1947ರ ಸ್ವಾತಂತ್ರ್ಯವನ್ನು ಆರೆಸ್ಸೆಸ್ ನಾಯಕರು ವಿರೋಧಿಸುತ್ತಿರುವುದೇಕೆ?

Update: 2025-01-16 05:57 GMT

PC: PTI 

Full View

‘‘ಭಾರತಕ್ಕೆ ಸ್ವಾತಂತ್ರ್ಯ 1947ರಂದು ಸಿಕ್ಕಿಲ್ಲ. ಬದಲಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾದ ದಿನದಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’’ ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಚರ್ಚೆಯಲ್ಲಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಳ್ಳಷ್ಟು ತೊಡಗಿಸಿಕೊಂಡ ಹಿನ್ನೆಲೆಯಿಲ್ಲದ, ಬ್ರಿಟಿಷರದೊಂದಿಗೆ ಪರೋಕ್ಷ ಕೈಜೋಡಿಸಿದ ಇತಿಹಾಸವಿರುವ, ಸಂವಿಧಾನದ ವಿರುದ್ಧ ಕಾಲಕಾಲಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿರುವ, ಮಹಾತ್ಮಾಗಾಂಧೀಜಿಯ ಹತ್ಯೆಯ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಆರೋಪವನ್ನು ಹೊತ್ತಿರುವ ಆರೆಸ್ಸೆಸ್, ತನಗೆ 1947ರಂದು ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರೆ ಅದು ಅಚ್ಚರಿಯ ವಿಷಯವೇನೂ ಅಲ್ಲ. ಒಳಗೆ ವಿಷವನ್ನು ಇಟ್ಟುಕೊಂಡು, ಹೊರಗೆ ಅಮೃತವನ್ನು ಕಕ್ಕುವುದಕ್ಕೆ ಸಾಧ್ಯವೆ? ಸ್ವತಂತ್ರ ಭಾರತದ ವಿರುದ್ಧ ತನ್ನೊಳಗಿರುವ ವಿಷವನ್ನು ಸಂದರ್ಭ ಸಿಕ್ಕಿದಾಗಲೆಲ್ಲ ಕಕ್ಕುತ್ತಲೇ ಬಂದಿರುವ ಆರೆಸ್ಸೆಸ್, ಇದೀಗ ಮತ್ತೊಮ್ಮೆ 1947ರಲ್ಲಿ ಈ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯವನ್ನು ವ್ಯಂಗ್ಯವಾಡಿದೆ. ರಾಮಮಂದಿರ ಪ್ರತಿಷ್ಠಾಪನೆಯ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದೆ ಎನ್ನುವುದನ್ನು ಅದು ಘೋಷಿಸಿಕೊಂಡಿದೆ. ಬಹುಶಃ ಈ ಮಾತನ್ನು ಕಾಶ್ಮೀರದಲ್ಲಿ ನಿಂತು ಉಮರ್ ಅಬ್ದುಲ್ಲಾ ಆಡಿದ್ದರೆ ಅಥವಾ ಹೈದರಾಬಾದ್‌ನಲ್ಲಿ ಅಸದುದ್ದೀನ್ ಉವೈಸಿ ಹೇಳಿದ್ದರೆ ಅಥವಾ ಪಂಜಾಬ್‌ನ ಸಿಖ್ ನಾಯಕ ಘೋಷಿಸಿದ್ದರೆ ಅವರ ಮೇಲೆ ದೇಶದ್ರೋಹದ ಕೇಸು ದಾಖಲಾಗುತ್ತಿತ್ತು ಮಾತ್ರವಲ್ಲ, ಅವರ ಬಂಧನವೂ ಆಗುತ್ತಿತ್ತು. ಬಿಜೆಪಿ ಅಂಥವರ ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನೂ ನಡೆಸುತ್ತಿತ್ತು. ಆದರೆ ಭಾಗವತ್‌ನ ಬಂಧನವಾಗುವುದಿರಲಿ, ಕನಿಷ್ಠ ಅವರ ಹೇಳಿಕೆಯನ್ನು ಖಂಡಿಸುವ ಸೌಜನ್ಯವನ್ನು ಕೂಡ ಬಿಜೆಪಿ ತೋರಿಸಿಲ್ಲ. ಬಿಜೆಪಿಯೆನ್ನುವುದು ಆರೆಸ್ಸೆಸ್‌ನ ರಾಜಕೀಯ ಮುಖವಾಗಿರುವುದರಿಂದ, ಭಾಗವತ್ ಹೇಳಿಕೆಯನ್ನು ಅದು ಪರೋಕ್ಷವಾಗಿ ಅನುಮೋದಿಸಿದೆ. ಆದುದರಿಂದ, ಭಾಗವತ್‌ರ ವಿರುದ್ಧ ಮೋದಿ ನೇತೃತ್ವದ ಸರಕಾರ ಕಾನೂನು ಕ್ರಮ ಜರುಗಿಸುವುದರ ಬಗ್ಗೆ ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲ.

ಮಹಾತ್ಮಾ ಗಾಂಧೀಜಿಯ ಹತ್ಯೆಯಾದ ಬಳಿಕ ಭಾರತದಲ್ಲಿ ಕೆಲ ಕಾಲ ಆರೆಸ್ಸೆಸ್‌ನ್ನು ನಿಷೇಧಿಸಲಾಯಿತು. ಸ್ವತಂತ್ರ ಭಾರತದಲ್ಲಿ ಆರೆಸ್ಸೆಸ್ ನಿಷೇಧಿಸಲ್ಪಟ್ಟಿತು ಎನ್ನುವುದೇ ಆರೆಸ್ಸೆಸ್‌ನ ಯೋಗ್ಯತೆಯನ್ನು ಎತ್ತಿ ಹಿಡಿಯುತ್ತದೆ. ಗೋಳ್ವಾಲ್ಕರ್, ಹೆಡ್ಗೇವಾರ್ ಮೊದಲಾದವರ ನಿಲುವು ಸಿದ್ಧಾಂತಗಳ ತಳಹದಿಯ ಮೇಲೆ ಆರೆಸ್ಸೆಸನ್ನು ಕಟ್ಟಿ ನಿಲ್ಲಿಸಲಾಗಿದೆ. ಇವರು ಈ ದೇಶದ ಸ್ವಾತಂತ್ರ್ಯದ ಬಗ್ಗೆ, ಸಂವಿಧಾನದ ಬಗ್ಗೆ ಯಾವ ನಿಲುವನ್ನು ಹೊಂದಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾತಿ ವ್ಯವಸ್ಥೆಯನ್ನು ಗೋಳ್ವಾಲ್ಕರ್ ಕೊನೆಯವರೆಗೂ ಸಮರ್ಥಿಸಿದ್ದರು. ಎಲ್ಲಿಯವರೆಗೆ ಎಂದರೆ, ಕೇರಳದಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳು ಮದುವೆಯಾದರೆ ಮೊದಲ ರಾತ್ರಿಯನ್ನು ನಂಬೂದಿರಿ ಬ್ರಾಹ್ಮಣರ ಜೊತೆಗೆ ಕಳೆಯಬೇಕಾದ ಸ್ಥಿತಿಯಿತ್ತು. ಆ ಬಳಿಕವೇ ಕೆಳಜಾತಿಯ ಪುರುಷರು ಮದುವೆಯಾದ ತಮ್ಮ ಹೆಣ್ಣಿನ ಜೊತೆಗೆ ಸಂಸಾರ ಸಾಗಿಸಬಹುದಾಗಿತ್ತು. ಭಾಷಣವೊಂದರಲ್ಲಿ, ಗೋಳ್ವಾಲ್ಕರ್ ಅವರು ಈ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದರು ಮಾತ್ರವಲ್ಲ, ಉತ್ತಮ ತಳಿಯ ಹುಟ್ಟಿಗಾಗಿ ಇದನ್ನು ಜನರು ಅನುಸರಿಸುತ್ತಿದ್ದರು. ತಳಿವಿಜ್ಞಾನದ ಭಾಗವಾಗಿ ಇದು ಆಚರಣೆಯಲ್ಲಿತ್ತು ಎಂದು ಹೇಳಿಕೊಂಡಿದ್ದರು. 1947ರ ಸ್ವಾತಂತ್ರ್ಯ ಈ ದೇಶದ ಎಲ್ಲ ಜಾತಿ, ಧರ್ಮಗಳ ಜನರನ್ನು ಸಮಾನರನ್ನಾಗಿಸಿತು. ಸಂವಿಧಾನವು ಜಾತೀಯತೆಯ ವಿರುದ್ಧ ಕಾನೂನನ್ನು ಜಾರಿಗೊಳಿಸಿತು. ಸಹಜವಾಗಿಯೇ ಇದು ಗೋಳ್ವಾಲ್ಕರ್ ಮತ್ತು ಅವರ ಅನುಯಾಯಿಗಳನ್ನು ಆಕ್ರೋಶಕ್ಕೀಡು ಮಾಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಮನುಸ್ಮತಿಯನ್ನೇ ಸಂವಿಧಾನವಾಗಿಸಿಕೊಂಡು, ಕೆಳಜಾತಿಯನ್ನು ಶೋಷಿಸುವ ಸ್ವಾತಂತ್ರ್ಯ ಆರೆಸ್ಸೆಸ್ ನಾಯಕರಿಗಿತ್ತು. ಆ ಸ್ವಾತಂತ್ರ್ಯವನ್ನು 1947ರ ಸ್ವಾತಂತ್ರ್ಯ ಕಿತ್ತುಕೊಂಡಿತು. ಆದುದರಿಂದಲೇ, ಭಾಗವತ್ ಅವರು ‘1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅವತ್ತು ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು’ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಾಮಮಂದಿರದ ಹೆಸರಿನಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಿ, ಈ ದೇಶದಲ್ಲಿ ಮತ್ತೆ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯವನ್ನು ಜಾರಿಗೊಳಿಸುವಲ್ಲಿ ಆರೆಸ್ಸೆಸ್ ಯಶಸ್ವಿಯಾಗಿದೆ. ಆದುದರಿಂದಲೇ, ಅದರ ಪಾಲಿಗೆ, 1947ರಲ್ಲಿ ಕಿತ್ತುಕೊಂಡ ಸ್ವಾತಂತ್ರ್ಯ ರಾಮಮಂದಿರ ಪ್ರತಿಷ್ಠಾಪನೆಯ ಮೂಲಕ ಮತ್ತೆ ದೊರಕಿದೆ.

ರಾಷ್ಟ್ರಧ್ವಜವನ್ನು ಆರೆಸ್ಸೆಸ್ ಒಪ್ಪಿಕೊಂಡಿರಲಿಲ್ಲ ಮಾತ್ರವಲ್ಲ, ಅದನ್ನು ತನ್ನ ಮುಖ್ಯ ಕಚೇರಿಯಲ್ಲಿ ಹಲವು ದಶಕಗಳ ಕಾಲ ಹಾರಿಸುವುದಕ್ಕೆ ನಿರಾಕರಿಸಿತ್ತು. 2001ರ ಜನವರಿ 26ರಂದು ಅಂದರೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಯುವಕರು ಆರೆಸ್ಸೆಸ್‌ನ ನಾಗಪುರ ಕಚೇರಿಗೆ ಮಾರುವೇಷದಲ್ಲಿ ನುಗ್ಗಿ, ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಹೀಗೆ ರಾಷ್ಟ್ರ ಧ್ವಜ ಹಾರಿಸಿದ ಬಾಬಾಮಂಧೆ, ರಮೇಶ್ ಕಾಳಂಬಿ, ದಿಲೀಪ್ ಜಟ್ಟಾಣಿ ಎಂಬ ಯುವಕರ ಮೇಲೆ ಆರೆಸ್ಸೆಸ್ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ನ್ಯಾಯಾಲಯದಲ್ಲಿ ಅಲೆದಾಡುವಂತೆ ಮಾಡಿತು. ಸುಮಾರು 12 ವರ್ಷಗಳ ಬಳಿಕ 2013ರಲ್ಲಿ ಇವರ ಮೇಲಿರುವ ಆರೋಪಗಳನ್ನು ನ್ಯಾಯಾಲಯ ವಜಾ

ಗೊಳಿಸಿತು. ರಾಷ್ಟ್ರಧ್ವಜ ಹಾರಿಸಿದ ದೇಶಪ್ರೇಮಿಗಳನ್ನೇ ಸುಳ್ಳು ಮೊಕದ್ದಮೆ ದಾಖಲಿಸಿ ನ್ಯಾಯಾಲಯದಲ್ಲಿ ಅಲೆದಾಡಿಸಿದ ನಾಗಪುರ ಮುಖಂಡರು, ಸ್ವಾತಂತ್ರ್ಯದ ಬಗ್ಗೆ ಎಂತಹ ಧೋರಣೆ ಹೊಂದಿದ್ದಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಆರೆಸ್ಸೆಸ್ ಇಂದು ಪ್ರಾತಃಸ್ಮರಣೀಯ ಎಂದು ಕರೆಯುವ ಸಾವರ್ಕರ್ ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣಾ ಪತ್ರವನ್ನು ಬರೆದಿದ್ದರು ಮಾತ್ರವಲ್ಲ, ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದು, ಬ್ರಿಟಿಷರ ಪಿಂಚಣಿಯನ್ನು ಪಡೆಯುತ್ತಾ ಉಳಿದ ಬದುಕನ್ನು ಕಳೆದರು. ಅಷ್ಟೇ ಅಲ್ಲ, ಸುಭಾಶ್‌ಚಂದ್ರ ಬೋಸರು ತಮ್ಮ ಸೇನೆಗೆ ಯುವಕರನ್ನು ಸೇರಿಸುತ್ತಿದ್ದಾಗ, ಅವರ ಸೇನೆಗೆ ಸೇರದಂತೆ ಸಾವರ್ಕರ್ ಯುವಕರನ್ನು ತಡೆದರು. ಇಂತಹ ನಾಯಕರನ್ನು ಆದರ್ಶವಾಗಿಟ್ಟುಕೊಂಡ ಸಂಸ್ಥೆಯೊಂದು 1947ರ ಸ್ವಾತಂತ್ರ್ಯವನ್ನು ವಿರೋಧಿಸುವುದು ಸಹಜವೇ ಆಗಿದೆ.

1947ರ ಸ್ವಾತಂತ್ರ್ಯ ಮೇಲ್‌ಜಾತಿಯ ಜನರಿಂದ ಹಕ್ಕುಗಳನ್ನು ಕಿತ್ತುಕೊಂಡು ಅದನ್ನು ಕೆಳಜಾತಿಯ ಜನರಿಗೆ ನೀಡಿತು. ಬ್ರಾಹ್ಮಣರಿಗಷ್ಟೇ ಸೀಮಿತವಾಗಿದ್ದ ವಿದ್ಯೆಯನ್ನು ಎಲ್ಲರಿಗೂ ಹಂಚಿತು. ಈ ದೇಶದ ನೀರು, ನೆಲ, ಶಿಕ್ಷಣ, ಆರೋಗ್ಯ, ರಸ್ತೆ, ಆಹಾರದಲ್ಲಿ ಎಲ್ಲರೂ ಸಮಾನಹಕ್ಕುಗಳನ್ನು ಪಡೆದರು. ರಾಮಮಂದಿರದಲ್ಲಿ ಬ್ರಾಹ್ಮಣರಿಗೊಂದು ಜಾಗ, ಶೂದ್ರರಿಗೆ ಇನ್ನೊಂದು ಜಾಗ, ದಲಿತರಿಗೆ ಪ್ರವೇಶವೇ ಇಲ್ಲ ಎನ್ನುವ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಅಂತಹದೊಂದು ವ್ಯವಸ್ಥೆಯನ್ನೇ 1947ರ ಸ್ವಾತಂತ್ರ್ಯ ವಿರೋಧಿಸಿತು. ಒಟ್ಟಿನಲ್ಲಿ ಜಾತಿಯ ಆಧಾರದಲ್ಲಿ ಬಡವರನ್ನು, ದಲಿತರನ್ನು ಶೋಷಿಸುವ, ಗುಲಾಮರಂತೆ ನಡೆಸುವ ಸ್ವಾತಂತ್ರ್ಯವನ್ನು ಮೇಲ್‌ಜಾತಿಯ ಜನರ ಕೈಯಿಂದ 1947ರ ಸ್ವಾತಂತ್ರ್ಯ ಕಿತ್ತುಕೊಂಡಿತ್ತು ಆದರೆ ರಾಮಮಂದಿರ ಪ್ರತಿಷ್ಠಾಪನೆ ಆ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಆರೆಸ್ಸೆಸ್ ಕನಸಿಗೆ ಜೀವತುಂಬಿತು.

ಕಾಂಗ್ರೆಸ್ ಆರೆಸ್ಸೆಸ್‌ನ ಹೇಳಿಕೆಯನ್ನೇನೋ ಖಂಡಿಸಿದೆ. ಆದರೆ, ಆರೆಸ್ಸೆಸ್ ಈ ದೇಶದಲ್ಲಿ ಕಳೆದ 70 ವರ್ಷಗಳಿಂದ ಹುಲುಸಾಗಿ ಬೆಳೆದದ್ದು ಕಾಂಗ್ರೆಸ್ ಅವಧಿಯಲ್ಲಿ ಎನ್ನುವುದನ್ನು ಮರೆಯಬಾರದು. ಆರೆಸ್ಸೆಸ್ ದೇಶದ ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯ ಪಡೆದ ಬೆನ್ನಿಗೇ ಕಾಂಗ್ರೆಸ್‌ನೊಳಗಿರುವ ಹಲವು ಹಿರಿಯ ನಾಯಕರು ಮೆಲ್ಲಗೆ ಆರೆಸ್ಸೆಸ್ ಜೊತೆಗೆ ಗುರುತಿಸಿಕೊಂಡರು. ಆರೆಸ್ಸೆಸ್ ವೇದಿಕೆಯನ್ನು ಹಂಚಿಕೊಂಡರು. ಕೆಲವು ಹಿರಿಯರಂತೂ ನೇರವಾಗಿ ಬಿಜೆಪಿಗೆ ಪಕ್ಷಾಂತರ ಮಾಡಿದರು. ಇಂದು ಆರೆಸ್ಸೆಸ್ ಈ ದೇಶದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಷ್ಟು ದಾರ್ಷ್ಟ್ಯವನ್ನು ಬೆಳೆಸಿಕೊಂಡಿರುವುದರಲ್ಲಿ ಕಾಂಗ್ರೆಸ್‌ನ ಪಾಲೂ ಇದೆ ಎನ್ನುವುದನ್ನು ಮರೆಯಬಾರದು. ಇದೀಗ ಆರೆಸ್ಸೆಸ್‌ನ ಹುನ್ನಾರಗಳನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಿಕೊಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಚಾಲನೆ ನೀಡಬೇಕಾಗಿದೆ. ಈ ಹೋರಾಟ ಅಷ್ಟು ಸುಲಭದ್ದಲ್ಲ. ಯಾಕೆಂದರೆ ಈ ಬಾರಿ ಶತ್ರುಗಳು ಬ್ರಿಟಿಷರಲ್ಲ, ಅವರು ಸ್ವದೇಶಿ ವೇಶದಲ್ಲಿದ್ದು, ಈ ದೇಶದ ಜನರನ್ನು ಹಲವು ಶತಮಾನಗಳಿಂದ ಗುಲಾಮಗಿರಿಗೆ ಒಳಪಡಿಸಿದ ಅನುಭವಿಗಳಾಗಿದ್ದಾರೆ. ಸಮಯ ಬಂದಾಗ ಬಣ್ಣ ಬದಲಿಸುವ ಊಸರವಳ್ಳಿ ಗುಣವನ್ನು ಇವರು ಹೊಂದಿದ್ದಾರೆ. ಇವರು ಬ್ರಿಟಿಷರಿಗಿಂತ ನೂರು ಪಟ್ಟು ಅಪಾಯಕಾರಿಗಳು ಎನ್ನುವ ಎಚ್ಚರಿಕೆಯೊಂದಿಗೆ ಇವರ ವಿರುದ್ಧ ಹೋರಾಟವನ್ನು ಭಾರತ ಮರುಸಂಘಟಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News