ಕಾವೇರಿಯ ಈ ಕ್ಷಣದ ಕಾವಿನಿಂದಾಚೆ

Update: 2016-09-22 18:51 GMT

ಈಗಾಗಲೇ ಮಂಡ್ಯಕ್ಕೆ ಹರಿಸುತ್ತಿದ್ದ ನೀರು ನಿಲ್ಲಿಸಿಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಾಗ, ಮಂಡ್ಯದ ರೈತರನ್ನು ಶಾಂತವಾಗಿಸಲು ನೀರು ಬಿಡಲಾಗಿತ್ತು. ಅತ್ತ ಹಾಸನದ ರೈತರ ಪಾಲಿನ ದೆಂದು ನಂಬಿದ್ದ ಹೇಮಾವತಿ ನೀರು ತಮಿಳುನಾಡಿಗೆ ಹರಿದಿದೆ.
ಕಟ್ಟು ನೀರು ಎಂಬ ಪದ್ಧತಿಗೂ ತಿಲಾಂಜಲಿ ನೀಡಬೇಕಾದ ದುಸ್ಥಿತಿ ಇದೆ. ಎಂಥಾ ವಿಪರ್ಯಾಸವೆಂದರೆ ಉತ್ತರದ ತುಂಗೆ ಕೃಷ್ಣೆ ತುಂಬಿದೆ. ಕೃಷ್ಣೆಯಂತೂ ಅಬ್ಬರಿಸಿದ್ದಾಳೆ.
ಇದರರ್ಥವೇನು? ಅತ್ಯಂತ ಸರಳ. ನೀರೆಂಬುದು ಇನ್ನೂ ಮನುಷ್ಯನ ಅರಿವಿಗೆ ಮೀರಿದ್ದು. ಭೂಮಿಗೆ ಸುರಿವ ನೀರು ಇನ್ನೂ ಪ್ರಕೃತಿಯ ವಿವೇಚನೆ. ಬಳಸುವ ವಿವೇಕದ ಅಳತೆ ತಪ್ಪಿದರೆ ತಾಪತ್ರಯ ತಪ್ಪಿದ್ದಲ್ಲ. ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಪ್ರಮಾಣದಲ್ಲಿ ಏರುಪೇರಾಗುತ್ತಿದೆ ಎಂಬ ಎಚ್ಚರಿಕೆಯ ಗಂಟೆ ಪರಿಸರವಾದಿಗಳ ಸೆಮಿನಾರು ಮಾತು ಎಂಬ ತಾತ್ಸಾರದಲ್ಲೇ ನಮ್ಮ ರಾಜಕಾರಣಿಗಳು, ಆಡಳಿತಗಾರರು ದಿನಗಳೆದಿದ್ದಾರೆ. ಈ ಅಜ್ಞಾನದಿಂದಲೇ ಅಂತರ್ಜಲವನ್ನೂ ಬರಿದು ಮಾಡಲು ಅನುಮತಿ ನೀಡಿ ವರ್ಷಗಳೇ ಕಳೆದವು. ಇತ್ತೀಚೆಗಿನ ವರದಿ ಪ್ರಕಾರ ರಾಜ್ಯದ ಅರ್ಧಕ್ಕರ್ಧ ತಾಲೂಕುಗಳ ಅಂತರ್ಜಲವನ್ನು ಕುಡಿಯಲು ಬಳಸಲು ಸಾಧ್ಯವೇ ಇಲ್ಲ. ಅಷ್ಟು ಪ್ರಮಾಣದ ಲವಣ, ಖನಿಜಗಳು ಈ ನೀರಿನ ಮೂಲದಲ್ಲಿ ಸಂಗ್ರಹವಾಗಿದೆ. ಕಾವೇರಿಯ ವಿಚಾರದಲ್ಲಿ ನೀರು ಕಳೆದುಕೊಂಡಿದ್ದೇವೆ ಎಂಬುದು ಅರ್ಥವಾಗಿ ಪ್ರತಿಭಟಿಸುವಾಗ, ಉಳಿದ ಮೂಲಗಳನ್ನು ಕೈಯ್ಯಾರೆ ನಾಶಮಾಡಿಕೊಂಡದ್ದರ ಬಗ್ಗೆ ಯಾರನ್ನು ದೂರೋಣ.
ಈಗ ನಮ್ಮ ಸಂಪೂರ್ಣ ಆವಶ್ಯಕತೆಗಳಿಗೆ ಸರಕಾರದ ಮೇಲೇ ಅವಲಂಬಿತರಾಗಿದ್ದೇವೆ. ಸರಕಾರವೂ ಈ ಅವಲಂಬನೆಯನ್ನು ಪ್ರೋತ್ಸಾ ಹಿಸುತ್ತಾ ಬಂದು ಇನ್ನೀಗ ಕಡ್ಡಾಯಗೊಳಿಸುವ ಮಟ್ಟಿಗೆ ಬರುತ್ತೆ. ಬೀಜ, ಗೊಬ್ಬರ, ಮಾರುಕಟ್ಟೆ, ರೇಶನ್, ನೀರು, ವಿದ್ಯುತ್ ಏನು ಉಳಿದಿದೆ? ಸರಕಾರ ಇದನ್ನೆಲ್ಲಾ ನಿರ್ವಹಿಸಿ ನಮ್ಮ ಬಾಳು ಹಸನು ಮಾಡುವ ಸಾಧ್ಯತೆ ಇದೆಯಾ ಎಂದು ಯಾರೂ ಯೋಚಿಸಿಲ್ಲ.. ಜಾಗತೀಕರಣದಲ್ಲಿ ಸರಕಾರದ ಈ ಅದಕ್ಷ ಹೊಣೆ, ಮತ್ತು ಸಮುದಾಯಗಳ ಅವಲಂಬಿತನಕ್ಕೆ ಪರಿಹಾರ ಸುಲಭ.! ಇದನ್ನೆಲ್ಲಾ ಖಾಸಗಿಯವರಿಗೆ ನೀಡುವುದು.
ಶಾಲೆಗಳು ಆಹುತಿಯಾದವು. ಇದೀಗ ಆಸ್ಪತ್ರೆಗಳ ಸರದಿ. ಬೀಜ, ಗೊಬ್ಬರ ಹೇಗಿದ್ದರೂ ಖಾಸಗಿ ಕೈನಲ್ಲೇ ಇದೆ. ನಮ್ಮ ಬಿಎಸ್ಸೆನ್ನೆಲ್ ಕುಂಟುತ್ತಿದ್ದರೆ, ನಮ್ಮ ಪ್ರಧಾನಿಗಳೇ ಜಿಯೋ ಜಾಹೀರಾತಲ್ಲಿ ಕಾಣಿಸಿಕೊಂಡಿಲ್ಲವೇ.
ನೀರೊಂದು ಸರಕಾರದ ಕೈಲಿ ಉಳಿದಿತ್ತು. ಅದೊಂದು ಅಕ್ಷಯ ಜಲನಿಧಿ ಎಂಬಂತೆ ಸರಕಾರ ನಡೆದುಕೊಂಡು ಬಂದಿದೆ. ನೀರಾವರಿ ಇರಲಿ ಅಂತರ್ಜಲ ಇರಲಿ ಧೋರಣೆ ಒಂದೇ. ನೀರು ಸೀಮಿತ ಸಂಪನ್ಮೂಲ ಅದರ ಬಳಕೆಯ ಬಗೆಯನ್ನು ಕಾಲಕಾಲಕ್ಕೆ ವಿಮರ್ಶಿಸಬೇಕು ಎಂಬ ಸತ್ಯ ಅರಿವಾಗವುದಕ್ಕೆ ಜಯಲಲಿತಾನೇ ಪ್ರತ್ಯಕ್ಷವಾಗಬೇಕು!
ಇರಲಿ. ಸದ್ಯಕ್ಕೆ, ಮಂಡ್ಯ-ಕಾವೇರಿಯನ್ನು ಮನಸ್ಸಲ್ಲಿಟ್ಟುಕೊಂಡು ಒಂದು ಪುಟ್ಟ ಅನುಷ್ಠಾನ ಯೋಗ್ಯ ಸಲಹೆ ಮುಂದಿಡಬಯಸುವೆ.
 ಈಗಾಗಲೇ ಎಲ್ಲಾ ರಾಜಕಾರಣಿಗಳು, ರೈತಮುಖಂಡರು ನೀರು ಕೊಡಲಾಗದಿದ್ದರೆ ಪರಿಹಾರ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸರಕಾರವೂ ಒತ್ತಡ ತಡೆಯಲಾಗದಿದ್ದರೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳಲೂ ಬಹುದು. ನೀರಾವರಿ ರೈತರಿಗೆ ಪರಿಹಾರ ನೀಡಿದರೆ, ಮಳೆ ನಂಬಿ ಕೃಷಿ ಮಾಡುವ ನತದೃಷ್ಟ ರೈತರಿಗೆ ಎಷ್ಟು ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇವೆಲ್ಲಾ ಅಪಶಕುನದ ಮಾತಾಗಿ ಕಂಡೀತು,.ಇರಲಿ. ಕನಿಷ್ಠ ಈ ವರ್ಷದ ಬಿಕ್ಕಟ್ಟು ಶಾಶ್ವತವಾದ ಸುಸ್ಥಿರ ನೀತಿಯೊಂದಕ್ಕೆ ನಾಂದಿ ಹಾಡಬಹುದೇ ಎಂಬ ಆಸೆ ಎಲ್ಲರಿಗಿದೆ.
ಮಂಡ್ಯವನ್ನೇ ತೆಗೆದುಕೊಳ್ಳಿ, ಸುಮಾರು ಒಂದೂವರೆ ಲಕ್ಷ ಪ್ರದೇಶ ನೀರಾವರಿಯಲ್ಲಿದೆ (ಇಷ್ಟೇ ಪ್ರಮಾಣ ಮಳೆ ಆಶ್ರಿತ ಕೃಷಿ ಇದೆ; ಬಹಳಷ್ಟು ಮಂದಿಗೆ ಮಂಡ್ಯದ ಈ ಸ್ಥಿತಿ ಗೊತ್ತಿಲ್ಲ) ಈ ಒಂದೂವರೆ ಲಕ್ಷ ಎಕರೆಗೂ ತಲಾ ಎಕರೆಗೆ ರೂ. 10 ಸಾವಿರದಷ್ಟು ಪರಿಹಾರ ಕೊಟ್ಟರೂ ಸುಮಾರು 150 ಕೋಟಿ ರೂಪಾಯಿ ಬೇಕು..!! ಸರಕಾರ ಇಷ್ಟೆಲ್ಲಾ ಪರಿಹಾರಕೊಡುವಷ್ಟು ಶ್ರೀಮಂತವೇ? ಗೊತ್ತಿಲ್ಲ!. ಕನಿಷ್ಠ ಮುಂದಿನ ಸಾಲಿಗಾದರೂ ಒಂದು ಖಚಿತ ಆವರ್ತ ಯೋಜನೆ ಹಾಕಿಕೊಳ್ಳಬಹುದು. ಮಳೆ ಬರಲಿ ಬಿಡಲಿ, ಮಂಡ್ಯದ ಶೇ.20ರಷ್ಟು ಪ್ರದೇಶವನ್ನು ಒಂದು ಬ್ಲಾಕ್ ಎಂದು ಗುರುತಿಸಿ; ಅಂದರೆ ಸುಮಾರು 25 ಸಾವಿರ ಎಕರೆ ಪ್ರದೇಶದಲ್ಲಿ ಕಡ್ಡಾಯವಾಗಿ ಭತ್ತ/ಕಬ್ಬಿನ ಬದಲು ಬೇರೆ ಬೆಳೆಗಳನ್ನು ಬೆಳೆಯುವಂತೆ ಮಾಡಬೇಕು. ನೇರವಾಗಿ ರೈತರಿಗೆ ಎಕರೆಗೆ 10ಸಾವಿರ ರೂ.ಗಳಷ್ಟು ಪರಿಹಾರ ನೀಡಿ, ಅವರು ಬೆಳೆದ ರಾಗಿ/ ಬೇಳೆಕಾಳು ಏನೇ ಇರಲಿ ಅದನ್ನು ಬೆಂಬಲ ಬೆಲೆ ಮೂಲಕ ಕೊಳ್ಳುವುದು. ಐದು ವರ್ಷಗಳಲ್ಲಿ ಇಡೀ ನೀರಾವರಿ ಪ್ರದೇಶದ ಒಂದು ಆವರ್ತ ಪೂರ್ತಿ ಮಾಡಬಹುದು. ಹೇಗೇ ಲೆಕ್ಕ ಹಾಕಿದರೂ ಸುಮಾರು 25 ಕೋಟಿ ರೂ. ಬೆಳೆ ಪರಿಹಾರ, ಸುಮಾರು ಹತ್ತು ಕೋಟಿ ರೂ. ಬೆಂಬಲ ಬೆಲೆಯ ಅತಿರಿಕ್ತ ವೆಚ್ಚ, ರೈತರಿಗೆ ಮಾಹಿತಿ ಇತ್ಯಾದಿ 5 ಕೋಟಿ ರೂ.; ಹೀಗೆ ಸುಮಾರು 35-40 ಕೋಟಿ ರೂ.ಗಳಲ್ಲಿ ಈ ಪರ್ಯಾಯ ಪ್ರಯೋಗವನ್ನು ಮಾಡಬಹುದು. ಮುಂದಿನ ವರ್ಷ ಇದೇ ದುರ್ಭರ ಪರಿಸ್ಥಿತಿ ಒದಗಿದರೆ, ಬಿತ್ತನೆಗೆ ಭತ್ತ ನೀಡಿ ರೈತರನ್ನು ಹಳ್ಳ ಹತ್ತಿಸುವ ಕ್ರೌರ್ಯವಾದರೂ ಕಡಿಮೆ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶದಲ್ಲಿ ರಾಗಿ, ಬೇಳೆಕಾಳು ಬೆಳೆದರೆ ರೈತಾಪಿ ಆಹಾರದಲ್ಲಿ ಸ್ವಯಂ ಪೂರ್ಣವಾಗುತ್ತದೆ. ಮಣ್ಣು ಸ್ವಲ್ಪ ಸುಧಾರಿಸಿಕೊಳ್ಳುತ್ತದೆ. ಇದನ್ನೊಂದು ಅರಿವು-ಮಾರ್ಗದರ್ಶನದ ಅಭಿಯಾನವಾಗಿ ಮಾಡುವುದು ಕಷ್ಟವೇ?. ಬೆಳೆದದ್ದನ್ನು ಉಣ್ಣದೇ, ಉಣ್ಣುವುದನ್ನು ಬೆಳೆಯದೇ ಇರುವ ವಿಪರ್ಯಾಸಕ್ಕೆ ಈಗಾಗಲೇ ಬಡ ರೈತರು ಸಾಕಷ್ಟು ಬೆಲೆ ತೆತ್ತಾಗಿದೆ. ಮೊನ್ನೆ ದ್ವಿದಳ ಧಾನ್ಯಗಳಿಗೆ ಘೋಷಿಸಿದ ಬೆಂಬಲ ಬೆಲೆ ನೋಡಿ. ಕೆಜಿಗೆ 50-60 ರೂ. ಇದೆ. ನಾವು ಕೊಂಡುಕೊಳ್ಳುವಾಗ ಇದರ ಬೆಲೆ ದುಪ್ಪಟ್ಟಿಗಿಂತ ಜಾಸ್ತಿಯಾಗುತ್ತದೆ. ರೈತನಿಗೆ ದೊರಕುವ ಬೆಲೆ ಮತ್ತು ಗ್ರಾಹಕ ತೆರುವ ಬೆಲೆಗಿರುವ ವ್ಯತ್ಯಾಸ ಶೇ.30ಕ್ಕಿಂತ ಜಾಸ್ತಿಯಾಗಬೇಕಿಲ್ಲ. ಹಾಲಿನಂತಹ ನಾಜೂಕು ಉತ್ಪನ್ನದಲ್ಲಿ ಇದನ್ನು ಸಾಧಿಸಬಹುದಾದರೆ ತಿಂಗಳುಗಟ್ಲೆ ಕೆಡದ, ಸಾಗಣೆಯ ಕಷ್ಟ ಅಷ್ಟಿಲ್ಲದ ಬೇಳೆಕಾಳಿನಲ್ಲಿ ಇದನ್ನು ಮಾಡುವುದು ಕಷ್ಟವೇ? ಈ ಆವರ್ತ ಪ್ರಯೋಗದಲ್ಲಿ ರೈತರಿಗೆ ಭತ್ತಕ್ಕಿಂತ ಹೆಚ್ಚಿನ ಲಾಭವನ್ನು ನೀಡಬಹುದು. ಬೆಳೆ ಬದಲಾವಣೆಯ ಈ ಪ್ರಯೋಗದ ಮೂಲಕವಷ್ಟೇ ಮಣ್ಣಿನ ಆರೋಗ್ಯ, ನೀರಿನ ಬಳಕೆಯ ಬಗ್ಗೆ ಅನುಭವ ಮೂಡಿಸಬಹುದು. ಈ ಬಾರಿಯ ಹೊಡೆತ ತಿಂದಿರುವ ರೈತರಿಗೆ ಇಂತಹ ಒಂದು ಪ್ರಯೋಗಕ್ಕೆ ಮನಸ್ಸು ಮಾಡಿ ಎಂದು ಎಲ್ಲರೂ ಹೇಳಬೇಕು. ಇದರ ಅನುಷ್ಠಾನದ ವಿಧಿ ವಿಧಾನಗಳನ್ನು ಮಾಡುವುದು ಕಷ್ಟವಿಲ್ಲ. ರಾಜ್ಯದ ನೀರಾವರಿ ವಲಯದಲ್ಲಿ ಕನಿಷ್ಠ ವರ್ಷಕ್ಕೆ ಒಂದು ಲಕ್ಷ ಎಕರೆಯಲ್ಲಿ ಇದನ್ನು ಮಾಡಲು ಸುಮಾರು 150 ಕೋಟಿ ರೂ
 . ಸಾಕು. ಸುಮಾರು 300 ಕೋಟಿ ರೂ. ನಿಧಿ ಕಾಪಿಟ್ಟರೆ ನೀರಿನ ಬಳಕೆಯ ಸರದಿ ಜವಾಬ್ದಾರಿಯೂ ನಿಗದಿಯಾಗುತ್ತದೆ. ಮಣ್ಣಿನ ಆರೈಕೆಯೂ ಸುಲಭವಾಗುತ್ತದೆ. ಒಂದಷ್ಟು ಎಣ್ಣೆ, ಬೇಳೆ ಸ್ಥಳೀಯವಾಗಿ ಬೆಳೆದು ಕೈಗೆಟಕುವ ದರದಲ್ಲಿ ಆಹಾರವಾಗಿ ದೊರೆಯುತ್ತದೆ. ಇದನ್ನು ರೈತರ ಸಹಕಾರಿ ನೆಲೆಯಲ್ಲಿ ಸಂಘಟಿಸುವುದೂ ಕಷ್ಟವಲ್ಲ.ಇದೇ ವೇಳೆಗೆ ಇದರಿಂದಾಚೆಗಿರುವ ನೀರಾವರಿ ಪ್ರದೇಶದಲ್ಲಿ ಮಾಮೂಲಿ ಭತ್ತ ಕಬ್ಬು ಬೆಳೆಯುತ್ತಾರೆಂದುಕೊಳ್ಳಿ. ಕನಿಷ್ಠ ಈ ರೈತರಿಗೆ ರಾಸಾಯನಿಕಗಳ ಕಡಿಮೆ ಬಳಕೆ ಇನ್ನಿತರ ಸುಸ್ಥಿರ ಕೃಷಿ ವಿಧಾನಗಳನ್ನು ವ್ಯಾಪಕವಾಗಿ ಹೇಳಬಹುದು. ಆದರೆ ಬೇಡಿಕೆಯೊಂದು ಬಿಟ್ಟರೆ ಬೇರೇನನ್ನೂ ಹೇಳಲು ಬಾರದ ವಿರೋಧ ಪಕ್ಷದ ರಾಜಕಾರಣಿಗಳಿಗೆ ಇದು ಒಗ್ಗುವುದು ಕಷ್ಟ. ಹಾಗೇ ಎಲ್ಲಾ ಕೊಡುವ ಭರವಸೆಯ ಅಧಿಕಾರಸ್ಥರೂ ಇದನ್ನು ಹೇಳುವುದು ಕಷ್ಟ. ಅಧಿಕಾರಿಗಳಿಗೆ ಎಲ್ಲಾ ಒಂದೇ.!!

Writer - ಕೆ.ಪಿ.ಸುರೇಶ

contributor

Editor - ಕೆ.ಪಿ.ಸುರೇಶ

contributor

Similar News