ಮನೆಗಲಿಕೆಯ ಯೋಜನೆ

Update: 2016-08-21 07:21 GMT

ಮನೆಗೆ ಬರುವ ಸಂಬಂಧಿಗಳಲ್ಲೋ ಅಥವಾ ಸ್ನೇಹಿತರಲ್ಲೋ ಉಪಾಧ್ಯಾಯರೋ ಅಥವಾ ಯಾವುದಾದರೊಂದು ವಿಷಯದಲ್ಲಿ ಪ್ರಾವೀಣ್ಯತೆ ಪಡೆದವರು ಇದ್ದಾಗ ಒಂದು ದಿನ ಅವರನ್ನು ಕರೆಯಿಸಿ, ಊಟೋಪಚಾರಗಳ ಮುನ್ನವೋ ಅಥವಾ ನಂತರವೋ ಮಗುವಿನ ಜೊತೆಗೆ ಇತರರಿಗೂ ವಿಷಯವನ್ನು ಮುಟ್ಟಿಸುವ ಅಥವಾ ಕಲಿಸುವ ಯೋಜನೆಯೂ ಕೂಡ ಬಹಳ ಒಳಿತು.

ಪಾಠೋಪಕರಣಗಳು

1.ಮಕ್ಕಳು ಸಣ್ಣವರಾಗಲಿ, ದೊಡ್ಡವರಾಗಲಿ ಮನೆಗೆ ಬರುವ ವಾರ್ತಾಪತ್ರಿಕೆಗಳು, ಇತರ ಪತ್ರಿಕೆಗಳನ್ನು ಗಮನಿಸುವ, ಅದರಲ್ಲಿರುವ ಚಿತ್ರಗಳನ್ನು ಗುರುತಿಸುವ, ಮಕ್ಕಳಿಗಾಗಿ ಇರುವ ವಿಶೇಷ ಪುಟಗಳನ್ನು ಬಳಸುವ ಅಭ್ಯಾಸ ಮಾಡಿಸಬೇಕು.

2.ಮಕ್ಕಳಿಗೆಂದೇ ಬರುವ ತಿಂಗಳ ಅಥವಾ ವಾರದ ಪತ್ರಿಕೆಗಳನ್ನು ಕೊಳ್ಳಬೇಕು. ಅವನ್ನು ನಿಯಮಿತವಾಗಿ ಬರುವಂತೆ ನೋಡಿಕೊಳ್ಳಬೇಕು. ಆ ಪತ್ರಿಕೆಗಳು ಬರುವುದು ಒಂದೆರಡು ದಿನ ತಡವಾದರೆ ಮಕ್ಕಳು ಅವುಗಳಿಗಾಗಿ ಕೇಳಿದರೆ, ಅಲ್ಲಿಗೆ ನೀವು ಮಕ್ಕಳ ಕುತೂಹಲಭರಿತ ಚಟುವಟಿಕೆಗಳನ್ನು ರೂಢಿಸಿದ್ದೀರಿ ಎಂದು ಅರ್ಥ.

3.ನುಣುಪಾದ ಮೇಲ್ಮೈಯುಳ್ಳ ಮರದ ವಿವಿಧ ಆಕೃತಿಗಳು, ಉತ್ತಮ ಪ್ಲ್ಯಾಸ್ಟಿಕ್‌ನ ಉಪಕರಣಗಳು, ಭಾಷಾ ಕಲಿಕೆಗೆ ಬೇಕಾದಂತಹ ಪ್ಲಾಷ್ ಕಾರ್ಡ್‌ಗಳನ್ನು ನಾವು ಮಕ್ಕಳಿಗೆ ಬೋಧಿಸುವಾಗ ಉಪಯೋಗಿಸಬೇಕು.

4.ಬರೆಯಲು ಬ್ಲ್ಯಾಕ್ ಬೋರ್ಡ್ ಅಥವಾ ವೈಟ್ ಬೋರ್ಡ್‌ಗಳನ್ನು ಹೊಂದಿರಬೇಕು. ಎರಡನ್ನೂ ಹೊಂದಿದ್ದರೆ ಬಹಳ ಒಳ್ಳೆಯದು.

5.ಚಿತ್ರ ಬಿಡಿಸಲು, ಬಣ್ಣಗಳನ್ನು ಹಚ್ಚಲು ಅವರಿಗೆ ವಿಪುಲ ಅವಕಾಶ ಕಲ್ಪಿಸಿಕೊಡುವಂತಹ ವ್ಯವಸ್ಥೆ ಇರಲಿ. ಚಿತ್ರ ಬಿಡಿಸುವ ಮತ್ತು ಬಣ್ಣ ಹಚ್ಚುವ ಕೆಲಸವಂತೂ ಅವರಿಗೆ ಬಹಳ ಇಷ್ಟವಾದದ್ದು ಹಾಗೂ ಅದರಲ್ಲಿ ಅವರ ಸೃಜನಶೀಲತೆಯಂತೂ ಕ್ಷಣಕ್ಷಣಕ್ಕೂ ಗರಿಗೆದರುತ್ತದೆ. ಹೀಗೆ ಬರಿ, ಹಾಗೆ ಬರಿ ಎಂದು ತಿದ್ದಲು ಹೋಗುವುದು ಬೇಡ. ತರಗತಿಗೇ ಹೋಗಿ ಕಲಿಯಲು ಪ್ರಾರಂಭಿಸಿದಾಗ ಅವರು ಗೆರೆಗಳನ್ನು ಎಳೆಯುವುದರಿಂದ ಪ್ರಾರಂಭಿಸುತ್ತಾರೆ. ಅದು ಅಲ್ಲಿ ಸರಿ. ಆದರೆ, ನಾವು ಮನೆಯಲ್ಲಿ ಅವರು ಪ್ರಯತ್ನಿಸುವಾಗ ಅದನ್ನು ತಡೆದು ಸರಿಯಾಗಿ ಪ್ರಾರಂಭಿಸುವ ಯತ್ನ ಬೇಡ.

6.ಪ್ರತಿಯೊಂದು ವಿಷಯವನ್ನೂ ಹೇಳಿಕೊಡುವಾಗ ಹೊಸತೊಂದು ವಿಧಾನವನ್ನೇ ಸಾಧ್ಯವಾದಷ್ಟು ಸಂಶೋಧಿಸಿ.

7.ರಾಜ್ಯದ ಅಥವಾ ಕೇಂದ್ರದ ಯಾವುದೇ ಪಠ್ಯಕ್ರಮವನ್ನು ಅನುಸರಿಸಿದರೂ ಸಿಲಬಸ್ ಮುಗಿಸುವ ಧಾವಂತಕ್ಕೆ ಎಂದಿಗೂ ಬೀಳಬೇಡಿ. ವಿವಿಧ ಕ್ರಮಗಳನ್ನು ಬೆರೆಸಿಕೊಂಡರೂ ಪರವಾಗಿಲ್ಲ. ಆದರೆ ಮಗುವು ಕುಗ್ಗದಂತೆ ನೋಡಿಕೊಂಡರೆ ಸರಿ.

ವಿಶೇಷವಾದ ಎಚ್ಚರಿಕೆ

ಹೋಂ ಸ್ಕೂಲಿಂಗ್ ಮಾಡ್ತೀವಿ ಅಂತ ಮನೆಯನ್ನು ಶಾಲೆಯನ್ನಾಗಿಸಿ ಮಕ್ಕಳ ಮುಕ್ತ ಪರಿಸರವನ್ನು ಹಾಳುಗೆಡವಿದರೆ, ಶಿಸ್ತು, ಕಡ್ಡಾಯ ಅಂತೇನಾದರೂ ಉಸಿರುಗಟ್ಟಿಸಿದರೆ, ಮಗುವು ಶಾಲೆಯನ್ನು ಮಾತ್ರವಲ್ಲ ಮನೆಯನ್ನೂ ದ್ವೇಷಿಸಲು ಪ್ರಾರಂಭಿಸಿಬಿಡುತ್ತದೆ. ಆಮೇಲೆ ಮಗುವಿಗೆ ಮನೆಯೂ ಬೇಡ, ಶಾಲೆಯೂ ಬೇಡ. ಶಿಕ್ಷಣವಂತೂ ಬೇಡವೇ ಬೇಡ ಎನಿಸಿಬಿಟ್ಟರೆ, ಆ ಮಗುವು ಎತ್ತಲೂ, ಏನೂ ಮಾಡಲಾಗದಂತಹ ಸ್ಥಿತಿಯಲ್ಲಿ ನರಳಾಡುವಂತಾಗಿಬಿಡುತ್ತದೆ. ಒಟ್ಟಾರೆ ಕಲಿಕೆಯ ಉದ್ದೇಶವೇ ವಿಫಲವಾಗಿಬಿಡುತ್ತದೆ.

ಹೋಂ ಸ್ಕೂಲಿಂಗ್ ವಾರ್ಷಿಕ ಯೋಜನೆ 

1.ಮೊದಲು ಮಗುವು ಸಾಧಾರಣವಾಗಿ ಯಾವ ತರಗತಿಯ ಹಂತದಲ್ಲಿರುವುದು ಎಂಬುದನ್ನು ಗಮನಿಸಿ, ಅದಕ್ಕೆ ತಕ್ಕಂತಹ ಪಠ್ಯಗಳನ್ನು ತೆಗೆದಿರಿಸಿಕೊಳ್ಳಬೇಕು.

2.ರಜೆ ಮತ್ತು ಹಾಜರಿ ಎಂಬಂತಹ ರಗಳೆಗಳು ಇಲ್ಲದಿರುವುದರಿಂದ ಇಡೀ ವರ್ಷ ಯಾವ್ಯಾವ ಪಾಠಗಳನ್ನು ನಾವು ಮಗುವಿಗೆ ದಾಟಿಸಬಹುದು ಎಂಬುದನ್ನು ಪಟ್ಟಿ ಮಾಡಿಕೊಳ್ಳಬೇಕು.

3.ಮಗುವಿನ ಆಸಕ್ತಿ ಮತ್ತು ಸಾಮರ್ಥ್ಯದ ಅರಿವು ನಮಗೆ ಮೊದಲೇ ಇರುವುದರಿಂದ ವಿಷಯಗಳನ್ನು ಸರಿಯಾಗಿ ವಿಭಾಗಿಸಿಕೊಳ್ಳಬೇಕು. 4.ಮಗುವಿನ ಸಹಮತದೊಂದಿಗೆ ದಿನದ ವೇಳೆಗಳನ್ನು ನಿಗದಿ ಮಾಡಿಕೊಳ್ಳಬೇಕು. ಅದರಲ್ಲಿ ಸ್ವಯಂ ಶಿಸ್ತಿನಿಂದ ಮತ್ತು ಬದ್ಧತೆಯಿಂದ ತೊಡಗಿಕೊಳ್ಳುವಂತೆ ನಾವು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮನ್ನು ಮಗುವು ಅನುಸರಿಸುತ್ತದೆ. ದಯಮಾಡಿ ಶಿಸ್ತಿನ ಬಗ್ಗೆ ಮತ್ತು ಬದ್ಧತೆಯ ವೌಲ್ಯದ ಬಗ್ಗೆ ಎಂದಿಗೂ ಮಕ್ಕಳೊಂದಿಗೆ ಮಾತಾಡಲೇ ಬೇಡಿ. ಅದೇನೆಂದೂ ಅವರಿಗೆ ಗೊತ್ತಿರುವುದಿಲ್ಲ. ಅದನ್ನು ನಾವು ರೂಢಿಸಿಕೊಳ್ಳುವ ಮೂಲಕ ಅವರಿಗೂ ರೂಢಿಸೋಣ.

5.ಮಗುವಿಗೆ ಯಾವ ಯಾವ ವಿಷಯಗಳು ಇಷ್ಟ, ಕಷ್ಟ, ಸುಮಾರಾಗಿ ಸಹಿಸಿಕೊಳ್ಳುವುದು, ತಕ್ಷಣವೇ ನಿರಾಕರಿಸುವುದು ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವಿಷಯಗಳನ್ನು ಸರಳಗೊಳಿಸಿಕೊಳ್ಳುವುದು ಮತ್ತು ಪ್ರಯೋಗಾತ್ಮಕವಾಗಿ ದಾಟಿಸುವುದು ಮಾಡಬೇಕು.

6.ಮನೆಯಲ್ಲಿ, ಮನೆಯ ಸುತ್ತ ಮುತ್ತ ದೊರಕುವ ಗಿಡ, ಹೂ ಬಳ್ಳಿ, ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳು, ಮನೆಯಲ್ಲಿರುವ ಅಡುಗೆ ಪದಾರ್ಥಗಳು, ಬಟ್ಟೆ, ಲೋಹದ ವಸ್ತುಗಳು ಎಲ್ಲವೂ ನಿಮಗೆ ಪಾಠೋಪಕರಣಗಳು. ಈ ವಿಧಾನವಂತೂ ಮಕ್ಕಳಲ್ಲಿ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ. ಮನೆಯ ವಸ್ತುಗಳನ್ನು ತೋರಿಸುತ್ತಾ, ಕೆಲಸ ಮಾಡುತ್ತಾ ಆಯಾ ವಿಷಯವನ್ನು ಮುಟ್ಟಿಸುವುದು ಅತ್ಯಂತ ಪ್ರಭಾವಶಾಲಿ. ನಾನು ಅನೇಕ ಸಲ ಇದರಲ್ಲಿ ಯಶಸ್ವಿಯನ್ನು ಕಂಡಿದ್ದೇನೆ.

7.ಇನ್ನು ಅಂಚೆಚೀಟಿಗಳು, ಹಳೆಯ ಮತ್ತು ಹೊಸ ನಾಣ್ಯಗಳು, ಚಿತ್ರಗಳು, ವಿವಿಧ ಕಲ್ಲುಗಳು, ಶಿಲೆಗಳು, ಖನಿಜಗಳು, ಮಣ್ಣು ಮತ್ತು ಮರಳು, ಲೋಹಗಳು, ಐತಿಹಾಸಿಕ ಸ್ಮಾರಕಗಳ ಚಿತ್ರಗಳು, ವಿವಿಧ ಕಲಾಕೃತಿಗಳು, ಸಾಹಿತ್ಯ ಕೃತಿಗಳು ನಿಮ್ಮ ಹೋಂ ಸ್ಕೂಲಿಂಗ್ ಲೈಬ್ರರಿಯ ಸಂಗ್ರಹಕ್ಕೆ ಸೇರ್ಪಡೆಯಾಗುತ್ತಾ ಬರಬೇಕು. ಅದರ ಸಂಪೂರ್ಣ ಜವಾಬ್ದಾರಿಯನ್ನೂ ಮಗುವಿಗೇ ನಿರ್ವಹಿಸಲು ಹೇಳಿಕೊಡಬೇಕು. ಮುನ್ನೆಲೆಯಲ್ಲಿ ಅವರು, ಹಿನ್ನೆಲೆಯಲ್ಲಿ ನಾವು. ಹಾಗೆಯೇ ಬೇರೆ ಮನೆಯ ಮಕ್ಕಳು ಅಥವಾ ನೆಂಟರು ಬಂದಾಗ ಮಗುವಿಗೆ ತನ್ನ ಸಂಗ್ರಹವನ್ನು ತೋರಿಸಿ ಅದರ ಬಗ್ಗೆ ಮಾತಾಡಲು ಪ್ರೋತ್ಸಾಹಿಸಬೇಕು. ಹಾಗೆ ಮಾಡುವಾಗ ಅದು ತನ್ನ ವಸ್ತುಗಳ ಬಗ್ಗೆ ಆಸಕ್ತಿ ಮಾತ್ರವಲ್ಲದೇ ಅಭಿಮಾನವನ್ನೂ ಹೊಂದುತ್ತದೆ. ಹಾಗೆಯೇ ಹಾಗೆ ವಿಷಯವನ್ನು ಹಂಚಿಕೊಳ್ಳುವಾಗ ಕಲಿಕೆಯ ಪುನರಾವರ್ತನೆಯಾಗುತ್ತದೆ.

8.ಮನೆಗೆ ಬರುವ ಸಂಬಂಧಿಗಳಲ್ಲೋ ಅಥವಾ ಸ್ನೇಹಿತರಲ್ಲೋ ಉಪಾಧ್ಯಾಯರೋ ಅಥವಾ ಯಾವುದಾದರೊಂದು ವಿಷಯದಲ್ಲಿ ಪ್ರಾವೀಣ್ಯತೆ ಪಡೆದವರು ಇದ್ದಾಗ ಒಂದು ದಿನ ಅವರನ್ನು ಕರೆಯಿಸಿ, ಊಟೋಪಚಾರಗಳ ಮುನ್ನವೋ ಅಥವಾ ನಂತರವೋ ಮಗುವಿನ ಜೊತೆಗೆ ಇತರರಿಗೂ ವಿಷಯವನ್ನು ಮುಟ್ಟಿಸುವ ಅಥವಾ ಕಲಿಸುವ ಯೋಜನೆಯೂ ಕೂಡ ಬಹಳ ಒಳಿತು.

9.ಸರಿಯಾದ ವಿಷಯಕ್ಕೆ ಸರಿಯಾದ ಉಪಕರಣಗಳನ್ನು, ಉದಾಹರಣೆಗಳನ್ನು ಬಳಸುವ ಮತ್ತು ಉಲ್ಲೇಖಿಸುವ ಬಗ್ಗೆ ಪೋಷಕರಿಗೆ ನಿಜಕ್ಕೂ ಪ್ರಾವೀಣ್ಯತೆ ದೊರಕಬೇಕು. ಮನೆಯಲ್ಲಿ ಯಾರ್ಯಾರು ಯಾವ್ಯಾವ ವಿಷಯವನ್ನು ಹೇಳಿಕೊಡುವುದು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಬೇಕು. ಜೊತೆಗೆ ಇತರರೂ ವಿಷಯಗಳನ್ನು ಬದಲಾಯಿಸಿಕೊಳ್ಳಬಹುದು. ಆದರೆ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕು. ಒಬ್ಬರೇ ಎಲ್ಲವನ್ನೂ ಹೊತ್ತುಕೊ ಳ್ಳಬಹುದು. ಆದರೆ ಹಂಚಿಕೊಂಡಿರುವ ಜವಾಬ್ದಾರಿಗಳಿಂದ ಹೊರೆ ಕಡಿಮೆಯಾಗುತ್ತದೆ.

10.ಮಗುವು ಶಾಲೆಯಲ್ಲಿ ಪಡೆಯಬಹುದಾದ ಅನೇಕ ಸಂಗತಿಗಳಿಂದ ವಂಚಿತವಾಗುವುದಂತೂ ನಿಜ. ಆದರೆ ಅದಕ್ಕೇನೂ ಮರುಗುವ ಅಗತ್ಯವಿಲ್ಲ. ಮನೆಯವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೋಗುವ ಪ್ರವಾಸಗಳು ಪರೋಕ್ಷ ಶೈಕ್ಷಣಿಕ ಪ್ರವಾಸವಾಗಿರಬೇಕು. ಸಂಗೀತ, ನೃತ್ಯ, ಚಿತ್ರಕಲೆ, ಕರಾಟೆ, ಯೋಗ; ಹೀಗೆ ಮಗುವಿಗೆ ಯಾವುದೇ ಆಸಕ್ತಿ ಇದ್ದರೂ ಅದಕ್ಕೆ ಖಾಸಗಿ ತರಗತಿಗಳಿಗೆ ಕಳುಹಿಸಬೇಕು. ಇದಕ್ಕೆ ಹೊರತಾಗಿ, ನೆರೆಹೊರೆಯ ಮಕ್ಕಳ ಜೊತೆ ಆಡಲು ಬಿಡಬೇಕು. ಆದರೆ ಬೇರೆ ಮಕ್ಕಳಿಗೆ ಸ್ಕೂಲ್ ರಜೆ ಇದೆಯೆಂದು ಮನೆಯಲ್ಲೂ ಕಲಿಕೆಗೆ ರಜೆ ಕೊಡಬಾರದು. ಮನೆಗೆ ಸಂಬಂಧಿಗಳು ಬಂದಾಗ, ಎಲ್ಲಿಗಾದರೂ ಹೋದಾಗ ಅನಿವಾರ್ಯವಾಗಿ ಕಲಿಕೆಯನ್ನು ಅಂದು ತಡೆಯಬೇಕಾಗುತ್ತದೆ.

ದಿನದ ತರಗತಿ

1.ದಿನವೂ ಜೈವಿಕ ಅಲರಾಂ ಅಳವಡಿಸಿಕೊಂಡಂತೆ ಮುಂಜಾನೆಯೇ ಎದ್ದುಬಿಡಬೇಕು. ಐದೂವರೆ ಅಥವಾ ಆರು ಗಂಟೆ ಸೂಕ್ತವಾದದ್ದು. 2.ಎದ್ದಾದ ನಂತರದ ಕಾರ್ಯಕ್ರಮಗಳು ಮುಗಿದ ಮೇಲೆ ವ್ಯಾಯಾಮ.

3.ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಚ್ಚಿನ ಆಸಕ್ತಿ ಇರುತ್ತದೆ. ವಿಧ ವಿಧವಾದ ಕಾರ್ಯಕ್ರಮಗಳ ಆಯ್ಕೆಯನ್ನು ಅವರಿಗೇ ಕೊಟ್ಟುಬಿಟ್ಟು ಅವರ ಸ್ವಾತಂತ್ರ್ಯವನ್ನು ಆನಂದಿಸಲು ಬಿಡಬೇಕು. ಇದು ತಾಯಿ ಅಥವಾ ತಂದೆ ತಮ್ಮ ಬೆಳಗಿನ ಉಪಹಾರ ಸೇವಿಸಿ, ತಮ್ಮ ಕೆಲಸಕ್ಕೆ ತೊಡಗುವವರೆಗೂ.

4.ಬೆಳಗ್ಗೆ ಒಂಬತ್ತು ಗಂಟೆಗೆ ಅಥವಾ ಒಂಬತ್ತೂವರೆಗೆ ಹೋಂ ಸ್ಕೂಲಿಂಗ್ ಪ್ರಾರಂಭಿಸಬೇಕು.

5.ತೀರಾಪುಟ್ಟ ಮಕ್ಕಳಾದರೆ ಒಂದೊಂದು ವಿಷಯಕ್ಕೆ ಅರ್ಧರ್ಧಗಂಟೆ ಸಾಕು. ಸ್ವಲ್ಪ ಬೆಳೆದ ಮಕ್ಕಳಾದರೆ ಮುಕ್ಕಾಲುಗಂಟೆ ಅಥವಾ ವಿಷಯ ವಿಸ್ತರಿಸಿದರೆ, ಅವರ ಆಸಕ್ತಿಗೆ ತಕ್ಕಂತೆ ಒಂದುಗಂಟೆಯವರೆಗೂ ಹೋಗಬಹುದು.

6.ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೂ ಕಲಿಯಲು, ಚಟುವಟಿಕೆಗಳಿಗೆ ನಿಜವಾಗಿಯೂ ಸೂಕ್ತಕಾಲ. ಯಾವ ಒತ್ತಡವೂ ಇಲ್ಲದಂತೆ ಜೊತೆಗಿದ್ದು ಕಲಿಸಿ. ನಂತರ ಅವರನ್ನು ಅವರ ಆಸಕ್ತಿಗನುಗುಣವಾಗಿ ವಿಷಯವನ್ನು ಆಯ್ದುಕೊಂಡು, ತಮಗೆ ಬೇಕಾದದ್ದನ್ನು ಮಾಡಿಕೊಂಡಿರಲು ಬಿಟ್ಟುಬಿಡಿ. ದಿನವೆಲ್ಲಾ ಪಾಠ ಪಾಠವೆಂದು ಎಂದಿಗೂ ಕಾಟ ಕೊಡಬೇಡಿ. ಒಂದು ವೇಳೆ ಮಗುವು ನಾಲ್ಕನೇ ತರಗತಿಗಿಂತ ಹಿರಿದಾಗಿರುವ ಪಕ್ಷದಲ್ಲಿ ಹೋಂ ಸ್ಕೂಲಿಂಗ್ ಇನ್ನೂ ಬೇಗ, ಅಂದರೆ 8:30ಕ್ಕೇ ಆರಂಭಿಸಿ. ಸಾಧ್ಯವಾದಷ್ಟು ಬೋಧನೆಯ ಕೆಲಸಗಳನ್ನು ಮಧ್ಯಾಹ್ನದ ನಂತರ ಬೇಡ.

7.ಮಧ್ಯಾಹ್ನ ಊಟದ ನಂತರ ಅವರೇ ಏನಾದರೂ ಮಾಡಿಕೊಂಡಿರಲು ಪ್ರೋತ್ಸಾಹಿಸಿ. ಒಂದುವೇಳೆ ನಿಮ್ಮ ಪ್ರವೇಶವನ್ನು ಬಯಸಿದರೆ ಮಾತ್ರ ನೆರವಾಗಿ. ಇಲ್ಲವಾದರೆ ಗಮನಿಸಿ, ಮಧ್ಯೆ ಪ್ರವೇಶಿಸದಿರಿ. ಮಧ್ಯಾಹ್ನವೂ ಮಗುವಿನೊಂದಿಗೆ ಕುಳಿತುಕೊಂಡು ಪಾಠ ಹೇಳಿಕೊಡುವ ಸಾಹಸ ಮಾಡಬೇಡಿ. ಅದು ಬಹಳ ತ್ರಾಸದಾಯಕ ಅವಧಿ.

8.ಸಂಜೆ ನಾಲ್ಕು ಗಂಟೆಯ ನಂತರ ಯಾವುದಾದರೂ ಕ್ರೀಡೆ ಅಥವಾ ಕಲೆಯಲ್ಲಿ ತರಬೇತಿ ಹೊಂದಲು ಹೋಗುವುದಕ್ಕೆ ಪ್ರೋತ್ಸಾಹ ನೀಡಿ. ವಾರಪೂರ್ತಿಯಂತೂ ಕಲೆಯ ತರಗತಿಗಳು ಇರುವುದಿಲ್ಲ. ಹಾಗಾಗಿ ವಾರದಲ್ಲಿ ಒಂದು ವೇಳಾಪಟ್ಟಿಯನ್ನು ಸಿದ್ಧ ಮಾಡಿಕೊಂಡು ಅದನ್ನು ಅನುಸರಿಸುವುದು ಸೂಕ್ತ.

9.ಸಂಜೆ 6ರ ನಂತರ ಕೆಲವು ಕಾಲ ಟಿವಿ ನೋಡುವುದು, ಹೊರಗೆ ಹೋಗುವುದು, ಯಾವುದಾದರೂ ಪುಸ್ತಕವನ್ನು ಓದುವುದು, ಎಲ್ಲರೂ ಆಟವಾಡುವುದು, ಯಾರಾದರೊಬ್ಬರ ಮನೆಗೆ ಹೋಗಿ ಬರುವುದು, ಷಾಪಿಂಗ್, ನಾಳಿನ ತರಗತಿಗೆ ಸಿದ್ಧತೆ, ಬೆಳಗ್ಗೆ ಕಲಿತಿರುವುದರ ಬಗ್ಗೆ ಲಘು ಪುನರಾವರ್ತನೆ; ಹೀಗೆ ವೈವಿಧ್ಯಮಯವಾಗಿರಲಿ.

10.ಸಂಜೆ ಹೊತ್ತು ಯಾವಾಗ ಸಾಧ್ಯವಾಗುತ್ತದೋ ಆಗ ಒಮ್ಮೆ ಇಂದು ಬೆಳಗ್ಗೆ ಕಲಿತಿರುವುದರ ಬಗ್ಗೆ ಸಣ್ಣದಾಗಿ ಕಣ್ಣಾಡಿಸಿ, ಏನನ್ನು ಕಲಿತಿದೆಯೋ ಅದನ್ನು ಡೈರಿಯಲ್ಲಿ ಬರೆಯುವ ಅಭ್ಯಾಸವನ್ನು ಮಗುವಿಗೆ ಮಾಡಿಸಿ. ಮಗುವು ದಿನದಿನಕ್ಕೆ ತಾನು ಏನೇನು ಕಲಿಯುತ್ತಿದ್ದೇನೆ ಎಂದು ದಾಖಲು ಮಾಡುವುದು, ಅದರಿಂದಲೇ ಮಾಡಿಸುವುದು ತುಂಬಾ ಅಗತ್ಯ.

11.ಭಾಷೆ, ಗಣಿತ, ವಿಜ್ಞಾನ ಇವುಗಳೊಂದಿಗೆ ಹಾಡು, ಕರಕುಶಲ ಚಟುವಟಿಕೆಗಳು ಇದ್ದೇ ಇರುವಂತೆ ನೋಡಿಕೊಳ್ಳಿ. ಓದಿದ್ದೆಲ್ಲವನ್ನೂ, ಬರೆದುದ್ದೆಲ್ಲವನ್ನೂ ದಾಖಲು ಮಾಡುವಂತೆ ಕರಕುಶಲತೆಗಳ ಸಾಕ್ಷಿಗಳನ್ನೂ ಭದ್ರಪಡಿಸಿ. ಇದು ಮುಂದೆ ಅಫಿಲಿಯೇಟ್ ಆಗುವ ಶಾಲೆಗೆ ಅಥವಾ ಶಿಕ್ಷಣ ಇಲಾಖೆಗೂ ಕೂಡ ಸಲ್ಲಿಸಬೇಕಾದ ಪ್ರಮೇಯ ಒದಗಬಹುದು.

12.ತರಗತಿ ನಡೆಯುವ ಸಮಯಗಳು, ಪಾಠಗಳ ವಿವರ, ಚಟುವಟಿಕೆಗಳ ಎಲ್ಲಾ ವಿವರಗಳನ್ನೂ ಕೂಡ ದಾಖಲು ಮಾಡಬೇಕು. ವಿಶೇಷ ಕಲಿಕೆಯೇನಾದರೂ ಉಂಟಾದಲ್ಲಿ ಅದನ್ನೂ ಕೂಡ ದಾಖಲಿಸಬೇಕು. ಮನೆಗ್ಯಾರೋ ಬಂದವರು, ಅಥವಾ ಹೊರಗೆಲ್ಲೋ ಹೋದಾಗ ಏನಾದರೂ ಕಲಿತಿರುವುದನ್ನೂ ಕೂಡ ದಾಖಲಿಸಬೇಕು. ಅಷ್ಟೇ ಮುಖ್ಯವಾಗಿ ಅದು ಮುಂದೆ ಒಂದೆರಡು ದಿನಗಳಲ್ಲಿ ಪುನರ್ ಸ್ಮರಣೆಗೆ ತಂದುಕೊಳ್ಳುವಂತೆ, ಪುನರಾವರ್ತಿತವಾಗುವಂತೆ ನೋಡಿಕೊಳ್ಳಬೇಕು. ಹೋಂ ಸ್ಕೂಲ್‌ಗಳಲ್ಲಾಗಲಿ, ಶಾಲಾ ಸಂಸ್ಥೆಗಳಲ್ಲಾಗಲಿ ಇದು ಬಹಳ ಮುಖ್ಯ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News