ ತನ್ನದೇ ಸಮುದಾಯದ ಸಂಶೋಧನಾ ಕೃತಿಗೆ ತೋರಿದ ಸಂಭ್ರಮದ ಒಂದು ವಿಶಿಷ್ಟ ಕ್ರಮವಾಗಿತ್ತು. ಈ ಹಿಂದೆ ಮ್ಯಾಸಬೇಡರ ಕುರಿತು ಬ್ರಿಟಿಷ್ ಮಿಷನರಿಗಳು ಉಲ್ಲೇಖಿಸಿದ್ದಾರೆ. ಕರಿಶೆಟ್ಟಿ ರುದ್ರಪ್ಪ, ಕೃಷ್ಣಮೂರ್ತಿ ಹನೂರು, ಎ.ಎಸ್. ಪ್ರಭಾಕರ್, ವಿರೂಪಾಕ್ಷ ಪೂಜಾರಹಳ್ಳಿ ಮೊದಲಾದವರ ಅಧ್ಯಯನಕ್ಕೆ ಸಿಗದ ಸಮುದಾಯದ ಈ ಬಗೆಯ ಸ್ಪಂದನ ಈ ಕೃತಿಗೆ ಸಿಕ್ಕಿದ್ದೇಕೆ? ಎಂದು ನನಗೆ ಅಚ್ಚರಿಯಾಯಿತು. ಆ ನಂತರ ನಾನು ಪಿ. ತಿಪ್ಪೇಸ್ವಾಮಿ ಅವರನ್ನು ಮಾತಾಡಿಸುತ್ತಾ ಹೋದಂತೆ ಅವರ ಸಮುದಾಯವನ್ನು ರಂಗಭೂಮಿ ಮೂಲಕ ಅರಿವು ಮೂಡಿಸಿದ ಕ್ರಮ, ಸಮುದಾಯದ ಎಲ್ಲಾ ಹಿರಿಯರಿಂದ ಮಾಹಿತಿ ಪಡೆದು ಅದನ್ನೊಂದು ಕಥನವನ್ನಾಗಿ ಕಟ್ಟಿದ ಪರಿ ಎರಡೂ ಸಮುದಾಯದ ಪ್ರೀತಿಗೆ ಕಾರಣವಾಗಿದ್ದವು.
ಸಮುದಾಯಗಳ ಅಧ್ಯಯನ, ಸಂಶೋಧನೆಗೆ ಕ್ಷೇತ್ರಕಾರ್ಯಕ್ಕೆ ಹೋದಾಗ ಆಯಾ ಸಮುದಾಯದ ಹಿರಿಯರು ಅಧ್ಯಯನಕಾರರಿಗೆ ವಕ್ತೃಗಳಾಗಿ ಸಂಪರ್ಕಕ್ಕೆ ಬರುತ್ತಾರೆ. ಇವರುಗಳನ್ನು ಮಾಹಿತಿದಾರರು, ತಿಳುವಳಿಕೆದಾರರು, ತಿಳುವಳಿಕೆ ಕೊಟ್ಟವರು ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಸಂಶೋಧನೆಯ ಕೊನೆಯಲ್ಲಿ ಗುರುತಿಸುತ್ತೇವೆ. ಹೀಗೆ ಸಮುದಾಯಗಳ ಬಗ್ಗೆ ಅಪಾರ ತಿಳುವಳಿಕೆ ಇದ್ದವರೇ ಅದನ್ನೆಲ್ಲಾ ದಾಖಲಿಸಿ ಪುಸ್ತಕ ಪ್ರಕಟಿಸಿದರೆ? ಪಿ. ತಿಪ್ಪೇಸ್ವಾಮಿ ಅವರ ಸಂಶೋಧನೆಯೂ ಈ ಬಗೆಯದು. ಅವರು ಯಾವ ವಿಶ್ವವಿದ್ಯಾಲಯದ ಪಿಎಚ್.ಡಿ.ಗಾಗಿ ಸಂಶೋಧನೆ ಮಾಡಲಿಲ್ಲ. ಮತ್ತಾವುದೋ ಪದವಿಗಾಗಿ ಕೃತಿಯನ್ನು ಸಿದ್ಧಪಡಿಸಲಿಲ್ಲ. ನಮ್ಮ ಸಮುದಾಯದ ಕಥೆಗಳ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕೆಂದು ತಿಪ್ಪೇಸ್ವಾಮಿಯವರು ಸಮುದಾಯದ ಹಿರಿಯರು ಹೇಳಿದ್ದನ್ನೆಲ್ಲಾ ಒಪ್ಪವಾಗಿ ಬರೆದಿಟ್ಟಿದ್ದರು. ಜಾನಪದ ವಿದ್ವಾಂಸ ಮೀರಸಾಬಿಹಳ್ಳಿ ಶಿವಣ್ಣ ಇದಕ್ಕೊಂದು ಪುಸ್ತಕ ರೂಪ ನೀಡಿ ಸಿ.ವಿ.ಜಿ. ಪ್ರಕಾಶನದಿಂದ ಪ್ರಕಟಿಸಿದರು. ಇದಿಷ್ಟು ಈ ಪುಸ್ತಕದ ಕಥೆ.
ಚಳ್ಳಕೆರೆಯ ಹಳೆ ಟೌನ್‌ವಾಸಿ ವೀರಣ್ಣ ಮತ್ತು ವೀರಮ್ಮನವರ ಏಕೈಕ ಪುತ್ರನಾಗಿ 1946ರಲ್ಲಿ ಜನಿಸಿದ, ಪಿಟಿಎಸ್ ಎಂದೇ ಈ ಭಾಗದಲ್ಲಿ ಜನಪ್ರಿಯರಾಗಿರುವ 78 ವರ್ಷದ ಪಿ. ತಿಪ್ಪೇಸ್ವಾಮಿ ಚಳ್ಳಕೆರೆಯಲ್ಲಿ ನೆಲೆಸಿದ್ದಾರೆ. ಹೈಸ್ಕೂಲ್ ಮುಖ್ಯಗುರುಗಳಾಗಿ (1973ರಿಂದ 2004) ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಹೊಂದಿದ ನಂತರ ಹೀಗೆ ಸಮುದಾಯದ ಚರಿತ್ರೆ ಕಟ್ಟುವ ಕೆಲಸಕ್ಕೆ ಪ್ರವೇಶ ಪಡೆದದ್ದು ಕುತೂಹಲಕಾರಿಯಾಗಿದೆ. ತಿಪ್ಪೇಸ್ವಾಮಿ ಬಿ.ಎ. ಬಿ.ಇಡಿ. ಮಾಡಿದ ನಂತರ ಚಳ್ಳಕೆರೆಗೆ ಹೊಂದಿಕೊಂಡಂತಿರುವ ಕಾಟಪ್ಪನಹಟ್ಟಿಯ ಕಾಟಮಲಿಂಗೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಹೀಗೆ ಶಿಕ್ಷಕರಾಗುವ ಮೊದಲೇ 1968ರಲ್ಲಿ ‘ಭಕ್ತ ಸುಧನ್ವ’ ಪೌರಾಣಿಕ ನಾಟಕದಲ್ಲಿ ನಾರದನ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಇದಕ್ಕೂ ಮೊದಲೇ ಹಾಡುಗಾರಿಕೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಪಿಟಿಎಸ್ ಬಿ.ಗುರುಸಿದ್ದಪ್ಪ ಎನ್ನುವ ಸಂಗೀತ ವಿದ್ವಾಂಸರ ಬಳಿ ಜೂನಿಯರ್ ಸಂಗೀತ ಕಲಿಯುತ್ತಾರೆ. ಮುಂದೆ ‘ಬೃಂದಾವನ ವಾದ್ಯಗೋಷ್ಠಿ’ ಎಂಬ ಆರ್ಕೆಸ್ಟ್ರಾ ಆರಂಭಿಸುತ್ತಾರೆ. 1975ರಲ್ಲಿ ‘ಕಾಟಮಲಿಂಗೇಶ್ವರ ನಾಟಕ ಸಂಘ’ ಕಟ್ಟಿ ‘ನಾಟ್ಯರಾಣಿ’ ಎನ್ನುವ ನಾಟಕ ಆಡುತ್ತಾರೆ. ಈ ಬಳಿಕ ಹೈಸ್ಕೂಲ್ ಶಿಕ್ಷಕರಾಗಿಯೂ ಹಗಲು ಹೊತ್ತು ಶಾಲೆ, ರಾತ್ರಿ ನಾಟಕ ನಿರ್ದೇಶನ ಹೀಗೆ ಎಂಭತ್ತು-ತೊಂಭತ್ತರ ದಶಕದಲ್ಲಿ ನಿರಂತರ ರಂಗಭೂಮಿಯಲ್ಲಿ ಹಗಲಿರುಳು ದುಡಿಯುತ್ತಾರೆ.
‘ಧನಿಕರ ದೌರ್ಜನ್ಯ’ ‘ಆಶಾಲತಾ’ ‘ಅಣ್ಣತಂಗಿ’ ‘ಗೌರಿ ಗೆದ್ದಳು’ ‘ಗೌಡ್ರಗದ್ಲ’ ಮೊದಲಾದ ನೂರಾರು ಸಾಮಾಜಿಕ ನಾಟಕಗಳಿಗೆ ನಿರ್ದೇಶನದ ಜತೆ ಸಂಗೀತ ನಿರ್ದೇಶನವನ್ನೂ ಮಾಡಿದರು. ನಿಧಾನಕ್ಕೆ ಸಾಮಾಜಿಕ ನಾಟಕಗಳಿಂದ ಪಿಟಿಎಸ್ ಅವರು ಪೌರಾಣಿಕ ಬಯಲಾಟ ದೊಡ್ಡಾಟಗಳಿಗೆ ರೂಪಾಂತರ ಹೊಂದಿದರು. ಮನ್ಸೂರು ಸುಭದ್ರಮ್ಮ, ಮರಿಯಮ್ಮನಹಳ್ಳಿ ನಾಗರತ್ನಮ್ಮ, ಕೂಡ್ಲಿಗಿಯ ದುಶ್ಶೀಲೆ, ಪದ್ಮ ಮೊದಲಾದವರನ್ನು ಹೆಣ್ಣು ಪಾತ್ರಗಳಿಗೆ ಕರೆಸಿ ಪೌರಾಣಿಕ ನಾಟಕಗಳಿಗೆ ಒಂದು ಹೊಸ ಸ್ಪರ್ಶ ನೀಡಿದರು. ಹಿನ್ನೆಲೆ ಗಾಯಕರಿಂದ ಹಾಡಿಸುವ ಹೊಸ ಬಗೆಯನ್ನು ಪ್ರಾರಂಭಿಸಿದರು. ಹೀಗೆ ರಾಮಾಯಣ ಮಹಾಭಾರತದ ಕತೆಗಳನ್ನು ನಿರ್ದೇಶನ ಮಾಡಿದ ಪಿಟಿಎಸ್ ಅವರು ತಮ್ಮದೇ ಸಮುದಾಯದ ಚರಿತ್ರೆಯನ್ನು ಯಾಕೆ ನಾಟಕಕ್ಕೆ ತರಬಾರದು ಎಂದು ಯೋಚಿಸಿದರು. ಇದರ ಫಲವೇ 1992ರಲ್ಲಿ ಮರಡಿಹಳ್ಳಿ ಸೀತಾರಾಮರೆಡ್ಡಿ ಅವರಿಂದ ಚಿತ್ರದುರ್ಗ ಚರಿತ್ರೆಯ ‘ರಾಜಾ ವೀರ ಮದಕರಿ ನಾಯಕ’ ನಾಟಕ ಬರೆಸಿ, ನಿರ್ದೇಶನ ಮಾಡಿ ಆಡಿಸಿದರು. ಮದಕರಿ ನಾಯಕ ನಾಟಕ ನೂರಾರು ಪ್ರಯೋಗಗಳೊಂದಿಗೆ ಬಹಳ ಪ್ರಸಿದ್ಧಿ ಪಡೆಯಿತು. ರಾಜಧಾನಿ ದಿಲ್ಲಿಯಲ್ಲಿಯೂ ಪ್ರದರ್ಶನ ಕಂಡಿತು. ಮುಂದುವರಿದು ಮ್ಯಾಸಬೇಡರ ಕುಲದ ವೀರರ ಬಗೆಗೆ ನಾಟಕ ಮಾಡಬೇಕು ಎಂದು ಸಮುದಾಯದ ಕುಲ ಕಥನಗಳನ್ನು ಸಂಗ್ರಹಿಸುವ ಕೆಲಸ ಶುರುಮಾಡಿದರು. ಇದರ ಪರಿಣಾಮವಾಗಿ ಕಾಲುವೇಹಳ್ಳಿ ಗಾದಿರಪ್ಪ ಅವರಿಂದ ‘ಜಗಲೂರು ಪಾಪನಾಯ್ಕ’ ಅಥವಾ ‘ಜಗಳೂರಜ್ಜ’ ಮತ್ತು ‘ಗಾದರಿ ಪಾಲನಾಯಕ’ನ ಕುರಿತ ನಾಟಕ ಬರೆಸುತ್ತಾರೆ. ಇದರಲ್ಲಿ ಜಗಲೂರಜ್ಜನ ನಾಟಕ ಮಾಡಿ ನಿರ್ದೇಶನ ಮಾಡುತ್ತಾರೆ. ಆದರೆ ಇನ್ನೂ ‘ಗಾದರಿ ಪಾಲನಾಯಕ’ ನಾಟಕವನ್ನು ಆಡಿಸಲು ಆಗಿಲ್ಲ.
ಕನ್ನಡದ ಬಹಳ ಪ್ರಸಿದ್ಧ ರಂಗನಿರ್ದೇಶಕರಾಗಿದ್ದ ಸಿ.ಜಿ. ಕೃಷ್ಣಕುಮಾರ್ (ಸಿಜಿಕೆ) ಅವರು ಪಿಟಿಎಸ್ ಅವರ ದೊಡ್ಡಪ್ಪನ ಮಗ. ನಾಟಕ ಕುರಿತಂತೆ ಅವರ ಜತೆ ಚರ್ಚೆ, ಸಂವಾದ, ಮಾತುಕತೆ ಎಲ್ಲಾ ನಡೆಯುತ್ತಿತ್ತು. ಆದರೆ ಸಿಜಿಕೆ ನಾಟಕದ ಪಯಣಕ್ಕೂ ಪಿಟಿಎಸ್ ಅವರ ರಂಗಭೂಮಿ ಪಯಣಕ್ಕೂ ವ್ಯತ್ಯಾಸವಿತ್ತು. ಚಳ್ಳಕೆರೆ ಭಾಗದ ಸೂರನಾಯಕ, ಕಾಟಮಲಿಂಗಯ್ಯ, ಸೂರೆಗೌಡ, ಶ್ರೀನಿವಾಸ, ಗೋಪಾಲನಾಯ್ಕ, ಗುಂಡಣ್ಣ, ವಿ.ಬಿ. ಪಾಲನಾಯಕ, ವಿಜಯಕುಮಾರ್, ಕಂಚಕಾರ ಬೋರಯ್ಯ, ಸಲೀಂ ಜಾವೇದ್ ಮೊದಲಾದ ನೂರಾರು ಕಲಾವಿದರನ್ನು ಪಿಟಿಎಸ್ ಬೆಳೆಸಿದರು. ಈ ಎಲ್ಲಾ ಕಲಾವಿದರಿಗೂ ಇವರೇ ಮುಂದೆ ನಿಂತು ಕಲಾವಿದರಿಗೆ ಸಿಗುವ ಮಾಸಾಶನವನ್ನೂ ಮಾಡಿಸಿ ಅವರ ಬದುಕಿಗೆ ನೆರವಾದರು.
ಪಿಟಿಎಸ್ ಅವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಕಮಿಟಿಯ ಸದಸ್ಯರಾಗಿದ್ದರು. ಇವರ ಸಾಧನೆ ಗುರುತಿಸಿ ಕರ್ನಾಟಕ ಸರಕಾರ 2023ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇವರ ಗ್ರಾಮೀಣ ರಂಗಭೂಮಿಯ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ (2001) ನೀಡಿ ಗೌರವಿಸಿದೆ ಹಾಗೂ ನಾಟಕ ಅಕಾಡಮಿಯ ಸದಸ್ಯತ್ವ (2014) ನೀಡಿ ರಂಗಕಲಾವಿದರ ಸೇವೆ ಮಾಡಲು, ಚಿತ್ರದುರ್ಗ ಜಿಲ್ಲೆಯಾದ್ಯಂತ ರಂಗಚಟುವಟಿಕೆಗಳಲ್ಲಿ ತೊಡಗಲು ಅವಕಾಶ ಒದಗಿಸಿತ್ತು. ಎಪ್ಪತ್ತರ ಇಳಿವಯಸ್ಸಲ್ಲೂ ರಂಗಭೂಮಿಯ ಹಿಮ್ಮೇಳ-ಮುಮ್ಮೇಳಗಾರರ (ಭಾಗವತರ) ಸಂಘವನ್ನು ಕಟ್ಟಿದ್ದಾರೆ. ಚಳ್ಳಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾಗಿ ಎರಡು ಅವಧಿಗೆ (2005-2007, 2008-2010) ಸಾಹಿತ್ಯದ ಚಟುವಟಿಕೆಗಳನ್ನು ನಡೆಸಿದ್ದಾರೆ. ಜಿಲ್ಲಾ ಜಾನಪದ ಜಾತ್ರೆಯ ಸಂಚಾಲಕರಾಗಿಯೂ, ಕಾಲೇಜು ರಂಗೋತ್ಸವ (2016-2017)ಗಳಲ್ಲಿ ಯುವಜನರಲ್ಲಿ ರಂಗಭೂಮಿಯ ಆಸಕ್ತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ರಂಗ ಚಟುವಟಿಕೆಗಳನ್ನು ಗುರುತಿಸಿ ಚಿತ್ರದುರ್ಗ ಜಿಲ್ಲಾ ವಾಲ್ಮೀಕಿ ಪ್ರಶಸ್ತಿ (2015-16), ಯಾದಗಿರಿ ಜಿಲ್ಲೆಯಲ್ಲಿ ನಡೆದ ಜಾನಪದೋತ್ಸವದಲ್ಲಿ ‘ಜಾನಪದ ಕಲಾಲೋಕ ಪ್ರಶಸ್ತಿ’ (2017), ಸಿಜಿಕೆ ನಾಟಕೋತ್ಸವದಲ್ಲಿ ‘ಸಿಜಿಕೆ ಪ್ರಶಸ್ತಿ’ (2018)ಗಳ ಗೌರವ ಸಂದಿವೆ. ‘ಮ್ಯಾಸ ಬೇಡರ ಮೌಖಿಕ ಕಥನಗಳು’ ಕೃತಿಗೆ 2020ನೇ ಸಾಲಿನ ಸಂಶೋಧನೆ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ ದೊರೆತಿದೆ.
ಹೀಗೆ ರಂಗಭೂಮಿಗೆ ಮ್ಯಾಸ ಬೇಡರ ಕುಲಕಥನಗಳ ವೀರ, ವೀರ ನಾರಿಯರ ಕುರಿತು ನಾಟಕ ಬರೆಸುವ ಕಾರಣಕ್ಕೆ ಮ್ಯಾಸಬೇಡರ ಹಟ್ಟಿಗಳಲ್ಲಿ ವ್ಯಾಪಕ ಅಧ್ಯಯನ ಮಾಡುತ್ತಾರೆ. ಕಿಲಾರಿಗಳು, ಕಟ್ಟೆಮನೆ ಮುಖ್ಯಸ್ಥರು, ದೊರೆಗಳು, ಪೂಜಾರಿಗಳನ್ನೂ ಭೇಟಿಯಾಗಿ ಮಾಹಿತಿ ಸಂಗ್ರಹಿಸುತ್ತಾರೆ. ಹೀಗೆ ರಂಗಭೂಮಿಯ ದಾರಿ ಹಿಡಿದು ಪಿಟಿಎಸ್ ಸಂಶೋಧಕರಾಗಿ ಬದಲಾಗುತ್ತಾರೆ. ಇದರ ಫಲವಾಗಿ ‘ಮ್ಯಾಸ ಬೇಡರ ಮೌಖಿಕ ಕಥನಗಳು’ ಕೃತಿ ಪ್ರಕಟವಾಗುತ್ತದೆ. ಈ ಕೃತಿಯಲ್ಲಿ ಬಿಟ್ಟುಹೋದ ಮತ್ತಷ್ಟು ವಿಸ್ತಾರವಾದ ಮತ್ತೊಂದು ಸಂಶೋಧನೆ ಈಗ ಪ್ರಕಟಣೆಗೆ ಸಿದ್ಧವಾಗಿದೆ. ಲಕ್ಷಗಟ್ಟಲೆ ಸಂಬಳ ಪಡೆಯುವ ವಿಶ್ವವಿದ್ಯಾನಿಲಯಗಳ ಅಧ್ಯಾಪಕರು, ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳು ಜಡವಾಗಿರುವಾಗ, ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಕಳಪೆಯಾಗುತ್ತಿರುವಾಗ ನೆಲಮೂಲದ ಸಂಶೋಧಕರಾಗಿ ಪೆದ್ದನಾಯಕ ತಿಪ್ಪೇಸ್ವಾಮಿ ಗಮನ ಸೆಳೆಯುತ್ತಾರೆ.
ಚಿತ್ರದುರ್ಗದಲ್ಲಿ ತಲೆ ಎತ್ತುತ್ತಿರುವ ಹಿಂದುತ್ವದ ಬಗ್ಗೆ ಕೇಳಿದರೆ, ‘‘ಹಿಂದೆ ರಾಜರಲ್ಲಿ ಪ್ರಬಲರು, ದುರ್ಬಲರು ಅಂತ ಎರಡೇ ವರ್ಗವಿದ್ದದ್ದು. ಹಿಂದೂ-ಮುಸ್ಲಿಮ್ ಅಂತಲ್ಲ. ಪ್ರಬಲ ರಾಜರುಗಳು ದುರ್ಬಲ ರಾಜರುಗಳನ್ನು ಸೋಲಿಸಿ ವಶಪಡಿಸಿಕೊಂಡು ಸಂಪತ್ತನ್ನು ದೋಚುತ್ತಿದ್ದರಷ್ಟೆ. ಹಾಗಾಗಿ ಹೈದರಲಿ, ಟಿಪ್ಪುವನ್ನು ಮುಸ್ಲಿಮ್ ದೊರೆಗಳನ್ನಾಗಿಯೂ, ಮದಕರಿ ನಾಯಕರ ವಂಶಸ್ಥರನ್ನು ಹಿಂದೂ ದೊರೆಗಳನ್ನಾಗಿ ನೋಡುವುದು ಈಗಿನ ರಾಜಕೀಯ ಲಾಭಕ್ಕಾಗಿ ಅಷ್ಟೆ. ಇದನ್ನು ನಾನು ಒಪ್ಪುವುದಿಲ್ಲ’’ ಎನ್ನುತ್ತಾರೆ. ಮ್ಯಾಸಬೇಡರ ಕುಲಕಥನಗಳ ಬಗ್ಗೆ, ಚಿತ್ರದುರ್ಗದ ಪಾಳೆಯಗಾರರ ಬಗ್ಗೆ ದಿನಗಟ್ಟಲೆ ಮಾತನಾಡುವ ಇವರ ಸಂಶೋಧನೆಯ ಎಲ್ಲವನ್ನು ಬರೆಸಿ ಕನ್ನಡ ವಿಶ್ವವಿದ್ಯಾನಿಲಯ ಇವರಿಗೆ ಡಿ.ಲಿಟ್. ಪದವಿ ಕೊಡಬಹುದಾಗಿದೆ. ಮುಂದೆ ರಾಜ್ಯಮಟ್ಟದ ವಾಲ್ಮೀಕಿ ಶ್ರೀ ಪ್ರಶಸ್ತಿಗೂ ಕರ್ನಾಟಕ ಸರಕಾರ ಪರಿಗಣಿಸಬೇಕಾಗಿದೆ.