ತೀಸ್ತಾ ಬ್ಯಾಂಕ್ ಖಾತೆ ಸ್ತಂಭನ: ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2016-08-17 17:59 GMT

ಹೊಸದಿಲ್ಲಿ,ಆ.17: ಅಹ್ಮದಾಬಾದ್ ಪೊಲೀಸ್‌ನ ಕ್ರೈಂ ಬ್ರಾಂಚ್ ತಮ್ಮ ಬ್ಯಾಂಕ್ ಖಾತೆಗಳನ್ನು ಸ್ತಂಭನ ಗೊಳಿಸಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್, ಅವರ ಪತಿ ಜಾವೇದ್ ಆನಂದ್ ಮತ್ತು ಎರಡು ಎನ್‌ಜಿಒಗಳು ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಗುಜರಾತ್ ಸರಕಾರಕ್ಕೆ ನಿರ್ದೇಶ ನೀಡಿದೆ.
 ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು.ಲಲಿತ್ ಅವರ ಪೀಠವು ಈ ಸಂಬಂಧ ರಾಜ್ಯ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ನೋಟಿಸ್ ಹೊರಡಿಸಿತಲ್ಲದೆ, ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಸೆ.21ಕ್ಕೆ ನಿಗದಿಗೊಳಿಸಲಾಗಿದೆ.
ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಸ್ತಂಭನಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ತಮ್ಮ ಅರ್ಜಿಗಳನ್ನು ತಿರಸ್ಕರಿಸಿರುವ ಗುಜರಾತ್ ಉಚ್ಚ ನ್ಯಾಯಾ ಲಯದ ಅ.7ರ ಆದೇಶವನ್ನು ಪ್ರಶ್ನಿಸಿ ತೀಸ್ತಾ, ಅವರ ಪತಿ, ಎನ್‌ಜಿಒಗಳಾದ ಸಬರಂಗ್ ಟ್ರಸ್ಟ್ ಮತ್ತು ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News