ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಬಲ ಜಾತಿವಾದದ ಒಡಕು

ಬ್ರಿಟಿಷರು, ತಮ್ಮ ತಂತ್ರಗಾರಿಕೆಯಿಂದ ಒಂದೊಂದೇ ರಾಜ್ಯ ಮತ್ತು ಸಂಸ್ಥಾನಗಳನ್ನು ಆಕ್ರಮಿಸುತ್ತಾ ಬಂದರು. ಹೀಗೆ ಮಾಡುವಲ್ಲಿ ವಿಭಿನ್ನ ಜಾತಿಯ ರಾಜರು, ಸಾಂಸ್ಥಾನಿಕರು, ಮಾಂಡಲೀಕರು, ಪಾಳೇಗಾರರು ಇತ್ಯಾದಿಯವರು ಒಂದಾಗದ ಹಾಗೆ ವ್ಯವಸ್ಥಿತವಾಗಿ ನೋಡಿಕೊಂಡರು. ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಜಾತಿಗಳನ್ನು, ವರ್ಣ ಪದ್ಧತಿ ಅನುಸಾರವೇ ಇರುವಂತೆ ನೋಡಿಕೊಂಡರು. ಇದು ಅವರ ಸುಗಮ ಆಡಳಿತಕ್ಕೆ ದಾರಿಯಾಯಿತು. ಇದೊಂದು ರೀತಿಯ ಒಡೆದು ಆಳುವ ನೀತಿ.

Update: 2025-01-15 05:28 GMT

ಬ್ರಿಟಿಷರು ಅತ್ಯಂತ ಸಂತುಷ್ಟ ಭಾವ ಮತ್ತು ಸಾಮಾನ್ಯ ನಡೆಯಲ್ಲಿ ಭಾರತಕ್ಕೆ ವಿದಾಯ ಹೇಳಿದವರಲ್ಲ. ಅವರು ಜನರನ್ನು ಕೋಮುವಾದದ ಮೇಲೆ ವಿಭಜಿಸಿ ಎಷ್ಟು ಸಾಧ್ಯವೋ ಅಷ್ಟೂ ಕಾಲ ಆಳ್ವಿಕೆ ನಡೆಸಿ ದೋಚಿದವರು. 19ನೇ ಶತಮಾನದ ಕೊನೆಯ ದಶಕದಲ್ಲಿ ಅವರು ಬಿತ್ತಿದ ಜಾತಿ ರಾಜಕೀಯದ ಸಣ್ಣ ಬೀಜಗಳು 2ನೇ ಶತಮಾನದ 30 ಮತ್ತು 40ರ ದಶಕದಲ್ಲಿ ಬೃಹತ್ ದೈತ್ಯಾಕಾರದ ಕೋಮು ವೃಕ್ಷಗಳು ವಿಷ ಮತ್ತು ಮುಳ್ಳುಗಳಿಂದ ತುಂಬಿದ ಕೊಂಬೆಗಳೊಂದಿಗೆ ದೊಡ್ಡದಾದವು. (ಜಾತಿ) ಜನಗಣತಿಯಲ್ಲಿ ಇದನ್ನು ಪ್ರಥಮತಃ ತಿಳಿಸಲು ಜನರನ್ನು ಜಾತಿ ಮತ್ತು ಜಾತಿ ಕ್ರಮಾಗತ ವ್ಯವಸ್ಥೆಯ ಮೇಲೆ ದಾಖಲು ಮಾಡಲಾಯಿತು.

1909ರಲ್ಲಿ, ಮಿಂಟೊ-ಮಾರ್ಲೆ ಸಮಿತಿ ಶೋಷಣೆಗೆ ಒಳಗಾದ ವರ್ಗಗಳ ವಿಶೇಷ ಪ್ರಾತಿನಿಧ್ಯವನ್ನು ಗುರುತಿಸಿತು. ಇದು ಜಾತಿಯ ಹಿಂದುಳಿದಿರುವಿಕೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಜಾತಿ ಸಂಘಗಳ ರಚನೆಗೆ ಸಾಮಾಜಿಕ ಚಳವಳಿಯನ್ನು ಪ್ರೋತ್ಸಾಹಿಸಿತು ಮತ್ತು ಆದ್ಯತೆಯ ಉಪಚಾರಕ್ಕಾಗಿ (ಪ್ರಿಫರೆನ್ಶಿಯಲ್ ಟ್ರೀಟ್ಮೆಂಟ್) ಒತ್ತಾಯಿಸಿತು. ಭಾರತ ಸರಕಾರದ ಕಾಯ್ದೆ 1919ರ ಅಡಿಯಲ್ಲಿ ಮುಸ್ಲಿಮರು, ಸಿಖ್ಖರು, ಆಂಗ್ಲೋ ಇಂಡಿಯನ್ನರು, ಭಾರತೀಯ ಕ್ರೈಸ್ತರು, ಶೋಷಿತರು ಮತ್ತು ಮೂಲನಿವಾಸಿಗಳ ಪರವಾಗಿ ವಿಶೇಷ ಪ್ರಾತಿನಿಧ್ಯವನ್ನು ನೀಡಿತು.

1919ರ ಮೊದಲು ಮನವೊಲಿಸಿದ ಬ್ರಿಟಿಷ್ ಸರಕಾರದ ಈ ನೀತಿಯು ವಿವಿಧ ಸಮುದಾಯಗಳ ಪರವಾಗಿ ರಿಯಾಯಿತಿಗಳನ್ನು ರೂಪಿಸಲು ಕಾರಣವಾಯಿತು.

‘‘ಜಾತಿ ಪೂರ್ವಗ್ರಹವು ವಸಾಹತುಶಾಹಿ ಆಳ್ವಿಕೆಯಲ್ಲಿ ಕೆಟ್ಟದಾಗಿತ್ತು. ಮತ್ತು ನಾನು ಈ ವಾದವನ್ನು ಮಾಡಲು ಕಾರಣವೆಂದರೆ ನೀವು ಐತಿಹಾಸಿಕ ದಾಖಲೆಗಳನ್ನು ನೋಡಿದರೆ ಕೆಲವು ರೀತಿಯ ಜಾತಿ ವಿವಾದಗಳು 19ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಇನ್ನಷ್ಟು ತೀವ್ರರೂಪ ತಾಳಿದವು’’ ಎಂಬ ಈ ಮಾತನ್ನು ಮಾನವ ಶಾಸ್ತ್ರ ಮತ್ತು ಇತಿಹಾಸದ ಪ್ರಾಧ್ಯಾಪಕ, ಕೊಲಂಬಿಯಾ ವಿಶ್ವವಿದ್ಯಾಲಯದ ಕಲೆ ಮತ್ತು ವಿಜ್ಞಾನಗಳ ಉಪಾಧ್ಯಕ್ಷರೂ ಆದ ನಿಕೋಲಾಸ್ ಬಿ. ಡರ್ಕ್ಸ್ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಜಾತಿಗಳನ್ನು ಬಲಪಡಿಸುವ ಬ್ರಿಟಿಷ್ ತಂತ್ರಗಳನ್ನು ದೃಢಪಡಿಸುವ ನಿಟ್ಟಿನಲ್ಲಿ ಹೇಳಿದ್ದಾರೆ.

ಅಲೋಶಿಯಸ್ ಎಂಬವರು ತಮ್ಮ ‘ನ್ಯಾಷನಲಿಸಂ ವಿಥೌಟ್ ನೇಶನ್’ ಎಂಬ ಪುಸ್ತಕದಲ್ಲಿ ವಸಾಹತುಶಾಹಿಗಳಿಗೆ ಜಾತೀಯತೆಯನ್ನು ಪರಿಹರಿಸಲು ಇಷ್ಟವಿಲ್ಲದಿರುವುದನ್ನು ತೀವ್ರವಾಗಿ ಗಮನಿಸಿದ್ದಾರೆ. ‘‘ಅವರು ಅದನ್ನು ವ್ಯಾವಹಾರಿಕವಾಗಿ ನೆಲೆಗೊಳಿಸಿದ್ದಾರೆ. ಅವರ ಆಡಳಿತ ವ್ಯವಸ್ಥೆಯು ಬಹುತೇಕ ಮೇಲ್ಜಾತಿಯ ಬ್ರಾಹ್ಮಣರನ್ನು ನಿರ್ಣಯ ಕೈಗೊಳ್ಳುವ ಮತ್ತು ಮಹತ್ವವಾದದ್ದನ್ನು ಜಾರಿಗೊಳಿಸುವ ಸ್ಥಾನಗಳಿಗೆ ನೇಮಕ ಮಾಡುವುದರ ಮೂಲಕ ಇಡೀ ದೇಶವನ್ನು ಹಳೆಯ ನಿಯಮದ ರಾಜಕೀಯ ಸಿದ್ಧಾಂತಕ್ಕೆ ಸೇರಿದ ಏಕರೂಪದ ಆಳ್ವಿಕೆಗೆ ತರಲಾಯಿತು. ಇದು 150 ವರ್ಷಗಳ ಕಾಲ ಸಾಮಾಜಿಕ ಬದಲಾವಣೆಗೆ ಅಡ್ಡಿಯಾಯಿತು.’’ ಎನ್ನುವ ಅಲೋಶಿಯಸ್ ಮುಂದುವರಿದು ಹೇಳುತ್ತಾರೆ ‘‘ವಸಾಹತುಶಾಹಿಯ ಪ್ರಭಾವವು ಸಾಮಾಜಿಕ ಪ್ರಗತಿ, ಆರ್ಥಿಕ ವೈವಿಧ್ಯ ಮತ್ತು ಸಂಸ್ಕೃತಿ ಆಧಾರಿತ ರಾಜಕೀಯದಿಂದ ಹೊರ ಬರುವಿಕೆಗೆ ಅಡ್ಡಿಯಾಯಿತು. ಇಡೀ ಭಾರತ ಬ್ರಾಹ್ಮಣ ಮತ್ತು ಊಳಿಗಮಾನ್ಯ ಬಲವರ್ಧನೆಯ ವಾತಾವರಣಕ್ಕೆ ಹಿಂದಿರುಗಿತು. ವಸಾಹತುಶಾಹಿ ಅವಧಿಯು ಜಾತಿ ವಿರುದ್ಧ ತೀಕ್ಷ್ಣವಾದ ಹೋರಾಟಕ್ಕೆ ತಡೆಯೊಡ್ಡಿತ್ತು.’’

ಬ್ರಿಟಿಷ್ ವಸಾಹತುಶಾಹಿಗಳು ಜಾತಿ ವ್ಯವಸ್ಥೆಯನ್ನು ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಿದ್ದರು. ವಿಕಾಸ ಅಧ್ಯಯನ ಕೇಂದ್ರವು ಪ್ರಕಟಿಸಿದ ಪುಸ್ತಕ ‘ಕ್ರಾಸ್ ರೋಡ್ಸ್’ ಮುಂಬೈ ಕರ್ನಾಟಕದಲ್ಲಿ ದಲಿತರು ಗುಲಾಮರಂತೆ ಮತ್ತು ಜೀತದಾಳುಗಳಂತೆ ಬದುಕುತ್ತಿದ್ದರು ಎಂದು ಹೇಳುತ್ತದೆ. ಅಸ್ಪಶ್ಯರ ಶಿಕ್ಷಣಕ್ಕಾಗಿ ಬ್ರಿಟಿಷ್ ನಿಯಂತ್ರಿತ ಸರಕಾರವು ಏನನ್ನೂ ಮಾಡಲಿಲ್ಲ ಎಂದು ಕೂಡ ಹೇಳುತ್ತದೆ. 1850ರಲ್ಲಿ ದಲಿತ ಹುಡುಗನಿಗೆ ಸಾರ್ವಜನಿಕ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ನಿರಾಕರಣೆಯ ವಿರುದ್ಧ ಅರ್ಜಿ ಸಲ್ಲಿಸಿದಾಗ ಸರಕಾರ ಒಬ್ಬ ಅಥವಾ ಕೆಲವು ವ್ಯಕ್ತಿಗಳಿಗೆ ಶಿಕ್ಷಣದ ಕಾರಣಕ್ಕೆ ಅವಕಾಶವಿತ್ತರೆ ದೊಡ್ಡ ಹಾನಿ ಉಂಟಾಗುತ್ತದೆ ಎಂದಿತು.

ಬ್ರಿಟಿಷರು ಮೇಲ್ವರ್ಗದ ಮತ್ತು ಕೆಳ ವರ್ಗದವರ ನಡುವಿನ ಘರ್ಷಣೆಯ ಲಾಭವನ್ನು ಪಡೆದರು ಮತ್ತು ಭಾರತೀಯರನ್ನು ನಿಯಂತ್ರಿಸಲು ಕ್ರಮಗಳನ್ನು ಪ್ರಾರಂಭಿಸಿದರು. ವಿವಿಧ ಕಾಯ್ದೆಗಳು ಮತ್ತು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದರು. ಅವರು ಜಾತಿ ರಾಜಕೀಯ ಆಟ ಆಡುವ ಮೂಲಕ ಮತ್ತು ಮೇಲ್ಜಾತಿ ವ್ಯಕ್ತಿಗಳ ಮೇಲೆ ದುರ್ಬಲ ಜಾತಿಗಳನ್ನು ಎತ್ತಿ ಕಟ್ಟುವ ಮೂಲಕ ಸಂಪತ್ತನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದರು. ಅಭಿವೃದ್ಧಿ ಕಾರ್ಯಗಳನ್ನು ಕಡೆ ಗಣಿಸಿದರು. ಬ್ರಿಟಿಷ್ ಆಡಳಿತಗಾರರು ಒಡೆದು ಆಳುವ ನೀತಿಯನ್ನು ಗಮನಿಸಿದ ನಂತರ ಕೆಲವು ರಾಜ-ಮಹಾರಾಜರುಗಳು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ದೇಶಪ್ರೇಮದ ಬಗ್ಗೆ ಮಾತಾಡಲು ಶುರುವಿಟ್ಟುಕೊಂಡರು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಲು ಜೊತೆಗೂಡಲು ಭಾರತೀಯರನ್ನು ಪ್ರೋತ್ಸಾಹಿಸಿದರು. ಬ್ರಿಟಿಷ್ ಆಡಳಿತಗಾರರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಹೊಸ ಕಾನೂನುಗಳನ್ನು ತರಲು ಯೋಚಿಸಿದರು. 1836ರಿಂದ 1850ರ ಅವಧಿಯಲ್ಲಿ ನೂರಾರು ಕಾಯ್ದೆಗಳು ಮತ್ತು ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದರು.

ಬ್ರಿಟಿಷರ ಪ್ರಯತ್ನಗಳು ಜನರ ಜಾತಿಯ ಹಿನ್ನೆಲೆಯನ್ನು ಬಹಿರಂಗಪಡಿಸುವಲ್ಲಿ ಮಾತ್ರವಲ್ಲದೆ ಪರಸ್ಪರ ದ್ವೇಷವನ್ನು ಸೃಷ್ಟಿಸುವ ಗುಪ್ತ ಉದ್ದೇಶದಿಂದ ಚಾಲ್ತಿಯಲ್ಲಿರುವ ಸಾಮಾಜಿಕ ಉಪಚಾರದ ಬಗ್ಗೆಯೂ ಸಹ 1911ರ ಜನಗಣತಿಗಾಗಿ ಸಿದ್ಧಪಡಿಸಲಾದ ಪ್ರಶ್ನಾವಳಿಗಳಿಂದ ನಿರ್ಣಯಿಸಲಾಗುತ್ತದೆ. ಹೀಗೆ ಹೇಳಲಾದ ಪ್ರಶ್ನಾವಳಿಗಳಲ್ಲಿ ಯಾವುದೇ ಜಾತಿ ಅಥವಾ ಗುಂಪು ಬ್ರಾಹ್ಮಣ ಅಥವಾ ಇತರ ಮಾನ್ಯತೆ ಪಡೆದ ಹಿಂದೂ ಗುರುಗಳಿಂದ ಪೌರೋಹಿತ್ಯ ಸ್ವೀಕರಿಸುತ್ತದೆಯೇ, ಉತ್ತಮ ಬ್ರಾಹ್ಮಣರು ಅಂತಹ ಕುಟುಂಬದ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆಯೇ, ಸಾಮಾನ್ಯ ಹಿಂದೂ ದೇವಾಲಯಗಳ ಒಳಭಾಗಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆಯೇ, ಅಂತಹವರ ಸ್ಪರ್ಶ ಮಾತ್ರದಿಂದ ಅಪವಿತ್ರೀಕರಣ ಉಂಟಾಗುತ್ತದೆಯೇ, ಇತರ ಮೇಲ್ಜಾತಿ ಹಿಂದೂಗಳಂತೆ ಶವಗಳನ್ನು ಹೂಳುತ್ತಾರೆಯೇ ಇತ್ಯಾದಿ.

ಜನಗಣತಿಯ ಉದ್ದೇಶಕ್ಕಾಗಿ ಜಾತಿ ಮತ್ತು ಬುಡಕಟ್ಟುಗಳನ್ನು ಎಣಿಕೆ ಮಾಡಲು ಸಿದ್ಧಪಡಿಸಿದ ಪ್ರಶ್ನಾವಳಿಯಲ್ಲಿ ಇಂತಹ ಪ್ರಶ್ನೆಗಳನ್ನು ಸೇರಿಸುವುದು ಬ್ರಿಟಿಷರ ಆಳ್ವಿಕೆಯು ಜನರನ್ನು ಅವರ ಜಾತಿ ಸಾಮಾಜಿಕ ಸ್ಥಾನಮಾನ ಇತ್ಯಾದಿಗಳ ಬಗ್ಗೆ ಹೆಚ್ಚೆಚ್ಚು ಜಾಗೃತಗೊಳಿಸುವ ಪ್ರಯತ್ನವಾಗಿದೆ. ಇದು ಸಂಕ್ಷಿಪ್ತ ನಿರೂಪಣೆಯನ್ನು ಸಹ ಪಟ್ಟಿ ಮಾಡುವುದಷ್ಟೇ ಅಲ್ಲ, ಕ್ರೂರ ಜಾತಿ ಶ್ರೇಣಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳ ಮಟ್ಟದಲ್ಲಿರುವ ಶೂದ್ರ ಅಥವಾ ಅಸ್ಪಶ್ಯ ಎಂದು ಕರೆಯಲ್ಪಡುವ ಜನರ ಕರುಣಾಜನಕ ಸ್ಥಿತಿ.

ಹಿಂದೂ ಧರ್ಮವೂ ತಾತ್ವಿಕವಾಗಿ ಹಾಗೂ ಆಚರಣೆಯಲ್ಲಿ ಅಸಮಾನತೆಗಳನ್ನು ಪ್ರತಿಪಾದಿಸುತ್ತದೆ. ಜಾತಿ ಕಸುಬುಗಳನ್ನು ಪ್ರತಿಪಾದಿಸುವಲ್ಲಿ ಆತಿಥೇಯ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯಡಿ ಕ್ಷೌರಿಕರು ಯಾವುದೇ ಶುಲ್ಕವಿಲ್ಲದೆ ಇಡೀ ಗ್ರಾಮದವರಿಗೆ ಕೂದಲು ಕತ್ತರಿಸುವ ಸೇವೆಯನ್ನು ನಿರ್ವಹಿಸುತ್ತಾರೆ. ಇತರ ಸಮುದಾಯ ಗಳು ಆಹಾರ ಧಾನ್ಯಗಳು ಮತ್ತು ಆ ಹಳ್ಳಿಯ ಆರ್ಥಿಕತೆಯಲ್ಲಿ ಉತ್ಪಾದಿಸುವ ಯಾವುದನ್ನಾದರೂ ಸರಿದೂಗಿಸುತ್ತಾರೆ.

ಅಂತಹ ಆತಿಥೇಯರು ಹಬ್ಬಗಳು, ಆಯಾ ಕುಟುಂಬಗಳ ಮದುವೆ ಸಂದರ್ಭ ಮತ್ತು ಮುಂತಾದವುಗಳಲ್ಲಿ ಹೆಚ್ಚುವರಿಯಾಗಿ ಕೊಡುವ ದವಸ-ಧಾನ್ಯಗಳಿಂದ ತೃಪ್ತಿ ಪಟ್ಟುಕೊಳ್ಳುತ್ತಾರೆ. ಇತರ ಸೇವಾ ಪೂರೈಕೆದಾರರು ಅಂದರೆ ಕಮ್ಮಾರರು, ನೇಕಾರರು, ಜಲಗಾರರು ಇತ್ಯಾದಿಯವರಲ್ಲೂ ಇದೇ ಪದ್ಧತಿ ಇರುತ್ತದೆ.

ಬ್ರಿಟಿಷರು, ತಮ್ಮ ತಂತ್ರಗಾರಿಕೆಯಿಂದ ಒಂದೊಂದೇ ರಾಜ್ಯ ಮತ್ತು ಸಂಸ್ಥಾನಗಳನ್ನು ಆಕ್ರಮಿಸುತ್ತಾ ಬಂದರು. ಹೀಗೆ ಮಾಡುವಲ್ಲಿ ವಿಭಿನ್ನ ಜಾತಿಯ ರಾಜರು, ಸಾಂಸ್ಥಾನಿಕರು, ಮಾಂಡಲೀಕರು, ಪಾಳೇಗಾರರು ಇತ್ಯಾದಿಯವರು ಒಂದಾಗದ ಹಾಗೆ ವ್ಯವಸ್ಥಿತವಾಗಿ ನೋಡಿಕೊಂಡರು. ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಜಾತಿಗಳನ್ನು, ವರ್ಣ ಪದ್ಧತಿ ಅನುಸಾರವೇ ಇರುವಂತೆ ನೋಡಿಕೊಂಡರು. ಇದು ಅವರ ಸುಗಮ ಆಡಳಿತಕ್ಕೆ ದಾರಿಯಾಯಿತು. ಇದೊಂದು ರೀತಿಯ ಒಡೆದು ಆಳುವ ನೀತಿ. ದೇಶವನ್ನು ವಿವಿಧ ರೀತಿಯಲ್ಲಿ ಕೊಳ್ಳೆ ಹೊಡೆದರು. ಸ್ವಾರ್ಥವೇ ಪ್ರಮುಖವಾಗಿದ್ದರೂ ಕೆಲವು ಒಳ್ಳೆಯ ಕೆಲಸಗಳನ್ನೂ ಮಾಡಿದರು ಎಂಬುದರಲ್ಲಿ ಎರಡು ಮಾತಿಲ್ಲ. ಇಂಗ್ಲಿಷ್ ಕಲಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಮತ್ತು ಭಾರತವನ್ನು ಉದ್ದಗಲಕ್ಕೂ ಸರ್ವೇ ಮಾಡಿ ಸರ್ವೇ ಸಂಖ್ಯೆ ನೀಡಿರುವುದು ಮುಂತಾದವು ಸಾಮಾನ್ಯ ಕಾರ್ಯಗಳಲ್ಲ! ಆದರೆ ಅವರು ಭಾರತವನ್ನು ಕಂಡ ರೀತಿಗೆ ಹೋಲಿಸಿದಾಗ ಇವು ಗೌಣ.

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ 75 ವರ್ಷಗಳೇ ಕಳೆದರೂ ನಮ್ಮದೇ ಆದ ಸಂವಿಧಾನವನ್ನು ಹೊಂದಿದ್ದರೂ ಅದರ ಆಶಯದಂತೆ ಜಾತಿ ವಿನಾಶವಾಗುವ ಬದಲು ಅದು ಆಳವಾಗಿ ಬೇರು ಬಿಟ್ಟಿರುವುದಂತೂ ಸುಳ್ಳಲ್ಲ. ಇಂದಿಗೂ ಅದರ ಬೇರುಗಳು ಮತ್ತಷ್ಟು ಆಳಕ್ಕೆ ಹೋಗುತ್ತಿವೆ. ಕರಾಳ ಜಾತಿ ವ್ಯವಸ್ಥೆಯಿಂದ ನೊಂದು-ಬೆಂದವರು ಮತಾಂತರ ಹೊಂದಿದರೂ ಸಹ ಜಾತಿ ವ್ಯವಸ್ಥೆಯಿಂದ ಮುಕ್ತವಾಗಲಿಲ್ಲ. ಅದಕ್ಕೊಂದು ದೃಷ್ಟಾಂತ ಹೀಗಿದೆ- ಸಾಚಾರ್ ಸಮಿತಿ ಅಧ್ಯಯನ ಮಾಡಿ ಸಲ್ಲಿಸಿದ ವರದಿಯಲ್ಲಿ ಭಾರತದ ಮುಸ್ಲಿಮರ ಸ್ಥಿತಿ ಕುರಿತು ಹೇಳಲಾಗಿದೆ. ವರದಿಯಲ್ಲಿ ಮುಸ್ಲಿಮರಲ್ಲಿ ಇರುವ ‘ಅರ್ಜಲ್ಸ್’ ಸಮೂಹವು ಕೆಲವು ನೂರು ವರ್ಷಗಳ ಹಿಂದೆ ಹಿಂದೂ ಅಸ್ಪಶ್ಯರಾಗಿದ್ದವರು ಮುಸ್ಲಿಮ್ ಧರ್ಮಕ್ಕೆ ಮತಾಂತರವಾದವರು ಎಂದು ನಂಬಲಾಗಿದೆ. ಇಂದಿಗೂ ಅಸ್ಪಶ್ಯ ಎಂದು ಗುರುತಿಸಲ್ಪಡುತ್ತಲೇ ಇದ್ದಾರೆ ಮತ್ತು ಅವರ ಸಾಂಪ್ರದಾಯಿಕ ವೃತ್ತಿಗಳಿಗೆ ಅಂಟಿಕೊಂಡಿರುವ ಜಾತೀಯ ಕಳಂಕದಿಂದ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಕೃತ್ಯದಿಂದ ಬಳಲುತ್ತಿದ್ದಾರೆ.

ವೃತ್ತಿ ಬದಲಾದರೂ ಜಾತಿ ಬದಲಾಗುವುದಿಲ್ಲ ಎಂಬುದಕ್ಕೆ, ನ್ಯಾಯಮೂರ್ತಿ ವೆಂಕಟರಾಮಯ್ಯ ಅವರು ಉತ್ತರ ಪ್ರದೇಶ v/s ಪ್ರದೀಪ್ ಟಂಡನ್ ಪ್ರಕರಣದಲ್ಲಿ, ‘ವರ್ಗಗಳು’ ಎಂದರೆ ‘ಜಾತಿಗಳು’ ಎಂದು ಪರಿಗಣಿಸಲು ಎರಡು ಸಣ್ಣ ಕಾರಣಗಳನ್ನು ನೀಡಿರುವರು. ಒಂದು ವಿಷಯಕ್ಕಾಗಿ, ಇದು ಭಾರತದಲ್ಲಿ ವ್ಯಾಪಕ ಮತ್ತು ಸ್ಥಿರವಾಗಿರುವಂತಹದು. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಉಲ್ಲೇಖಿಸಿರುವ ಅವರು ‘‘ಟೈಲರಿಂಗ್ ಕೆಲಸ ಮಾಡುವ ಬ್ರಾಹ್ಮಣನು ಜಾತಿಯಿಂದ ಟೈಲರ್ ಆಗುವುದಿಲ್ಲ. ಬ್ರಾಹ್ಮಣ ಬಹುಶಃ ಬೂಟು ಮಾರುವವನಾಗಿರಬಹುದು, ಆದರೂ ಸ್ಥಾನಮಾನದಲ್ಲಿ ಆತ ಕಡಿಮೆಯಾಗುವುದಿಲ್ಲ’’ ಎನ್ನುತ್ತಾರೆ.

ಇದು, ನಮ್ಮ ಹೆಮ್ಮೆಯ ಭಾರತದ ಅನಿಷ್ಟ ಸಾಮಾಜಿಕ ವ್ಯವಸ್ಥೆಯ ಅಂದಿನ ಮತ್ತು ಇಂದಿನ ದುಃಸ್ಥಿತಿ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News