ಆಗಸ್ಟ್ 15 ರಿಂದ ಬಿ ಎಸ್ ಎನ್ ಎಲ್ ನಿಂದ ' ಅನ್ ಲಿಮಿಟೆಡ್ ಫ್ರೀ ಕಾಲ್ಸ್' !

Update: 2016-08-11 17:27 GMT

ಹೊಸದಿಲ್ಲಿ,ಆ.11: ಸ್ಥಿರ ದೂರವಾಣಿ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ 2016,ಆ.15ರಿಂದ ಪ್ರತಿ ರವಿವಾರಗಳಂದು ತನ್ನ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್‌ವರ್ಕ್‌ನ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಿಗೆ ಮಿತಿಯಿಲ್ಲದ ಉಚಿತ ಕರೆಗಳ ಸೌಲಭ್ಯವನ್ನು ಒದಗಿಸುವುದಾಗಿ ಪ್ರಕಟಿಸಿದೆ. ಇದು ಈಗಾಗಲೇ ಲಭ್ಯವಿರುವ,ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್‌ವರ್ಕ್‌ಗೆ ಉಚಿತ ಕರೆಗಳನ್ನು ಮಾಡುವ ಸೌಲಭ್ಯಕ್ಕೆ ಹೆಚ್ಚುವರಿಯಾಗಿರಲಿದೆ.
ಇಷ್ಟೇ ಅಲ್ಲ, ಆ.15ರಿಂದ ಮೊದಲ್ಗೊಂಡು 90 ದಿನಗಳ ಅವಧಿಗೆ ತನ್ನ ನೂತನ ಸ್ಥಿರ ದೂರವಾಣಿ ಗ್ರಾಹಕರಿಗೆ ಉತ್ತೇಜಕ ಕೊಡುಗೆಯನ್ನೂ ಬಿಎಸ್‌ಎನ್‌ಎಲ್ ಪ್ರಕಟಿಸಿದೆ. ಈ 90 ದಿನಗಳ ಅವಧಿಯಲ್ಲಿ ಹೊಸದಾಗಿ ಸ್ಥಿರ ದೂರವಾಣಿ ಸಂಪರ್ಕವನ್ನು ಪಡೆಯುವ ಗ್ರಾಹಕರು ಮಾಸಿಕ ನಿಗದಿತ ಶುಲ್ಕ 49 ರೂ.ಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ ಮತ್ತು ಸ್ಥಾಪನಾ ಶುಲ್ಕ(500 ರೂ.)ದಿಂದ ಸಂಪೂರ್ಣ ವಿನಾಯಿತಿಯನ್ನು ನೀಡಲಾಗುತ್ತದೆ. ಇದರ ಜೊತೆಗೆ ರಾತ್ರಿ ಉಚಿತ ಕರೆಗಳ ಸೌಲಭ್ಯಕ್ಕೂ ಅವರು ಅರ್ಹರಾಗಿರುತ್ತಾರೆ. ಸ್ಥಿರ ದೂರವಾಣಿಗಳ ಎಲ್ಲ ಪ್ರಮುಖ ಜನರಲ್ ಪ್ಲಾನ್‌ಗಳು ಈ ಯೋಜನೆಯಡಿ ಲಭ್ಯವಿರುತ್ತವೆ ಎಂದು ಬಿಎಸ್‌ಎನ್‌ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News