ವಾಟ್ಸ್‌ಆ್ಯಪ್ ಉಚಿತವೇ, ಅಲ್ಲವೇ? ನಿಮಗೆ ಗೊತ್ತಿಲ್ಲದೆ ನೀವು ಅದರ ಬೆಲೆ ತೆರುತ್ತಿರುವುದು ಹೇಗೆ?
ವಾಟ್ಸ್‌ಆ್ಯಪ್ ಎನ್ನುವುದು ಕೋಟ್ಯಂತರ ಜನರು ಬಳಸುವ ಸೇವೆ. ಹಾಗಿದ್ದರೂ ಕಂಪನಿ ಕೆಲವೇ ಮಿಲಿಯನ್ ಆದಾಯ ಹೊಂದಿದೆ. ಅದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಅದು ಲಾಭವನ್ನೇ ಮಾಡದೆ ಇರಬಹುದು. ಈ ವರ್ಷ ಜನವರಿಯವರೆಗೆ ಮೊದಲ ವರ್ಷದ ಉಚಿತ ಬಳಕೆಯ ನಂತರ ಬಳಕೆದಾರರಿಗೆ ವರ್ಷಕ್ಕೆ ಒಂದು ಡಾಲರ್ ಕಟ್ಟಲು ವಾಟ್ಸ್‌ಆ್ಯಪ್ ತಿಳಿಸುತ್ತಿತ್ತು. ಕನಿಷ್ಠ ಕೆಲವು ಗ್ರಾಹಕರಿಂದಲಾದರೂ ಅದಕ್ಕೆ ಆದಾಯ ಸಿಗುತ್ತಿತ್ತು. ಆದರೆ ನಂತರ ವಾಟ್ಸ್‌ಆ್ಯಪ್ ಸಂಪೂರ್ಣ ಉಚಿತವಾಯಿತು.
ಹೀಗೆ ವಾಟ್ಸ್‌ಆ್ಯಪ್ ಪೂರ್ಣ ಉಚಿತವಾಗಿರುವುದು ಏಕೆ ಎನ್ನುವ ಪ್ರಶ್ನೆ ಬಂತು. ಅದಕ್ಕೆ ಉತ್ತರ ಗುರುವಾರ ಬಂದಿದೆ. ಅದು ಉಚಿತವಲ್ಲ. ವಾಟ್ಸ್‌ಆ್ಯಪ್ ಈವರೆಗೆ ತನ್ನಲ್ಲಿದ್ದ ಬಳಕೆದಾರರ ವಿವರಗಳನ್ನು ಆದಾಯವಾಗಿ ಪರಿವರ್ತಿಸಲು ಹೋಗಿರಲಿಲ್ಲ. ಸಕ್ರಿಯ ಸ್ಮಾಟ್‌ಫೋನ್ ಸಂಪರ್ಕದ ಜೊತೆಗೆ ಸುಮಾರು ಶತಕೋಟಿ ಮಂದಿಯ ಫೋನ್ ನಂಬರ್ ಅದರ ಬಳಿಯಿತ್ತು. ಇದು ಕೆಲವು ಸ್ಥಳೀಯ ಮತ್ತು ಬಾಗಶಃ ಖಾಸಗಿ ಜಾಹೀರಾತುಗಳಿಗಾಗಿ ಬಳಸಬಹುದಾದ ಶ್ರೀಮಂತ ಡಾಟಾ ಸಂಪನ್ಮೂಲ. ಈವರೆಗೆ ವಾಟ್ಸ್‌ಆ್ಯಪ್ ಅದನ್ನು ಮಾಡಿರಲಿಲ್ಲ. ಆದರೆ ಗುರುವಾರ ಎಲ್ಲವೂ ಬದಲಾಗಲು ಆರಂಭಿಸಿತು.
ವಾಟ್ಸ್‌ಆ್ಯಪ್ ಅನ್ನು ಈಗ ಮತ್ತೊಂದು ಉಚಿತ ಸೇವೆಯಾಗಿರುವ ಫೇಸ್‌ಬುಕ್ ಸ್ವಾದೀನಪಡಿಸಿಕೊಂಡಿದೆ. ಮೊಬೈಲ್ ಜಾಹೀರಾತುಗಳಿಂದ ಆದಾಯ ಪಡೆದುಕೊಳ್ಳುತ್ತಿರುವ ದೊಡ್ಡ ಸಂಸ್ಥೆಯಾಗಿದೆ ಫೇಸ್‌ಬುಕ್. ವಾಟ್ಸ್‌ಆ್ಯಪ್ ಸ್ವಾದೀನ ಆರಂಭಿಸಿದ ಕೆಲವೇ ಅವಧಿಯ ನಂತರ ಈ ಸೇವೆಯಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ಸಂಸ್ಥೆ ಪ್ರಯತ್ನಿಸಿದೆ. ಏಕೆಂದರೆ 2014ರಲ್ಲಿ ಅದು 19 ಶತಕೋಟಿ ಅಮೆರಿಕನ್ ಡಾಲರ್ ತೆತ್ತು ವಾಟ್ಸ್‌ಆ್ಯಪ್ ಅನ್ನು ಸ್ವಾದೀನಪಡಿಸಿಕೊಂಡಿದೆ! ಈಗ ತನ್ನ ಕೆಲವು ಬಳಕೆದಾರರ ಮಾಹಿತಿಯನ್ನು ಪೇಸ್‌ಬುಕ್ ಜೊತೆಗೆ ಹಂಚಿಕೊಳ್ಳುತ್ತೇನೆ ಎಂದು ವಾಟ್ಸ್‌ಆ್ಯಪ್ ಹೇಳುತ್ತಿರುವುದು ಮಾತಿಗೆ ತಪ್ಪಿದ ನುಡಿಯಾಗಿ ಕಾಣಿಸುತ್ತಿದೆ. 2014ರಲ್ಲಿ ವಾಟ್ಸ್‌ಆ್ಯಪ್ ಅನ್ನು ಮಾರಿದಾಗ ಸಹ ಸಂಸ್ಥಾಪಕರು ತಮ್ಮ ಬಳಕೆದಾರರ ಡಾಟಾವನ್ನು ಜಾಹೀರಾತು ಉದ್ದೇಶಗಳಿಗೆ ಬಳಸುವುದಿಲ್ಲ ಎಂದೇ ಭರವಸೆ ನೀಡಿದ್ದರು. ಆದರೆ ಈಗ ಎಲ್ಲಾ ಬದಲಾಗುತ್ತಿದೆ. ಸಣ್ಣ ಮಟ್ಟಿನ ಬದಲಾವಣೆಯಾದರೂ ಕೂಡ. ಬಳಕೆದಾರರ ಡಾಟಾವನ್ನು ವಾಟ್ಸ್‌ಆ್ಯಪ್ ಸಂಪೂರ್ಣವಾಗಿ ಏನೂ ಬಳಸಿಕೊಂಡಿಲ್ಲ. ಆದರೆ ಬಳಕೆ ಆರಂಭವಾಗಿದೆ.
ನಿಮಗೆ ಈ ಬಗ್ಗೆ ಸಿಟ್ಟಿದ್ದಲ್ಲಿ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ವಾಟ್ಸ್‌ಆ್ಯಪ್ ಸ್ಥಿತಿಯೂ ಹಾಗಿದೆ. ಈ ಸೇವೆಯನ್ನು ಕಂಪನಿ (ಈಗ ಫೇಸ್‌ಬುಕ್) ಉಚಿತವಾಗಿ ಕೊಡುತ್ತಿದೆ. ವಾಟ್ಸ್‌ಆ್ಯಪ್ ಹಿಂದೆ ಒಂದು ತಂಡವಿದ್ದು, ಬಳಕೆದಾರರಿಗೆ ಎಲ್ಲಾ ಕೂಲ್ ಫೀಚರ್‌ಗಳನ್ನು ಕೊಡುತ್ತಿದೆ. ಹೀಗಾಗಿ ಯಾವುದೋ ಒಂದು ದಾರಿಯಲ್ಲಿ ಆದಾಯ ಹುಡುಕಲೇಬೇಕು. ವೆಬ್‌ನಲ್ಲಿ ಹಣ ಮಾಡುವ ಅತ್ಯುತ್ತಮ ಹಾದಿಯನ್ನು ಗೂಗಲ್ ಮತ್ತು ಪೇಸ್‌ಬುಕ್ ಪದೇ ಪದೇ ತೋರಿಸಿಕೊಟ್ಟಿದೆ. ಉಚಿತವಾದ ಸೇವೆ ನೀಡುವುದು ಮತ್ತು ಜಾಹೀರಾತುಗಳ ಮೂಲಕ ಅದರಲ್ಲಿ ಆದಾಯ ಪಡೆದುಕೊಳ್ಳುವುದು. ನಿಮಗೆ ಸಿಟ್ಟು ಬಂದರೆ ಅದು ನಿಮ್ಮ ಬಾಲಿಶತನವಷ್ಟೇ. ಇಂಟರ್ನೆಟ್ ನಮ್ಮ ಜೀವನ ಪ್ರವೇಶಿಸುವ ಮೊದಲೇ ಮಿಲ್ಟನ್ ಫ್ರೆಡ್‌ಮನ್ "ಉಚಿತ ಎನ್ನುವ ಸೇವೆ ಯಾವುದೂ ಇಲ್ಲ" ಎಂದು ಹೇಳಿದ್ದರು. ಹಿಂದೆಂದಿಗಿಂತಲೂ ಈ ಹೇಳಿಕೆ ಈಗ ನಮಗೆ ಹೊಂದಿಕೊಳ್ಳುತ್ತಿದೆ.
ವಾಟ್ಸ್‌ಆ್ಯಪ್ ಕೆಲವು ಡಾಟಾವನ್ನು ಫೇಸ್‌ಬುಕ್ ಜೊತೆಗೆ ಹಂಚಿಕೊಳ್ಳುವುದಕ್ಕೇ ಆಕ್ರೋಶ ವ್ಯಕ್ತಪಡಿಸಬೇಕಾಗಿಲ್ಲ. ಅದಕ್ಕೆ ಆದಾಯ ಬೇಕಿದೆ. ಹೀಗಾಗಿ ಅದು ತನಗೆ ಹಣ ತಂದುಕೊಡಬಲ್ಲ ಡಾಟಾವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಗೂಗಲ್‌ನ ಜಿಮೈಲ್ ಅದನ್ನೇ ಮಾಡುತ್ತಿದೆ. ಹಾಗೆಯೇ ಫೇಸ್‌ಬುಕ್ ಕೂಡ. ವಾಟ್ಸ್‌ಆ್ಯಪ್ ಮೇಲೆ ಸಿಟ್ಟು ಮಾಡಿಕೊಳ್ಳಲು ಇರುವ ಒಂದು ಕಾರಣವೆಂದರೆ ಅದು ವಿಭಿನ್ನ ಆಯ್ಕೆಗಳನ್ನು ಕೊಡುವುದಿಲ್ಲ ಎನ್ನುವುದೇ ಆಗಿದೆ. ವಾಸ್ತವದಲ್ಲಿ ಅದರಲ್ಲಿ ಒಂದು ಆಯ್ಕೆ ಇರಬೇಕಿತ್ತು. ಅಲ್ಲಿ ಬಳಕೆದಾರರು ಜಾಹೀರಾತು ಯೋಜನೆಗಳಿಂದ ಹೊರಬಂದು, ಸೇವೆಗಾಗಿ ಹಣ ತೆತ್ತು ಮಾಸಿಕ ಮತ್ತು ವಾರ್ಷಿಕ ಚಂದಾದಾರರಾಗುವ ಆಯ್ಕೆ ಕೊಡಬೇಕಿತ್ತು. ಹಾಗೆ ಮಾಡಿದಲ್ಲಿ ಸಂಸ್ಥೆ ಬಳಕೆದಾರರ ಖಾಸಗಿ ಮಾಹಿತಿಯನ್ನೂ ಸುರಕ್ಷಿತವಾಗಿರಿಸಿ ಆದಾಯವನ್ನೂ ಪಡೆಯಬಹುದಾಗಿತ್ತು. ಉಚಿತ ಬಳಕೆದಾರರು ತಾವು ಪಡೆಯುವ ಸೇವೆಗಾಗಿ ಕೆಲವು ಖಾಸಗಿ ಮಾಹಿತಿಗಳನ್ನು ಕೊಡಲು ಒಪ್ಪಿಕೊಳ್ಳಬಹುದಾಗಿತ್ತು.
ಕೃಪೆ: www.dailyo.in