ಏಕಾಗ್ರತೆ

Update: 2016-09-13 10:30 GMT

ಕೆಲವು ತಂತ್ರಗಳನ್ನು ಬಳಸಿಕೊಂಡು ಏಕಾಗ್ರತೆಯನ್ನು ಬಲಪಡಿಸಿಕೊಳ್ಳಲು ಅಥವಾ ವೃದ್ಧಿಸಿಕೊಳ್ಳಲು ಮನಸ್ಸಿಗೆ ನೆರವಾಗಬಹುದು. ಏಕಾಗ್ರತೆಗೆ ಮೊಟ್ಟಮೊದಲಾಗಿ ಮನಸ್ಸು ವಿಶ್ರಾಂತಿಯಲ್ಲಿರಬೇಕು. ಅದರಲ್ಲೂ ಕಲಿಕೆಗೆ ತೊಡಗಿರುವಾಗ ಮನಸ್ಥಿತಿಯು ಆರಾಮವಾಗಿರಲಿ.

ಆಸಕ್ತಿಯಿಂದ ಶಕ್ತಿ

ನಮಗೆ ಯಾವ ವಿಷಯದ ಮೇಲೆ ಆಸಕ್ತಿ ಇದೆಯೋ, ಅದರ ಬಗ್ಗೆ ಕಾತರದಿಂದ ಕಾಯುತ್ತಿರುತ್ತೇಯೋ, ಅದರ ಬಗ್ಗೆ ನಮಗೆ ತಿಳಿಯುವಂತಹ ವಿಷಯಗಳು ದೊರಕುತ್ತವೆ. ಇದು ಹೇಗೆಂದರೆ, ಈಗ ನಾವು ಆಸಕ್ತಿಯಿಂದ ಆ ವಿಷಯದ ಬಗ್ಗೆ ಗಮನ ಹರಿಸಿರುವುದರಿಂದ ಆ ವಿಷಯವಸ್ತುವೂ ಕೂಡ ಗೋಚರವಾಗುತ್ತದೆ. ಅದರ ಬಗ್ಗೆ ಗಮನ ಇಲ್ಲದಿರುವಾಗ ಅದು ನಮ್ಮ ಬಳಿಗೆ ಹಾದರೂ ನಾವು ಗಮನಿಸಿರುವುದಿಲ್ಲ ಅಷ್ಟೇ.

ಮಾಹಿತಿಗಳು ಮತ್ತು ತಿಳುವಳಿಕೆಗಳು ವಾತಾವರಣದಲ್ಲಿ ವಿವಿಧ ರೂಪಗಳಲ್ಲಿ ಸತತವಾಗಿ ಬಿತ್ತರಗೊಳ್ಳುತ್ತಿರುತ್ತವೆ. ನಾವು ಯಾವುದಾದರೂ ವಿಷಯದ ಬಗ್ಗೆ ತಿಳುವಳಿಕೆಯನ್ನು ಹೊಂದಬೇಕೆಂದು ಬಯಸಿದ್ದಲ್ಲಿ, ಆಸಕ್ತಿಯನ್ನು ಹೊಂದಿದ್ದಲ್ಲಿ ಗಮನವು ಅತ್ತ ಹರಿದು ರೇಡಿಯೊ ತರಂಗಗಳ ಜೊತೆಗೆ ಟ್ಯೂನ್ ಮಾಡಿಕೊಂಡಂತೆ ಏಕರಸವಾಗುತ್ತದೆ. ಇದು ಸಾಧ್ಯವಾಗುವುದು ಕಲಿಕೆಯ ಉದ್ದೇಶವನ್ನು ಹೊಂದಿದ್ದರೆ ಮಾತ್ರ. ಆದ್ದರಿಂದ ಮಕ್ಕಳಿಗೆ ಕಲಿಕೆಯ ಉದ್ದೇಶವನ್ನು ಸ್ಪಷ್ಟಗೊಳಿಸಿರಬೇಕು.

ಕಲಿಕೆ, ಅಧ್ಯಯನ, ಅದರಲ್ಲಿ ಮೂಡುವ ಏಕಾಗ್ರತೆ, ಅದು ಮುಂದುವರಿದಂತೆ ಅರಿವು ಉಂಟಾಗುವ ಪ್ರಕ್ರಿಯೆ; ಇವೆಲ್ಲವೂ ಬಹು ಸುಂದರವಾದಂತಹ ಅನುಭವಗಳು. ಕಲಿಕೆಯ ಒಂದೊಂದು ಮಜಲುಗಳನ್ನು ದಾಟುತ್ತಾ ಹೋದಂತೆ ನಮ್ಮಲ್ಲಿ ಆತ್ಮವಿಶ್ವಾಸವೂ ಮತ್ತು ಕಲಿಕೆಯಿಂದ ಉಂಟಾಗಿರುವಂತಹ ಸಕಾರಾತ್ಮಕ ಭಾವಗಳೂ ನಮ್ಮ ಇರುವಿಕೆಯನ್ನು, ಮಾತುಕತೆಗಳನ್ನು, ವಸ್ತು ಮತ್ತು ವಿಷಯಗಳನ್ನು ನೋಡುವ ಬಗೆಯನ್ನು ವಿಶಿಷ್ಟಗೊಳಿಸುತ್ತದೆ ಅಥವಾ ಪಕ್ವಗೊಳಿಸುತ್ತದೆ. ಅದನ್ನು ನಾವು ನಮ್ಮಲ್ಲಿ ಗುರುತಿಸಿಕೊಂಡರೆ ಮಾತ್ರವೇ ಮಕ್ಕಳಲ್ಲಿಯೂ ಗುರುತಿಸಿ ಅದನ್ನು ಆಸ್ವಾದಿಸಲು ಅವರಿಗೆ ಅನುವು ಮಾಡಿಕೊಡಬೇಕು. ಮಕ್ಕಳಿಗೆ ಅದನ್ನು ಗುರುತಿಸುವಂತೆ ಸಹಕಾರಿಯಾಗಿ ನಾವು ವರ್ತಿಸಬೇಕು.

ಪೂರಕ ವಾತಾವರಣ

ಏಕಾಗ್ರತೆಯನ್ನು ವೃದ್ಧಿಪಡಿಸಲು ಅಥವಾ ಬಲಗೊಳಿಸಲು ಮನಸ್ಸಿಗೆ ಅನೇಕಾನೇಕ ತಂತ್ರಗಳ ಪ್ರಯೋಗಗಳನ್ನು ಮಾಡಬಹುದು. ಅದಕ್ಕೆ ಪೂರಕವಾದ ವಾತಾವರಣವನ್ನು, ಪರಿಸರವನ್ನು ಸೃಷ್ಟಿಸಬೇಕಾಗಿರುವುದು ಮೊದಲನೆಯ ಕರ್ತವ್ಯ. ಏಕಾಗ್ರತೆಗೆ ಪೂರಕವಾಗಿರುವ ವಾತಾವರಣವೆಂದರೆ ಯಾವುದು? ಬಹಳ ಸುಲಭವಾದ ಉತ್ತರ. ಏಕಾಗ್ರತೆ ಉಂಟಾದಾಗ ಇರುವಂತಹ ಮನಸ್ಥಿತಿಯ ರೂಪವೇ ಏಕಾಗ್ರತೆಗೆ ಪೂರಕವಾದ ವಾತಾವರಣ. ಅಂದರೆ, ಏಕಾಗ್ರತೆಯಿಂದ ವಸ್ತುವನ್ನು ಅಥವಾ ವಿಷಯವನ್ನು ಗಮನಿಸುವಾಗ ಸುತ್ತಮುತ್ತಲಿನ ಗಲಾಟೆ ಗದ್ದಲಗಳು ನಮ್ಮ ಕಿವಿಗೆ ಬೀಳುವುದಿಲ್ಲ. ಚಲನಶೀಲ ವಸ್ತುಗಳಿದ್ದರೂ ಅವುಗಳ ಕಡೆಗೆ ಗಮನಿಸುವುದಿಲ್ಲ. ಅದನ್ನೇ ಮೊದಲು ಸೃಷ್ಟಿಸಿಕೊಳ್ಳುವುದು. ಹೊರಗಿನಿಂದ ಯಾವುದೇ ಗದ್ದಲ, ಸಂಗೀತ ಕಿವಿಗೆ ಬೀಳದಂತೆ ನೋಡಿಕೊಳ್ಳುವುದು. ಚಲಿಸುವಂತಹ ವಸ್ತುಗಳು ಕಣ್ಣ ಮುಂದೆ ಅಥವಾ ಸುತ್ತಮುತ್ತ ಇರಬಾರದು. ಏಕೆಂದರೆ ಅದರ ಚಲನೆಯಿಂದ ಅಥವಾ ಮಾಡುವ ಸದ್ದಿನಿಂದ ನಮ್ಮ ಗಮನ ಅತ್ತ ಹರಿಯುತ್ತದೆ ಅಷ್ಟೇ. ಶುದ್ಧವಾಗಿರುವ ಪರಿಸರ ಅಥವಾ ಕೊಠಡಿ ಅದಾಗಿರಬೇಕು. ಮನಸ್ಸಿಗೆ ಅಲ್ಲೊಂದು ಅಸಮಾಧಾನ ಅಥವಾ ಅತೃಪ್ತಿ ಇರಬಾರದು. ಉದಾಹರಣೆಗೆ, ಕುಡಿಯುವ ನೀರಿನ ಬಾಟಲ್ ಅಥವಾ ಪಾತ್ರೆ ಅಲ್ಲಿರಬೇಕು.

ಹಾಗೆಯೇ ತಿನ್ನುವ ವಸ್ತುವೂ ಕೂಡ ಇರಬೇಕು. ಏಕೆಂದರೆ, ಬಾಯಾರಿದಾಗ ಅಥವಾ ಹಸಿವಾದಾಗ ಹೊರಗೆ ಹೋಗಬೇಕು ಎಂಬ ಯೋಚನೆ ಮನಸ್ಸಿಗೆ ಇರಬಾರದು. ತಂದಿರಿಸಿರುವ ನೀರನ್ನು ಕುಡಿಯದಿರಬಹುದು, ತಿಂಡಿಯನ್ನು ತಿನ್ನದಿರಬಹುದು. ಆದರೆ, ಅದು ಇಲ್ಲದಿರುವ ಕೊರತೆ ಇರಕೂಡದು. ಅಂತೆಯೇ ಪುಸ್ತಕಗಳೂ ಕೂಡ ಇರಬೇಕು. ತಿಂಡಿ ನೀರಿನಂತೆಯೇ ಅದೂ ಕೂಡ. ಅದನ್ನು ಆ ಹೊತ್ತಿಗೆ ಉಪಯೋಗಿಸದಿದ್ದರೂ ಅವಲ್ಲಿರಬೇಕು.

ಬೆಳಗಿನ ಜಾವ ಮತ್ತು ರಾತ್ರಿಯ ಹೊತ್ತು, ಏಕಾಗ್ರತೆಗೆ ಸಹಕಾರಿ ಎನ್ನುವುದೂ ಕೂಡ ಇದೇ ಕಾರಣಕ್ಕೆ. ಗಮನ ಸೆಳೆಯುವಂತಹ ಸಂಗತಿಗಳು ಮತ್ತು ಅಡಚಣೆಗಳು ನಡೆಯುವುದಿಲ್ಲ. ಹಾಗೂ ನಿಶ್ಶಬ್ದವಾಗಿರುತ್ತದೆ. ಅಲ್ಲದೇ ಸಹವರ್ತಿಗಳು ಅಥವಾ ಜೊತೆಗಾರರು, ಪೋಷಕರು ಶಿಕ್ಷಕರು ಯಾರೇ ಆಗಲಿ ನಗುನಗುತ್ತಿರಬೇಕು ನಿಜ. ಆದರೆ ಹಾಸ್ಯ ಅಥವಾ ಅಪಹಾಸ್ಯ ಮಾಡಿಕೊಂಡು ವಾತಾವರಣವನ್ನು ಹಗುರಗೊಳಿಸುವಂತೆ ಮಾಡಬಾರದು. ನಗುನಗುತ್ತಿರುವುದು ಬೇರೆ. ಹಾಸ್ಯವನ್ನು ಮಾಡುತ್ತಾ ನಗುವನ್ನು ಹುಟ್ಟಿಸುವುದು ಬೇರೆ. ವಾತಾವರಣವನ್ನು ಲಘುಗೊಳಿಸುವುದರಿಂದ, ಹಾಸ್ಯ ಮಾಡುವುದರಿಂದ ಕೂಡ ಏಕಾಗ್ರತೆಗೆ ಭಂಗವುಂಟಾಗುತ್ತದೆ.

ಪೂರಕ ತಂತ್ರಗಳು

ಏಕಾಗ್ರತೆಯು ಏಕತಾನತೆಯನ್ನು ಮುರಿಯುವುದರಿಂದ ಒಮ್ಮಿಂದೊಮ್ಮೆಲೇ ಉಂಟಾಗುತ್ತದೆ. ಇದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಏಕತಾನತೆ ಎಂದರೆ ಬೇಸರ ಎಂದು ತಿಳಿಯುತ್ತಾರೆ. ಏಕತಾನತೆಗೆ ಒತ್ತಡದಿಂದ ಅಲ್ಲದೇ, ಸರಳವಾಗಿ ಮತ್ತು ಉದ್ದೇಶವನ್ನು ಹೊಂದಿರುವಂತಹ ಮನೋಭಾವದೊಡನೆ ಹೊಂದಿಕೊಂಡರೆ, ಮುಂದೆ ಅದೇ ಏಕಾಗ್ರತೆಗೆ ಸಹಕಾರಿಯಾಗುತ್ತದೆ.

ಕೆಲವು ತಂತ್ರಗಳನ್ನು ಬಳಸಿಕೊಂಡು ಏಕಾಗ್ರತೆಯನ್ನು ಬಲಪಡಿಸಿಕೊಳ್ಳಲು ಅಥವಾ ವೃದ್ಧಿಸಿಕೊಳ್ಳಲು ಮನಸ್ಸಿಗೆ ನೆರವಾಗಬಹುದು. ಏಕಾಗ್ರತೆಗೆ ಮೊಟ್ಟಮೊದಲಾಗಿ ಮನಸ್ಸು ವಿಶ್ರಾಂತಿಯಲ್ಲಿರಬೇಕು. ಅದರಲ್ಲೂ ಕಲಿಕೆಗೆ ತೊಡಗಿರುವಾಗ ಮನಸ್ಥಿತಿಯು ಆರಾಮವಾಗಿರಲಿ.

    1.ಕಣ್ಣನ್ನು ಮುಚ್ಚಿಕೊಂಡು, ಬೆನ್ನನ್ನು ನೆಟ್ಟಗಿರಿಸಿಕೊಂಡು ನೀಳವಾಗಿ ಉಸಿರನ್ನು ತೆಗೆದುಕೊಂಡು ಬಿಡಬೇಕು. ಮೆದುಳಿಗೆ ಹೆಚ್ಚು ಹೆಚ್ಚು ಆಕ್ಸಿಜನ್ ಪೂರೈಕೆಯಾದಷ್ಟು ತಾಜಾತನದ ಅನುಭವ ಬರುತ್ತದೆ. ಹೀಗೆ ನಾಲ್ಕೆದು ಬಾರಿ ದೀರ್ಘವಾದ ಉಸಿರಾಟ ನಡೆಯಲಿ.

    2.ಉಸಿರಾಡುವಾಗ ಉಸಿರಾಟದ ಕಡೆ ಗಮನವಿರಲಿ. ಅದು ಯಾವ ಬಗೆಯ ಉಸಿರಾಟವೆಂದು ಕಂಡುಕೊಳ್ಳಲು ಯತ್ನಿಸಿ. ಸಾಧಾರಣ ಉಸಿರಾಟವೋ, ತಡೆತಡೆದು ಉಸಿರನ್ನು ಬಿಡುತ್ತಿದ್ದೇಯೋ, ಆಳವಾಗಿದೆಯೋ, ನೀಳವಾಗಿದೆಯೋ, ಮೇಲ್ಮೇಲೆಯೇ ಮೂಗಿನ ತುದಿಯಲ್ಲಿ ಆಗುತ್ತಿದೆಯೋ? ಈ ರೀತಿ ಗಮನಿಸಿಕೊಂಡು ಆಳವಾಗಿ, ಹೊಕ್ಕಳವರೆಗೂ ಉಸಿರು ಒಳಕ್ಕೆಳೆದುಕೊಳ್ಳುವಂತೆ ಮಾಡಿದಾಗ ಹೊಟ್ಟೆಯು ಉಬ್ಬಬೇಕು. ಹೊರಕ್ಕೆ ಉಸಿರು ಬಿಟ್ಟಾಗ ಹೊಟ್ಟೆ ಸಡಿಲವಾಗಬೇಕು. ಇದು ಉಸಿರಾಟದ ಕ್ರಮ. ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ಹೊಟ್ಟೆಯು ಉಬ್ಬಬೇಕು. ಹೊರಕ್ಕೆ ಬಿಟ್ಟಾಗ ಕುಗ್ಗಬೇಕು. ಆದರೆ ಕೆಲವರ ಉಸಿರಾಟದ ಕ್ರಮದಲ್ಲಿ ಇದು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತದೆ. ಅದು ಕೂಡದು.

    3.ಮಗುವಿನ ನಾಡಿ ಮಿಡಿತವನ್ನು ಗಮನಿಸಿ. ಸ್ವಾಧ್ಯಾಯ ಮಾಡುತ್ತಿರುವವರಾದರೆ ತಮ್ಮ ನಾಡಿ ಮಿಡಿತವನ್ನು ಮುಟ್ಟಿ ಗಮನಿಸಿ. ಬಲಗೈಯ ಹೆಬ್ಬೆರಳನ್ನು ಎಡಗೈಯ ಮಣಿಕಟ್ಟಿನ ಮೇಲೆ ಇರಿಸಿ ಮಿಡಿತವನ್ನು ಗಮನಿಸಿ. ಹಾರಿ ಹಾರಿ ಹೊಡೆದುಕೊಳ್ಳುತ್ತಿಲ್ಲ ಎಂದಾದರೆ, ಮಂದಗತಿಯಲ್ಲಿ ಅಥವಾ ಒಂದು ಕ್ರಮದಲ್ಲಿ ನಿಧಾನಕ್ಕೆ ನಡೆಯುತ್ತಿದೆ ಎಂದರೆ ಒಳಿತು. ಕಪ್ಪೆಯಂತೆ ಹಾರುತ್ತಿದ್ದರೆ ಅದು ನಿಧಾನಕ್ಕೆ ಬರುವವರೆಗೂ ನೀಳ ಮತ್ತು ಆಳವಾದ ಉಸಿರಾಟವನ್ನು ಮುಂದುವರಿಸಬೇಕು. ನಾಡಿ ಮಿಡಿತದಿಂದ ಹೃಯದ ಬಡಿತದ ಸ್ಥಿತಿಯೂ ತಿಳಿಯುತ್ತದೆ.

    4.ಏಕಾಗ್ರತೆಯ ಆಕಾಂಕ್ಷಿಯು ಕಣ್ಣುಗಳನ್ನು ಮುಚ್ಚಿ ಕಿವಿಗಳನ್ನು ತೆರೆದಿರಲಿ. ಎಲ್ಲಾ ಸದ್ದುಗಳನ್ನೂ ಕೇಳುತ್ತಿರಲಿ. ಆದರೆ ಆ ಸದ್ದುಗಳನ್ನು ವಿಭಾಗಿಸುವುದಾಗಲಿ, ಅದು ಚೆನ್ನಾಗಿದೆ, ಅಥವಾ ಚೆನ್ನಾಗಿಲ್ಲ ಎನ್ನುವುದಾಗಲಿ ಮಾಡುವುದು ಬೇಡ. ಕ್ರಿಮಿ ಕೀಟಗಳು ಗುಂಯ್‌ಗುಡುವುದೋ, ದೂರದಲ್ಲೆಲ್ಲೋ ವಾಹನ ಹೋಗುವುದೋ, ಇನ್ನಾರದೋ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವುದೋ; ಯಾವುದೇ ಸದ್ದಾಗಲಿ ಕೇಳಲು ಬಿಡಬೇಕು. ಆದರೆ ಅದನ್ನೇ ಅನುಸರಿಸಲು ಹೋಗಬಾರದು. ಅಂತೆಯೇ ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಿಕೊಂಡು ಇರಬಾರದು.

    5.ಮನೆಯಿಂದ ಹೊರಗೆ ಹೋಗಿ ಒಂದು ನುಣುಪಾದ ಅಥವಾ ಯಾವುದೋ ಕಲ್ಲನ್ನು ಕೈಗೆತ್ತಿಕೊಂಡು, ಅದನ್ನು ಸ್ವಲ್ಪ ಹೊತ್ತು ನೋಡಿ. ಅದರ ಸ್ಪರ್ಶ, ವಿನ್ಯಾಸ, ರಚನೆ, ವಾಸನೆ, ಅದು ಶುದ್ಧವಾಗಿರುವುದಾದರೆ ನಾಲಿಗೆಯಿಂದ ಮುಟ್ಟಿಸಿ ರುಚಿ; ಹೀಗೆ ಎಲ್ಲವನ್ನೂ ಗ್ರಹಿಸಲು ಯತ್ನಿಸಬೇಕು. ಎಷ್ಟರಮಟ್ಟಿಗೆ ಅಂದರೆ, ನಂತರ ಅದನ್ನು ಬೇರೆ ಕಲ್ಲುಗಳ ರಾಶಿಯಲ್ಲಿ, ಒಂದೇ ಬಗೆಯ ಕಲ್ಲುಗಳ ನಡುವೆ ಇರಿಸಿದರೂ ಈಗ ಮುಟ್ಟಿದ ಕಲ್ಲನ್ನು ಗುರುತಿಸುವಷ್ಟು ಅದನ್ನು ಪರಿಚಯಿಸಿಕೊಳ್ಳಬೇಕು. ಇದು ಬಹಳ ಒಳ್ಳೆಯ ಪ್ರಯೋಗ.

    6.ಮಗುವಾಗಲಿ, ನೀವಾಗಲಿ, ಕಲಿಯುವ ಕೋಣೆಯನ್ನು ಗಮನವಿಟ್ಟು ಪ್ರೀತಿಯಿಂದ ನೋಡಿ. ಗೋಡೆಗಳು, ನೆಲ, ಟೇಬಲ್ ಹೀಗೆ ಎಲ್ಲವನ್ನೂ ನೋಡಿ. ನಂತರ ಕಣ್ಣುಗಳನ್ನು ಮುಚ್ಚಿ ಅವನ್ನು ಸ್ಮರಣೆಗೆ ತಂದುಕೊಳ್ಳಿ. ಅದೇ ಗೋಡೆಗಳು, ನೆಲ, ಟೇಬಲ್ ಇತ್ಯಾದಿ.

    7.ಏನೂ ನೇತು ಹಾಕಿರದ ಬರಿಯ ಗೋಡೆಯ ಮುಂದೆ ಕುಳಿತುಕೊಂಡು ಗೋಡೆಯ ಕಡೆ ನೋಡಬೇಕು. ಇಡೀ ಗೋಡೆಯಲ್ಲಿ ಏನೂ ಇರದಿದ್ದರೂ ಯಾವುದೋ ಒಂದು ಬಿಂದು ನಿಮಗೆ ಅಥವಾ ಚುಕ್ಕೆಯಂತೆ ಅಥವಾ ಇನ್ನೇನೋ ಗಮನಕ್ಕೆ ಬರುತ್ತದೆ. ಅದನ್ನು ನೋಡಿ. ಚೆನ್ನಾಗಿ ನೋಡಬೇಕು. ನಂತರ ಮೇಲೆದ್ದು ಗೋಡೆಯ ವಿವಿಧ ದಿಕ್ಕುಗಳಿಗೆ ಹೋಗಿ ಅದೇ ಕೇಂದ್ರವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಬೇಕು. ಇದನ್ನೆಲ್ಲಾ ಆತುರಾತುರವಾಗಿ ದೈಹಿಕ ವ್ಯಾಯಾಮದಂತೆ ಮಾಡುವುದು ಬೇಡ. ಆರಾಮವಾಗಿ ಮಾಡಿ. ದೇಹಕ್ಕೆ, ಮನಸ್ಸಿಗೆ, ಬುದ್ಧಿಗೆ ವ್ಯಾಯಾಮವಿದ್ದಂತೆ ಏಕಾಗ್ರತೆಗೂ ವ್ಯಾಯಾಮಗಳಿವೆ. ಯಾವುದೇ ವ್ಯಾಯಾಮವನ್ನು ಆತುರಾತುರವಾಗಿ ಮಾಡಬಾರದು. ಒಂದೊಂದು ವ್ಯಾಯಾಮದ ಎಳೆಯನ್ನೂ ಪೂರ್ಣವಾಗಿ ಗ್ರಹಿಸುತ್ತಾ ತಮ್ಮಲ್ಲಿ ಅನುಭವಕ್ಕೆ ಬರುವಂತೆ ನೋಡಬೇಕು.

    8.ಈಗ ತಮ್ಮ ಏಕಾಗ್ರತೆಯನ್ನು ತಾವು ಪರೀಕ್ಷಿಸಿಕೊಳ್ಳುವುದು. ಸಂಗೀತವನ್ನೋ, ರೇಡಿಯೊವನ್ನೋ, ಟಿವಿಯನ್ನೋ ಹಾಕಿರಬೇಕು. ನಂತರ ಈ ಕೆಳಗಿನ ಅಂಕಿಗಳ ಗುಂಪನ್ನು ನೋಡಿ. ಅದರಲ್ಲಿ ಯಾವುದೇ ಒಂದು ಸಂಖ್ಯೆಯನ್ನು ಗುರುತಿಸಿದರೂ ಅದರ ಸಮೀಪಕ್ಕೆ ಇರುವ ಮತ್ತೊಂದು ಸಂಖ್ಯೆಯನ್ನು ಸೇರಿಸಿದರೆ ಹತ್ತು ಆಗುತ್ತದೆ. ಈ ಬಗೆಯಲ್ಲಿ ಹತ್ತು ಉಂಟಾಗುವ ಹಲವು ಸಂಖ್ಯೆಗಳ ಜೋಡಿಗಳನ್ನು ಗುರುತಿಸಿಕೊಳ್ಳಿ.

    a. 418491304859684769101328375448

    b. 986438581385670748231587409861

    c. 318603941237048690428509948671

    d. 755012848981584837915847694132

    e. 624834092843851384867418378904

    f. 693813567834578335772943129438

    g. 859483749813874183074651475563

    h. 534763598237662014622579342385

    i. 493963036855891408676347295835

    j. 119275168745613924367484395699

ಹಿನ್ನೆಲೆಯಲ್ಲಿ ಸಂಗೀತವೋ, ಗಲಾಟೆಯೋ ಇರಲಿ. ಸ್ವಲ್ಪ ಕಾಲದ ನಂತರ, ರೇಡಿಯೊ ಅಥವಾ ಟಿವಿಯನ್ನು ಆ್ ಮಾಡಿ, ಹತ್ತರ ಮೊತ್ತವನ್ನು ನೀಡಿದ ಅದೇ ಜೋಡಿ ಸಂಖ್ಯೆಗಳನ್ನು ಗುರುತಿಸುತ್ತಾ ಹೋಗಿ. ಏಕಾಗ್ರತೆಯನ್ನು ವೃದ್ಧಿಲು ಇದು ಬಹಳ ಒಳ್ಳೆಯ ವ್ಯಾಯಾಮ.

    9.ಈಗ ಯಾವುದೋ ಪುಸ್ತಕವನ್ನು ತೆಗೆದುಕೊಳ್ಳಿ. ಅದನ್ನು ಬಿಡಿಸಿ ಓದಲು ಪ್ರಾರಂಭಿಸಿ. ಒಮ್ಮೆ ಓದಲು ಶುರು ಮಾಡಿದ ಮೇಲೆ, ಮತ್ತೆ ಹಿಂದಿನ ಸಾಲುಗಳಿಗೆ ಹೋಗಿ ಓದುವುದು ಬೇಡ. ನಿಧಾನವಾಗಿ ಒಮ್ಮೆ ಮಾತ್ರವೇ ಓದುವಂತೆ ನೋಡಿಕೊಳ್ಳಿ. ಹಿಂದಿನ ಸಾಲುಗಳಿಗೆ ಹೋಗಿ ಓದಿದ್ದು ಅದೇನೆಂದು ತಿಳಿಯುವ ಎಂದು ಅನ್ನಿಸಿದರೂ ಹಾಗೆ ಮಾಡಬೇಡಿ. ಸಾಧ್ಯವಾದಷ್ಟು ಚಿಕ್ಕ ಚಿಕ್ಕ ಪ್ಯಾರಗಳನ್ನು ಹಿಂದಕ್ಕೆ ಹೋಗದೇ ಓದಿ ಪುಸ್ತಕವನ್ನು ಮುಚ್ಚಿಟ್ಟು ನಂತರ ಕಣ್ಣುಗಳನ್ನು ಮುಚ್ಚಿಕೊಂಡು ಅಥವಾ ಲಘುವಾಗಿ ಓಡಾಡಿಕೊಂಡು ಓದಿರುವುದನ್ನು ಸ್ಮರಣೆಗೆ ತಂದುಕೊಳ್ಳುವುದು ಒಂದು ಏಕಾಗ್ರತೆಯ ವ್ಯಾಯಾಮ. ಓದಿರುವುದನ್ನು ಮತ್ತೆ ಹಿಂದಕ್ಕೆ ಹೋಗಿ ಓದುವ ಅಭ್ಯಾಸವನ್ನು ಖಂಡಿತ ಬಿಡಬೇಕು. ಅನಿವಾರ್ಯವಾಗಿ ಸಂಕೀರ್ಣ ಶಬ್ದಗಳ ಸಂಯೋಜನೆ ಇದ್ದಲ್ಲಿ ಹಾಗೆ ಮಾಡುವುದು ತಪ್ಪಲ್ಲ. ಆದರೆ, ಕೆಲವರಿಗೆ ಪ್ರತಿಯೊಂದನ್ನೂ ಹಿಂದಕ್ಕೆ ಮರಳಿ ಓದುವ ಅಭ್ಯಾಸವಿರುತ್ತದೆ. ಇದು ಏಕಾಗ್ರತೆಗೆ ಒಳಿತಲ್ಲ.

   10.ಪುನರಾವರ್ತನೆಯು ಒಳ್ಳೆಯ ಅಭ್ಯಾಸ ಮತ್ತು ವ್ಯಾಯಾಮ. ಈ ಮೇಲಿನ ಎಲ್ಲಾ ವ್ಯಾಯಾಮಗಳನ್ನು ಪುನರಾವರ್ತನೆ ಮಾಡಿದರೆ ಏಕಾಗ್ರತೆಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಮಾಡಿ ನೋಡಿ.

ಮಕ್ಕಳ ಏಕಾಗ್ರತೆಗೆ ಸಹಕಾರಿಯಾಗಿರುವಂತಹ ಮನೋಭಾವಗಳು:

     1.ಯಾವುದೇ ಕಾರಣಕ್ಕೂ ಅವರು ಏಕಾಗ್ರತೆಯನ್ನು ಹೊಂದಿಲ್ಲವೆಂದರೆ ಕಡೆಗಣಿಸಿ ಮಾತಾಡಬಾರದು ಅಥವಾ ನಕಾರಾತ್ಮಕವಾಗಿ ಟೀಕೆಗಳನ್ನು ಮಾಡಬಾರದು. ಏಕಾಗ್ರತೆಗೆ ಭಂಗತರುವಂತಹ ಅನೇಕ ವಿಷಯಗಳು ಮತ್ತು ಸಂಗತಿಗಳು ಮಕ್ಕಳ ಸುತ್ತಮುತ್ತಲೂ ಇರುತ್ತವೆ. ಆದ್ದರಿಂದ ಅವುಗಳನ್ನು ನಿವಾರಿಸುವಂತಹ ಕೆಲಸವನ್ನು ನಾವು ಮೊದಲು ಮಾಡಬೇಕು. ಸತತವಾಗಿ ಹಾಡುತ್ತಲೇ ಇರುವ ರೇಡಿಯೊ ಅಥವಾ ಓಡುತ್ತಲೇ ಇರುವ ಟಿವಿ; ಇವುಗಳು ಏಕಾಗ್ರತೆಗೆ ಭಂಗತರುವಂತಹ ವಸ್ತುಗಳು.

    2.ಮಕ್ಕಳಿಗೆ ಒಮ್ಮೆ ಆಸಕ್ತಿ ಹುಟ್ಟಿತೆಂದರೆ ಮುಂದಿನ ದಾರಿ ಸುಲಭ. ಗಮನಿಸಿ ನೋಡಿ. ಅವರು ಆಟ ಆಡಿಕೊಳ್ಳುವಾಗ, ಸುತ್ತಮುತ್ತಲಿನ ಜನ ಏನೇ ಮಾಡುತ್ತಿದ್ದರೂ, ಮಾತಾಡಿಕೊಳ್ಳುತ್ತಿದ್ದರೂ ತಮ್ಮ ಪಾಡಿಗೆ ತಾವು ಆಡಿಕೊಂಡು ಮೈ ಮರೆತಿರುತ್ತಾರೆ. ಆದರೆ ಓದಿನ ವಿಷಯದಲ್ಲಿ ಹೀಗಾಗದಿರಲು ಕಾರಣವೆಂದರೆ, ಅವರಿಗೆ ಆಟಕ್ಕೂ ಪಾಠಕ್ಕೂ ಬಹಳಷ್ಟು ವ್ಯತ್ಯಾಸ ಉಂಟಾಗುವಂತೆ ಮಾಡಿರುವ ಶಿಕ್ಷಕರು ಮತ್ತು ಪೋಷಕರು ಕಲಿ-ನಲಿ ಯೋಜನೆಯಿಂದ ಬಹು ದೂರ. ನಲಿಯುತ್ತಾ ಕಲಿಯಬೇಕೆಂದರೆ, ಪಾಠವು ಆಟದಂತೆ ಆಕರ್ಷಕವಾಗಿರಬೇಕೇ ಹೊರತು ತೀರಾ ಗಂಭೀರದ, ಬಹು ದೊಡ್ಡ ಯೋಜನೆಯ ಭಾಗದಂತಿರಬಾರದು.

    3.ಪ್ರಶಾಂತವಾದ ಮನಸ್ಸಿಗೆ ಏಕಾಗ್ರತೆ ಬಹಳ ಸುಲಭವಾಗಿ ದಕ್ಕುತ್ತದೆ. ಮನಸ್ಸು ಪ್ರಶಾಂತವಾಗಿರಬೇಕಾದರೆ, ಭೂತ ಕಾಲದ ಮತ್ತು ಭವಿಷತ್ ಕಾಲದ ವಿಷಯಗಳನ್ನು ಹೇರಿರಬಾರದು. ಮಕ್ಕಳು ಹಿಂದೆ ಮಾಡಿರುವ ತಪ್ಪುಗಳನ್ನು ಬೈದಿರುವುದೋ, ಅಥವಾ ಆವತ್ತು ಹೀಗೆ ಮಾಡಿದ್ದೆ. ಇವತ್ತೂ ಹೀಗೆ ಮಾಡಬೇಡ ಎಂದು ಎಚ್ಚರಿಸುವ ಮಾತುಗಳನ್ನು ಆಡಿದಾಗ ಹಿಂದಿನದು ನೆನೆದು ಮನಸ್ಸು ಕುಗ್ಗುತ್ತದೆ. ಹಾಗೆಯೇ ಈ ವಿಷಯವನ್ನು ಓದಿಯೇ ತೀರಬೇಕು, ಓದಿಲ್ಲವೆಂದರೆ, ಶಿಕ್ಷಕರು ಶಿಕ್ಷಿಸುತ್ತಾರೆ ಎಂದೋ, ಅಥವಾ ಇನ್ನಾವುದೋ ರೀತಿಯ ತೊಂದರೆ ಉಂಟಾಗುವುದೆಂದೋ ಹೆದರಿಸಿಡುವುದಲ್ಲ. ಈ ರೀತಿಯಲ್ಲಿ ಭೂತ ಮತ್ತು ಭವಿಷ್ಯದ ವಿಷಯಗಳ ಹೇರಿಕೆಯಾದಲ್ಲಿ ಮನಸ್ಸು ಸಮಾಧಾನವಾಗಿರುವುದಿಲ್ಲ. ಏಕಾಗ್ರತೆಗೆ ಅಗತ್ಯವಿರುವ ಪ್ರಶಾಂತ ಮನಸ್ಸು ಅಲ್ಲಿರುವುದಿಲ್ಲ.

    4.ಧ್ಯಾನಸ್ಥ ಮನಸ್ಥಿತಿ ಮಕ್ಕಳಿಗೆ ಏಕಾಗ್ರತೆಯನ್ನು ಸಾಸಲು ನೆರವಿಗೆ ಬರುತ್ತದೆ. ಧ್ಯಾನ ಎಂದರೆ ಮಕ್ಕಳನ್ನು ಬಲವಂತವಾಗಿ ಕೂರಿಸಿ ಅದೇನನ್ನೋ ಕಲ್ಪಿಸಿಕೊಂಡು ಅಥವಾ ಮೂಗಿನ ತುದಿಯಲ್ಲಿ ಗಮನವನ್ನು ಕೇಂದ್ರೀಕರಿಸಿಕೊಂಡಿರುವುದಲ್ಲ. ಬದಲಿಗೆ ಆಲೋಚನಾರಹಿತವಾಗಿರುವ ಮನಸ್ಸನ್ನು ಹೊಂದಿರುವುದಷ್ಟೇ. ಮಕ್ಕಳು ಆಡುವಾಗಲೆಲ್ಲಾ ಧ್ಯಾನಸ್ಥ ಸ್ಥಿತಿಯಲ್ಲೇ ಇರುತ್ತಾರೆ. ಊಟ, ನಿದ್ದೆ, ಹೋಂವರ್ಕ್, ಮತ್ತೊಂದು ಮಗದೊಂದು ಯಾವುದೇ ಆಲೋಚನೆಗಳಿಲ್ಲದೇ ಆಡುತ್ತಿರುತ್ತಾರೆ. ನಿಶ್ಚಿಂತವಾಗಿರುವ, ಆಲೋಚನಾರಹಿತವಾಗಿರುವ ಮನಸ್ಥಿತಿಯೇ ಧ್ಯಾನದ ಮನಸ್ಥಿತಿ. ಇದೂ ಕೂಡ ಮಕ್ಕಳ ಏಕಾಗ್ರತೆಗೆ ಸಹಕಾರಿಯಾಗುವುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News