ಕಾಂಗ್ರೆಸ್ ಬಿರುಕಿಗೆ ವರಿಷ್ಠರ ತೇಪೆ

Update: 2025-01-15 04:44 GMT

‘ಮುಖ್ಯಮಂತ್ರಿ ಬದಲಾವಣೆ’ಯ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಬಿರುಕುಗಳಿಗೆ ಸಣ್ಣದೊಂದು ತೇಪೆ ಹಾಕುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆೆ. ‘‘ಸಿಎಂ ಬದಲಾವಣೆಯ ಬಗ್ಗೆ ಯಾರೂ ಬಹಿರಂಗ ಹೇಳಿಕೆಯನ್ನು ನೀಡಬಾರದು’’ ಹೀಗೆಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ‘‘ಕಾಂಗ್ರೆಸ್ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾ ಮತ್ತು ರಾಹುಲ್‌ಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ’’ ಎಂದು ಸಿದ್ದರಾಮಯ್ಯ ತನ್ನ ಸಹೋದ್ಯೋಗಿಗಳಿಗೆ ಕರೆ ನೀಡಿದ್ದಾರೆ. ಜೊತೆಗೆ ‘‘ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’’ ಎಂದು ಮಾಧ್ಯಮಗಳಿಗೆ ಸ್ಪಷ್ಟ ಪಡಿಸುವ ಮೂಲಕ, ವರಿಷ್ಠರು ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಲು ನನಗೆ ಯಾವುದೇ ಸೂಚನೆ ನೀಡಿಲ್ಲ ಎನ್ನುವುದನ್ನೂ ತಿಳಿಸಿದ್ದಾರೆ. ‘ತ್ಯಾಗ ಮಾಡಬೇಕಾದವರು ಯಾರು?’ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿ ‘ಇಂದಿರಾಗಾಂಧಿ ಭವನ’ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ಚರ್ಚೆ ಗುರುವಾರ ದಿಲ್ಲಿಯಲ್ಲಿ ಅಂತಿಮರೂಪವನ್ನು ಪಡೆಯುವ ಸಾಧ್ಯತೆಗಳಿವೆ.

ಮುಖ್ಯಮುಂತ್ರಿ ಬದಲಾಗುವುದಿಲ್ಲ ಎನ್ನುವುದರೊಂದಿಗೆ ಕಾಂಗ್ರೆಸ್‌ನೊಳಗಿನ ಸಮಸ್ಯೆ ಪೂರ್ಣವಾಗಿ ಇತ್ಯರ್ಥವಾಗುತ್ತದೆ ಎಂದು ಭಾವಿಸುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿಲ್ಲ ಎನ್ನುವುದು ಮಾತ್ರ ನಿನ್ನೆಯ ಸಭೆಯಲ್ಲಿ ಸ್ಪಷ್ಟವಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಸಾಧನೆ, ಸಿದ್ದರಾಮಯ್ಯ ಅವರ ಕುರ್ಚಿಯನ್ನು ಗಟ್ಟಿಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಅವರು ಈಗಾಗಲೇ ಗ್ರಾಮೀಣ ಪ್ರದೇಶದ ಜನಮನದಲ್ಲಿ ನೆಲೆಸಿದ್ದಾರೆ. ಮಹಿಳೆಯರ ಕಣ್ಮಣಿಯಾಗಿದ್ದಾರೆ. ಗ್ಯಾರಂಟಿ ಯೋಜನೆಯೊಂದು ಹುಲಿ ಸವಾರಿ. ಈ ಗ್ಯಾರಂಟಿಗಳ ಕಾರಣದಿಂದ ಸರಕಾರದ ಬೊಕ್ಕಸದಲ್ಲಿ ಹಣದ ಕೊರತೆ ಎದುರಾಗಿದೆ ಎನ್ನುವ ಅಸಮಾಧಾನದ ಮಾತುಗಳು ಕಾಂಗ್ರೆಸ್‌ನೊಳಗಿಂದಲೇ ಕೇಳಿ ಬರುತ್ತಿವೆೆ. ಸಿದ್ದರಾಮಯ್ಯ ಅವರನ್ನು ಹೊರತು ಪಡಿಸಿದರೆ, ಬಹುತೇಕ ಕಾಂಗ್ರೆಸ್‌ನಾಯಕರು ಈ ಹುಲಿ ಸವಾರಿಯಿಂದ ಸುಸ್ತಾಗಿದ್ದಾರೆ. ಹಾಗೆಂದು ಈ ಸವಾರಿಯನ್ನು ನಿಲ್ಲಿಸಿದರೆ ಹುಲಿ ಬಾಯಿಗೆ ಮೊದಲು ಆಹಾರವಾಗುವವರು ಸಿದ್ದರಾಮಯ್ಯ. ನಾಳೆ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದೇ ಆದರೆ, ಗ್ಯಾರಂಟಿ ಯೋಜನೆಯ ಗತಿಯೇನು ಎನ್ನುವ ಪ್ರಶ್ನೆ ಬರುತ್ತದೆ? ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಿದ್ದೇ ಆದರೆ, ಹೊಸ ಮುಖ್ಯಮಂತ್ರಿ ಜನರ ಮುಂದೆ ಅನಗತ್ಯವಾಗಿ ವಿಲನ್ ಪಟ್ಟ ಏರಬೇಕಾಗುತ್ತದೆ. ಸಿದ್ದರಾಮಯ್ಯ ಕೊಟ್ಟದ್ದನ್ನು ಕಿತ್ತುಕೊಂಡ ಆರೋಪ ಎದುರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಹಣ ಮತ್ತು ಜಾತಿ ಬಲವನ್ನು ಕೂಡ ನಿರ್ಲಕ್ಷಿಸುವಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಉಪಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು, ತನ್ನೆಲ್ಲ ವರ್ಚಸ್ಸನ್ನು ಪಣಕ್ಕಿಟ್ಟು ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಿಸಿಕೊಟ್ಟರು. ಬಿಜೆಪಿಯು ಜೆಡಿಎಸ್‌ನ್ನು ತೆಕ್ಕೆಗೆ ತೆಗೆದುಕೊಂಡು ಒಕ್ಕಲಿಗರ ಮತಗಳನ್ನು ಬುಟ್ಟಿಗೆ ಹಾಕಲು ಹವಣಿಸುತ್ತಿರುವ ಹೊತ್ತಿಗೆ, ಡಿಕೆಶಿಯ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಡಿಕೆಶಿಯನ್ನು ಸಂಪೂರ್ಣ ನಿರ್ಲಕ್ಷಿಸಿದರೆ, ಅದರ ಲಾಭವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿಯು ಹೊಂಚು ಹಾಕಿ ಕಾಯುತ್ತಿದೆ. ಈ ಕಾರಣದಿಂದ ‘ತ್ಯಾಗ-ಬಲಿದಾನ’ದ ಮಾತುಗಳಿಗೆ ಕಾಂಗ್ರೆಸ್ ಸಭೆಯಲ್ಲಿ ಪ್ರಾಮುಖ್ಯತೆ ಬಂದಿದೆ.

ತ್ಯಾಗ ಮಾಡಬೇಕಾದವರು ಯಾರು ಎನ್ನುವುದು ಬಹುಮುಖ್ಯ ಪ್ರಶ್ನೆ. ಮುಖ್ಯವಾಗಿ ತ್ಯಾಗ ಮಾಡಬೇಕಾದ ಹುದ್ದೆ ಯಾವುದು ಎನ್ನುವುದರಿಂದ ಅದು ನಿರ್ಣಯವಾಗುತ್ತದೆ. ಕಾಂಗ್ರೆಸ್‌ನ ಒಂದು ಗುಂಪು ನಿಜಕ್ಕೂ ಹಿಂದೆ ಬಿದ್ದಿರುವುದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ. ಎರಡು ಹುದ್ದೆಗಳಲ್ಲಿ ಡಿಕೆಶಿ ಮುಂದುವರಿಯುತ್ತಿರುವುದರ ಬಗ್ಗೆ ಹಲವರ ಆಕ್ಷೇಪಗಳಿವೆ. ಕೆಪಿಸಿಸಿ ಸ್ಥಾನವನ್ನು ದಲಿತ ಮುಖಂಡರಿಗೆ ಯಾಕೆ ನೀಡಬಾರದು? ಎನ್ನುವ ಪ್ರಶ್ನೆಯೂ ಎದ್ದಿದೆ. ಒಂದೋ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಇಲ್ಲವೇ ಕೆಪಿಸಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ 20-20 ಅಧಿಕಾರ ಹಂಚಿಕೆಯ ಮಾತುಕತೆ ನಡೆದಿತ್ತು ಎಂದು ಒಂದು ಗುಂಪು ಈಗಲೂ ಹೇಳುತ್ತಿದೆ. ಡಿಕೆಶಿ ಅವರು ಈ ಮಾತನ್ನು ಸಂಪೂರ್ಣವಾಗಿ ಎಂದೂ ಅಲ್ಲಗಳೆದಿಲ್ಲ. ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅನಧಿಕೃತವಾದುದು. ಪಕ್ಷದೊಳಗಿರುವ ಭಿನ್ನಮತದ ತಾತ್ಕಾಲಿಕ ಶಮನಕ್ಕಾಗಿ ಸೃಷ್ಟಿಯಾದ ಹುದ್ದೆಯದು. ಮುಖ್ಯಮಂತ್ರಿ ಕಾರ್ಯನಿರ್ವಹಿಸುತ್ತಿರುವಾಗ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಇದು ಡಿಕೆಶಿ ಅವರಿಗೂ ಗೊತ್ತಿದೆ. ಆದುದರಿಂದಲೇ, ಪಕ್ಷದಲ್ಲಿ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಬೇಕಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಸಮಯ ಸಂದರ್ಭ ಬಂದಾಗ ಪಕ್ಷಕ್ಕಾಗಿ ತನ್ನ ಹಣಬಲವನ್ನು, ಜಾತಿಬಲವನ್ನು ಪೂರ್ಣವಾಗಿ ಅರ್ಪಿಸಿರುವ ಡಿಕೆಶಿ ಅವರು ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಮಾನವನ್ನು ನಿರೀಕ್ಷಿಸಿದರೆ ತಪ್ಪೇನೂ ಇಲ್ಲ. ಯಾಕೆಂದರೆ, ಡಿಕೆಶಿ ತನ್ನ ರಾಜಕೀಯ ಶಕ್ತಿಯನ್ನು ಈಗಾಗಲೇ ಕೇಂದ್ರ ವರಿಷ್ಠರಿಗೂ ಪರಿಚಯಿಸಿದ್ದಾರೆ. ಗುಜರಾತ್‌ನ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರಕ್ಕೆ ಬಲಿಯಾದಾಗ ಅವರನ್ನು ಕರ್ನಾಟಕಕ್ಕೆ ಕರೆಸಿ, ತನ್ನ ಲಾಯದಲ್ಲಿ ಜೋಪಾನ ಮಾಡಿ, ಕಾಂಗ್ರೆಸ್‌ನ್ನು ಬಹುದೊಡ್ಡ ಮುಜುಗರದಿಂದ ಪಾರು ಮಾಡಿದವರು ಡಿಕೆಶಿ. ಆ ಮೂಲಕ ಡಿಕೆಶಿ ಅಮಿತ್ ಶಾ ಅವರ ಕೆಂಗಣ್ಣಿಗೆ ಗುರಿಯಾಗಿ, ಮುಂದೆ ನಿರಂತರವಾಗಿ ಕೇಂದ್ರದ ತನಿಖಾ ಸಂಸ್ಥೆಗಳ ಕಿರುಕುಳಕ್ಕೆೆ ಗುರಿಯಾದರು. ಇವೆೆಲ್ಲವನ್ನು ನಾನು ಅನುಭವಿಸಿದ್ದು ಕಾಂಗ್ರೆಸ್‌ಗಾಗಿ ಎನ್ನುವುದು ಡಿಕೆಶಿ ಸಮರ್ಥನೆಯಾಗಿದೆ.

ಇತ್ತ ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಗುಂಪು ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕು ಅಥವಾ ಉಪಮುಖ್ಯಮಂತ್ರಿ ಸ್ಥಾನಗಳಲ್ಲಿ ಹೆಚ್ಚಳವನ್ನು ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಎರಡೂ ಡಿಕೆಶಿಗೆ ಇಷ್ಟವಿಲ್ಲದ್ದಾಗಿದೆ. ಮುಖ್ಯಮಂತ್ರಿ ಸ್ಥಾನವನ್ನೇರಬೇಕಾದ ತಾನು ಉಪಮುಖ್ಯಮಂತ್ರಿ ಹುದ್ದೆಯಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿರಬೇಕಾದರೆ, ಆ ಸ್ಥಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಅವರು ಸಿದ್ಧರಿಲ್ಲ. ಸಾಧಾರಣವಾಗಿ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳನ್ನೇ ಸಮಾಧಾನಿಸುವುದಕ್ಕಾಗಿ ಉಪಮುಖ್ಯಮಂತ್ರಿಗಳನ್ನಾಗಿಸಲಾಗುತ್ತದೆ. ಇದೀಗ ಎರಡೆರಡು ಉಪಮುಖ್ಯಮಂತ್ರಿಗಳಾದರೆ, ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಗಳ ಸಂಖ್ಯೆ ಏರಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡು, ಪಕ್ಷದ ನಿಯಂತ್ರಣವನ್ನು ಕೈಚೆಲ್ಲುವುದಕ್ಕೂ ಅವರು ಸಿದ್ಧರಿಲ್ಲ. ಒಟ್ಟಿನಲ್ಲಿ ಇದು ಕಾಂಗ್ರೆಸ್‌ನೊಳಗಿರುವ ಇತರ ದುರ್ಬಲ ಜಾತಿಯ ನಾಯಕರನ್ನು ತೀವ್ರ ಅಸಮಾಧಾನಕ್ಕೆ ತಳ್ಳಿದೆ. ಸಿದ್ದರಾಮಯ್ಯ ಬಿಡೆ ಎಂದು ಕೂತಿರುವಾಗ, ಡಿಕೆಶಿ ಕೊಡೆ ಎಂದು ಕೂತಿದ್ದಾರೆ. ಹೀಗಿರುವಾಗ ವರಿಷ್ಠರಿಗೆ ‘ತ್ಯಾಗ, ಬಲಿದಾನ’ದ ಉಪದೇಶದ ಮಾತುಗಳ ಹೊರತಾಗಿ ವರಿಷ್ಠರ ಬಳಿ ಇನ್ನೇನು ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸುರ್ಜೆವಾಲಾರ ಸಂಧಾನ ಸಣ್ಣದೊಂದು ತೇಪೆಯಷ್ಟೇ. ಈ ತೇಪೆ ಎಷ್ಟು ದಿನ ಬಾಳಿಕೆ ಬರುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News