ಅಮೆರಿಕದ ಸೂಪರ್ ಪವರ್ ಕೊನೆಗೊಳ್ಳುತ್ತಿದೆಯೇ?

Update: 2024-11-02 05:50 GMT

ಅಮೆರಿಕ ಏನು ಹೇಳುತ್ತದೆಯೋ ಅದನ್ನೇ ಮಾಡಬೇಕು.ಜಗತ್ತಿನ ಮೇಲೆ ವರ್ಷಗಳಿಂದಲೂ ಅಮೆರಿಕ ಈ ಕಟ್ಟುಪಾಡನ್ನೇ ಹೇರುತ್ತಾ ಬಂದಿದೆ. ಆದರೆ ಅಮೆರಿಕಕ್ಕೆ ಯಾವ ಕಟ್ಟುಪಾಡೂ ಇಲ್ಲ.ಅಮೆರಿಕದ ಕಾಪಟ್ಯವನ್ನು ಬಯಲಿಗೆ ತರುವವರು ಯಾರೂ ಇಲ್ಲ.

ಅಮೆರಿಕ ಎಲ್ಲಾದರೂ, ಏನನ್ನಾದರೂ ಮಾಡಬಹುದು. ಒಂದು ದೇಶವನ್ನು ಹೊಕ್ಕಿ ಶತ್ರುವನ್ನೇ ಹೊಸಕಿಹಾಕಿಬಿಡಬಹುದು. ಯಾವುದೇ ದೇಶದ ಮೇಲೆಯೂ ನಿರ್ಬಂಧ ಹೇರಬಹುದು. ಇಸ್ರೇಲ್‌ನಂತೆ ಅಮಾಯಕ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಬಹುದು.

ಇವೆಲ್ಲವನ್ನೂ ಅಮೆರಿಕ ವರ್ಷಗಳಿಂದಲೂ ಮಾಡುತ್ತಾ ಬಂದಿದೆ.ಆದರೆ ಬೇರಾವುದೇ ದೇಶ ಹೀಗೆ ಮಾಡಿದರೆ ಅಮೆರಿಕದಿಂದಲೇ ಅದಕ್ಕೆ ಶಿಕ್ಷೆ ಖಾತ್ರಿ ಎಂಬ ಸ್ಥಿತಿ.

ಕಡೆಗೂ ಇದು ಪ್ರಜಾಸತ್ತೆಯ ಪ್ರಶ್ನೆ. ಪ್ರಜಾಪ್ರಭುತ್ವದ ಹೆಸರಲ್ಲೇ ಅಮೆರಿಕ ತನ್ನ ಎಲ್ಲ ಅನ್ಯಾಯಗಳನ್ನು ಮುಂದುವರಿಸುತ್ತಾ ಬಂದಿದೆ.

ಯುಎಸ್‌ಎಸ್‌ಆರ್ ಜೊತೆ ಶೀತಲ ಸಮರವಾಗಿ, ಅಮೆರಿಕ ಸೂಪರ್ ಪವರ್ ಆದ ಬಳಿಕ ದಶಕಗಳಿಂದಲೂ ಇತರ ದೇಶಗಳು ಇದನ್ನು ಸಹಿಸಿಕೊಂಡೇ ಬಂದಿವೆ. ಬೇರಾವ ದೇಶಕ್ಕೂ ಅಮೆರಿಕ ಹೊಂದಿರುವ ಬಲ ಇರಲಿಲ್ಲ. ಆದರೆ ಕಳೆದ ವಾರದ ಮಹತ್ವದ ವಿದ್ಯಮಾನ ಅಮೆರಿಕದ ಪ್ರಾಬಲ್ಯ ಕೊನೆಗಾಣುವುದರ ಸ್ಪಷ್ಟ ಮುನ್ಸೂಚನೆ ಎಂಬುದನ್ನು ತೋರಿಸಿದೆ. ಜಗತ್ತು ಅಮೆರಿಕ ನಾಯಕತ್ವಕ್ಕೆ ಹೊರತಾದುದನ್ನು ನಿರೀಕ್ಷಿಸುತ್ತಿದೆ ಎಂದು ವಾಶಿಂಗ್ಟನ್ ಡಿಸಿ ಜನರಿಗೆ ಅರ್ಥವಾಗಿದೆ.

ಹಲವು ಕಾರಣಗಳಿಂದ ಬ್ರಿಕ್ಸ್ ಶೃಂಗಸಭೆ ಮಹತ್ವದ್ದಾಗಿತ್ತು. ಬಹಳ ಮುಖ್ಯವಾಗಿ, ಅಮೆರಿಕಕ್ಕೆ ಪರ್ಯಾಯ ಎಂಬುದರ ಕುರಿತ ದನಿ ವ್ಯಕ್ತವಾಯಿತು. ಅದನ್ನು ಪರ್ಯಾಯವೊಂದರ ಅಡಿಪಾಯ ಎಂದೇ ಭಾವಿಸಲಾಗುತ್ತಿರುವುದು ನಿಜ.

ರಶ್ಯದ ಕಝಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ 36 ವಿಶ್ವನಾಯಕರು ಪಾಲ್ಗೊಂಡಿದ್ದರು. ಆ ಶೃಂಗಸಭೆ ಹೊಸ ಬಹುಧ್ರುವೀಯ ಜಗತ್ತೆಂಬಂತೆ ತೋರಿತು.

ಅಮೆರಿಕದ ವಿರುದ್ಧದ ದಂಗೆಯೆಂಬಂತೆ ಆ ಶೃಂಗಸಭೆ ಕಂಡಿದ್ದು ಹೇಗೆ? ಭಾರತವನ್ನೂ ಒಳಗೊಂಡ ಈ ಪರ್ಯಾಯ ಜಗತ್ತು ಏನು?

ಬ್ರಿಕ್ಸ್ ಕಥೆ ಶುರುವಾದದ್ದು 2006ರಲ್ಲಿ. ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಂದರೆ, ಬ್ರಿಕ್ಸ್ ರಾಷ್ಟ್ರಗಳು 21ನೇ ಶತಮಾನದ ಹೊಸ ಆರ್ಥಿಕ ಸೂಪರ್ ಪವರ್ ಆಗಲಿದೆ ಎಂಬ ಮಾತುಗಳಿವೆ. ಪಾಶ್ಚಿಮಾತ್ಯ ಪ್ರಭಾವದ ವಿರುದ್ಧ ಪರ್ಯಾಯ ಶಕ್ತಿ ಹುಟ್ಟಲಿದೆ ಎಂಬ ಮಾತುಗಳಿವೆ.

2006ರಲ್ಲಿ ಬ್ರೆಝಿಲ್, ರಶ್ಯ, ಭಾರತ, ಚೀನಾ ಈ ನಾಲ್ಕು ದೇಶಗಳ ಬ್ರಿಕ್‌ನ ಮೊದಲ ಔಪಚಾರಿಕ ಸಭೆ ನಡೆದಿತ್ತು. 2009ರಲ್ಲಿ ರಶ್ಯ ಮೊದಲ ಅಧಿಕೃತ ಬ್ರಿಕ್ ಶೃಂಗಸಭೆಯ ಆತಿಥ್ಯವನ್ನು ವಹಿಸಿತ್ತು. 2010ರಲ್ಲಿ ಈ ನಾಲ್ಕೂ ದೇಶಗಳು ದಕ್ಷಿಣ ಆಫ್ರಿಕಾವನ್ನು ಅಧಿಕೃತವಾಗಿ ಆಹ್ವಾನಿಸುವುದ ರೊಂದಿಗೆ BRIC ಇದ್ದದ್ದು BRICS ಎಂದಾಯಿತು.

ಬೆಳೆಯುತ್ತಿರುವ ಆರ್ಥಿಕತೆಯ ದೇಶಗಳ ಈ ಗುಂಪಿನ ಮುಖ್ಯ ಗುರಿ ಆರ್ಥಿಕ ಸಹಕಾರವನ್ನು ಹೆಚ್ಚಿಸುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ವೃದ್ಧಿಸುವುದು. ಕಳೆದ ವರ್ಷ ಮತ್ತಷ್ಟು ಹೊಸ ದೇಶಗಳ ಸೇರ್ಪಡೆಯೂ ಆಗಿದೆ. ಯುಎಇ, ಈಜಿಪ್ಟ್, ಇಥಿಯೋಪಿಯ, ಇರಾನ್ ಹೊಸದಾಗಿ ಸೇರಿವೆ. ರಶ್ಯ ಅಧ್ಯಕ್ಷ ಪುಟಿನ್ ಈ ಬಾರಿ ಬ್ರಿಕ್ಸ್ ಶೃಂಗವನ್ನು ಕಝಾನ್‌ಲ್ಲಿ ಆಯೋಜಿಸಿದ್ದರು.

ಪುಟಿನ್ ಪ್ರಕಾರ ಬ್ರಿಕ್ಸ್ ಜಾಗತಿಕ ಜಿಡಿಪಿಯ ಶೇ.37.4ನ್ನು ಹೊಂದಿದೆ. ಇದು ಜಿ7 ದೇಶಗಳಿಗಿಂತಲೂ ಹೆಚ್ಚು.

ಜಿ7 ದೇಶಗಳ ಜಿಡಿಪಿ ಪಾಲು ಶೇ.29.3 ಇದೆ. ಜಾಗತಿಕ ಜಿಡಿಪಿಗೆ ಬ್ರಿಕ್ಸ್ ಶೇ.40ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ. ಈ ದೇಶಗಳ ಸಾಮೂಹಿಕ ಆರ್ಥಿಕ ಬೆಳವಣಿಗೆ ದರ ಈ ಸಲ ಶೇ.4ಕ್ಕೆ ಮುಟ್ಟಿದೆ.

ಆದರೆ ಜಿ7 ದೇಶಗಳ ಆರ್ಥಿಕ ಬೆಳವಣಿಗೆ ದರ ಶೇ.1.7 ಮಾತ್ರ.ಜಾಗತಿಕ ಆರ್ಥಿಕ ಬೆಳವಣಿಗೆ ದರ ಶೇ.3.2 ಇದೆ. ಅಂದರೆ ಬ್ರಿಕ್ಸ್ ದೇಶಗಳ ಬೆಳವಣಿಗೆಯೇ ಇವೆಲ್ಲವನ್ನೂ ಮೀರಿದ್ದಾಗಿದೆ. ಜೊತೆಗೇ ಬ್ರಿಕ್ಸ್ ದೇಶಗಳು ಜಾಗತಿಕ ತೈಲ ಉತ್ಪನ್ನದ ಶೇ.30 ಹಾಗೂ ಜಾಗತಿಕ ವ್ಯಾಪಾರದ ಶೇ.25ರಷ್ಟು ಹಿಡಿತ ಹೊಂದಿವೆ. ಇದು ಕೂಡ ಪಾಶ್ಚಿಮಾತ್ಯ ದೇಶಗಳ ಜಿ7 ಗುಂಪಿಗೆ ಪ್ರಬಲ ಪೈಪೋಟಿಯಾಗಿದೆ. ಕಝಾನ್‌ನಲ್ಲಿ ಬ್ರಿಕ್ಸ್ ಸಮ್ಮೇಳನ ನಡೆದದ್ದು ಇದೇ ಮೊದಲ ಸಲ. ಟರ್ಕಿ, ಸೌದಿ ಅರೇಬಿಯ, ಇಂಡೋನೇಶ್ಯ, ಮಲೇಶ್ಯ ಸೇರಿದಂತೆ 20 ಇತರ ದೇಶಗಳೂ ಭಾಗವಹಿಸಿದ್ದವು. ವಿಶ್ವಸಂಸ್ಥೆ ಮುಖ್ಯಸ್ಥರಲ್ಲದೆ ಫೆಲೆಸ್ತೀನಿಯನ್ ಅಥಾರಿಟಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಕೂಡ ವಿಶೇಷ ಅತಿಥಿಯಾಗಿದ್ದರು. ಹಲವಾರು ವಿಶ್ವ ನಾಯಕರು ಕಝಾನ್ ಶೃಂಗಸಭೆಯಲ್ಲಿ ಪಾಲ್ಗೊಂಡದ್ದು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ದಿಗಿಲುಗೊಳ್ಳಲು ಕಾರಣವಾಗಿತ್ತು.

ರಶ್ಯವನ್ನು ಜಾಗತಿಕ ವೇದಿಕೆಯಿಂದ ಪ್ರತ್ಯೇಕವಾಗಿಸಲು ವರ್ಷಗಳಿಂದಲೂ ಅಮೆರಿಕ ಪ್ರಯತ್ನಿಸುತ್ತಿದೆ. ಮೊದಲು ಉಕ್ರೇನ್ ಮೇಲಿನ ಯುದ್ಧ ಎಂಬ ಕಾರಣ ಸರಿಯಾಗಿಯೇ ಇತ್ತು. ಆದರೆ ಉಕ್ರೇನನ್ನು ಪಶ್ಚಿಮ ದೇಶಗಳೂ ಬೆಂಬಲಿಸಲಿಲ್ಲವಲ್ಲ. ಬೇರೆಯದೇ ಆದ ಭೌಗೋಳಿಕ ರಾಜಕೀಯ ಕಾರಣ ಇದರ ಹಿಂದೆ ಇತ್ತು.

ಅಂತರ್‌ರಾಷ್ಟ್ರೀಯ ಸಮುದಾಯಗಳ ಮಟ್ಟದಲ್ಲಿ ಪುಟಿನ್ ವ್ಯವಹಾರವನ್ನು ಸ್ಥಗಿತಗೊಳಿಸಲು ಅಮೆರಿಕ ಉದ್ದೇಶಿಸಿತ್ತು. ಆದರೆ ಪುಟಿನ್ ಆಹ್ವಾನದ ಮೇರೆಗೆ ಹಲವಾರು ದೇಶಗಳ ನಾಯಕರು ಕಝಾನ್ ತಲುಪಿದಾಗ ಅಮೆರಿಕ ಮತ್ತು ಇಡೀ ಪಶ್ಚಿಮದ ದನಿಯೇ ಅಡಗಿಹೋಯಿತು. ಪುಟಿನ್ ಕರೆದ ತಕ್ಷಣ ಅಷ್ಟೆಲ್ಲ ವಿಶ್ವನಾಯಕರು ಬಂದು ನಿಂತರೆಂಬುದರ ಅರ್ಥ, ಜಗತ್ತು ಅಮೆರಿಕದ ತಾಳಕ್ಕೆ ಕುಣಿಯಲು ತಯಾರಿಲ್ಲ ಎಂಬುದು. ಫೆಲೆಸ್ತೀನ್ ಅಧ್ಯಕ್ಷರು ಶೃಂಗಸಭೆಯಲ್ಲಿ ಹಾಜರಿದ್ದುದು ಕೂಡ ಬಹಳ ಮಹತ್ವ ಪಡೆಯಿತು.

ಒಂದೆಡೆ, ಕಳೆದೊಂದು ವರ್ಷದಲ್ಲಿ ಫೆಲೆಸ್ತೀನಿಯರನ್ನು ಕೊಲ್ಲಲು ಇಸ್ರೇಲ್‌ಗೆ 14 ಬಿಲಿಯನ್ ಡಾಲರ್ ಮಿಲಿಟರಿ ನೆರವನ್ನು ಅಮೆರಿಕ ನೀಡಿದೆ. ಇನ್ನೊಂದೆಡೆ, ಇಸ್ರೇಲ್ ಶತ್ರು ಅಬ್ಬಾಸ್ ಜೊತೆಗೆ ಶೃಂಗಸಭೆಯಲ್ಲಿ ಭಾರತ, ಚೀನಾ, ರಶ್ಯದಂತ ದೇಶಗಳು ಪಾಲ್ಗೊಂಡು ಕೈಕುಲುಕಿವೆ. ಫೆಲೆಸ್ತೀನ್‌ಗೂ ಜಾಗತಿಕ ನೆಲೆಯಲ್ಲಿ ಒಂದು ಸ್ಥಾನ ಇದೆಯೆಂಬುದು ಇದರಿಂದ ಸ್ಪಷ್ಟವಾಗಿತ್ತು. ಇನ್ನು, ಅಮೆರಿಕ ಮಿತ್ರ ರಾಷ್ಟ್ರವಾಗಿದ್ದೂ ಭಾರತ ತನ್ನದೇ ವಿದೇಶಿ ನೀತಿಯನ್ನು ಪ್ರಕಟಿಸುವ ನಿಲುವನ್ನು ತೋರಿಸಿತು.

ಇಲ್ಲಿ ಪಾಲ್ಗೊಂಡ ವಿಶ್ವ ನಾಯಕರೆಲ್ಲರೂ ಒಂದು ಸಾಮೂಹಿಕ ದನಿಯಾಗಲು ಯತ್ನಿಸಿದರು. ಶೃಂಗಸಭೆಯ ಕೊನೆಯಲ್ಲಿ ಕಝಾನ್ ಘೋಷಣೆಗೆ ಎಲ್ಲ ಸದಸ್ಯ ರಾಷ್ಟ್ರಗಳು ಸಹಿ ಹಾಕಿದವು. ಇದರಲ್ಲಿ ಅವು ತಮ್ಮ ಹಂಬಲ ಮತ್ತು ನಿರೀಕ್ಷೆಗಳನ್ನು ಬಹಳ ಸ್ಪಷ್ಟವಾದ ಪದಗಳಲ್ಲಿ ಜಗತ್ತಿನೆದುರು ಇಟ್ಟಿದ್ದವು.

134 ಪ್ಯಾರಾಗಳ ಈ ವಿವರವಾದ ದಾಖಲೆ ಒಂದು ಪ್ರಣಾಳಿಕೆಯಂತೆ ಕಾಣಿಸಿದೆ. ಇದರಲ್ಲಿ ಜಗತ್ತಿನಾದ್ಯಂತ ನಡೆದಿರುವ ಸಂಘರ್ಷಗಳ ಬಗ್ಗೆಯೂ ವಿವರವಾದ ಚರ್ಚೆಯಿದೆ. ಇಸ್ರೇಲ್, ಗಾಝಾ, ಲೆಬನಾನ್ ಯುದ್ಧಗಳು, ಆರ್ಥಿಕ ದಿಗ್ಬಂಧನಗಳು ಇವೆಲ್ಲ ವಿಚಾರಗಳೂ ಈ ದಾಖಲೆಯ ಮಹತ್ವದ ಭಾಗಗಳಾಗಿವೆ.

ಭಾರತ ಸೇರಿದಂತೆ ಎಲ್ಲ ಬ್ರಿಕ್ಸ್ ದೇಶಗಳೂ ಇಸ್ರೇಲನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿ ಈ ದಾಖಲೆಯನ್ನು ಸರಿಯಾಗಿಯೇ ಬಳಸಿಕೊಂಡಿವೆ. ಗಾಝಾ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ಯುದ್ಧದ ಬಗ್ಗೆಯೂ ದಾಖಲಾತಿಯಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು. ಇದು ಇಸ್ರೇಲ್ ವಿರುದ್ಧವಾಗಿ ಭಾರತ ಸಹಿ ಮಾಡಿರುವ ಪ್ರಬಲ ದಾಖಲೆಗಳಲ್ಲಿ ಒಂದಾಗಿದೆ.

ಪರ್ಯಾಯ ಹಣಕಾಸು ಮತ್ತು ಆರ್ಥಿಕತೆ ವ್ಯವಸ್ಥೆಯನ್ನು ರೂಪಿಸುವುದು ಅಮೆರಿಕ ಮತ್ತು ಪಶ್ಚಿಮ ದೇಶಗಳ ಹಿಡಿತದಿಂದ ಹೊರಬರುವುದು ಪ್ರಮುಖ ಗುರಿ. ಅಂತೆಯೇ, ಶೃಂಗಸಭೆಯಲ್ಲಿ ಪರ್ಯಾಯ ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಯನ್ನು ವಿವರವಾಗಿಯೇ ಚರ್ಚಿಸಲಾಗಿದೆ.

ಜಾಗತಿಕ ನೆಟ್ವರ್ಕ್ ಆಗಿರುವ SWIFT ಗೆ ಬದಲಾಗಿ ಪರ್ಯಾಯ ವ್ಯವಸ್ಥೆ ರೂಪಿಸುವುದರ ಬಗ್ಗೆಯೂ ಚರ್ಚೆಯಾಯಿತು. ಅದು ಅಮೆರಿಕ ಮತ್ತು ಪಶ್ಚಿಮದ ನಿಯಂತ್ರಣದಲ್ಲಿರುವ ವ್ಯವಸ್ಥೆಯಾಗಿದೆ.

2022ರಲ್ಲಿ ರಶ್ಯದ ಬ್ಯಾಂಕ್‌ಗಳನ್ನು ಈ ವ್ಯವಸ್ಥೆಯಿಂದ ತಗೆಯಲಾಗಿತ್ತು. ಅಮೆರಿಕ ಮತ್ತು ಪಶ್ಚಿಮದ ಮೇಲಿನ ಅವಲಂಬನೆ ತಗ್ಗಬೇಕು ಮತ್ತು ಹೆಚ್ಚು ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಬ್ರಿಕ್ಸ್ ದೇಶಗಳ ಪ್ರತಿಪಾದನೆ.

ಇಂದು ರಶ್ಯ ವಿಚಾರದಲ್ಲಿ ಆಗಿರುವುದು ನಾಳೆ ಭಾರತದ ಮೇಲೆಯೂ ಆಗಬಹುದು. ದಿಗ್ಬಂಧನ ಹೇರಿಕೆಯಾದರೂ ಆಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಬ್ರಿಕ್ಸ್ ರಾಷ್ಟ್ರಗಳು ಹೊಂದಿವೆ. ಅಮೆರಿಕ ದಿಗ್ಬಂಧನ ಹೇರುವುದನ್ನು ಒಂದು ಅಸ್ತ್ರದಂತೆ ಬಳಸುತ್ತ ಬಂದಿದೆ.

ಅಮೆರಿಕನ್ ಡಾಲರ್ ಅನ್ನು ಚಾಲೆಂಜ್ ಮಾಡುವುದು ಈ ಶೃಂಗಸಭೆಯ ಮತ್ತೊಂದು ಪ್ರಮುಖ ಗುರಿ.

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ತಮ್ಮ ನಿಯಂತ್ರಣದಲ್ಲಿರುವ ವ್ಯವಸ್ಥೆಯನ್ನು ತಮಗೆ ಬೇಕಾದ ಹಾಗೆ ಬಳಸುವುದರಿಂದ ಅಂತಹ ವ್ಯವಸ್ಥೆಯನ್ನು ಆದಷ್ಟೂ ಅವಲಂಬಿಸದೇ ಇರಬೇಕೆನ್ನುವುದು ಉದ್ದೇಶ.

ಡಾಲರ್ ವ್ಯವಸ್ಥೆ ಮೂಲಕವೇ ಅಮೆರಿಕ ಬಹುದೊಡ್ಡ ಆಟವಾಡುತ್ತಿದೆ. ಅಮೆರಿಕದ ಈ ಪ್ರಾಬಲ್ಯವನ್ನು ಬ್ರಿಕ್ಸ್ ಕರೆನ್ಸಿ ಮುರಿಯುವ ಅವಕಾಶವಿದೆ.

ಬ್ರಿಕ್ಸ್‌ನಲ್ಲಿ ಚೀನಾದ್ದೇ ಹೆಚ್ಚು ಪ್ರಾಬಲ್ಯ. 2023ರ ವಿಶ್ವ ಬ್ಯಾಂಕ್ ಡೇಟಾ ಪ್ರಕಾರ, ಚೀನಾದ ಜಿಡಿಪಿ 17.73 ಟ್ರಿಲಿಯನ್ ಡಾಲರ್. ಬ್ರಿಕ್ಸ್‌ನ ಉಳಿದ ದೇಶಗಳ ಜಿಡಿಪಿ 7.57 ಟ್ರಿಲಿಯನ್ ಡಾಲರ್. ಹಾಗಾಗಿ ಇಲ್ಲೊಂದು ಅಸಮಾನತೆ ಇದ್ದೇ ಇದೆ. ಅದಲ್ಲದೆ, ಭಾರತ ಮತ್ತು ಚೀನಾ ನಡುವೆ ಸಂಘರ್ಷವೂ ಹಲವು ವರ್ಷಗಳಿಂದ ಇದೆ.

ಬ್ರಿಕ್ಸ್‌ನ ಇಬ್ಬರು ಸದಸ್ಯರ ನಡುವೆ ಸಂಘರ್ಷ ಇರುವುದು ಅಹಿತಕರ ಸನ್ನಿವೇಶಕ್ಕೂ ಕಾರಣವಾಗಿದೆ. ಹೀಗಾಗಿ ಇದು ಆಂತರಿಕ ಒಡಕಿನ ಅಪಾಯವನ್ನು ಹೆಚ್ಚಿಸುತ್ತಲೇ ಇದೆ. ಬ್ರಿಕ್ಸ್ ಪ್ರಬಲ ಗುಂಪು ಎಂದಾಗಬೇಕೆಂದರೆ ಮೊದಲು ಈ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಬೇಕು.

ಆದರೆ ಬ್ರಿಕ್ಸ್‌ನಲ್ಲಿ ಆಂತರಿಕ ಒಡಕು ಇರುವುದು ಭಾರತ-ಚೀನಾ ಮಧ್ಯೆ ಮಾತ್ರವಲ್ಲ. ಸೌದಿ ಅರೇಬಿಯ ಹಾಗೂ ಇರಾನ್ ಕೂಡ ಐತಿಹಾಸಿಕ ಸಂಘರ್ಷವನ್ನು ಹೊಂದಿವೆ. ಇದು ದೃಢವಾದ ಮೈತ್ರಿಗೆ ಅಡ್ಡಿಯನ್ನು ಉಂಟು ಮಾಡುತ್ತಿದೆ. ಡಾಲರ್ ರಹಿತ ವ್ಯವಹಾರದ ಬ್ರಿಕ್ಸ್ ಗುರಿ ಅಷ್ಟು ಸುಲಭವೇನೂ ಅಲ್ಲ. ಡಾಲರ್ ಅಲ್ಲದಿದ್ದರೆ ಯಾವುದು ಎಂಬ ಪ್ರಶ್ನೆಯೂ ಬರುತ್ತದೆ. ಅಥವಾ ಚೀನಾ ಡಾಲರ್ ಜಾಗದಲ್ಲಿ ಯುವಾನ್ ತರಲು ಯತ್ನಿಸುತ್ತಿದೆಯೆ? ಅದು ಚೀನಾದ ಕನಸು ಕೂಡ ಹೌದು. ಜಂಟಿ ಬ್ರಿಕ್ಸ್ ಕರೆನ್ಸಿಯೊಂದು ಸಿದ್ಧವಾದರೂ, ಅದರ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ? ಹೇಗೆ ನಿರ್ಧರಿಸಲಾಗುತ್ತದೆ? ಇವೆಲ್ಲ ಸವಾಲುಗಳ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ ಪಾತ್ರ ಹೆಚ್ಚುತ್ತಿದೆ. ನಮಗೀಗ ಬೇಕಿರುವುದು ಬಹು ಧ್ರುವಿ ಜಗತ್ತು. ಇದಕ್ಕಾಗಿ ನಮ್ಮದೇ ಆರ್ಥಿಕತೆ, ನಮ್ಮದೇ ತಂತ್ರಜ್ಞಾನ, ನಮ್ಮದೇ ಖ&ಆ ಬಗ್ಗೆ ಹೆಚ್ಚು ಹೆಚ್ಚು ಫೋಕಸ್ ಮಾಡುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - Musaveer

contributor

Byline - ಎಸ್. ಸುದರ್ಶನ್

contributor

Similar News