ವಿಶ್ವಮಾನ್ಯ ಗಾಯಕಿಯ ಜನ್ಮ ಶತಾಬ್ದಿ

Update: 2016-09-10 18:30 GMT

ಕ ರ್ನಾಟಕ ಸಂಗೀತದ ಧ್ರುವ ತಾರೆ ಎಂ.ಎಸ್.ಸುಬ್ಬುಲಕ್ಷ್ಮೀ ಪ್ರಾತಃಸ್ಮರಣೀಯರು. ದಕ್ಷಿಣ ಭಾರತದ ಮನೆಗಳಲ್ಲಿ ಅವರ ದಿವ್ಯ ಗಾಯನ ವೆಂಕಟೇಶ ಸುಪ್ರಭಾತದಿಂದಲೇ ಪ್ರತಿದಿನ ಬೆಳಕಾಗುವುದು. ತಮ್ಮ ಗಾನ ಮಾಧುರ್ಯದಿಂದ ವಿಶ್ವವಿಖ್ಯಾತರಾದ, ಭಾರತದಲ್ಲಿ ಮನೆಮಾತಾದ ಗಾನ ಕೋಗಿಲೆ ಶ್ರೀಮತಿ ಸುಬ್ಬುಲಕ್ಷ್ಮೀಯವರು ಇಂದು ನಮ್ಮ ನಡುವೆ ಇದ್ದಿದ್ದರೆ ನಾಡಿದ್ದು 16ಕ್ಕೆ ಅವರು ಶತಾಯುಷಿಗಳಾಗುತ್ತಿದ್ದರು. ಸಂಗೀತ ಸಾಮ್ರಾಜ್ಞಿಯ ಜನ್ಮಶತಾಬ್ದಿ. ಸುಬ್ಬುಲಕ್ಷ್ಮೀಯವರು ಹುಟ್ಟಿದ್ದು 1916ರ ಸೆಪ್ಟಂಬರ್ 16ರಂದು, ಮಧುರೆಯಲ್ಲಿ. ದೇವದಾಸಿ ಮನೆತನಕ್ಕೆ ಸೇರಿದ ಷಣ್ಮುಗ ವಡಿವು ತಾಯಿ. ಮಧುರೆಯ ಸುಪ್ರಸಿದ್ಧ ವಕೀಲ ಸುಬ್ರಹ್ಮಣ್ಯ ಅಯ್ಯರ್ ಆಶ್ರಯದಾತರು. ದೇವದಾಸಿ ಕುಟುಂಬದ ಕಲೆಯಾದ ಸಂಗೀತ ತಾಯಿಯಿಂದಲೇ ರಕ್ತಗತವಾಗಿ ಬಂದಿತ್ತು ಸುಬ್ಬುಲಕ್ಷ್ಮೀಯವರಿಗೆ. ಮನೆಯಲ್ಲಿ ಹಬ್ಬಹರಿದಿನಗಳಲ್ಲದೆ ನಿತ್ಯವೂ ಸಂಗೀತದ ಸಮಾರಾಧನೆ. ಹೆಚ್ಚುಕಡಿಮೆ ದಿನವೂ ಗಾಯಕರ ಮತ್ತು ವೀಣೆ, ಪಿಟೀಲು, ಮೃದಂಗ ಮೊದಲಾದ ವಾದ್ಯಗಳ ಕಲಾವಿದರ ಸಮಾವೇಶ. ಮನೆ ಮಂದಿಗೆ ಅಕ್ಕರೆಯ ಕುಂಜಮ್ಮನಾದ ಸುಬ್ಬುಲಕ್ಷ್ಮೀಯವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಶಿಕ್ಷಣ, ತಾಲೀಮು. ಗಾಯನದಲ್ಲಷ್ಟೇ ಅಲ್ಲದೆ ವೀಣೆ, ಪಿಟೀಲು, ಮೃದಂಗ ಮೊದಲಾದ ವಾದ್ಯಗಳನ್ನು ನುಡಿಸುವುದರಲ್ಲೂ ಕಲಿಕೆ. ಆದರೆ ಗಾಯನ ಅವರ ಸುಶ್ರಾವ್ಯ ಕಂಠಕ್ಕೆ ಒಲಿಯಿತು. ಹತ್ತನೆಯ ವಯಸ್ಸಿನಲೇ ಸಂಗೀತದ ಸ್ವಯಂಪ್ರಭೆ ಕಿಶೋರಿ ಸುಬ್ಬುಲಕ್ಷ್ಮೀಯವರಲ್ಲಿ ಪ್ರಕಾಶ. ಅಂದಿನ ಪ್ರಖ್ಯಾತ ಗ್ರಾಮಫೋನ್ ಕಂಪೆನಿ ಎಚ್.ಎಂ.ವಿ. ಸುಬ್ಬುಲಕ್ಷ್ಮೀಯವರ ಪ್ರಪ್ರಥಮ ಗಾನ ಮುದ್ರಿಕೆಯನ್ನು ಹೊರತಂದಾಗ ಅವರು ಹತ್ತರ ಬಾಲೆ.ಹದಿಮೂರನೆ ವಯಸ್ಸಿಗೇ ವೇದಿಕೆ ಏರಿ ಸ್ವತಂತ್ರವಾಗಿ ಕಛೇರಿ ನೀಡಲಾರಂಭಿಸಿದರು. ಇದೇ ಸುಮಾರಿನಲ್ಲಿ ‘ಸೇವಾ ಸದನಂ’ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ತಾಯಿಗೆ ಸಿನೆಮಾ ವಾತಾವರಣ ಪ್ರಿಯವೆನಿಸಲಿಲ್ಲ. ಮಗಳನ್ನು ಆಗರ್ಭ ಶ್ರೀಮಂತ ನಾಟ್ಟು ಚೆಟ್ಟಯಾರ್ ಎಂಬಾತನಿಗೆ ವಿವಾಹ ಮಾಡಿಕೊಟ್ಟು ಕುಟುಂಬದ ಪಾರಂಪರಿಕ ಬದುಕಿಗೆ ಕಟ್ಟಿಹಾಕುವ ಆಲೋಚನೆ ತಾಯಿಯ ಮನದಲ್ಲಿ. ಅಮ್ಮನ ಹವಣಿಕೆ ಅರಿತ ಮಗಳು ರಾತ್ರೋರಾತ್ರಿ ಮದ್ರಾಸ್ ರೈಲು ಹತ್ತಿ ದೇವದಾಸಿಯ ಬಲೆಯಿಂದ ಪಾರಾದರು. ಮದ್ರಾಸಿನಲ್ಲಿ ಬಂದಿಳಿದ ಸುಮುಹೂರ್ತದಲ್ಲೇ ತಾರೆಯೊಬ್ಬಳ ಉದಯವಾಗಿತ್ತು. ಮುಂದೆ ಈ ತಾರೆ ಸಂಗೀತ ಪ್ರಪಂಚದ ಧ್ರುವ ತಾರೆಯಾಗುವಳೆಂದು ಹೆತ್ತ ತಾಯಿ ಕನಸುಮನಸಿನಲ್ಲೂ ಎಣಿಸಿರಲಿಕ್ಕಿಲ್ಲ.

 ಸುಬ್ಬುಲಕ್ಷ್ಮೀಯವರು ಕರ್ನಾಟಕ ಸಂಗೀತ ಮತ್ತು ತಮಿಳು ಸಿನೆಮಾ ಕ್ಷೇತ್ರಗಳಲ್ಲಿ ಪ್ರವರ್ಧಮಾನದ ಹೆಜ್ಜೆಗಳನ್ನು ಮೂಡಿಸಲಾರಂಭಿಸಿದ್ದು 1930ರ ದಶಕದಲ್ಲಿ. 1937ರಲ್ಲಿ ಅವರು ಟಿ.ಸದಾಶಿವಂ ಅವರ ‘ಶಕುಂತಲೈ’ ಚಿತ್ರಕ್ಕೆ ನಾಯಕಿ ನಟಿಯಾಗಿ ಆಯ್ಕೆ ಹೊಂದಿದರು. ಸಿನೆಮಾ ಒಡನಾಟ ಸುಬ್ಬುಲಕ್ಷ್ಮೀ ಮತ್ತು ಸದಾಶಿವಂ ಅವರನ್ನು ಹತ್ತಿರ ತಂದಿತು. ಪ್ರೇಮಾಂಕುರಿಸಿ 1940ರಲ್ಲಿ ವಿವಾಹವಾದರು. ಸದಾಶಿವಂ ಅವರ ಜೊತೆ ವಿವಾಹ ಎಂ.ಎಸ್. ಅವರ ಗಾಯನ ಬದುಕಿಗೆ ಭದ್ರ ಬುನಾದಿಯನ್ನು ಒದಗಿಸಿತು. ಅಲ್ಲಿಂದ ಅವರು ತಿರುಗಿ ನೋಡಿದ್ದೇ ಇಲ್ಲ. ಮುಂದೆ ಎಂ.ಎಸ್. ಎಂದು ಸಂಗೀತ ಪ್ರಪಂಚದಲ್ಲಿ ಖ್ಯಾತ ನಾಮರಾದರು. ಎಂ.ಎಸ್. ಸಂಗೀತ ರಸಿಕರು ಸುಬ್ಬುಲಕ್ಷ್ಮೀಯವರಿಗೆ ಇಟ್ಟ ಅಭಿಮಾನದ ಅಭಿದಾನ.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೊಬ್ಬಳಿದ್ದಾಳೆ ಎನ್ನುವುದು ಇಂಗ್ಲಿಷ್ ಭಾಷೆಯ ಒಂದು ನಾಣ್ನುಡಿ. ಎಂ.ಎಸ್. ವಿಷಯದಲ್ಲಿ ಇದು ತಿರುಗುಮುರುಗು. ಎಂ.ಎಸ್. ಪ್ರತಿಭಾಖನಿಯಾದರೂ ವ್ಯವಹಾರ ಜ್ಞಾನದಲ್ಲಿ ಮುಗ್ಧೆ. ಈ ಮುಗ್ಧತೆಯನ್ನು ಜನ ದುರುಪಯೋಗಪಡಿಸಿಕೊಳ್ಳದಂತೆ ಅವರನ್ನು ಮುಚ್ಚಟೆಯಿಂದ ಕಾಪಾಡಿದವರು ಸದಾಶಿವಂ. ಎಂ.ಎಸ್.ಅವರ ಯಶಸ್ಸಿನ ಹಿಂದಿನ ಸ್ಫೂರ್ತಿಚೇತನ, ಶಕ್ತಿ ಎಲ್ಲವೂ ಆಗಿದ್ದರು ಸದಾಶಿವಂ. ಎಂ.ಎಸ್. ಅವರ ಬದುಕು ಮತ್ತು ಸಂಗೀತಗಳ ರೂಪಣೆ ಮತ್ತು ವಿಕಾಸಗಳ ಹಿಂದಿನ ಮಹಾನ್ ಶಕ್ತಿಯಾಗಿದ್ದರು.

     ಸದಾಶಿವಂ ಅವರ ಬಗ್ಗೆ ತಿಳಿದುಕೊಳ್ಳದೆ ಎಂ.ಎಸ್.ಅವರ ವ್ಕಕ್ತಿತ್ವ ಚಿತ್ರಣ ಪೂರ್ಣವಾಗದು ಎನ್ನುವಂಥ ಅವಿನಾಭಾವ ಸಂಬಂಧ ಈ ಜೋಡಿಯದು. ಸದಾಶಿವಂ ಸದಭಿರುಚಿಯ ಸಂಸ್ಕಾರವಂತರು. ಗಾಂಧಿ ಮೌಲ್ಯಗಳ ಅನುಯಾಯಿ. ರಾಜಾಜಿಯವರ ಆಣತಿಯಂತೆ ಖಾದಿ ಪ್ರಚಾರಕ್ಕಾಗಿ ಕಟಿಬದ್ಧರಾಗಿದ್ದವರು. ಊರಿಂದ ಊರಿಗೆ ತಿರುಗಿ ಖಾದಿ ಪ್ರಚಾರ ಮಾಡಿದವರು. ತಿರುಪ್ಪೂರು ಖಾದಿ ಕೇಂದ್ರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಅವರು ನಂತರ ಬೆಂಗಳೂರಿನ ಕೋಟೆ ಪ್ರದೇಶದಲ್ಲಿ ಖಾದಿ ಭಂಡಾರ ಸ್ಥಾಪಿಸಿದರು. ಈ ಖಾದಿ ಭಂಡಾರ ಆ ಕಾಲಕ್ಕೆ ಬೆಂಗಳೂರಿನ ಸ್ವದೇಶಿ ಪ್ರಿಯರ ಹಾಗೂ ಬುದ್ಧಿಜೀವಿಗಳ ಕೂಡುತಾಣವಾಗಿತ್ತು. ನಂತರ ಸದಾಶಿವಂ ಮದ್ರಾಸಿಗೆ ಹಿಂದಿರುಗಿ ‘ಆನಂದ ವಿಕಟನ್’ ನಿಯತಕಾಲಿಕದ ಜಾಹೀರಾತು ವಿಭಾಗ ವಹಿಸಿಕೊಂಡರು. ಕಲ್ಕಿ ಕೃಷ್ಣಮೂರ್ತಿಯವರ ಸಂಪಾದಕತ್ವದಲ್ಲಿ ಪ್ರತಿಷ್ಠಿತ ‘ಕಲ್ಕಿ’ ತಮಿಳು ನಿಯತಕಾಲಿಕ ಪ್ರಾರಂಭಿಸಿದರು. ಸದಾಶಿವಂ ಅವರ ಪ್ರವೇಶ ಎಂ.ಎಸ್.ಅವರ ಬದುಕಿನಲ್ಲಿ ಒಂದು ಪರಿವರ್ತನೆಯ ಪರ್ವ. ಅವರ ಬದುಕಿನಲ್ಲಿ ಗುಣಾತ್ಮಕವೂ ಪ್ರಗತಿಶೀಲವೂ ಅದ ಅಗಾಧ ಬದಲಾವಣೆಗಳಿಗೆ ಕಾರಣರಾದರು ಸದಾಶಿವಂ. ಅವರ ಸಂಗೀತಮಯ ಬದುಕಿನಲ್ಲಿ ‘ಸದಾಶಿವಂ ಸ್ಪರ್ಶ’ ಸ್ಪಷ್ಟವಾಗಿ ಗೋಚರವಾಯಿತು. ಸದಾಶಿವಂ ತಮಿಳು ಮತ್ತು ಹಿಂದಿ ಭಾಷೆಗಳೆರಡರಲ್ಲೂ ನಿರ್ಮಿಸಿದ ‘ಮೀರಾ’ ಚಿತ್ರ ಇಂಪಾದ ಸ್ವರಸಂಯೋಜನೆ ಮತ್ತು ಎಂ.ಎಸ್. ಅವರ ಮಂಜುಳ ಗಾನದಿಂದಾಗಿ ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿತು. ಎಂ.ಎಸ್. ಅವರ ಹಾಡುಗಳು ಜನಮನವನ್ನು ಮಿಡಿದವು. ಈ ಚಿತ್ರದಿಂದ ಎಂ.ಎಸ್. ಬೆಳಗಾಗುವುದರೊಳಗಾಗಿ ರಾಷ್ಟ್ರಾದ್ಯಂತ ಮನೆಮಾತಾದರು. ‘ಮೀರಾ’ ವೆನಿಸ್ ಮೊದಲಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸುಬ್ಬುಲಕ್ಷ್ಮೀ ವಿದೇಶಗಳಲ್ಲೂ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರರಾದರು. ಸಂಗೀತದ ಭಾಷೆ ಸಾರ್ವತ್ರಿಕವಾದುದು. ಅದಕ್ಕೆ ಭಾಷೆಗಳ ಗಡಿ ಇಲ್ಲ. ಇದು ಆದರ್ಶ. ಆದರೆ ವಾಸ್ತವ ಸ್ಥಿತಿ ತುಸು ಭಿನ್ನವಾದುದೇ ಆಗಿದೆ. ಭಾಷೆಯಂತೆ ಸಂಗೀತದಲ್ಲೂ ಅನೇಕ ಪ್ರಭೇದಗಳಿವೆ. ಶೈಲಿಗಳಿವೆ. ಉಪ ಸಂಗೀತ ಸಂಸ್ಕೃತಿಗಳಿವೆ. ಇದಕ್ಕೆ ನಿದರ್ಶನವಾಗಿ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಪದ್ಧತಿಗಳನ್ನೇ ನೋಡಬಹುದು. ಕರ್ನಾಟಕ ಸಂಗೀತ ಹಿಂದೂಸ್ಥಾನಿ ಸಂಗೀತದ ನೆಲೆಯಾದ ಉತ್ತರ ಭರತದಲ್ಲಿ ಸಂಗೀತ ಪ್ರಿಯರ ಮನಗೆಲ್ಲುವುದು ಕಷ್ಟ ಎನ್ನುವಂಥ ಪರಿಸ್ಥಿತಿ ಇತ್ತು. ಉತ್ತರ ಭಾರತದ ರಸಿಕರು ಹೆಚ್ಚಾಗಿ ವಾದ್ಯ ಸಂಗೀತ ಪ್ರಿಯರು. ಹಾಡುಗಾರಿಕೆ ಪ್ರಧಾನವಾದ ಕರ್ನಾಟಕ ಸಂಗೀತ ಇಂಥ ಸವಾಲನ್ನು ಎದುರಿಸಬೇಕಾಗಿದ್ದ ಆ ದಿನಗಳಲ್ಲಿ ದಕ್ಷಿಣದ ಎಲ್ಲೆಗಳನ್ನು ದಾಟಿದ ಎಂ.ಎಸ್. ತಮ್ಮ ಗಾನ ಮಾಧುರ್ಯದಿಂದ ಬಲುಬೇಗ ಉತ್ತರ, ಪೂರ್ವ, ಪಶ್ಚಿಮ ಎಲ್ಲ ಕಡೆಯೂ ಗಾನಪ್ರಿಯ ರಸಿಕರ ಮನಗೆದ್ದು ಜನಾನುರಾಗಿಯಾದರು. ಹೋದಲ್ಲೆಲ್ಲ ಆಯಾ ಪ್ರದೇಶದ ಭಾಷೆಯ ಹಾಡುಗಳನ್ನು, ವಿಶೇಷವಾಗಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದುದು ಅವರ ರಾಷ್ಟ್ರವ್ಯಾಪಿ ಜನಪ್ರಿಯತೆಯ ಗುಟ್ಟಿರಬಹುದು. ಜೇನಿನಂಥ ಕಂಠದ ಜೊತೆಗೆ ಭಾವಪೂರ್ಣ ಗಾಯನದಿಂದಾಗಿ ಅವರು ಎಲ್ಲ ಪ್ರದೇಶಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹೀಗೆ ಅವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತಗಳ ನಡುವೆ ಸೇತುವಾಗಿದ್ದರು. ಹಿಂದೂಸ್ತಾನಿ ಸಂಗೀತ ಪ್ರಿಯರಲ್ಲಿ ಕರ್ನಾಟಕ ಸಂಗೀತದ ಅಭಿರುಚಿಯನ್ನು, ಮೆಚ್ಚುಗೆಯನ್ನು ಬೆಳೆಸಿದರು. ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸುವುದರಲ್ಲಿ ಅವರ ಕೊಡುಗೆ ಅನುಪಮವಾದುದು.

 ‘‘ಪಂಡಿತ್ ರವಿ ಶಂಕರ್, ಅಲಿ ಅಕ್ಬರ್ ಖಾನ್ ಮೊದಲಾದ ಭಾರತೀಯ ಸಂಗೀತ ವಿದ್ವಾಂಸರು ಈ ಮೊದಲೇ ಪಾಶ್ಚಾತ್ಯ ದೇಶಗಳಿಗೆ ಭಾರತೀಯ ಸಂಗೀತದ ಸವಿಯನ್ನು ಪರಿಚಯಿಸಿದ್ದರು, ಅಭಿರುಚಿ ಬೆಳೆಸಿದ್ದರು ಎಂಬದು ದಿಟ. ಇಂಥ ಪ್ರಯತ್ನಗಳೆಲ್ಲ ಬಹುಪಾಲು ಹಿಂದೂಸ್ಥಾನಿ ಸಂಗೀತಕ್ಕೆ ಸೀಮಿತಗೊಂಡಿದ್ದವು. ಸ್ವಾತಂತ್ರ್ಯಾನಂತರ ಕರ್ನಾಟಕ ಸಂಗೀತದ ಹಾಡುಗಾರಿಕೆ ಮತ್ತು ವಾದ್ಯ ಸಂಗೀತಗಳಾದ ವೀಣೆ, ಕೊಳಲು, ತಾಳಲಯ ವಾದ್ಯಗಳು ಇವುಗಳ ವೈಶಿಷ್ಟ್ಯವನ್ನು ಪಾಶ್ಚಾತ್ಯರಿಗೆ ಪರಿಚಯಿಸುವ ವಿರಳ ಪ್ರಯತ್ನಗಳೂ ನಡೆದಿದ್ದವು. ಆದರೆ ಇಂಥ ಪ್ರಯತ್ನಗಳಿಗೆ ಒಂದೆಡು ಪ್ರಶಂಸಾತ್ಮಕ ನುಡಿಗಳಿಗೆ ಮೀರಿದ ಉತ್ಸಾಹದ ಪ್ರತಿಕ್ರಿಯೆ ಕಂಡುಬಂದಿರಲಿಲ್ಲ. ಎಂ.ಎಸ್.ಅವರ ಪ್ರವೇಶದ ನಂತರ ಪಾಶ್ಚಾತ್ಯ ದೇಶಗಳಲ್ಲಿ ಕರ್ನಾಟಕ ಸಂಗೀತದ ಬಗ್ಗೆ ಇದ್ದ ಈ ಮೌನ- ಸ್ಪಂದನ ಕಿವಿಗಡಚಿಕ್ಕುವ ಪ್ರಶಂಸೆಯ ಹೊನಲಾಗಿ ಹರಿಯಿತು. ಅಭಿರುಚಿ, ಅಭಿಮಾನಗಳು ಬೆಳೆದವು’’ ಎಂದು ಸಂಗೀತಜ್ಞರಾದ ಬಿ.ವಿ.ಕೆ.ಶಾಸ್ತ್ರಿಯವರು ಅಭಿಪ್ರಾಯ ಪಡುತ್ತಾರೆ.

ಎಂ.ಎಸ್. ಸುಬ್ಬುಲಕ್ಷ್ಮೀ ವಿಶ್ವಸಂಸ್ಥೆಯ ಆಮಂತ್ರಣದ ಗೌರವಕ್ಕೆ ಪಾತ್ರರಾದ ಪ್ರಪ್ರಥಮ ಭಾರತೀಯ ಸಂಗೀತ ವಿದುಷಿ. ಎಂ.ಎಸ್., ವಿಶ್ವಸಂಸ್ಥೆ ಮಾತ್ರವಲ್ಲ ಲಂಡನ್, ನ್ಯೂಯಾರ್ಕ್, ಜಿನೀವಾ, ಟೋಕಿಯೋ, ಫ್ರಾಂಕ್ ಫರ್ಟ್, ಕೈರೋ, ಮಾಸ್ಕೋ, ಬ್ಯಾಂಕಾಕ್, ಹಾಂಕಾಂಗ್, ಮಣಿಲಾ, ಸಿಂಗಾಪುರ ಮೊದಲಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಅಲ್ಲೆಲ್ಲ ಅವರ ಇನಿದನಿ ಅನುರಣಿಸಿ, ಅಲ್ಲಿನ ವಾತಾವರಣದಲ್ಲಿ ಭಾವೈಕ್ಯದ ಪಲುಕುಗಳಾಗಿ ಸಂಗಮಿಸಿವೆ.ಲಕ್ಷಾಂತರ ಮಂದಿಗೆ ಆನಂದಾನುಭವ ನೀಡಿ ‘ಮಾನವ ಕುಲ ಒಂದು’ ಎಂಬ ಆಪ್ತ ಬಂಧವನ್ನು ಬೆಸೆದಿವೆ.

              

 1966ರರಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉಥಾಂಟರ ಆಮಂತ್ರಣದ ಮೇರೆ ಎಂ.ಎಸ್. ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಅಮೋಘ ಸಂಗೀತ ಕಛೇರಿ ನೀಡಿದರು. ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳನ್ನೊಳಗೊಂಡಿದ್ದ ಆ ಮಹಾ ಸಭೆಯಲ್ಲಿ ಅವರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳ ಕೀರ್ತನೆಗಳನ್ನು, ಮೀರಾ ಭಜನೆಗಳನ್ನು ಮತ್ತು ಪುರಂದರ ದಾಸರ ಪದಗಳನ್ನು ಹಾಡಿ ರಸಿಕರನ್ನು ರಂಜಿಸಿದರು. ಅಂದು ಅವರು ಹಾಡಿದ ‘ಜಗದೋದ್ಧಾರನ’ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಈ ಕಛೇರಿಯಿಂದಾಗಿ ಎಂ.ಎಸ್. ಅವರ ಅಂತಾರಾಷ್ಟ್ರೀಯ ಖ್ಯಾತಿ ಉತ್ತುಂಗಕ್ಕೇರಿತು. ಇಷ್ಟೆಲ್ಲ ಪ್ರಸಿದ್ಧಿಯಿಂದ ಎಂ.ಎಸ್.ಅವರ ನಮ್ರತೆಗೆ ಭಂಗ ಬರಲಿಲ್ಲ. ಬದಲಾಗಿ ಅವರಲ್ಲಿನ ವಿನಯ-ವಿನೀತ ಭಾವನೆಗಳು ಇನ್ನಷ್ಟು ಘನವಾದವು. ಇದಕ್ಕೆ ನಿದರ್ಶನವಾಗಿ ಒಂದು ಪ್ರಸಂಗವನ್ನು ನೆನೆಯಬಹುದು. ಎಂ.ಎಸ್. ಹಾಡುವುದಕ್ಕೂ ಮೊದಲು ‘ಜಗದೋದ್ಧಾರನ’ ಸಂಗೀತ ಪ್ರಿಯರನ್ನು ಬಹುವಾಗಿ ಆಕರ್ಷಿಸಿದ್ದು ಬಿ.ಎಸ್.ರಾಜೈಂಗಾರ್ ಅವರ ಗಾಯನದಿಂದ. ಸಂಗೀತ ವಿದ್ವಾಂಸರೂ ಪ್ರತಿಭಾನ್ವಿತ ರಂಗಭೂಮಿ ಕಲಾವಿದರೂ ಆಗಿದ್ದ ರಾಜೈಂಗಾರ್ ಅವರದು ನಾಭಿ ಮೂಲದಿಂದ ಉದ್ಭವಿಸಿ ಅಲೆಅಲೆಯಾಗಿ ಮೇಲೆದ್ದು ವೀರ್ಯವತ್ತಾದ ಕಂಠದಲ್ಲಿ ವಿಜೃಂಭಿಸುತ್ತಿದ್ದ ಗಾಯನ. ಈ ಶೈಲಿಯಿಂದಾಗಿ ‘ಜಗದೋದ್ಧಾರನ’ ಅಯ್ಯಂಗಾರರ ವಿಜಯ ಪತಾಕೆಯಾಗಿತ್ತು. ಒಮ್ಮೆ ಹಾಸನದಲ್ಲಿ ನಡೆದ ಕಛೇರಿಯಲ್ಲಿ ಎಂ.ಎಸ್ ಇದನ್ನು ಹಾಡಿ ರಸಿಕರ ಮನಸೂರೆಗೊಂಡರು. ಕಛೇರಿ ಮುಗಿದನಂತರ ಸಭೆಯ ಮಧ್ಯದಿಂದ ವೃದ್ಧರೊಬ್ಬರು ನಿಧಾನವಾಗಿ ನಡೆದುಬಂದು ಎಂ.ಸ್.ಅವರನ್ನು ಅಭಿನಂದಿಸಿ, ‘‘ನಾನು ರಾಜೈಂಗಾರ್’’ ಎಂದು ಪರಿಚಯಿಸಿಕೊಂಡರು. ಒಂದುಕ್ಷಣ ಅವಕ್ಕಾದ ಎಂ.ಎಸ್., ಸಾವರಿಸಿಕೊಂಡು, ‘‘ಕ್ಷಮಿಸಿ, ನಿಮ್ಮ ಮೇರುಕೃತಿಯನ್ನು ನಿಮ್ಮಿಂದ ಲಪಟಾಯಿಸಿದ್ದಕ್ಕೆ. ಆ ಹಾಡಿಗೆ ನನ್ನಿಂದ ಅಪಚಾರವಾಯಿತೋ ಏನೋ’’ ಎಂದರು ವಿನೀತರಾಗಿ. ರಾಜೈಂಗಾರ್ ಆನಂದಭಾಷ್ಪ ಒರೆಸಿಕೊಳ್ಳುತ್ತ್ತಾ, ‘‘ಮೇಡಮ್, ನಾನು ಆ ಹಾಡನ್ನು ಜನಪ್ರಿಯಗೊಳಿಸಿದೆ. ನೀವು ಅದಕ್ಕೆ ಜೀವ ತುಂಬಿದಿರಿ’’ ಎಂದರಂತೆ! ಸುಬ್ಬುಲಕ್ಷ್ಮೀಯವರ ಗಾಯನ ಮಾಧುರ್ಯಕ್ಕೆ, ವಿದ್ವತ್ತಿಗೆ, ಕೀರ್ತಿಖ್ಯಾತಿ ಗಳಿಗೆ ಲೆಕ್ಕಕ್ಕೆ ಸಿಗದಷ್ಟು ನಿದರ್ಶನಗಳಿವೆ. ಹಾಗೆಯೇ ಅವರ ವಿನಯ, ಮುಗ್ಧತೆ, ದಾನಧರ್ಮಗಳೂ ಅಗಣಿತವಾದವು. ಗಾನ ಮುದ್ರಿಕೆಗಳಿಂದ ಬಂದ ಗೌರವಧನವನ್ನು, ಮ್ಯಾಗ್ಸೇಸೆ ಪ್ರಶಸ್ತಿಯ ಹತ್ತು ಸಾವಿರ ಡಾಲರುಗಳನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಮಾನವ ಸೇವಾ ಸಂಸ್ಥೆಗಳಿಗೆ ದಾನಮಾಡಿದ ತ್ಯಾಗಮಯಿ ಅವರು. ಭಾರತ ರತ್ನ, ಸಂಗೀತ ಕಲಾನಿಧಿ, ಪದ್ಮವಿಭೂಷಣಗಳಿಂದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿಗಳವರೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅಭಿಜಾತ ಕಲಾವಿದೆಯಾದ ಎಂ.ಎಸ್. ಅವರ ಮುಡಿಗೇರಿವೆ.ಜನ್ಮಶತಾಬ್ದಿಯ ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ಎಮ್.ಎಸ್. ಸ್ಮರಣಾರ್ಥ ವಿಶೇಷ ಅಂಚೆಚೀಟಿಯೊಂದನ್ನು ಪ್ರಕಟಿಸಿರುವುದರಿಂದ ಭಾರತದ ಹೆಮ್ಮೆಗೆ ಮತ್ತೊಂದು ಗರಿಯ ಗಮ್ಮತ್ತು ಲಭಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ