ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಈಗ ಇರುವ ಏಕೈಕ ಆಯ್ಕೆ ಮುಸ್ಲಿಮ್ ದ್ವೇಷವೇ?

Update: 2024-11-05 06:19 GMT

ಮಹಾರಾಷ್ಟ್ರ ಚುನಾವಣೆಯಲ್ಲಿನ ಮಹಾ ರಾಜಕೀಯದ ಕಾರಣಕ್ಕೆ ಜಾರ್ಖಂಡ್‌ನ ವಿಚಾರ ಹೆಚ್ಚು ಮುನ್ನೆಲೆಗೆ ಬರುತ್ತಿಲ್ಲ.ಆದರೆ ಅಲ್ಲಿ ಬಿಜೆಪಿ ಒಂದು ವಿಚಿತ್ರ ರಾಜಕೀಯವನ್ನೇ ಶುರು ಮಾಡಿದೆ.

ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರಚಾರ ಗಮನಿಸಿದರೆ, ಅದೇನು ಮಾಡಹೊರಟಿದೆ ಎಂಬುದರ ಬಗ್ಗೆ ಆತಂಕವಾಗುತ್ತದೆ. ಎಲ್ಲ ಕಡೆಗೂ ಬಳಸುವ ಹಿಂದೂ-ಮುಸ್ಲಿಮ್ ವಿಷಯವನ್ನು ಈಗ ಅದು ಸಣ್ಣ ರಾಜ್ಯ ಜಾರ್ಖಂಡ್‌ಗೂ ತೆಗೆದುಕೊಂಡು ಹೋಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ.

ಮುಸ್ಲಿಮರ ವಿರುದ್ಧ ದ್ವೇಷ ಕಾರುವುದರಲ್ಲಿ ಸದಾ ಮುಂದಿರುವ ಈ ಮನುಷ್ಯ ಈಗ ಜಾರ್ಖಂಡ್‌ನಲ್ಲೂ ಕೋಮು ಉದ್ವಿಗ್ನತೆ ಪ್ರಚೋದಿಸುವ ಮಾತನ್ನಾಡಿದ್ದಾರೆ. ಹಿಂದೂಗಳನ್ನು ಮುಸ್ಲಿಮರು ಲೂಟಿಗೈಯುತ್ತಿದ್ದಾರೆ ಎಂದು ಶರ್ಮಾ ಅತ್ಯಂತ ಭಯಾನಕ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರು ಪ್ರಧಾನವಾಗಿ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ, ಆದರೆ ಹಿಂದೂ ಮತಗಳು ವಿಭಜನೆಯಾಗುತ್ತವೆ ಎಂದು ಶರ್ಮಾ ಹೇಳಿದ್ದಾರೆ.

ಜಾರ್ಖಂಡ್‌ನ ಹೇಮಂತ್ ಸೊರೇನ್ ಸರಕಾರ ಬಾಂಗ್ಲಾದೇಶಿ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಶರ್ಮಾ ಆರೋಪಿಸಿದ್ದಾರೆ.

ಭಾರತಕ್ಕೆ ನುಸುಳಿರುವ ಅಕ್ರಮ ವಲಸಿಗರಿಂದಾಗಿ ಜಾರ್ಖಂಡ್‌ನಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ.

ಅವರು ಹೀಗೆ ಮುಸ್ಲಿಮ್ ದ್ವೇಷದ ಮಾತಾಡುತ್ತಿರುವಾಗ ಚುನಾವಣಾ ಆಯೋಗ ಏನು ಮಾಡುತ್ತ ಕೂತಿದೆ ಎನ್ನುವುದೇ ಅರ್ಥವಾಗದ ಪ್ರಶ್ನೆ. ಕೋಮುದ್ವೇಷದ ಮಾತನ್ನು ಬಿಜೆಪಿ ನಾಯಕ ಆಡಿದ್ದು ಚುನಾವಣಾ ಆಯೋಗಕ್ಕೆ ಗೊತ್ತಾಗುತ್ತಲೇ ಇಲ್ಲವೆ? ವಿಪಕ್ಷಗಳ ವಿರುದ್ಧ ಕ್ರಮಕ್ಕೆ ಕಾದುಕೊಂಡೇ ಇರುವ ಆಯೋಗ ಈಗೇಕೆ ಬಿಜೆಪಿ ನಾಯಕರ ದ್ವೇಷದ ಮಾತುಗಳ ಬಗ್ಗೆ ಸುಮ್ಮನಿದೆ?

ಚುನಾವಣೆ ಹೊತ್ತಿನಲ್ಲೆಲ್ಲ ಮೋದಿಯಿಂದ ಹಿಡಿದು ಬಿಜೆಪಿ ನಾಯಕರೆಲ್ಲ ಮುಸ್ಲಿಮ್ ದ್ವೇಷದ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ, ಈಗಲೂ ಆಡುತ್ತಲೇ ಇದ್ದಾರೆ. ಆದರೆ ಚುನಾವಣಾ ಆಯೋಗ ಅವರನ್ನೆಂದೂ ತಡೆಯುವ ಯತ್ನವನ್ನೇ ಮಾಡಿಲ್ಲ.

ದೇಶದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿಯೇ ಆಡಳಿತದಲ್ಲಿದೆ. ಮೋದಿ ಸರಕಾರ ಮತ್ತೊಂದು ಅವಧಿ ಆರಂಭಿಸಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯದ್ದೇ ಆಳ್ವಿಕೆಯಿದೆ. ದೇಶದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಹಿಂದೂಗಳೇ ಆಗಿದ್ದಾರೆ. ಅದರಲ್ಲೂ ಬಿಜೆಪಿಯ ಕಟ್ಟಾ ಬೆಂಬಲಿಗರೇ ಆಗಿದ್ದಾರೆ. ಬಹುತೇಕ ಮುಖ್ಯಮಂತ್ರಿಗಳು ಹಿಂದೂಗಳೇ ಆಗಿದ್ದಾರೆ. ಹೀಗಿರುವಾಗಲೂ ಹಿಂದೂಗಳಿಗೆ ಅಪಾಯ ಎಂದೆಲ್ಲ ಯಾಕೆ ಬೊಬ್ಬೆ ಹೊಡೆಯಲಾಗುತ್ತಿದೆ?

ಯಾಕೆಂದರೆ ಹಿಂದೂ-ಮುಸ್ಲಿಮ್ ವಿಷಯವನ್ನೆತ್ತಿಕೊಂಡು ವೋಟು ಕೇಳದೆ ಬೇರೆ ಗತಿಯೇ ಬಿಜೆಪಿಯವರಿಗೆ ಇದ್ದಂತಿಲ್ಲ.

ಜನರಿಗಾಗಿ ಏನನ್ನೂ ಮಾಡದ ಬಿಜೆಪಿ, ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಮಾತ್ರ ಬಿತ್ತುತ್ತಲೇ ಬಂದಿದೆ ಮತ್ತು ಅದರಿಂದಾಗಿಯೇ ಲಾಭ ಮಾಡಿಕೊಳ್ಳುತ್ತಿದೆ.

ಈಗ ಜಾರ್ಖಂಡ್ ಚುನಾವಣಾ ಪ್ರಚಾರದ ಭಾಗವಾಗಿ ಹಿಮಂತ ಬಿಸ್ವಾ ಶರ್ಮಾ ಅದನ್ನೇ ಮಾಡಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ವಿರುದ್ಧ ‘ಇಂಡಿಯಾ’ ಮೈತ್ರಿಕೂಟ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದಿಂದ ಶರ್ಮಾ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅದು ಆರೋಪಿಸಿದೆ.

ಹಿಮಂತ ಬಿಸ್ವಾ ಶರ್ಮಾ ಭಾಷಣ ಅವರು ಮತ್ತು ಅವರ ಪಕ್ಷವಾದ ಬಿಜೆಪಿ ಪ್ರಚಾರ ಮಾಡುತ್ತಿರುವ ವಿಭಜಕ ರಾಜಕೀಯಕ್ಕೆ ಉದಾಹರಣೆಯಾಗಿದೆ ಎಂದು ‘ಇಂಡಿಯಾ’ ಒಕ್ಕೂಟದ ನಾಯಕರು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಎಚ್ಚರಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಇಡೀ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹರಿಹಾಯುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಾಮಾಜಿಕ ವಿಭಜನೆಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಅವರನ್ನು ಒಳನುಸುಳುವವರು ಎಂದು ಬ್ರಾಂಡ್ ಮಾಡುತ್ತಿದ್ದಾರೆ. ಇಂತಹ ಮಾತುಗಳು ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ಚುನಾವಣಾ ಲಾಭಕ್ಕಾಗಿ ಜಾರ್ಖಂಡ್‌ನ ಸಾಮಾಜಿಕ ರಚನೆಯನ್ನು ಮುರಿಯುವ ಅಪಾಯಕಾರಿ ನಡೆ ಇದು ಎಂದು ವಿಪಕ್ಷ ಒಕ್ಕೂಟ ತಕರಾರೆತ್ತಿದೆ.

ಬಿಜೆಪಿ ಚುನಾವಣಾ ಪ್ರಚಾರದಲ್ಲಿ ದ್ವೇಷದ ಅಬ್ಬರ ಇಷ್ಟಕ್ಕೇ ನಿಲ್ಲುವುದಿಲ್ಲ.

ಜಾರ್ಖಂಡ್‌ನಲ್ಲಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ ಮತ್ತು ತುಷ್ಟೀಕರಣ ಉತ್ತುಂಗದಲ್ಲಿದೆ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್‌ನಲ್ಲಿ ನುಸುಳುಕೋರರಿಂದ ಭೂಮಿಯನ್ನು ವಾಪಸ್ ಪಡೆಯಲು ಮತ್ತು ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ಬಿಜೆಪಿ ಕಾನೂನನ್ನು ತರಲಿದೆ ಎಂದು ಶಾ ಹೇಳಿದ್ದಾರೆ.

ಜೆಎಂಎಂ ನೇತೃತ್ವದ ಸರಕಾರ ನುಸುಳುಕೋರರನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿರುವ ಅವರು, ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದೂ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಮತ್ತು ಬುಡಕಟ್ಟು ಜನಾಂಗದವರನ್ನು ಇದರಿಂದ ಹೊರಗಿಡಲಾಗುವುದು ಎಂದಿದ್ದಾರೆ.

ಜೆಎಂಎಂ ಸರಕಾರ ಯುಸಿಸಿ ಬುಡಕಟ್ಟು ಹಕ್ಕುಗಳು ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ, ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದಿದ್ದಾರೆ.

ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ತಿರುಗೇಟು ನೀಡಿದ್ದಾರೆ.

ಬುಡಕಟ್ಟು ಸಂಸ್ಕೃತಿ, ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸಲು ಚೋಟಾ ನಾಗ್‌ಪುರ ಮತ್ತು ಸಂತಾಲ್ ಪರಗಣ ಹಿಡುವಳಿ ಕಾಯ್ದೆಗಳ ಜಾರಿಗೆ ಮಾತ್ರ ಜಾರ್ಖಂಡ್ ಬದ್ಧವಾಗಿದ್ದು,

ಏಕರೂಪ ನಾಗರಿಕ ಸಂಹಿತೆ ಅಥವಾ ಎನ್‌ಆರ್‌ಸಿ ಜಾರಿಯಾಗುವುದಿಲ್ಲ ಎಂದಿದ್ದಾರೆ.

ವಿಷ ಉಗುಳುವ ಬಿಜೆಪಿಯವರಿಗೆ ಆದಿವಾಸಿಗಳು, ಸ್ಥಳೀಯರು, ದಲಿತರು ಅಥವಾ ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬಾಂಗ್ಲಾದೇಶದ ಒಳನುಸುಳುವಿಕೆ ಕುರಿತು ಕೇಂದ್ರದ ನಿಲುವನ್ನು ಪ್ರಶ್ನಿಸಿದ ಸೊರೇನ್, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರಿಗೆ ಭಾರತಕ್ಕೆ ಬಂದಿಳಿಯಲು ಸರಕಾರ ಏಕೆ ಅನುಮತಿ ನೀಡಿತು ಎಂದು ಕೇಳಿದ್ದಾರೆ.

ಭೂಮಿಯ ವಿಚಾರವನ್ನೂ ಎತ್ತಿಕೊಂಡು ಬಿಜೆಪಿ ಮತ್ತೊಂದು ರೀತಿಯಲ್ಲಿ ರಾಜಕೀಯ ಶುರು ಮಾಡಿದೆ. ಅದಕ್ಕಾಗಿಯೇ ಬಿಜೆಪಿ ಈಗ ಜಾರ್ಖಂಡ್ ಬುಡಕಟ್ಟು ಜನರ ಭೂಮಿ ನುಸುಳುಕೋರರ ಪಾಲಾಗುತ್ತಿದೆ ಎಂಬ ಕಥೆಯನ್ನು ಕಟ್ಟುತ್ತಿರುವ ಹಾಗೆ ಕಾಣಿಸುತ್ತಿದೆ. ಈ ಮೂಲಕ ಅದು ಜಾರ್ಖಂಡ್‌ನಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದೆ.

ಜಾರ್ಖಂಡ್‌ನಲ್ಲಿ ಬುಡಕಟ್ಟು ಭೂಮಿಯ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯವನ್ನೇ ಕರ್ನಾಟಕದಲ್ಲಿಯೂ ವಕ್ಫ್ ಭೂಮಿಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿದೆ.

ಅದೇ ತಪ್ಪು ಮಾಹಿತಿ ಹರಡುವಿಕೆ ಮತ್ತು ದ್ವೇಷದ ಅಸ್ತ್ರವನ್ನು ಬಳಸುವುದರಲ್ಲಿ ಬಿಜೆಪಿ ತೊಡಗಿದೆ.

ಕಾಂಗ್ರೆಸ್ ವಿರುದ್ಧ ಅಪ ಪ್ರಚಾರಕ್ಕೆ ವಕ್ಫ್ ಆಸ್ತಿ ವಿವಾದವೆಬ್ಬಿಸಿ ದೊಡ್ಡ ಪಿತೂರಿಯನ್ನೇ ಬಿಜೆಪಿ ಮಾಡುತ್ತಿದೆ. ನಿಮ್ಮದೆಲ್ಲವನ್ನೂ ಕಿತ್ತು ಅಲ್ಪಸಂಖ್ಯಾತರಿಗೆ ಹಂಚಲಾಗುತ್ತದೆ ಎಂಬ ಮೋದಿ ಹೇಳಿಕೆಗೆ ಪೂರಕವಾದಂಥದೇ ಆರೋಪಗಳನ್ನು ಮಾಡುತ್ತ, ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆದಿದೆ.

ವಕ್ಫ್ ಆಸ್ತಿ ಎಂದು ರೈತರ ಜಮೀನು ವಶ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಕರ್ನಾಟಕ ಸರಕಾರದ ವಿರುದ್ಧ ಅಪಪ್ರಚಾರ ಮಾಡಿದ ಬಿಜೆಪಿ ಚುನಾವಣೆ ಹೊತ್ತಿನಲ್ಲಿ ಜನರಲ್ಲಿ ಮುಸ್ಲಿಮ್ ದ್ವೇಷವನ್ನು ಬಡಿದೆಬ್ಬಿಸುವ ಕೆಲಸ ಮಾಡಿದೆ.

ಬಿಜೆಪಿಯೊಂದಿಗೆ ಮಡಿಲ ಮೀಡಿಯಾಗಳೂ ಈ ಅಪಪ್ರಚಾರದಲ್ಲಿ, ಸುಳ್ಳು ಸುದ್ದಿ ಹಬ್ಬಿಸುವಲ್ಲಿ ತೊಡಗಿವೆ.

ವಿಜಯಪುರದಲ್ಲಿ ವಕ್ಫ್ ಮಂಡಳಿ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಸರಕಾರ ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದ್ದು ಎಂಥ ಸುಳ್ಳಿನ ಕಂತೆ ಎಂಬುದನ್ನು ಮೂವರು ಮಂತ್ರಿಗಳೇ ಖುದ್ದು ಸುದ್ದಿಗೋಷ್ಠಿ ನಡೆಸುವ ಮೂಲಕ ಬಯಲಿಗೆಳೆದಿದ್ದಾರೆ. ಆದರೂ ಬಿಜೆಪಿಯ ಸುಳ್ಳುಗಳು ನಿಲ್ಲುತ್ತಲೇ ಇಲ್ಲ.

ವಿಜಯಪುರ ಜಿಲ್ಲೆ ವಕ್ಫ್ ಆಸ್ತಿ ಸಂಬಂಧವಾಗಿ ಎದ್ದ ವಿವಾದಗಳ ಬಗ್ಗೆ ಸರಕಾರ ಸ್ಪಷ್ಟನೆ ನೀಡಿದ ಬಳಿಕವೂ, ಈಗ ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಾಗಿ ಸುದ್ದಿ ಹಬ್ಬಿಸಲಾಗಿದೆ.

ಬಿಜೆಪಿಯ ಈ ರಾಜಕೀಯಕ್ಕೆ ಕಾಂಗ್ರೆಸ್ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದು, ಬಿಜೆಪಿ ಎಂತಹ ಸುಳ್ಳುಗಳನ್ನು ಹೇಳುತ್ತಿದೆ ಎಂಬುದನ್ನು ಬಯಲು ಮಾಡಿದೆ.

ಬಿಜೆಪಿ ಅವಧಿಯಲ್ಲೂ ವಕ್ಫ್ ಬೋರ್ಡ್ ಕಡೆಯಿಂದ ವಿಜಯಪುರದ ರೈತರಿಗೆ ನೋಟಿಸ್ ಕೊಡಲಾಗಿತ್ತು ಎಂಬುದನ್ನು ಸಚಿವ ಎಂ.ಬಿ. ಪಾಟೀಲ್ ಬಯಲಿಗೆಳೆದಿದ್ದಾರೆ. 2019ರಿಂದ 2022ರವರೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿಯೇ ವಕ್ಫ್ ಬೋರ್ಡ್ ಮೂಲಕ ವಿಜಯಪುರದ ರೈತರಿಗೆ ನೋಟಿಸ್ ಕೊಡಲಾಗಿತ್ತು ಎಂಬುದನ್ನು ಎಂ.ಬಿ. ಪಾಟೀಲ್ ಬಹಿರಂಗಪಡಿಸಿದ್ದು, ಆನೋಟಿಸ್‌ಗಳನ್ನು ಜನರೆದುರು ಇಟ್ಟಿದ್ದಾರೆ.

ಸುಳ್ಳು ಆರೋಪ ಮಾಡಿ ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಲು ನೋಡಿದ ಬಿಜೆಪಿಗೆ ಇದರಿಂದ ಆಘಾತವಾಗಿರಲೇಬೇಕು. ಆದರೆ ತನ್ನ ಸುಳ್ಳುಗಳು ಬಯಲಾದರೂ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತದೆ ಬಿಜೆಪಿ.

ದ್ವೇಷ ಹರಡುವುದಕ್ಕಾಗಿ, ಮುಸ್ಲಿಮರ ವಿರುದ್ಧ ಜನರಲ್ಲಿ ದ್ವೇಷ ಬಿತ್ತುವುದಕ್ಕಾಗಿ ಅದು ಯತ್ನಿಸುತ್ತಲೇ ಇರುತ್ತದೆ. ಅದಕ್ಕಾಗಿಯೇ ಯಾವುದಾದರೂ ಒಂದು ದಾರಿಯನ್ನು ಹುಡುಕುತ್ತಲೇ ಇರುತ್ತದೆ.

ಈಗ ಭೂಮಿ ಹೆಸರಿನಲ್ಲಿ ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ಮತ್ತದೇ ದ್ವೇಷ ರಾಜಕೀಯವನ್ನು ಅದು ಶುರು ಮಾಡಿದಂತಿದೆ. ಅಲ್ಲಿಗೆ ಬಿಜೆಪಿ ಹಾಗೂ ಮೋದಿ ಬೇರೆ ಸಂದರ್ಭಗಳಲ್ಲಿ ಅಭಿವೃದ್ಧಿ ಬಗ್ಗೆ ಮಾಡುವ ಭಾಷಣ ಬರೀ ಬೋಗಸ್ ಎಂದು ಬಿಜೆಪಿಯೇ ಸಾಬೀತುಪಡಿಸಿದಂತಾಗಿದೆ.

ನಿಜಕ್ಕೂ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮಾಡಿದ್ದರೆ ಎಲ್ಲಾ ಕಡೆ ಅದನ್ನೇ ಹೇಳಿಕೊಂಡು ಮತ ಪಡೆಯಬಹುದಿತ್ತಲ್ಲವೇ?

ಆದರೆ ಪ್ರತೀ ಚುನಾವಣೆಯಲ್ಲೂ ಮೋದಿ ಸಹಿತ ಪ್ರತಿಯೊಬ್ಬ ಬಿಜೆಪಿ ಮುಖಂಡರೂ ಬರೀ ದ್ವೇಷ, ಅಸಹನೆಯ ಮಾತುಗಳನ್ನೇ ಯಾಕೆ ಬಂಡವಾಳ ಮಾಡಿಕೊಂಡಿದ್ದಾರೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News