ನಿಮ್ಮ ಬೋರ್ಡಿಂಗ್ ಪಾಸ್ ನ ಫೋಟೊವನ್ನು ಅಪ್ಪಿತಪ್ಪಿಯೂ ಫೇಸ್ ಬುಕ್ ಗೆ ಹಾಕಲೇಬೇಡಿ! ಏಕೆಂದರೆ ?
ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಪ್ರಯಾಣದ ವಿವರ ಹಾಕಿ ಜನಪ್ರಿಯತೆ ಗಳಿಸಲು ನೀವು ಪ್ರಯತ್ನಿಸುತ್ತಿದ್ದರೆ ಒಂದು ನಿಯಮ ನೆನಪಿಡಿ: ನಿಮ್ಮ ವಿಳಾಸ, ಪಾಸ್ ಪೋರ್ಟ್, ಬೋರ್ಡಿಂಗ್ ಪಾಸ್ ನಂತಹ ದಾಖಲೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಬೇಡಿ.
ಏಕೆಂದರೆ ನಿಮ್ಮ ಪಾಸ್ ಪೋರ್ಟ್ ನ ಮೇಲಿರುವ ಎರಡು ಆಯಾಮದ ಬಾರ್ಕೋಡ್ ಗಳು ಹಾಗೂ ಕ್ಯೂಆರ್ ಕೋಡ್ ಗಳನ್ನು ದುಷ್ಟವ್ಯಕ್ತಿಗಳು ವಿವಿಧ ಕಾರಣಗಳಿಗೆ ದುರುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಒಬ್ಬ ವ್ಯಕ್ತಿಯ ಬೋರ್ಡಿಂಗ್ ಪಾಸ್ ನ ದಾಖಲೆಗಳಿಂದ ಆತನ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ ಎಂದು iflyflat.com.au ನ ಸ್ಟೀವ್ ಹ್ಯೂ ಎಂಬವರು ಸಾಬೀತುಪಡಿಸಿದ್ದಾರೆ.
ಅತ್ಯಂತ ಅಪಾಯಕಾರಿ !
ಒಂದು ಬೋರ್ಡಿಂಗ್ ಪಾಸ್ ನ ಮಾಹಿತಿಯನ್ನು ಬಳಸಿಕೊಂಡು ಡೆಲ್ಟಾ ಏರ್ ಲೈನ್ಸ್ ಮೂಲಕ ಲಾಗಿನ್ ಆದ ಬಳಿಕ ಸ್ಟೀವ್ ಸುಲಭವಾಗಿ ಆ ವ್ಯಕ್ತಿಯ ಖಾತೆಯ ಸಂಪರ್ಕ ಪಡೆದಿದ್ದಾರೆ.
ಆ ಖಾತೆಯಿಂದ ಅವರು ಈ ಕೆಳಗಿನ ವಿವರಗಳನ್ನು ಸುಲಭವಾಗಿ ಪಡೆದಿದ್ದಾರೆ:
♦ ಪ್ರಯಾಣಿಕನ ಹೆಸರನ್ನೊಳಗೊಂಡ ವೈಯಕ್ತಿಕ ಮಾಹಿತಿ
♦ ಪ್ರಯಾಣಿಕನು ಎಲ್ಲಿಗೆ ಮತ್ತು ಯಾವಾಗ ತೆರಳುತ್ತಾನೆ ಎಂಬ ವಿವರ
♦ ಸೀಟ್ ನಂಬರ್
♦ ಆತನ ಫ್ರಿಕ್ವೆಂಟ್ ಫ್ಲಯರ್( ಆಗಾಗ ಪ್ರಯಾಣಿಸುವ) ಮಾಹಿತಿ
♦ ಟಿಕೇಟಿನ ದರದ ವಿವರ
♦ ಟಿಕೇಟನ್ನು ಖರೀದಿಸಿದ ದಿನಾಂಕ
♦ ಖರೀದಿಗೆ ಬಳಸಿದ ಬ್ಯಾಂಕ್ ಕಾರ್ಡ್ ನ ಕೊನೆಯ ನಾಲ್ಕು ಅಂಕಿಗಳು
ನೀವು ನಿಜವಾಗಿಯೂ ನಿಮ್ಮ ಪ್ರಯಾಣದ ಬಗ್ಗೆ ಕೊಚ್ಚಿಕೊಳ್ಳಲು ಬಯಸಿ ನಿಮ್ಮ ಬೋರ್ಡಿಂಗ್ ಪಾಸ್ ನ ಭಾಗಶಃ ಫೋಟೊವನ್ನು ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಬಹುದೇ?
ಬಿಲ್ ಕುಲ್ ಇಲ್ಲ !
ಹೀಗೆ ಹಾಕಿದ ಭಾಗಶಃ ಫೋಟೊಗಳಲ್ಲಿ ಸಿಗುವ ಅಲ್ಪ ಸ್ವಲ್ಪ ಮಾಹಿತಿಗಳು ಹಾಗೂ ಬಾರ್ ಕೋಡ್ ಗಳನ್ನು ಬಳಸಿ ಮೇಲೆ ಹೇಳಿದ ಎಲ್ಲ ವಿವರಗಳನ್ನು ಪಡೆಯುವ ತಂತ್ರಜ್ಞಾನ ಈಗ ಲಭ್ಯವಿದೆ.
ಹಾಗಾಗಿ ನಿಮ್ಮ ಮೋಜಿನ ಪ್ರಯಾಣದ ಸಂದರ್ಭದಲ್ಲಿ ಹೆಚ್ಚೆಂದರೆ ಊಟ ಮಾಡುವ, ಪ್ರೇಕ್ಷಣೀಯ ಸ್ಥಳಗಳಲ್ಲಿ ನಿಂತ ಚಿತ್ರಗಳನ್ನು ಹಾಕಬಹುದೇ ವಿನಃ ಬೋರ್ಡಿಂಗ್ ಪಾಸ್ ನ ಚಿತ್ರ ಅಲ್ಲ. ನೆನಪಿಡಿ.