ಕ್ಯಾಶ್‌ಲೆಸ್ ದುನಿಯಾದಲ್ಲಿ ಸೈಬರ್ ವಂಚಕರದೇ ದರ್ಬಾರ್
2014ರಲ್ಲಿ ಭಾರತೀಯ ಜಾಲತಾಣಗಳ (2ಜಿ) ಬಳಕೆ ಬಹಳ ಮಂದಗತಿಯಲ್ಲಿತ್ತು. ನಂತರ 2ಜಿಯಲ್ಲಿದ್ದ ಮೊಬೈಲ್ ಬಳಕೆಯು 4ಜಿಗೆ ಜಿಗಿಯಿತು. ಮೊದಲು ವಾಟ್ಸ್ ಆ್ಯಪ್, ಫೇಸ್‌ಬುಕ್ ಬಳಕೆಗೆ ಸೀಮಿತವಾಗಿದ್ದ ಜನರು ಟ್ವಿಟರ್, ಇನ್‌ಸ್ಟಾಗ್ರಾಮ್ ಬಳಕೆ ಮಾಡಿ ಭಾರತ ದೇಶ ವಿಜ್ಞಾನದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ ಎಂದು ಮಾತನಾಡಿದವರೇ ಹೆಚ್ಚಾದರು. ಜಿಯೋ ಸಿಮ್ ಕಾರ್ಡ್ ಎಲ್ಲರಿಗೂ ಪುಕ್ಕಟೆಯಾಗಿ ದೊರೆಯಿತು. ಪುಕ್ಕಟೆಯಾಗಿ ಸಿಕ್ಕ ಸಿಮ್ ಕಾರ್ಡ್ ತೆಗೆದುಕೊಂಡ ಗ್ರಾಹಕರು ಅದನ್ನು ಮೊಬೈಲ್‌ಗೆ ಹಾಕಿಕೊಳ್ಳಬೇಕಾದರೆ ಸುಮಾರು 10ರಿಂದ 12ಸಾವಿರ ರೂಪಾಯಿಯ (2014ರಲ್ಲಿ) ಮೊಬೈಲ್ ತೆಗೆದುಕೊಳ್ಳಬೇಕಾಯಿತು. ಇದರಿಂದ ಜಿಯೋ ಕಂಪೆನಿಗೆ ಕೋಟ್ಯಂತರ ರೂಪಾಯಿ ಆದಾಯ ಹೆಚ್ಚಿತೇ ಹೊರತು, ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿತು. ಇದನ್ನೇ ದೊಡ್ಡ ಉದ್ದಿಮೆಯಾಗಿ ಮಾಡಿಕೊಂಡ ಕಂಪೆನಿ ಅದರ ಮೇಲಿನ ರೀಚಾರ್ಜ್ ಶುಲ್ಕವನ್ನು ಹೆಚ್ಚಿಸಿ ಗ್ರಾಹಕರಿಂದ ಹೆಚ್ಚು ಹಣವನ್ನು ರೀಚಾರ್ಜ್ ರೂಪದಲ್ಲಿ ವಸೂಲಿ ಮಾಡಲು ಪ್ರಾರಂಭಿಸಿತು. ಆನಂತರ ಕೊರೋನ ಎನ್ನುವ ಮಹಾಮಾರಿಯಿಂದಾಗಿ ಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಬಂಧ ಮಾಯವಾಗಿ ಅಂತರ್ಜಾಲದ ಸಂಬಂಧ ಹೆಚ್ಚಾಯಿತು. ಆನ್‌ಲೈನ್ ಕ್ಲಾಸ್ ಪ್ರಾರಂಭವಾಯಿತು. ಕೊನೆಗೆ ಇಡೀ ದೇಶದ ಜನರು ಆನ್‌ಲೈನ್ ಗೀಳಿಗೆ ಬೀಳುವಂತಾಯಿತು.
ಭಾರತದ ಸರಕಾರ ಎಲ್ಲರೂ ತಮ್ಮ ಹಣಕಾಸು ವ್ಯವಹಾರವನ್ನು ಕ್ಯಾಶ್ ಲೆಸ್ ಮಾಡಿದರೆ ದೇಶದಲ್ಲಿರುವ ಅರಾಜಕತೆಯನ್ನು ತಡೆಯಬಹುದೆನ್ನುವ ಮನಸ್ಥಿತಿಯನ್ನು ಸೃಷ್ಟಿ ಮಾಡಿತು. ಕೊನೆಗೆ ಎಲ್ಲರೂ ಆನ್‌ಲೈನ್ ಬಳಕೆ ಮಾಡಲೇಬೇಕೆನ್ನುವಂತಹ ಒತ್ತಾಯಪೂರ್ವಕ ಸಂದೇಶಗಳನ್ನು ಸಹ ಬಿತ್ತರಿಸಲಾಯಿತು. ಹಾಗಾಗಿ ದೇಶವಾಸಿಗಳು ಆನ್‌ಲೈನ್ ಬಳಕೆಗೆ ಮುಳುಗುವಂತಾಯಿತು. ಒಂದು ಕಾಲದಲ್ಲಿ ಆನ್‌ಲೈನ್ ಬಳಕೆ ಮಾಡಿ ಎಂದು ಹೇಳುತ್ತಿದ್ದವರು ಇಂದು ಸೈಬರ್ ವಂಚನೆಗಳಿಂದ ಜಾಗೃತರಾಗಿರಿ, ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಮಾತನಾಡಬೇಡಿ, ನಿಮ್ಮ ಸಂದೇಶಗಳನ್ನು ರವಾನಿಸಬೇಡಿ, ನಿಮ್ಮ ನಿಮ್ಮ ಮೊಬೈಲ್‌ಗೆ ಬರುವ ಗೌಪ್ಯವಾದ ನಂಬರ್‌ಗಳನ್ನು ಯಾರಿಗೂ ಶೇರ್ ಮಾಡಬೇಡಿ ಎಂದು ಪ್ರಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನನಿತ್ಯ ಸೈಬರ್ ವಂಚನೆಗಳಿಂದ ಸಾವಿರಾರು ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಈಗ ನಡೆಯುತ್ತಿರುವ ಸೈಬರ್ ವಂಚನೆಗಳಿಗೆ ಯಾರು ಹೊಣೆಗಾರರು? ಯಾರಿಗೆ ಇದರಿಂದ ಹೆಚ್ಚು ಲಾಭವಾಗುತ್ತಿದೆ? ಯಾವ ಕಂಪೆನಿಗಳು ಈ ಸೈಬರ್ ವಂಚನೆಗಳ ಹಿಂದೆ ತಮ್ಮ ಕೈಚಳಕವನ್ನು ತೋರಿಸುತ್ತಿವೆ? ಗ್ರಾಹಕರ ಖಾತೆಯಲ್ಲಿರುವ ಮೊತ್ತ ಸೈಬರ್ ವಂಚಕರಿಗೆ ಹೇಗೆ ಗೊತ್ತಾಗುತ್ತಿದೆ? ಗ್ರಾಹಕರ ಮೊಬೈಲ್ ಒಳಗೆ ಆಗುತ್ತಿರುವುದು ಇವರ ಗಮನಕ್ಕೆ ತರುತ್ತಿರುವವರು ಯಾರು? ಏನು ಇದರ ಹಿಂದಿರುವ ಹುನ್ನಾರಗಳು? ಇಂತಹ ಹತ್ತು ಹಲವು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿದೆ. ಸೈಬರ್ ವಂಚನೆಗಳನ್ನು ಅನುಭವಿಸಿದ ಸಾಮಾನ್ಯ ಜನರಿಂದ ಯಾವ ಮೊಕದ್ದಮೆಗಳನ್ನು ತೆಗೆದುಕೊಳ್ಳದೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಭಾಯಿಸುವ ಇಲಾಖೆಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಸೈಬರ್ ವಂಚನೆಗಳಿಗೆ ಯಾರನ್ನು ನಾವು ಹೊಣೆ ಮಾಡಬೇಕು,ಬ್ಯಾಂಕ್ ಖಾತೆಯಲ್ಲಿ ಇದ್ದಕಿದ್ದ ಹಾಗೆ ಹಣ ಡೆಬಿಟ್ ಆಗುತ್ತಿರುವುದಕ್ಕೆ ಬ್ಯಾಂಕ್ ಹೊಣೆಗಾರರೇ ಅಥವಾ ಒಟಿಪಿಯನ್ನು ಮುಂಚೂಣಿಗೆ ತಂದಂತಹ ಖಾಸಗಿ ಕಂಪೆನಿಗಳೇ ಅಥವಾ ಸೈಬರ್ ಕಂಪನಿಗಳೇ ಅಥವಾ ಅವುಗಳಿಗೆ ಪರವಾನಿಗೆ ನೀಡಿದ ಸರಕಾರಗಳೆ?
ಎಲ್ಲಾ ಸೈಬರ್ ವಂಚನೆಗಳಿಗೆ ಬ್ಯಾಂಕ್‌ಗಳೇ ಹೊಣೆಯಾಗಬೇಕಿದೆ ಎನ್ನುವುದು ಗ್ರಾಹಕರ ಅಭಿಪ್ರಾಯ. ಜನಸಾಮಾನ್ಯರು ಬ್ಯಾಂಕುಗಳನ್ನು ನಂಬಿ ಹಣ ಹೂಡಿಕೆ ಮಾಡಿಟ್ಟಿರುತ್ತಾರೆ, ಆದರೆ ಇಂದು ಎಲ್ಲರೂ ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿಯನ್ನು ಈ ಒಟಿಪಿ ಎನ್ನುವ ಮಹಾಮಾರಿ ನಿರ್ಮಾಣಮಾಡಿಬಿಟ್ಟಿದೆ. ಪ್ರತೀ ಗ್ರಾಹಕರಿಗೂ ಪ್ರತಿಯೊಂದಕ್ಕೂ ಒಟಿಪಿಯನ್ನು ನೀಡುವಂತೆ ನಿಯಮಗಳನ್ನು ಜಾರಿಗೆ ತಂದದ್ದು ಬ್ಯಾಂಕ್, ಒಟಿಪಿಯನ್ನು ಬ್ಯಾಂಕಿನವರು ಕೇಳುತ್ತಾರೋ, ಸೈಬರ್ ಕಳ್ಳರು ಕೇಳುತ್ತಾರೋ ಒಂದೂ ತಿಳಿಯದಾಗಿದೆ. ಮೊಬೈಲ್ ನಂಬರ್ ಚೇಂಜ್ ಮಾಡಲು ಒಟಿಪಿ! ಪ್ರತೀ ಟ್ರಾನ್ಸಾಕ್ಷನ್‌ಗೂ ಒಟಿಪಿ! ಸಾಯುತ್ತಿರುವ ಮುದುಕ ಪೆನ್ಷನ್ ಪಡೆಯಲು ಒಟಿಪಿ! ಸತ್ತವರ ಹಣವನ್ನು ಹಿಂಪಡೆಯುವ ನಾಮಿನಿಗೂ ಒಟಿಪಿ, ಕೊನೆಗೆ ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತುಪಡಿಸಲು ಒಟಿಪಿ ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ!
ಈ ಒಟಿಪಿ ದುನಿಯಾದಲ್ಲಿ ಯಾರಿಗೆ ಎಷ್ಟು ಲಾಭವಾಗಿದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಎಷ್ಟೋ ಬಾರಿ ಹಣ ಕಳೆದುಕೊಂಡ ಗ್ರಾಹಕರು ಬಂದು ಬ್ಯಾಂಕ್ ಅಧಿಕಾರಿಗಳ ಮುಂದೆ ಕಿರುಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಒಟಿಪಿ ಎನ್ನುವ ಮಹಾಮಾರಿ ಬಳಕೆಯಲ್ಲಿ ಗ್ರಾಹಕರು ನಿಜವಾಗಿಯೂ ಬೇಸತ್ತಿದ್ದಾರೆ.
ಇತ್ತೀಚೆಗೆ ಗ್ರಾಹಕರು ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಹಣವನ್ನು ಇಡುವುದಕ್ಕೂ ಭಯಪಡುವಂತಾಗಿದೆ. ಯಾವ ಬ್ಯಾಂಕ್‌ನಿಂದ ಕರೆ ಬಂದರೂ ಒಟಿಪಿ ಕೇಳಿದಾಗ ಹೇಳಬೇಕೋ ಬೇಡವೋ ಎನ್ನುವ ಆತಂಕದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.