ತಿರುಪೆ ಸರಕಾರಕ್ಕೆ ಸೈನಿಕರಿಗೆ ಕೊಡಲು ಹಣವಿಲ್ವಂತೆ...
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಸಂಘ ಪರಿವಾರದ ಬೆಂಬಲಿಗರ ಪ್ರಾಬಲ್ಯ ಎದ್ದು ಕಾಣುವ ಅಂಶ. ಇದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪರಾಕಾಷ್ಠೆ ತಲುಪಿತ್ತು. ನರೇಂದ್ರ ಮೋದಿ ಅವರ ಪರ ಜನಾಭಿಪ್ರಾಯ ರೂಪಿಸುವಲ್ಲಿ ಈ ಸಾಮಾಜಿಕ ಜಾಲತಾಣಗಳ ಬೆಂಬಲಿಗರು ಬಹುದೊಡ್ಡ ಪಾತ್ರ ವಹಿಸಿದ್ದರು. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೂ ಅದರ ಕಾರ್ಯ ವೈಖರಿಯನ್ನು ಸಮರ್ಥಿಸಿ, ಕಾಂಗ್ರೆಸ್ ಅನ್ನು ದೂರುವ ಪಡೆ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಸಕ್ರಿಯವಾಗಿದೆ.
ಇದಕ್ಕೆ ಹೋಲಿಸಿದರೆ ಬಿಜೆಪಿ ಟೀಕಾಕಾರರ ಉಪಸ್ಥಿತಿ ಈ ಜಾಲತಾಣಗಳಲ್ಲಿ ಅತ್ಯಂತ ಕಡಿಮೆ. ಮುಖ್ಯ ವಿಪಕ್ಷ ಕಾಂಗ್ರೆಸ್ ಇನ್ನೂ ಈ ಬಗ್ಗೆ ಬಿಜೆಪಿಯಷ್ಟು ಸಕ್ರಿಯವಾಗಿಲ್ಲ. ಆದರೆ ನಿಧಾನವಾಗಿ ಕರ್ನಾಟಕದಲ್ಲಿ ಇಂತಹದೊಂದು ಇಂಟರ್ನೆಟ್ ಜಾಗೃತಿ ತಂಡ ಕೆಲಸ ಮಾಡುತ್ತಿರುವ ಲಕ್ಷಣ ಕಾಣುತ್ತಿದೆ.
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ, ಬಂಡವಾಳಶಾಹಿ ಪರ ಧೋರಣೆ, ಗೋರಕ್ಷಣೆಯ ಹೆಸರಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸಂಘ ಪರಿವಾರದ ಸಿದ್ಧಾಂತ ಇತ್ಯಾದಿಗಳ ಕುರಿತು ವಿಡಂಬನೆ, ಮೊನಚು ವ್ಯಂಗ್ಯಗಳ ಘೋಷಣೆ, ಚಿತ್ರಗಳು, ಮೆಮೇಗಳು ಹಾಗು ಪೋಸ್ಟರ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಬಿಜೆಪಿಯನ್ನು ವಿರೋಧಿಸುವ ಬುದ್ಧಿಜೀವಿಗಳಿಗೂ ಕೆಲವೊಮ್ಮೆ ಇದರ ಬಿಸಿ ತಟ್ಟಿದೆ. ಇತ್ತೀಚಿಗೆ ದಲಿತರಿಗೆ ಬಂದೂಕು ಕೊಡಬೇಕು ಎಂದು ಹೇಳಿದ ವಿಚಾರವಾದಿ ಭಗವಾನ್ ಅವರನ್ನು ಟೀಕಿಸಿ ಇಂತಹುದೇ ಒಂದು ಪೋಸ್ಟರ್ ಹರಡಿತ್ತು .
ಈ ಸೃಜನಶೀಲ, ಆಕರ್ಷಕ ಹಾಗು ಅಷ್ಟೇ ಪರಿಣಾಮಕಾರಿಯಾಗಿ ಸಂದೇಶ ರವಾನಿಸುವ ಚಿತ್ರಗಳ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ, ಸಂಘ ಪರಿವಾರವನ್ನು ವಿರೋಧಿಸುವವರಿಗೆ ಇವು ಉತ್ತಮ ಆಯುಧದಂತೆ ಸಿಕ್ಕಿರುವುದು ಮಾತ್ರ ಹೌದು.
ಜೊತೆಗೆ ಈ ವಿಷಯದಲ್ಲಿ ಇನ್ನೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಗೂ ಇದು ಬಿಜೆಪಿಯನ್ನು ಎದುರಿಸಲು ಇನ್ನಾದರೂ ಈ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಳ್ಳಲು ಪ್ರೇರೇಪಿಸುವ ಸಾಧ್ಯತೆ ಇದೆ.