ನೈತಿಕ ಅರ್ಹತೆ

Update: 2016-08-29 06:43 GMT

ಮಕ್ಕಳು ಕೈಯೆತ್ತಿ ಎಂದರೆ ಕೈ ಎತ್ತುತ್ತಿದ್ದವು. ನಿಮ್ಮ ಕೈಗಳಲ್ಲಿ ಭೂಮಿಯನ್ನು ಉಂಡೆಯೊಂದು ಇದೆ ಎಂದು ಭಾವಿಸಿ ಎಂದರೆ ಗಾಳಿಯಲ್ಲಿ ಉಂಡೆ ಮಾಡುವಂತೆ ಮಾಡುತ್ತಿದ್ದವು. ಸುಮಾರು ಇಪ್ಪತ್ತು ನಿಮಿಷಗಳಕ್ಕೂ ಹೆಚ್ಚು ಕಾಲ ಮಕ್ಕಳು ಹಾಗೆಯೇ ಬಿಸಿಲಿನಲ್ಲಿ ಅವರಿಗೆ ಅರ್ಥವೇ ಆಗದಂತಹ ವಿಷಯಗಳನ್ನು ಕಿವಿಗೆ ಹಾಕಿಕೊಂಡು ಅಥವಾ ಹಾಕಿಕೊಳ್ಳುತ್ತಿರುವಂತೆ ನಟಿಸುತ್ತಾ ಕುಳಿತಿದ್ದರು. ಇನ್ನು ಇತರ ಸಹಾಯಕ ಉಪಾಧ್ಯಾಯರು ಮತ್ತು ಉಪಾಧ್ಯಾಯಿನಿಯರು ಅಲ್ಲಲ್ಲಿ ಕುಳಿತುಕೊಂಡು ಹರಟಿಕೊಂಡು ಕುಳಿತಿದ್ದರು. ನಗುತ್ತಾ, ಹಾಸ್ಯ ಚಟಾಕಿ ಹಾರಿಸಿಕೊಂಡು ತಮ್ಮ ಪಾಡಿಗೆ ತಾವು ಮಾತಿನಲ್ಲಿ ತೊಡಗಿಕೊಂಡಿದ್ದರು.


ಮಕ್ಕಳ ಸುಳ್ಳಾಗಲಿ, ಕಳ್ಳತನವಾಗಲಿ, ಅಥವಾ ಯಾವುದೇ ರೀತಿಯ ಅಗೌರವ ಅನ್ನಿಸುವುದಾಗಲಿ ನಾವು ನೋಡಬೇಕಾಗಿರುವುದು ಅವರ ಮಟ್ಟದಿಂದ. ನಾನು ಬಂದಿದ್ದೇನೆ. ನನ್ನ ವಂದನೆಗೆ ಪ್ರತಿವಂದನೆ ಸಲ್ಲಿಸಲಿಲ್ಲ. ಗೌರವಿಸಲಿಲ್ಲ, ಎಂದು ಹಿರಿಯರ ಬಳಿ ನಿರೀಕ್ಷಿಸುವಂತೆ ಮಕ್ಕಳ ಬಳಿ ನಿರೀಕ್ಷಿಸುವಂತಿಲ್ಲ.


ಗುರು ಹಿರಿಯರನ್ನು ಗೌರವಿಸಿ

ತಾಯಿ, ತಂದೆ, ಗುರುಗಳು, ಹಿರಿಯರು ದೇವರ ಸಮಾನ ಅವರನ್ನು ಗೌರವಿಸಿ. ಇದು ಮಕ್ಕಳಿಗೆ ಎಲ್ಲಾ ಕಡೆಗಳಿಂದಲೂ ಸಿಗುವ ಬೋಧನೆ. ಯಾರಾದರೂ ಬಂದರೆ ಎದ್ದು ನಿಂತು ಗೌರವಿಸಿ. ನಮಸ್ಕಾರ ಹೇಳಿ. ಅತಿಥಿಗಳಾಗಿ ಬಂದವರಿಗೆ ಮೊದಲು ಆದ್ಯತೆ ನೀಡಿ. ಚುರುಕಾಗಿರಿ. ಅಧಿಕ ಪ್ರಸಂಗಿಗಳಂತೆ ವರ್ತಿಸಬೇಡಿ, ಇತ್ಯಾದಿ ಮಾತುಗಳನ್ನು ಅಥವಾ ಸಲಹೆ ಸೂಚನೆಗಳನ್ನು ಮಕ್ಕಳು ಸದಾ ಪಡೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಸರಕಾರಿ ಶಾಲೆಯೊಂದಕ್ಕೆ ರಂಗ ಶಿಕ್ಷಣದ ಕಾರ್ಯಾಗಾರದ ಆರಂಭದ ಮೊದಲನೆಯ ದಿನದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದರು. ನಾನು ಕಾರ್ಯಕ್ರಮದ ಅಧ್ಯಕ್ಷನಾಗಿದ್ದರೆ, ಹಳೆಯ ಮತ್ತು ಖ್ಯಾತ ಕನ್ನಡ ದಿನಪತ್ರಿಕೆಯೊಂದರ ಮುಖ್ಯ ಸಂಪಾದಕರು ಕಾರ್ಯಕ್ರಮದ ಉದ್ಘಾಟಕರಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋಗುವಾಗ ಅವಧಿಗೆ ಮುನ್ನವೇ ಹೋದರೆ ವೇದಿಕೆಯ ಮೇಲೆ ನಡೆಯುವ ಔಪಚಾರಿಕ ವಿಷಯಗಳಿಗೆ ಹೊರತಾದ ಮಾತುಕತೆಗಳು ನಡೆಯುತ್ತವೆ. ನಮ್ಮ ಆಸಕ್ತಿಯ ಮತ್ತು ಅಗತ್ಯದ ಹಲವು ವಿಚಾರಗಳ ಕೊಡುಕೊಳ್ಳುವಿಕೆಯಾಗುತ್ತದೆ ಎಂದು ಆದಷ್ಟು ಬೇಗನೇ ಹೋಗುತ್ತೇನೆ. ಕೆಲವೊಮ್ಮೆ ಆಯೋಜಕರಿಗಿಂತ ಬೇಗ ಹೋಗಿರುವುದೂ ಉಂಟು ಎಂದು ಹೇಳಿದರೆ ಅತಿ ಎನ್ನಿಸುವುದಾದರೂ ನಿಜ.

ಮಕ್ಕಳಿಗೆ ಸಹಸ್ರಾರದ ತರಂಗಗಳು

ಶಾಲೆಯ ಮೈದಾನದಲ್ಲಿ ಪ್ರಾರ್ಥನೆ ಮುಗಿದ ಮೇಲೆ ಮಕ್ಕಳೆಲ್ಲರೂ ಬಿಸಿಲಿನಲ್ಲಿ ಕಣ್ಮುಚ್ಚಿ ಧ್ಯಾನಕ್ಕೆ ಕುಳಿತಂತೆ ಕುಳಿತರು. ನಂತರ ಧ್ವನಿವರ್ಧಕದಲ್ಲಿ ಅವರಿಗೆ ರೆಕಾರ್ಡೆಡ್ ಸೂಚನೆಗಳು ದೊರಕುತ್ತಿದ್ದವು. ಮೊದಲು ಇಂಗ್ಲಿಷ್‌ನಲ್ಲಿ ನಂತರ ಕನ್ನಡದಲ್ಲಿ ಸಾಲುಗಳು ಬರುತ್ತಿದ್ದವು. ಅದರ ಕೆಲವು ತುಣುಕುಗಳು ಹೀಗಿವೆ. ‘‘ನಿಮ್ಮ ಮಣಿಪೂರದ ಚಕ್ರದ ಮೇಲೆ ಉಂಟಾಗುತ್ತಿರುವ ಸಂಚಲನವನ್ನು ಗಮನಿಸಿ. ಆ ಶಕ್ತಿಯ ಸಂಚಲನವು ಹಾಗೆಯೇ ಮುಂದುವರಿಯುವಾಗ ಅದು ಉಂಟು ಮಾಡುವ ಕಂಪನಗಳನ್ನು ಗಮನಿಸಿ.’’ ಆ ತರಂಗಗಳು ನಿಮ್ಮ ಇಡೀ ದೇಹದ ಪೂರ್ತಿ ಆವರಿಸುತ್ತಿವೆ. ಇದೇ ತರಂಗಗಳು ವಿಶ್ವದ ಅಲೆಗಳಲ್ಲಿ ಒಂದಾಗುತ್ತಿರುವುದನ್ನು ಗಮನಿಸಿ. ಭಗವಂತನು ಅದೇ ಅಲೆಗಳಲ್ಲಿ ನಿಮ್ಮಿಂದಿಗೆ ಸಂಪರ್ಕಿಸುತ್ತಿದ್ದಾನೆ.

ನಿಮ್ಮ ಶಕ್ತಿಯನ್ನು ಈಗ ಸಹಸ್ರಾರ ಚಕ್ರಕ್ಕೆ ಒಯ್ಯಿರಿ. ಸಹಸ್ರಾರ ಚಕ್ರದಿಂದ ಉದ್ಭವಿಸುವ ಅಲೆಗಳು ಎಲ್ಲೆಡೆ ಪಸರಿಸುತ್ತಿರುವುದನ್ನು ಗಮನಿಸಿ. ಮಕ್ಕಳು ಕೈಯೆತ್ತಿ ಎಂದರೆ ಕೈ ಎತ್ತುತ್ತಿದ್ದವು. ನಿಮ್ಮ ಕೈಗಳಲ್ಲಿ ಭೂಮಿಯನ್ನು ಉಂಡೆಯೊಂದು ಇದೆ ಎಂದು ಭಾವಿಸಿ ಎಂದರೆ ಗಾಳಿಯಲ್ಲಿ ಉಂಡೆ ಮಾಡುವಂತೆ ಮಾಡುತ್ತಿದ್ದವು. ಸುಮಾರು ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಮಕ್ಕಳು ಹಾಗೆಯೇ ಬಿಸಿಲಿನಲ್ಲಿ ಅವರಿಗೆ ಅರ್ಥವೇ ಆಗದಂತಹ ವಿಷಯಗಳನ್ನು ಕಿವಿಗೆ ಹಾಕಿಕೊಂಡು ಅಥವಾ ಹಾಕಿಕೊಳ್ಳುತ್ತಿರುವಂತೆ ನಟಿಸುತ್ತಾ ಕುಳಿತಿದ್ದರು. ಇನ್ನು ಇತರ ಸಹಾಯಕ ಉಪಾಧ್ಯಾಯರು ಮತ್ತು ಉಪಾಧ್ಯಾಯಿನಿಯರು ಅಲ್ಲಲ್ಲಿ ಹರಟಿಕೊಂಡು ಕುಳಿತಿದ್ದರು. ನಗುತ್ತಾ, ಹಾಸ್ಯ ಚಟಾಕಿ ಹಾರಿಸಿಕೊಂಡು ತಮ್ಮ ಪಾಡಿಗೆ ತಾವು ಮಾತಿನಲ್ಲಿ ತೊಡಗಿಕೊಂಡಿದ್ದರು. ನಾನು ಮುಖ್ಯೋಪಧ್ಯಾಯಿನಿಯನ್ನು ಕೇಳಿದೆ. ‘‘ಇದು ಏನು?’’

‘‘ಅದ್ಯಾರೋ ಸಂಸ್ಥೆಯವರು, ಮೆಮೊರಿ ಇಂಪ್ರೂವ್ ಮಾಡಕ್ಕೆ ಅದೇನೋ ಹೇಳಿಕೊಡ್ತಾ ಇದ್ದಾರೆ.’’
‘‘ಅದು ಯಾವ ಸಂಸ್ಥೆ, ಏನು ಹೇಳಿಕೊಡ್ತಾ ಇದ್ದಾರೆ?’’
 ಮುಖ್ಯೋಪಧ್ಯಾಯಿನಿಗೆ ಅದು ಯಾವ ಸಂಸ್ಥೆ? ಅದರ ಹಿನ್ನೆಲೆಯೇನು? ಅವರ ಕಾರ್ಯಚಟುವಟಿಕೆಗಳೇನು? ಅವರ ಕಾರ್ಯಕ್ರಮದ ಉದ್ದೇಶವೇನು? ಅದರ ರೂಪುರೇಷೆಗಳೇನು? ಎಂತದ್ದಾದರೂ ಗೊತ್ತಿರುವುದಿರಲಿ, ಆ ಸಂಸ್ಥೆಯ ಹೆಸರೇ ತಿಳಿದಿರಲಿಲ್ಲ. ನಾನು ಆಕೆಗೆ ನೆನಪಿಸಿಕೊಳ್ಳಲು ಅವಕಾಶ ನೀಡಿದೆ. ಬಿಟ್ಟೂ ಬಿಡದಂತೆ ಯಾವುದು ಯಾವುದು ಎಂದು ಬಲವಂತದಿಂದಲೇ ಕೇಳಿದೆ. ಅದೆಲ್ಲೋ ಅವರದು ಕರಪತ್ರ ಇತ್ತು. ಇಲ್ಲೇ ಎಲ್ಲೋ ಇದೆ ಎಂದು ಹೇಳುತ್ತಿದ್ದಾರೆಯೇ ಹೊರತು ಹಲವು ದಿನಗಳಿಂದ ಕಾರ್ಯಾಗಾರದಂತೆ ನಡೆಯುತ್ತಿರುವ ಆ ಕಾರ್ಯಕ್ರಮದ ಬಗ್ಗೆ ಅವರಿಗೆ ಏನೇನೂ ಮಾಹಿತಿ ಇರಲಿಲ್ಲ. ಏನೋ ಮೆಮೋರಿ ಇಂಪ್ರೂವ್ ಮಾಡಕ್ಕೆ, ಕಾನ್ಸನ್ಟ್ರೇಶನ್ ಜಾಸ್ತಿ ಮಾಡ್ತಾರಂತೆ ಅಷ್ಟೇ ಕಾರ್ಯಾಗಾರ ಮಾಡುತ್ತಿರುವವರ ಬಗ್ಗೆ ಅವರಿಗಿರುವ ಅರಿವು.

ಸರಿ, ಈಗ ನಾನು ಭಾಗವಹಿಸುತ್ತಿರುವ ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಕೇಳಿದೆ. ಅದೂ ಗೊತ್ತಿಲ್ಲ. ‘‘ನನಗೇನೂ ಗೊತ್ತಿಲ್ಲ. ಅದೇನೋ ವಾರದ ಕೊನೆಯಲ್ಲಿ ನಾಟಕ ಹೇಳ್ಕೊಡ್ತಾರಂತೆ ಇವತ್ತು ಶುರು ಮಾಡ್ತಿದ್ದಾರೆ.’’ ಇಷ್ಟೇ ಆಕೆಗೆ ತಿಳಿದಿದ್ದದ್ದು. ಅಂದಿನ ದಿನದ ಅತಿಥಿಗಳು ಯಾರು? ಕಾರ್ಯಕ್ರಮ ಹೇಗೆ ನಡೆಯುತ್ತದೆ? ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಜವಾಬ್ದಾರಿಗಳೇನು? ಎಂತದ್ದೂ ಗೊತ್ತಿಲ್ಲ. ಸಂಘಟಿಸುತ್ತಿದ್ದವರು ನನ್ನ ಕರೆದುಕೊಂಡು ಹೋಗಿ ಆಕೆಗೆ ಪರಿಚಯಿಸಿದರೆ ಆಕೆ ನಮಸ್ಕಾರ ಕೂಡ ಹೇಳದೇ ಒಂದು ನೀರಸ ನಗೆ ನಕ್ಕು ತಲೆಯಾಡಿಸಿ, ಆಡಿಸಿದ ತಲೆಯಲ್ಲೇ ಕುಳಿತುಕೊಳ್ಳಲು ಸೂಚಿಸಿ ತಾನೇನೋ ಬರೆಯುತ್ತಿರುವುದನ್ನು ಮುಂದುವರಿಸಿದರು. ಅವರ ಎದುರಿಗೆ ಮಾತಾಡಿಸುವವರು ಯಾರೂ ಇಲ್ಲದೇ ಸುಮಾರು ಮುಕ್ಕಾಲು ಗಂಟೆ ಕುಳಿತಿದ್ದಾಗ ಮಕ್ಕಳ ಮತ್ತು ಶಿಕ್ಷಕರ ಸಂಗತಿಗಳನ್ನು ಅಲ್ಲಿ ಗಮನಿಸಲು ಸಾಧ್ಯವಾಯಿತು. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಯ ಸಂಪಾದಕರು ಬಂದರು. ಅವರಿಗೂ ಅದೇ ಗತಿ. ಇನ್ನು ನಾವಿಬ್ಬರೂ ಸಂಭಾಷಣೆಗೆ ತೊಡಗಿಕೊಂಡೆವು. ಇದ್ದಕ್ಕಿದ್ದಂತೆ ಇಡೀ ಆಫೀಸ್ ರೂಮಿನಲ್ಲಿ ಸಂಚಲನ.

ನಾವಿಬ್ಬರು ವ್ಯಕ್ತಿಗಳು ಅಲ್ಲಿ ಇಲ್ಲವೇ ಇಲ್ಲ ಎಂಬಂತಿದ್ದ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕಿ ಇದ್ದಕ್ಕಿದ್ದಂತೆ ದಡಬಡಿಸಿ ಎದ್ದು ಒಳಗೆ ಬಂದ ವ್ಯಕ್ತಿಗೆ ಮುಖ್ಯೋಪಧ್ಯಾಯಿನಿ ಕೂರುವ ಕುರ್ಚಿಯಲ್ಲಿ ಕೂರಿಸಿದರು. ಅವರು ಕುಳಿತುಕೊಂಡು ತಮಗೆ ವಂದಿಸಿದವರಿಗೆಲ್ಲ ಲಘುವಾಗಿ ಪ್ರತಿವಂದಿಸಿ, ನಮ್ಮ ಕಡೆ ನೋಡಿದರು. ಕಾರ್ಯಕ್ರಮದ ಆಯೋಜಕರು ನಮ್ಮನ್ನು ಅವರಿಗೆ ಪರಿಚಯಿಸಿದರು. ಅವರು ಬಿ ಇ ಓ ಅಂತೆ. ಅವರದ್ದೂ ಮುಖ್ಯೋಪಧ್ಯಾಯಿನಿಯ ಪ್ರತಿಕ್ರಿಯೆಗಿಂತ ತೀರಾ ಭಿನ್ನವೇನಾಗಿರಲಿಲ್ಲ. ನಾವು ಅಲ್ಲಿ ಕುಳಿತಿದ್ದಂತೆಯೇ ಮುಖ್ಯೋಪಧ್ಯಾಯಿನಿ ಮತ್ತು ಬಿ ಇ ಓ ಇಬ್ಬರೂ ಕಾಣಲಿಲ್ಲ. ನಮ್ಮನ್ನು ಆಯೋಜಕರು ಕರೆದುಕೊಂಡು ಹೋದಾಗ ನಮಗಿಂತ ಮುಂಚೆಯೇ ವೇದಿಕೆಯ ಮೇಲೆ ಅವರಿಬ್ಬರೂ ಕುಳಿತುಕೊಂಡು ತಮ್ಮತಮ್ಮಲ್ಲಿ ಮಾತಾಡಿಕೊಂಡಿದ್ದರು. ಇದಕ್ಕೆ ಮುಂಚೆ ವಿಷಯಗಳನ್ನು ಗಮನಿಸಲು ನಾನು ಅಡ್ಡಾಡುತ್ತಿದ್ದಾಗ ಯಾವುದೋ ಒಂದು ವಿದ್ಯಾರ್ಥಿಯು ತರಗತಿಯಿಂದ ಹೊರಗೆ ಆತುರವಾಗಿ ಬರುತ್ತಿದ್ದ. ಅವನ ಹಿಂದೆ ಬರುತ್ತಿದ್ದ ಉಪಾಧ್ಯಾಯಿನಿ. ನಾನು ನಿನ್ನ ಹಿಂದೆ ಬರ್ತಿದ್ದೀನಿ. ನೀನು ನನಗಿಂತ ಮುಂಚೆ ದನ ನುಗ್ಗಿದ ಹಾಗೆ ನುಗ್ಗುತ್ತಿದ್ದೀಯಾ! ಎಂದು ಗದರಿಸುತ್ತಿದ್ದರು.

ಕಣ್ಮುಚ್ಚದೇ ಅಲ್ಲಿ ಇಲ್ಲಿ ನೋಡುತ್ತಿದ್ದ ಮಕ್ಕಳು ಕಣ್ಮುಚ್ಚಿ ಕುಳಿತುಕೊಳ್ಳಲು ಗದರಿಸಿ, ತಾವು ಮತ್ತೆ ತಮ್ಮ ಹರಟೆಯನ್ನು ಮುಂದುವರಿಸುತ್ತಿದ್ದ ಶಿಕ್ಷಕರನ್ನು ಕಂಡಿದ್ದೆ. ಅವರ ವೃತ್ತಿಗೆ ಸಂಬಂಧಿಸಿದಂತಹ ಮೇಲಧಿಕಾರಿಯಾದ್ದರಿಂದ ಇಡೀ ಕಾರ್ಯಾಲಯ ಎದ್ದು ನೀಡುವ ಗೌರವಕ್ಕೂ ನಮಗೆ ಕೂತ್ಕೊಳ್ಳಿ ಎಂದು ತೂಗುವ ತಲೆಯಿಂದ ಸೂಚಿಸುವ ಗೌರವವನ್ನು ಗಮನಿಸಿದ್ದೆ. ನಂತರ ಕಾರ್ಯಕ್ರಮದಲ್ಲಿ ಮುಂದೆ ಪ್ರತ್ಯೇಕವಾಗಿ ಮಕ್ಕಳ ಎರಡು ಸಾಲಿದ್ದು ಅವರು ದಡ್ಡ ಮಕ್ಕಳು ಎಂದು ಏನು ಕಲಿಸಿದರೂ ಕಲಿಯಲು ಬಾರದವು, ಈ ನಾಟ್ಕನಾದ್ರೂ ಕಲೀಲಿ ಅಂತ ಇರುವ ಅವರ ಆಶಯವನ್ನು ಕಂಡು ಆಘಾತಗೊಂಡೆ. ನಮ್ಮ ಶಾಲೆಯ ಈ ಮಕ್ಕಳಿಗೆ ನಾವು ಕಲಿಕೆಗೆ ಎಲ್ಲಾ ಬಗೆಯ ಉತ್ತೇಜನ ಕೊಡುತ್ತಿದ್ದೇವೆ. ಆದರೆ ಇವರು ಮಾತ್ರ ನಮ್ಮಿಂದಿಗೆ ಸಹಕರಿಸುತ್ತಿಲ್ಲ. ಸದಾ ಆಟ ಆಡುವುದರಲ್ಲೇ ಆಸಕ್ತಿ. ಮನೆಯಲ್ಲಿ ಹೋಂ ವರ್ಕ್ ಸರಿಯಾಗಿ ಮಾಡುವುದಿಲ್ಲ. ಹೇಳಿದ್ದನ್ನು ಕಲಿಯುವುದಿಲ್ಲ.

ನಾಟಕದಿಂದಾದರೂ ಇವರು ಸರಿ ಹೋಗಬಹುದು ಎಂಬ ನಿರೀಕ್ಷೆ ಎಂದು ಮುಖ್ಯೋಪಧ್ಯಾಯಿನಿ ಎಂಬ ಮಾದರಿ ವ್ಯಕ್ತಿ ಹೇಳುತ್ತಿರುವುದನ್ನು ಕೇಳಿದೆ. ಯಾವ ನಂಬಿಕೆಯ ಮೇಲೆ, ಎಂತಹ ವಿಶ್ವಾಸದ ಮೇಲೆ ಪೋಷಕರು ಮಕ್ಕಳನ್ನು ಇಂಥಾ ಶಾಲೆಗೆ ಕಳುಹಿಸಿ ಮಕ್ಕಳ ಸಮಗ್ರ ವ್ಯಕ್ತಿತ್ವದ ವಿಕಸನವನ್ನು ಎದುರುನೋಡುವುದು? ಈ ಶಿಕ್ಷಕರೂ ಕೂಡ ಈ ಮಕ್ಕಳಿಂದ ಏನನ್ನು ನಿರೀಕ್ಷಿಸುವುದು? ಯಾವುದೇ ಪೋಷಕರು, ಶಿಕ್ಷಕರು ಮತ್ತು ಹಿರಿಯರು ಮಕ್ಕಳಿಂದ ಏನನ್ನೇ ನಿರೀಕ್ಷಿಸಲು ಅಥವಾ ಅಪೇಕ್ಷಿಸಲು ಅವರಿಗೆ ಮೊದಲು ಒಂದು ಅರ್ಹತೆ ಇರಬೇಕು. ಅವರಿಗೆ ನೈತಿಕವಾದಂತಹ ಬಲವಿರಬೇಕು. ಹಿರಿಯರು ತಮ್ಮ ವ್ಯಕ್ತಿತ್ವದ ಮಾದರಿಗಳನ್ನೇ ಅವರ ಕಣ್ಣೆದುರಿಗಿಟ್ಟು ಅದಕ್ಕೆ ವ್ಯಕ್ತಿರಿಕ್ತವಾಗಿ ತಾವು ಬಯಸುವ ವ್ಯಕ್ತಿತ್ವವನ್ನು ನಿರೀಕ್ಷಿಸುವುದು ಅತ್ಯಂತ ಹುಂಬತನವೇ ಆಗುತ್ತದೆ. ನಾವು ನೀಡದ ಮಾನ್ಯತೆಯನ್ನು ಮಕ್ಕಳಿಂದ ನಾವು ಬಯಸುವುದು ಒಂದು ಸರ್ವಾಧಿಕಾರದ ಧೋರಣೆಯಾಗುತ್ತದೆ. ಹಿರಿಯರ ಸರ್ವಾಧಿಕಾರದ ಧೋರಣೆಗಳೇ ಮಕ್ಕಳಲ್ಲಿ ಹಟವನ್ನು ಹೆಚ್ಚಿಸುವುದು ಎಂಬುದು ತಿಳಿಯುವ ತನಕ ಮಕ್ಕಳಿಂದ ಎದುರು ನೋಡುವ ನಿರೀಕ್ಷೆ ಮತ್ತು ಅಪೇಕ್ಷೆಗಳು ಬರೀ ಬೋಧನೆಗಳಾಗಿಯೇ ಉಳಿಯುತ್ತದೆ.

ಈ ವಯಸ್ಸಿಗೇ ಸುಳ್ಳು ಕಳ್ಳತನ! 

ವಾಕಿಂಗ್‌ಗೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ನನಗೆ ಎದುರಾಗಿ ಓರ್ವ ತಾಯಿ ಮತ್ತು ಮಗ ರಸ್ತೆಯಲ್ಲಿ ಬರುತ್ತಿದ್ದರು. ಐದಾರು ವರ್ಷದ ಹುಡುಗ ತನ್ನ ತಾಯಿಗೆ ಏನನ್ನೋ ಮೆಲುದನಿಯಲ್ಲಿ ಹೇಳಿಕೊಂಡು ಬರುತ್ತಿದ್ದ. ನಿಧಾನವಾಗಿ ಶಾಂತವಾಗಿ ನಡೆದುಕೊಂಡು ಬರುತ್ತಿದ್ದ ಆ ತಾಯಿ ಪಟ್ಟನೆ ಅವನ ತಲೆಯ ಹಿಂಭಾಗಕ್ಕೆ ಹೊಡೆದರು. ಆ ಹುಡುಗನಿಗೆ ಆಘಾತವಾಗುವುದಿರಲಿ, ನನಗೂ ಕೂಡ ಆಘಾತವಾಯ್ತು. ಅದೆಷ್ಟು ಅನಿರೀಕ್ಷಿತವಾದ ಹೊಡೆತವೆಂದರೆ, ಆ ಹುಡುಗನಿಗೆ ತನಗೆ ಏಟು ಬಿದ್ದಿರುವುದನ್ನು ಗ್ರಹಿಸಲು ಅವನ ತಾಯಿ ಇನ್ನೊಂದು ಹೊಡೆತ ಕೊಡಬೇಕಾಯ್ತು. ನಾನು ತಡೆಯಲಾರದೇ ಕೇಳಿದರೆ, ಆಕೆಗೆ ನಾನು ಕೇಳಿದ್ದು ಅಪಮಾನಿಸಿದಂತಾಗಿ ಏನೂ ಉತ್ತರ ಹೇಳದೇ ಹುಡುಗನನ್ನು ಎಳೆದುಕೊಂಡು ಮುಂದಕ್ಕೆ ಹೋದರು. ಆದರೂ ಪ್ರಶ್ನಿಸಿದ ನನಗೆ ತಾನು ಹೊಡೆದ ಕಾರಣ ತಿಳಿಯಲೆಂದೇ ಆ ಹುಡುಗನನ್ನು ಜೋರಾಗಿ ಬೈಯುತ್ತಿದ್ದಳು. ‘‘ಈ ವಯಸ್ಸಿಗೇ ಇಷ್ಟು ಸುಳ್ಳು! ನಾನು ನಾಲ್ಕೂವರೆಗೇ ಬಂದು ಅಲ್ಲಿ ಬೆಂಚಿನ ಮೇಲೆ ಕೂತಿದ್ದೀನಿ. ನೀನು ಆಟ ಆಡ್ಕೊಂಡು ಎಗರಾಡಿಕೊಂಡಿರೋದನ್ನ ನೋಡಿದ್ದೀನಿ. ಈಗ ಟ್ಯೂಶನ್ ಬಿಟ್ರು ಅಂತೀಯಾ? ಈಗ್ಲೇ ಇಷ್ಟು ಸುಳ್ಳು ಹೇಳುವವನು ದೊಡ್ಡವನಾದ ಮೇಲೆ ಇನ್ನೆಷ್ಟು ಹೇಳ್ತೀಯಾ?’’ ಇದು ಆಕೆ ನನಗೆ ತಿಳಿಸಿದ ತಾನು ಹೊಡೆದುದರ ಕಾರಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News